ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲ ತುಂಬಿದ ಬೌಲಿಂಗ್

Last Updated 31 ಡಿಸೆಂಬರ್ 2010, 12:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಿರಿಮಿರಿ ಮಿಂಚುವ ರಣಜಿ ಟ್ರೋಫಿಯನ್ನು ಹೊತ್ತು ಮೆರೆಯಲು ಇನ್ನೆರಡು ಕಠಿಣ ಹೆಜ್ಜೆಗಳನ್ನಿಡುವ ಸವಾಲು ಕರ್ನಾಟಕ ಕ್ರಿಕೆಟ್ ತಂಡದ ಮುಂದಿದೆ.
ರಣಜಿ ಟ್ರೋಫಿ ಕ್ರಿಕೆಟ್‌ನಲ್ಲಿ ಸತತ ಎರಡನೇ ಬಾರಿಗೆ ನಾಲ್ಕರ ಘಟ್ಟಕ್ಕೆ ಲಗ್ಗೆಯಿಟ್ಟಿರುವ ಆರ್.ವಿನಯಕುಮಾರ್ ಬಳಗದಲ್ಲಿ ಈಗ ಟ್ರೋಫಿ ಜಯಿಸುವ ‘ಅಮಿತೋತ್ಸಾಹ’ ನಲಿದಾಡುತ್ತಿದೆ. ಇಂದೋರಿನಲ್ಲಿ ಎಡಗೈ ಬ್ಯಾಟ್ಸ್‌ಮನ್ ಅಮಿತ್ ವರ್ಮಾ ಬ್ಯಾಟಿಂಗ್ ಮತ್ತು ಬೌಲರ್‌ಗಳ ಕೈಚಳಕದಿಂದ ಕ್ವಾರ್ಟರ್‌ಫೈನಲ್ ಗೆದ್ದಿರುವ ತಂಡ, ಹೊಸ ವರ್ಷದಲ್ಲಿ ಬರೋಡಾ ವಿರುದ್ಧದ ಸೆಮಿಫೈನಲ್ ಗೆಲ್ಲುವ ತವಕದಲ್ಲಿದೆ. ಪ್ರಮುಖವಾಗಿ ಬೌಲಿಂಗ್ ಶಕ್ತಿಯಿಂದಲೇ ಕರ್ನಾಟಕ ಈ ಹಂತಕ್ಕೆ ಬಂದಿದೆ.

ಕೈಚಳಕದ ಖದರ್: ವಿನಯಕುಮಾರ್, ಅಭಿಮನ್ಯು ಮಿಥುನ್, ಎಡಗೈ ಬೌಲರ್ ಎಸ್. ಅರವಿಂದ್, ಅನುಭವಿ ಎಡಗೈ ಸ್ಪಿನ್ನರ್ ಸುನೀಲ್ ಜೋಶಿ ದಾಳಿ ತಂಡದ ಗೆಲುವಿನ ಪ್ರಮುಖ ರೂವಾರಿಗಳು. ಇವರ ತೋಳುಗಳು ದಣಿದಾಗ ಆಲ್‌ರೌಂಡರ್‌ಗಳಾದ ಅಮಿತ್ ವರ್ಮಾ ಮತ್ತು ಸ್ಟುವರ್ಟ್ ಬಿನ್ನಿ ವಿಕೆಟ್ ಕಿತ್ತುವಲ್ಲಿ ಸಫಲರಾಗಿದ್ದಾರೆ.

ಪ್ರತಿ ಪಂದ್ಯದಲ್ಲಿಯೂ ಎದುರಾಳಿ ಬ್ಯಾಟಿಂಗ್ ಬಲವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ವಿನಯ್ ನೇತೃತ್ವದ ಬೌಲಿಂಗ್ ಬಳಗ ಸಫಲವಾಗಿದೆ. ಬೆಂಗಳೂರಿನಲ್ಲಿ ಒಡಿಶಾ ಮತ್ತು ಧರ್ಮಶಾಲಾದಲ್ಲಿ ಹಿಮಾಚಲಪ್ರದೇಶದ ವಿರುದ್ಧ ವಿನಯ್ ಬದಲಿಗೆ ಆಡಿದ ಆದಿತ್ಯ ಸಾಗರ್ ಕೂಡ ಉತ್ತಮ ಪ್ರದರ್ಶನವನ್ನೇ ನೀಡಿದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 600ಕ್ಕೂ ಹೆಚ್ಚು ವಿಕೆಟ್‌ಗಳ ಸಾಧನೆ ಮಾಡಿರುವ ಸುನೀಲ್ ಜೋಶಿ ಕೂಡ ತಮ್ಮ ಬೌಲಿಂಗ್‌ನಿಂದ ಪಂದ್ಯಕ್ಕೆ ‘ತಿರುವು’ ನೀಡುವಲ್ಲಿ ಸಫಲರಾಗಿದ್ದಾರೆ. 40ರ ಹರೆಯದಲ್ಲಿಯೂ ಅವರ ಸ್ಪಿನ್ ಮಂಕಾಗಿಲ್ಲ. ಇಂದೋರ್‌ನಲ್ಲಿ ಒಂದೇ ಸ್ಪೆಲ್‌ನಲ್ಲಿ 19 ಓವರ್ ಬೌಲಿಂಗ್ ಮಾಡಿದ ಅವರು, ಈ ಋತುವಿನಲ್ಲಿ 25 ವಿಕೆಟ್ ಗಳಿಸಿದ್ದಾರೆ.

ಎಸ್. ಅರವಿಂದ್ ಕೂಡ 25ರ ಗಡಿ ಮುಟ್ಟಿದ್ದಾರೆ. ಅಭಿಮನ್ಯು ಮಿಥುನ್ ಮತ್ತು ವಿನಯಕುಮಾರ್ ಕ್ರಮವಾಗಿ 22 ಮತ್ತು 18 ವಿಕೆಟ್ ಕಬಳಿಸಿದ್ದಾರೆ.  ಎರಡು ಪಂದ್ಯಗಳಲ್ಲಿ ಆಡಿದ ಆದಿತ್ಯ ಸಾಗರ್ ಮತ್ತು ಉದಿತ್ ಪಟೇಲ್ ತಲಾ ಐದು ವಿಕೆಟ್ ಗಳಿಸಿದ್ದಾರೆ.

ಮೊದಲ ಇನಿಂಗ್ಸ್‌ನಲ್ಲಿ ಮೊದಲು ಬ್ಯಾಟ್ ಮಾಡಿ ಸಾಧಾರಣ ಮೊತ್ತಕ್ಕೆ ತಂಡ ಕುಸಿದಿದ್ದೇ ಈ ಬಾರಿ ಹೆಚ್ಚು. ಧರ್ಮಶಾಲಾ, ಮೈಸೂರು, ಕಾನ್ಪುರದ ಪಂದ್ಯಗಳು ಸಾಕ್ಷಿ. ಅದಕ್ಕೇ ಕ್ವಾರ್ಟರ್‌ಫೈನಲ್‌ನಲ್ಲಿ ಟಾಸ್ ಗೆದ್ದರೂ ತಂಡ ಫೀಲ್ಡಿಂಗ್ ಆಯ್ದುಕೊಂಡಿತ್ತು. ಕೋಚ್ ಸನತ್‌ಕುಮಾರ್ ವಿಶ್ವಾಸವನ್ನು ಬೌಲರ್‌ಗಳು ಉಳಿಸಿಕೊಂಡರು.

ಅಮಿತ್-ಗೌತಮ್ ಗಟ್ಟಿತನ: ಈ ಋತುವಿನ ಬಹುತೇಕ ಸಂದರ್ಭಗಳಲ್ಲಿ ಆರಂಭಿಕ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾಗಿದ್ದಾರೆ. ಕಳೆದ ಋತುವಿನಲ್ಲಿ ಇದ್ದ ‘ಗೋಡೆ’ ರಾಹುಲ್ ದ್ರಾವಿಡ್ ನೆರವು ಈ ಬಾರಿ ತಂಡಕ್ಕೆ ಸಿಕ್ಕಿಲ್ಲ. ರಾಬಿನ್ ಉತ್ತಪ್ಪ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುವಲ್ಲಿ ಹಿಂದೆ ಬಿದ್ದರೆ, ಕೆ.ಬಿ. ಪವನ್‌ಗೆ ಅದೃಷ್ಟ ಜೊತೆಕೊಡುತ್ತಿಲ್ಲ. ಹೋದ ವರ್ಷ ಉತ್ತಮ ಬ್ಯಾಟಿಂಗ್‌ನಿಂದ ಗಮನ ಸೆಳೆದಿದ್ದ ಗಣೇಶ ಸತೀಶ್ ಕೂಡ ಫಾರ್ಮ್ ಕಳೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ತಂಡಕ್ಕೆ ಬೆಂಬಲವಾಗಿ ನಿಂತಿದ್ದು ಎಡಗೈ ಬ್ಯಾಟ್ಸ್‌ಮನ್ ಅಮಿತ್ ವರ್ಮಾ ಮತ್ತು ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಸಿ.ಎಂ. ಗೌತಮ್. ಕ್ವಾರ್ಟರ್‌ಫೈನಲ್‌ನಲ್ಲಿ ಕರ್ನಾಟಕದ ಕೈ ತಪ್ಪದಂತೆ ಮಾಡುವಲ್ಲಿ ಇವರಿಬ್ಬರ ಪಾಲುದಾರಿಕೆಯೇ ಮಹತ್ವದ್ದಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT