ಗುರುವಾರ , ಮಾರ್ಚ್ 4, 2021
30 °C

ಬಸವರಾಜುಗೆ ಬಿಜೆಪಿ ಬಾಗಿಲು ಬಂದ್

ಪ್ರಜಾವಾಣಿ ವಾರ್ತೆ/ಕೆ.ಜೆ.ಮರಿಯಪ್ಪ Updated:

ಅಕ್ಷರ ಗಾತ್ರ : | |

ಬಸವರಾಜುಗೆ ಬಿಜೆಪಿ ಬಾಗಿಲು ಬಂದ್

ತುಮಕೂರು: ಬಿಜೆಪಿ ಸಂಸದ ಜಿ.ಎಸ್.ಬಸವರಾಜು ಅವರಿಗೆ ಮುಂಬರುವ ಲೋಕಸಭೆ ಚುನಾವಣೆಗೆ ಪಕ್ಷದಿಂದ ಟಿಕೆಟ್ ನೀಡದಿರಲು ವರಿಷ್ಠರು ನಿರ್ಧರಿಸಿದ್ದು, ರಾಜಕೀಯವಾಗಿ ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ.ನವದೆಹಲಿಯಲ್ಲಿ ಗುರುವಾರ ನಡೆದ ಬಿಜೆಪಿ ಕೋರ್ ಸಮಿತಿ ಸಭೆಯಲ್ಲಿ ಬಸವರಾಜು ಅವರಿಗೆ ಮತ್ತೊಮ್ಮೆ ಪಕ್ಷದಿಂದ ಟಿಕೆಟ್ ನೀಡದಿರಲು ನಿರ್ಧರಿಸಿದ್ದಾರೆ. ಮಾಜಿ ಸಚಿವ ಎಸ್.ಶಿವಣ್ಣ ಹಾಗೂ ಎಂ.ಬಿ.ನಂದೀಶ್ ಅವರಲ್ಲಿ ಒಬ್ಬರಿಗೆ ಟಿಕೆಟ್ ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ಗೆಲ್ಲುವ ಸಾಮರ್ಥ್ಯ ಇರುವ ಪರ್ಯಾಯ ಮುಖಂಡರ ಕಡೆಗೂ ಗಮನ ಹರಿಸುವಂತೆ ಸಲಹೆ ಮಾಡಿದ್ದಾರೆ ಎಂದು ಪಕ್ಷದ ದೆಹಲಿ ಮೂಲಗಳು ತಿಳಿಸಿವೆ.ಕಾಂಗ್ರೆಸ್, ಬಿಜೆಪಿಯಲ್ಲಿ ಟಿಕೆಟ್‌ಗೆ ನಡೆಸಿದ ಪ್ರಯತ್ನ ಫಲ ನೀಡಿಲ್ಲ. ಇಂತಹ ಬೆಳವಣಿಗೆ ಮೇಲೆ ಕಣ್ಣಿಟ್ಟಿದ್ದ ಅವರು ಜೆಡಿಎಸ್ ಮುಖಂಡರನ್ನು ಸಂಪರ್ಕಿಸುವ ಪ್ರಯತ್ನ ನಡೆಸಿದ್ದರು. ಆ ಕಡೆಯಿಂದ ಸರಿಯಾದ ಪ್ರತಿಕ್ರಿಯೆ ಸಿಕ್ಕಿರಲಿಲ್ಲ ಎನ್ನಲಾಗಿದೆ. ಬಸವರಾಜು ಮುಂದಿನ ರಾಜಕೀಯ ಕುತೂಹಲ ಕೆರಳಿಸಿದೆ.ಕಾಂಗ್ರೆಸ್– ಬಿಜೆಪಿ ಒಡನಾಟ:

ಲೋಕಸಭೆ ಚುನಾವಣೆ ಸಮೀಪಿಸಿದಂತೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರನ್ನು ಎರಡು ಬಾರಿ ಭೇಟಿಯಾಗಿ ಪಕ್ಷಕ್ಕೆ ಮರಳುವ ಇಂಗಿತವನ್ನು ಬಸವರಾಜು ವ್ಯಕ್ತಪಡಿಸಿದ್ದರು. ತಮ್ಮ ಹಿಂದಿನ ಗೆಳೆತನವನ್ನು ಬಳಸಿಕೊಂಡು ಕಾಂಗ್ರೆಸ್ ಪ್ರವೇಶಿಸುವ ಪ್ರಯತ್ನ ನಡೆಸಿದ್ದರು.ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ಕೇಂದ್ರ ಸಚಿವರಾದ ಕೆ.ಎಚ್.ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆ ಹಾಗೂ ತಮ್ಮ ಆಪ್ತರ ಮೂಲಕ ಒತ್ತಡ ಹಾಕಿದ್ದರು. ಒಂದು ಹಂತದಲ್ಲಿ ಸೋನಿಯಾ ಗಾಂಧಿ ಒಪ್ಪಿಗೆ ಸೂಚಿಸುವ ಹಂತಕ್ಕೂ ಬಂದಿದ್ದರು. ಈ ಹಿನ್ನೆಲೆಯಲ್ಲಿ ಸ್ಥಳೀಯ ಮುಖಂಡರಿಗೆ ‘ಡೋಂಟ್ ಕೇರ್’ ಎಂದಿದ್ದರು.ಆದರೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಇದಕ್ಕೆ ಅಡ್ಡಿಯಾದರು. ಯಾವುದೇ ಕಾರಣಕ್ಕೂ ಸೇರಿಸಿಕೊಳ್ಳಬಾರದು. ಪಕ್ಷ ಬಿಟ್ಟುಹೋಗಿ, ಪಕ್ಷವನ್ನೇ ಟೀಕೆ ಮಾಡಿದವರನ್ನು ಮತ್ತೊಮ್ಮೆ ಸೇರಿಸಿಕೊಂಡರೆ ಯಾವ ಸಂದೇಶ ನೀಡಿದಂತಾಗುತ್ತದೆ ಎಂದು ಸಲಹೆ ಮಾಡಿದ್ದರು.ಪಕ್ಷಕ್ಕೆ ಸೇರಿಸಿಕೊಳ್ಳಲು ರಾಜ್ಯದ ಇತರ ಮುಖಂಡರ ಒತ್ತಡ ಹೆಚ್ಚಿದಾಗ ಪರಮೇಶ್ವರ್ ಹೈಕಮಾಂಡ್‌ಗೆ ಅವರದೇ ಮೆದು ಮಾತಿನಲ್ಲಿ ‘ಎಚ್ಚರಿಕೆ’ ಸಂದೇಶ ನೀಡಿದ್ದರು. ಇದರಿಂದಾಗಿ ಹೈಕಮಾಂಡ್ ಪಕ್ಷಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿತ್ತು. ಒತ್ತಡ ಹಾಕುತ್ತಿದ್ದ ರಾಜ್ಯ ಮುಖಂಡರಿಗೂ ಎಚ್ಚರಿಕೆ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ.ಇನ್ನೇನು ಕಾಂಗ್ರೆಸ್ ಸೇರಲಿದ್ದು ಟಿಕೆಟ್ ಸಿಗಬಹುದು ಎಂಬ ಆಸೆಯಿಂದ ಬಿಜೆಪಿ ಹಾಗೂ ಪಕ್ಷದ ಮುಖಂಡರನ್ನು ಟೀಕಿಸಿದ್ದರು. ಕಾಂಗ್ರೆಸ್‌ನಲ್ಲಿ ಟಿಕೆಟ್ ಸಿಗದಿರುವುದು ಖಚಿತವಾದ ನಂತರ ಬಿಜೆಪಿ ಕಡೆಗೆ ವಾಲಿದ್ದರು. ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ.ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ರಾಜಕೀಯದಿಂದ ದೂರವೇ ಉಳಿಯುವುದಾಗಿ ಹೇಳಿದ್ದರು. ಬದಲಾದ ಬೆಳವಣಿಗೆಯಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ಹಿಂಬಾಲಿಸಿದರು. ಬಸವರಾಜು ಅವರಿಗೇ ಟಿಕೆಟ್ ನೀಡಲಾಗುವುದು ಎಂದು ಯಡಿಯೂರಪ್ಪ ಪದೇ–ಪದೇ ಹೇಳುತ್ತಾ ಬಂದಿದ್ದರು.ಬಿಜೆಪಿ ಆಂತರಿಕ ಬೆಳವಣಿಗೆ ಗಮನಿಸಿದರೆ ಯಡಿಯೂರಪ್ಪ ಪ್ರಯತ್ನವೂ ಫಲ ನೀಡಿಲ್ಲ. ಕೆಜೆಪಿ ಜತೆಗೆ ಗುರುತಿಸಿಕೊಂಡು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಪಕ್ಷದಿಂದ ಅಮಾನತು ಮಾಡಲಾಗಿತ್ತು. ಯಡಿಯೂರಪ್ಪ, ಸಿ.ಎಂ.ಉದಾಸಿ ಪುತ್ರರ ಅಮಾನತು ಆದೇಶ ವಾಪಸ್ ಪಡೆದರೂ ಬಸವರಾಜು ಅಮಾನತು ಆದೇಶವನ್ನು ಈವರೆಗೂ ವಾಪಸ್ ಪಡೆದಿಲ್ಲ. ಆದರೂ ಟಿಕೆಟ್ ಪಡೆಯಲು ಪ್ರಯತ್ನ ಮುಂದುವರಿಸಿದ್ದರು.ಮಾಜಿ ಸಚಿವ ಎಸ್.ಶಿವಣ್ಣ, ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ್‌ಗೌಡ, ಇತರ ಮುಖಂಡರು ಟಿಕೆಟ್ ನೀಡುವುದಕ್ಕೆ ಪಕ್ಷದ ಆಂತರಿಕ ವಲಯದಲ್ಲಿ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದರು. ರಾಜ್ಯ ನಾಯಕರೂ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದರು.ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದ ಪಕ್ಷದ ಮುಖಂಡರು ಟಿಕೆಟ್ ನೀಡಲು ನಿರಾಕರಿಸಿದ್ದಾರೆ. ಕೊನೆ ಕ್ಷಣದಲ್ಲಿ ಆಗುವ ಬದಲಾವಣೆ ಹಾಗೂ ಯಡಿಯೂರಪ್ಪ ಪ್ರಯತ್ನ ಕೆಲಸ ಮಾಡಿದರೆ ಟಿಕೆಟ್ ಸಿಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ ಎಂದು ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ.ರಾಜಕೀಯ ದಾರಿ: ಕಾಂಗ್ರೆಸ್ ಮೂಲಕವೇ ರಾಜಕೀಯ ನಡೆ ಕಂಡುಕೊಂಡಿದ್ದ ಬಸವರಾಜು 2009ರ ಲೋಕಸಭೆ ಚುನಾವಣೆಗೂ ಮುನ್ನ ಪಕ್ಷ ತೊರೆದು ಬಿಜೆಪಿ ಸೇರಿದ್ದರು. ಆಗ ಮುಖ್ಯಮಂತ್ರಿ ಆಗಿದ್ದ ಬಿ.ಎಸ್.ಯಡಿಯೂರಪ್ಪ ‘ಅಲೆ’ ಹಾಗೂ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದರೆ ಉನ್ನತ ಸ್ಥಾನಮಾನ ಸಿಗಬಹುದು ಎಂಬ ಆಸೆ ಹೊತ್ತು ಪಕ್ಷ ಸೇರಿದ್ದರು.ಯಡಿಯೂರಪ್ಪ ಅಲೆ ಕೆಲಸ ಮಾಡಿದ್ದರಿಂದ ಸಂಸದರೂ ಆದರು. ಆದರೆ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರಲಿಲ್ಲ. ಪಕ್ಷ ಸೇರಿದ್ದಕ್ಕೆ ಸಂಸದರಾಗಿದ್ದಷ್ಟೇ ಲಾಭ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.