ಶನಿವಾರ, ಮೇ 21, 2022
23 °C

ಬಸ್‌ಗಳಿಗೆ ಸಿಎನ್‌ಜಿ ಅಳವಡಿಸಲು ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪರಿಸರ ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಡೀಸೆಲ್ ಆಧಾರಿತ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್ ಸೇರಿದಂತೆ ಇತರ ವಾಹನಗಳಿಗೆ ಸಿಎನ್‌ಜಿ (ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್) ಅಳವಡಿಸಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ.ರಾಜ್ಯದಲ್ಲಿ ನೈಸರ್ಗಿಕ ಅನಿಲ ಪೈಪ್‌ಲೈನ್ ಯೋಜನೆ ಅನುಷ್ಠಾನ ಕುರಿತು ಮುಖ್ಯಮಂತ್ರಿ ಗೃಹ ಕಚೇರಿ `ಕೃಷ್ಣಾ'ದಲ್ಲಿ ಶನಿವಾರ ನಡೆದ ಸಭೆ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದರು.ಪ್ರಥಮ ಹಂತದಲ್ಲಿ ನರ್ಮ್ ಯೋಜನೆ ಅಡಿಯಲ್ಲಿ ಹೊಸದಾಗಿ ಖರೀದಿಸುವ ಬಿಎಂಟಿಸಿ (ಬೆಂಗಳೂರು ನಗರ ಸಾರಿಗೆ ಸಂಸ್ಥೆ)ಯ 300 ಬಸ್‌ಗಳಿಗೆ ಸಿಎನ್‌ಜಿ ಅಳವಡಿಸಲಾಗುವುದು. ಈಗಾಗಲೇ ದೆಹಲಿ ಮತ್ತು ಮುಂಬೈನಲ್ಲಿ ಬಸ್‌ಗಳಿಗೆ ಸಿಎನ್‌ಜಿ ಅಳವಡಿಸಲಾಗಿದೆ. ಡೀಸೆಲ್‌ಗಿಂತಲೂ ಸಿಎನ್‌ಜಿ ದರ ಕಡಿಮೆಯಾಗಿದೆ. ಪರಿಸರ ಮಾಲಿನ್ಯವೂ ಕಡಿಮೆ. ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಈ ವ್ಯವಸ್ಥೆ ಅಳವಡಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.ಭಾರತೀಯ ಅನಿಲ ಪ್ರಾಧಿಕಾರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಪೆಟ್ರೋಲ್ ಬಂಕ್ ಮಾದರಿಯಲ್ಲಿ ಸಿಎನ್‌ಜಿ ಕೇಂದ್ರಗಳನ್ನು ಆರಂಭಿಸಲಿವೆ. ಆರಂಭದಲ್ಲಿ ಬೆಂಗಳೂರಿನಲ್ಲಿ 25 ಕೇಂದ್ರ ಸೇರಿದಂತೆ ರಾಜ್ಯದಲ್ಲಿ ಮುಂದಿನ ಐದು ತಿಂಗಳಲ್ಲಿ ಒಟ್ಟು 65 ಕೇಂದ್ರಗಳನ್ನು ಆರಂಭಿಸಲಾಗುವುದು. ರಾಜ್ಯ ಸರ್ಕಾರವೇ ಈ ಕೇಂದ್ರಗಳಿಗೆ ಜಾಗ ಒದಗಿಸಲಿದ್ದು, ಮುಖ್ಯವಾಗಿ ಕೆಎಸ್‌ಆರ್‌ಟಿಸಿ ಡಿಪೋಗಳಲ್ಲಿ ಆರಂಭಿಸಲಾಗುವುದು ಎಂದು ವಿವರಿಸಿದರು.ಬಿಡದಿಯಲ್ಲಿ 700 ಮೆಗಾವಾಟ್ ಸಾಮರ್ಥ್ಯದ ಅನಿಲ ಆಧಾರಿತ ವಿದ್ಯುತ್ ಘಟಕ ಆರಂಭಿಸಲು ರಾಜ್ಯ ಸರ್ಕಾರ 2009ರಲ್ಲಿ ಭಾರತೀಯ ಅನಿಲ ಪ್ರಾಧಿಕಾರದ ಜತೆ ಒಪ್ಪಂದ ಮಾಡಿಕೊಂಡಿದೆ. ಈ ಘಟಕ 2015ಕ್ಕೆ ಆರಂಭವಾಗಲಿದೆ. ಈಗಾಗಲೇ ಬಿಡದಿ ಘಟಕಕ್ಕಾಗಿ 4 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ದಾಬೋಲ್‌ನಿಂದ ಬೆಂಗಳೂರಿಗೆ ಸುಮಾರು ಒಂದು ಸಾವಿರ ಕಿ.ಮೀ. ಉದ್ದದ ನೈಸರ್ಗಿಕ ಅನಿಲ ಪೈಪ್‌ಲೈನ್ ಅಳವಡಿಸಲಾಗಿದೆ.ಇದೇ ಪೈಪ್‌ಲೈನ್ ಬಳಸಿಕೊಂಡು ರಾಜ್ಯದಲ್ಲಿನ ಕೈಗಾರಿಕೆಗಳಿಗೆ ಹಾಗೂ ಗೃಹ ಬಳಕೆಗೆ ಅನಿಲ ಪೂರೈಸಲು ಉದ್ದೇಶಿಸಲಾಗಿದೆ.

ಟೊಯೋಟೊ ಕಿರ್ಲೋಸ್ಕರ್ ಸೇರಿದಂತೆ ಕೆಲವು ಖಾಸಗಿ ಕಂಪೆನಿಗಳು ಈಗಾಗಲೇ ಈ ಪೈಪ್‌ಲೈನ್‌ನಿಂದ ಸಂಪರ್ಕ ಪಡೆದು ಅನಿಲ ಬಳಸುತ್ತಿವೆ ಎಂದು ವಿವರಿಸಿದರು.ಪರಿಸರ ಮಾಲಿನ್ಯದ ಕಾರಣಕ್ಕೆ ಸ್ಥಗಿತವಾಗಿರುವ ಯಲಹಂಕದಲ್ಲಿನ 450 ಮೆಗಾವಾಟ್‌ನ ಡೀಸೆಲ್ ಆಧಾರಿತ ವಿದ್ಯುತ್ ಘಟಕವನ್ನು ಅನಿಲ ಆಧಾರಿತ ವಿದ್ಯುತ್ ಘಟಕವನ್ನಾಗಿ ಪರಿವರ್ತಿಸುವ ಚಿಂತನೆ ಇದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.ಸಭೆಯಲ್ಲಿ ಭಾಗವಹಿಸಿದ್ದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ವೀರಪ್ಪ ಮೊಯ್ಲಿ ಮಾತನಾಡಿ, ದಾಬೋಲ್-ಬೆಂಗಳೂರು ನಡುವೆ ಇರುವ ನೈಸರ್ಗಿಕ ಅನಿಲ ಪೈಪ್‌ಲೈನ್ ಕರ್ನಾಟಕದಲ್ಲಿಯೇ ಶೇ80ರಷ್ಟು ಹಾದು ಹೋಗುತ್ತದೆ. ಇದರಿಂದ ರಾಜ್ಯದಲ್ಲಿನ ದೊಡ್ಡ ಮತ್ತು ಸಣ್ಣ ಕೈಗಾರಿಕೆಗಳಿಗೆ ಹೆಚ್ಚು ಅನುಕೂಲವಾಗಲಿದೆ. ಪ್ರತಿ 100 ಕಿ.ಮೀ.ಗೆ ರಾಷ್ಟ್ರೀಯ ಹೆದ್ದಾರಿ-4ರ ಅತಿ ಸಮೀಪದಲ್ಲಿಯೇ ಈ ಪೈಪ್‌ಲೈನ್ ಹಾದುಹೋಗುತ್ತದೆ. ಇದರಿಂದಾಗಿ ಹೆದ್ದಾರಿ ಸಮೀಪದಲ್ಲಿರುವ ಪೈಪ್‌ಲೈನ್ ಬಳಸಿಕೊಂಡು ಸಿಎನ್‌ಜಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ವಿವರಿಸಿದರು.ಎರಡನೇ ಹಂತದಲ್ಲಿ ಮಂಗಳೂರು ಮತ್ತು ಉಡುಪಿ ಹಾಗೂ ಬಳ್ಳಾರಿಗೆ ನೈಸರ್ಗಿಕ ಅನಿಲ ಪೈಪ್‌ಲೈನ್ ಅಳವಡಿಸಲಾಗುವುದು.

ಚಿತ್ರದುರ್ಗದಿಂದ ಶಿವಮೊಗ್ಗ ಮೂಲಕ ಮಂಗಳೂರು ಮತ್ತು ಉಡುಪಿಗೆ 350 ಕಿ.ಮೀ. ಉದ್ದದ ಪೈಪ್‌ಲೈನ್ ಅನ್ನು 1,400 ಕೋಟಿ ರೂಪಾಯಿ ವೆಚ್ಚದಲ್ಲಿ ಅಳವಡಿಸಲಾಗುವುದು. ಚಿತ್ರದುರ್ಗದಿಂದ ಬಳ್ಳಾರಿವರೆಗಿನ 140 ಕಿ.ಮೀ. ಉದ್ದದ ಪೈಪ್‌ಲೈನ್‌ಗೆ 700 ಕೋಟಿ ರೂಪಾಯಿ ವೆಚ್ಚವಾಗಲಿದ್ದು, ಸಮೀಕ್ಷೆ ಕಾರ್ಯ ನಡೆಯುತ್ತಿದೆ ಎಂದು ವಿವರಿಸಿದರು.ದಾಬೋಲ್-ಬೆಂಗಳೂರು ನಡುವೆ ಇರುವ ಪೈಪ್‌ಲೈನ್ ಮಾರ್ಗವನ್ನು `ಗ್ರೀನ್ ಕಾರಿಡಾರ್' ಎಂದು ಪರಿಗಣಿಸಲು ಉದ್ದೇಶಿಸಲಾಗಿದ್ದು, ನೈಸರ್ಗಿಕ ಅನಿಲ ಬಳಸಿ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲು ಅನುಕೂಲವಾಗುವಂತೆ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ಮೊಯ್ಲಿ ತಿಳಿಸಿದರು.

ಸಚಿವರಾದ ಆರ್.ವಿ. ದೇಶಪಾಂಡೆ, ಎಂ.ಬಿ. ಪಾಟೀಲ್, ಸಂತೋಷ್ ಲಾಡ್, ದಿನೇಶ್ ಗುಂಡೂರಾವ್, ರಾಮಲಿಂಗಾರೆಡ್ಡಿ, ಸರ್ಕಾರ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಹಾಜರಿದ್ದರು.ರಾಜ್ಯದಲ್ಲಿ ಎರಡು ಪ್ರತಿಷ್ಠಿತ ಸಂಸ್ಥೆ

ರಾಜ್ಯದಲ್ಲಿ ರಾಜೀವ ಗಾಂಧಿ ಪೆಟ್ರೋಲಿಯಂ ತಂತ್ರಜ್ಞಾನ ಸಂಸ್ಥೆ ಹಾಗೂ ಪ್ರಾದೇಶಿಕ ಅನಿಲ ನಿರ್ವಹಣೆ ಕೇಂದ್ರ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಐಐಟಿ ಮಾದರಿಯಲ್ಲಿ ರಾಜೀವ ಗಾಂಧಿ ಪೆಟ್ರೋಲಿಯಂ ತಂತ್ರಜ್ಞಾನ ಸಂಸ್ಥೆ ಆರಂಭಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ವೀರಪ್ಪ ಮೊಯ್ಲಿ ಒಪ್ಪಿಗೆ ನೀಡಿದ್ದಾರೆ. ಈ ಸಂಸ್ಥೆ ಆರಂಭಕ್ಕೆ 350 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಸಂಸ್ಥೆಗಾಗಿ 200 ಎಕರೆ ಜಾಗವನ್ನು ರಾಜ್ಯ ಸರ್ಕಾರ ನೀಡಲಿದೆ.ವಿಮಾನ ನಿಲ್ದಾಣ ಮತ್ತು ಮೆಟ್ರೋ ಸಮೀಪ ಇರುವ ಜಾಗವನ್ನು ಇನ್ನೊಂದು ವಾರದಲ್ಲಿ ಗುರುತಿಸುತ್ತೇವೆ ಎಂದು ತಿಳಿಸಿದರು.ಈ ರೀತಿಯ ಸಂಸ್ಥೆಗಳು ಈಗಾಗಲೇ ರಾಯಬರೇಲಿ, ನೋಯಿಡಾ, ಅಸ್ಸಾಂನ ಶಿವಸಾಗರದಲ್ಲಿವೆ. ದಕ್ಷಿಣ ಭಾರತದಲ್ಲಿ ಇದು ಪ್ರಥಮ ಸಂಸ್ಥೆಯಾಗಿದೆ. ಈ ಸಂಸ್ಥೆಯಲ್ಲಿ ಬೆಂಕಿ ಸುರಕ್ಷತೆ ಹಾಗೂ ತೈಲ ಮತ್ತು ಅನಿಲ ಕ್ಷೇತ್ರಗಳಲ್ಲಿರುವವರಿಗೆ ಕೌಶಲ ವೃದ್ಧಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಅಧ್ಯಯನ ಮತ್ತು ಸಂಶೋಧನೆಗಳು ನಡೆಯಲಿವೆ ಎಂದು ವಿವರಿಸಿದರು.ಇದೇ ರೀತಿಯಲ್ಲಿ ಪ್ರಾದೇಶಿಕ ಅನಿಲ ನಿರ್ವಹಣೆ ಕೇಂದ್ರವನ್ನು ಬೆಂಗಳೂರಿನಲ್ಲಿ ಆರಂಭಿಸಲಾಗುವುದು. ಇದು ಸಹ ದಕ್ಷಿಣ ಭಾರತದಲ್ಲಿ ಪ್ರಥಮ ಸಂಸ್ಥೆಯಾಗಿದೆ. ಈ ಸಂಸ್ಥೆ ಆರಂಭಿಸಲು 70ರಿಂದ 80 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ತಿಳಿಸಿದರು.ಸಿಎನ್‌ಜಿ ಲಾಭವೇನು?

ಕೇಂದ್ರೀಕೃತ ನೈಸರ್ಗಿಕ ಅನಿಲ (ಕಂಪ್ರೆಸ್ಡ್ ನ್ಯಾಚುರಲ್ ಗ್ಯಾಸ್-ಸಿಎನ್‌ಜಿ) ಡೀಸೆಲ್ ಮತ್ತು ಪೆಟ್ರೋಲ್‌ಗೆ ಪರ್ಯಾಯ ಇಂಧನವಾಗಿದೆ. ಇದು ಪರಿಸರ ಕಾಪಾಡಲು ಪೂರಕವಾಗಿದ್ದು, ಇತರ ಇಂಧನಗಳಿಗಿಂತ ಶುದ್ಧ ಮತ್ತು ಸುರಕ್ಷಿತ ಎಂದು ಪರಿಗಣಿಸಲಾಗಿದೆ. ಜತೆಗೆ ಕಡಿಮೆ ದರದಲ್ಲಿ ದೊರೆಯಲಿದೆ.ಹೆಚ್ಚಿನ ಒತ್ತಡ ಹಾಕುವ ಮೂಲಕ ನೈಸರ್ಗಿಕ ಅನಿಲವನ್ನು ಸಿಎನ್‌ಜಿಯಾಗಿ ಪರಿವರ್ತಿಸ ಲಾಗುತ್ತದೆ. ಸಿಎನ್‌ಜಿ ಬಳಸಿದರೆ ವಾಹನಗಳ ನಿರ್ವಹಣೆ ವೆಚ್ಚವೂ ಕಡಿಮೆಯಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.