ಬುಧವಾರ, ಜೂನ್ 23, 2021
24 °C
ಪ್ರಯಾಣಿಕರಿಂದ ಹೆಚ್ಚುವರಿ ಹಣ ವಸೂಲಿ ಆರೋಪ

ಬಸ್‌ ನಿಲ್ಲಿಸಿ ಅಧಿಕಾರಿಗಳೊಂದಿಗೆ ಚರ್ಚೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡಗೋಡ: ಶಿರಸಿ ಜಾತ್ರೆಗೆ ಬಿಡಲಾಗಿರುವ ವಿಶೇಷ ಬಸ್‌ಗಳಲ್ಲಿ ಪ್ರಯಾಣಿಕರಿಂದ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಪ್ರಯಾಣಿಕರು ಬಸ್‌ ಅನ್ನು ಮಾರ್ಗ ಮಧ್ಯದಲ್ಲಿಯೇ ನಿಲ್ಲಿಸಿ ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ ಘಟನೆ ಮಂಗಳವಾರ ಜರುಗಿದೆ.ಶಿರಸಿಯಿಂದ ಹುಬ್ಬಳ್ಳಿಗೆ ಹೊರಟಿದ್ದ ನಂ.71 ಜಾತ್ರಾ ವಿಶೇಷ ಬಸ್‌ನಲ್ಲಿ ಸಾಮಾನ್ಯ ದರಕ್ಕಿಂತ ಶೇ10ರಷ್ಟು ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಬಸ್‌ನಲ್ಲಿದ್ದ ಪ್ರಯಾಣಿಕರು ಶಿರಸಿ ತಾಲ್ಲೂಕಿನ ಗೌಡಳ್ಳಿ ಸನಿಹ ಬಸ್‌ಅನ್ನು ಸುಮಾರು ಅರ್ಧ ಗಂಟೆವರೆಗೆ ನಿಲ್ಲಿಸಿ ಸ್ಥಳದಲ್ಲಿದ್ದ ಟಿಕೆಟ್‌ ತಪಾಸಣಾ ಅಧಿಕಾರಿಗ ಳೊಂದಿಗೆ ವಾಗ್ವಾದ ನಡೆಸಿದರು.ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದಲೇ ಹೆಚ್ಚುವರಿ ಬಸ್‌ಗಳನ್ನು ಬಿಡಲಾಗುತ್ತಿದ್ದರೂ ಸಹಿತ ಸಾಮಾನ್ಯ ದರಕ್ಕಿಂತ ಹೆಚ್ಚಿಗೆ ಹಣ ಪಡೆಯುವುದೇಕೆ ಎಂದು ಪ್ರಯಾಣಿಕರು ಪ್ರಶ್ನಿಸಿದರು.ಅದಕ್ಕೆ ಉತ್ತರಿಸಿದ ಟಿಕೆಟ್‌ ತಪಾಸಣಾ ಅಧಿಕಾರಿಗಳು, ‘ದಿನನಿತ್ಯ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳಲ್ಲಿ ಅದೇ ದರವಿದೆ. ಆದರೆ ಜಾತ್ರಾ ವಿಶೇಷ ಎಂದು ಬೋರ್ಡ್‌ ಹಾಕಿರುವ ಬಸ್‌ಗಳಿಗೆ ಮಾತ್ರ ಟಿಕೆಟ್‌ ದರದಲ್ಲಿ ಶೇ 10ರಷ್ಟು ಹೆಚ್ಚುವರಿ ಹಣವನ್ನು ಪ್ರಯಾಣಿಕರಿಂದ ಪಡೆಯ ಲಾಗುತ್ತಿದೆ. ಜಾತ್ರೆಗಾಗಿ ವಿವಿಧ ವಿಭಾಗ ಗಳಿಂದ ಹೆಚ್ಚುವರಿ ಬಸ್‌ಗಳನ್ನು ತರಿಸಿಕೊಂಡು ಪ್ರಯಾಣಿ ಕರಿಗೆ ಅನುಕೂಲ ಮಾಡಿಕೊಡುತ್ತಿ ರುವುದರಿಂದ ಟಿಕೆಟ್‌ ದರದಲ್ಲಿ ಏರಿಕೆಯಾಗಿದೆ’ ಎಂದರು.ಆದರೆ ಇದಕ್ಕೆ ಒಪ್ಪದ ಪ್ರಯಾಣಿಕರು, ‘ಜಾತ್ರಾ ವಿಶೇಷ ಎಂದು ಬೋರ್ಡ್‌ ಹಾಕಿರುವ ಬಸ್‌ಗಳಿಗೆ ಟಿಕೆಟ್‌ ದರವನ್ನು ಬರೆದು ಅಂಟಿಸಿದರೇ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ’ ಎಂದು ಸಲಹೆ ನೀಡಿದರು.ನಂತರ ಪ್ರಯಾಣಿಕರು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಚರ್ಚಿಸಿದ ನಂತರ ಬಸ್‌ ಪ್ರಯಾಣ ಬೆಳೆಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.