ಮಂಗಳವಾರ, ಮೇ 11, 2021
25 °C

ಬಹುವೃತ್ತಿ ಪ್ರೀತಿ; ಅಭಿನಯ ಆಸಕ್ತಿ

ಸಂದರ್ಶನ: ಇ.ಎಸ್. ಸುಧೀಂದ್ರ ಪ್ರಸಾದ್ Updated:

ಅಕ್ಷರ ಗಾತ್ರ : | |

ಬಹುವೃತ್ತಿ ಪ್ರೀತಿ; ಅಭಿನಯ ಆಸಕ್ತಿ

`ಲೈಫ್ ಇನ್ ಎ ಮೆಟ್ರೊ' ಹಿಂದಿ ಸಿನಿಮಾದಲ್ಲಿ ಕೊಂಕಣಾ ಸೇನ್ ಎದುರು ನಟಿಸಿದ್ದ ಸೂಪರ್ ಮಾಡೆಲ್ ನೆನಪಿರಬಹುದು. ಅವರೇ ಹತ್ತು ವರ್ಷ ಮಾಡೆಲಿಂಗ್ ಕ್ಷೇತ್ರದಲ್ಲಿ ಜನಪ್ರಿಯರಾಗಿದ್ದ ಗೌತಮ್ ಕಪೂರ್. ದೇಶ ವಿದೇಶಗಳ ರ್‍ಯಾಂಪ್‌ಗಳ ಮೇಲೆ ಹೆಜ್ಜೆ ಹಾಕಿದ ಅನುಭವ ಅವರದ್ದು. ಇದೀಗ ಆರೋಗ್ಯಯುಕ್ತ ಸಪ್ಲಿಮೆಂಟ್ಸ್ ವ್ಯವಹಾರದ ಜತೆಗೆ ವಸ್ತ್ರಗಳ ವ್ಯಾಪಾರದಲ್ಲಿ ತೊಡಗಿದ್ದಾರೆ. `ಚಲ್ತೇ ಚಲ್ತೇ', `ನಿಖಿಲ್ ಮೈ ಬ್ರದರ್' ಚಿತ್ರದಲ್ಲಿ ಅಭಿನಯಿಸಿದ ಅವರು ಕಿರುಚಿತ್ರ ಹಾಗೂ ವ್ಯವಹಾರ ನಿಮಿತ್ತ ಇತ್ತೀಚೆಗೆ ನಗರಕ್ಕೆ ಬಂದಿದ್ದರು. `ಮೆಟ್ರೊ'ದೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡರು.ಕಿರುಚಿತ್ರದ ಅಭಿನಯ ಅನುಭವ ಹೇಗಿತ್ತು?

ಇಂಗ್ಲೆಂಡ್‌ನಿಂದ ಬಂದ ವೈದ್ಯನೊಬ್ಬ ಭಾರತಕ್ಕೆ ಮರಳಿ ಇಲ್ಲಿ ಅವಕಾಶ ವಂಚಿತ ಹಾಗೂ ಕಡು ಬಡತನದಲ್ಲಿರುವವರಿಗೆ ವೈದ್ಯಕೀಯ ಸಹಾಯ ಮಾಡುವ ಕಥೆಯಲ್ಲಿ ನಾನು ವೈದ್ಯನ ಪಾತ್ರ ನಿರ್ವಹಿಸುತ್ತಿದ್ದೇನೆ. ಆಸಕ್ತಿಕರ ವಸ್ತು ಅದರಲ್ಲಿದೆ.ಬಾಲಿವುಡ್‌ನಲ್ಲಿ ನಟಿಸಿದ ಅನುಭವವಿರುವ ನೀವು ಕಿರುಚಿತ್ರದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದು ಹೇಗೆ?

ಈ ಕಿರುಚಿತ್ರ ಮಾಡಹೊರಟಿದ್ದ ತಂಡವೇ ನನ್ನ ಒಪ್ಪಿಗೆಗೆ ಮೊದಲ ಕಾರಣ. ನನ್ನ ಈಗಿನ ವೃತ್ತಿಗೂ ಪಾತ್ರಕ್ಕೂ ಸಾಮ್ಯತೆ ಇದೆ. ಹಲವು ವರ್ಷಗಳಿಂದ ನಾನು ದೇಹಕ್ಕೆ ಪೌಷ್ಟಿಕಾಂಶಗಳನ್ನು ಒದಗಿಸುವ ವಸ್ತುಗಳ ವ್ಯಾಪಾರದಲ್ಲಿ ತೊಡಗಿದ್ದೇನೆ. ನನ್ನದೇ ಆದ ಉತ್ಪನ್ನಗಳಿವೆ. ಸಾವಯವ ಆಹಾರಗಳನ್ನು ನೀಡುವುದು ನನ್ನ ಉದ್ದೇಶ. ಹೀಗಾಗಿ ವೃತ್ತಿಗೂ ಪ್ರವೃತ್ತಿಯ ಪಾತ್ರಕ್ಕೂ ಹೊಂದಾಣಿಕೆಯಾಗುತ್ತಿದ್ದುದರಿಂದ ಕಿರುಚಿತ್ರದಲ್ಲಿ ನಟಿಸಲು ಒಪ್ಪಿಕೊಂಡೆ. ಅಂತರರಾಷ್ಟ್ರೀಯ ಪ್ರಶಸ್ತಿಗಳ ಗೌರವ ಸಲ್ಲಬಹುದಾದ ವಸ್ತುವಿನ ಕಿರುಚಿತ್ರ ಇದು.ಬಾಲಿವುಡ್ ಹಾಗೂ ಸಾಕ್ಷ್ಯಚಿತ್ರಗಳ ನಡುವೆ ನೀವು ಕಂಡುಕೊಂಡ ವ್ಯತ್ಯಾಸ ಏನು?

ಎರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಬಾಲಿವುಡ್‌ನ ಕಮರ್ಷಿಯಲ್ ಚಿತ್ರಗಳಲ್ಲಿ ಕಥೆಯೇ ಪ್ರಧಾನ. ಆದರೆ ಸಾಕ್ಷ್ಯಚಿತ್ರಗಳು ಮಾಹಿತಿ ಹಾಗೂ ಜ್ಞಾನದ ಮೂಟೆಯಿದ್ದಂತೆ.ನೀವು ಈವರೆಗೂ ನಿರ್ವಹಿಸಿದ ಜವಾಬ್ದಾರಿಗಳು ಯಾವುವು?

ಸೂಪರ್ ಮಾಡೆಲ್ ಆಗಿ ಕಾಲಿಟ್ಟ ನಾನು ಹತ್ತು ವರ್ಷ ಮಾಡೆಲಿಂಗ್‌ನಲ್ಲಿ ಹೆಸರು ಮಾಡಿದೆ. ಅಲ್ಲಿರುವಾಗಲೇ ನ್ಯೂಟ್ರಿಸ್ಯೂಟಿಕಲ್ ವ್ಯವಹಾರದ ಆಲೋಚನೆ ಬಂತು. ಅದನ್ನು ಕಾರ್ಯರೂಪಕ್ಕೆ ತಂದೆ. ಗಾರ್ಮೆಂಟ್ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದೇನೆ. `ಸ್ವದೇಶಿ' ಎಂಬ ಉತ್ಪನ್ನಗಳನ್ನು ಮಾರುವಮಳಿಗೆ ಇಲ್ಲಿನ ಇಂದಿರಾನಗರದಲ್ಲೂ ಇದೆ. ಇಲ್ಲಿ ಉತ್ತಮ ಆರೋಗ್ಯಕ್ಕೆ ಅತಿ ಅವಶ್ಯಕ ಎನಿಸುವ 60 ಉತ್ಪನ್ನಗಳು, 20 ಸಪ್ಲಿಮೆಂಟ್‌ಗಳು ಲಭ್ಯ. ಗುಣಮಟ್ಟ ಖಾತರಿಗಾಗಿ ಪ್ರಮಾಣ ಪತ್ರಗಳನ್ನೂ ಪಡೆದಿದ್ದೇವೆ. ಹೀಗಾಗಿ ಇದು ನನ್ನ ಮೆಚ್ಚಿನ ವೃತ್ತಿ. ಈ ನಡುವೆ ಬಾಲಿವುಡ್‌ನಲ್ಲಿ ಕೆಲವು ಚಿತ್ರಗಳಲ್ಲಿ ಗಮನಾರ್ಹ ಪಾತ್ರಗಳನ್ನು ನಿರ್ವಹಿಸಿದ್ದೇನೆ.ಎಲ್ಲವನ್ನೂ ಏಕಕಾಲದಲ್ಲಿ ಹೇಗೆ ನಿರ್ವಹಿಸುತ್ತೀರಿ?

ಮನುಷ್ಯನಿಗೆ ಒಂದೇ ಸಮಯದಲ್ಲಿ ಹಲವು ಕೆಲಸಗಳನ್ನು ಮಾಡಬಲ್ಲ ವರವನ್ನು ದೇವರು ನೀಡಿದ್ದಾನೆ. ಹೀಗಾಗಿ ನನ್ನ ಸಮಯವನ್ನು ಅಗತ್ಯಕ್ಕನುಗುಣವಾಗಿ ಆಯಾ ಕೆಲಸಗಳಿಗೆ ಮೀಸಲಿಟ್ಟಿದ್ದೇನೆ. ಮಾಡುವ ಪ್ರತಿಯೊಂದು ಕೆಲಸದಲ್ಲೂ ಪ್ರಾಮಾಣಿಕವಾಗಿರುತ್ತೇನೆ. ಜತೆಗೆ ವಾರದ ದಿನಗಳಲ್ಲಿ ಸ್ನೇಹಿತರು, ನೆಂಟರಿಷ್ಟರೊಂದಿಗೆ ಹೆಚ್ಚಾಗಿ ಬೆರೆಯುವುದಿಲ್ಲ. ನನ್ನದೇ ಆದ ಒಂದು ಆಪ್ತವಲಯವಿದೆ. ಆಗಾಗ ಸೇರುತ್ತೇವೆ ಅಷ್ಟೆ. ಈ ಶಿಸ್ತಿನಿಂದಾಗಿ ನನ್ನ ವೃತ್ತಿ ಹಾಗೂ ಪ್ರವೃತ್ತಿಗೆ ಸಾಕಷ್ಟು ಸಮಯ ಮೀಸಲಿಡುವುದು ಸಾಧ್ಯವಾಗಿದೆ.ನಿರ್ವಹಿಸುತ್ತಿರುವ ವೃತ್ತಿಗಳಲ್ಲಿ ಯಾವುದು ನಿಮಗೆ ಅಚ್ಚುಮೆಚ್ಚು?

ಯಾವುದು ಮೆಚ್ಚಿನದು ಎಂದು ಹೇಳುವುದು ಕಷ್ಟ. ಏಕೆಂದರೆ ನಟನೆ ಕ್ರಿಯಾತ್ಮಕ ಕೆಲಸ. ಹೀಗಾಗಿ ಇಲ್ಲಿ ನನ್ನನ್ನು ಹೆಚ್ಚು ಪ್ರಯೋಗಕ್ಕೆ ಒಡ್ಡಿಕೊಳ್ಳಬಹುದು. ನೂರಾರು ಜನ ಸೇರಿರುವ ವೇದಿಕೆ ಮೇಲೆ ನನ್ನತನವನ್ನು ಹೊರಗಿಟ್ಟು ಬೇರೆಯದೇ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಸುಲಭದ ಮಾತಲ್ಲ. ಮಾಡೆಲಿಂಗ್ ನಾನು ಮೆಚ್ಚಿದ ಕ್ಷೇತ್ರ. ನನಗೆ ಇಷ್ಟೆಲ್ಲಾ ಹೆಸರು ತಂದಿದ್ದು ಅದೇ. ಜನರಿಗೆ ಒಳ್ಳೆಯದನ್ನು, ಅವರ ಆರೋಗ್ಯಕ್ಕೆ ಉತ್ತಮವಾದದ್ದನ್ನು ನೀಡುವುದು ಜವಾಬ್ದಾರಿ ಎಂದೇ ಭಾವಿಸಿದ್ದೇನೆ. ಮಂದಿಯನ್ನು ಸುಂದರವಾಗಿ ಕಾಣುವಂತೆ ಮಾಡುವಲ್ಲಿ ಗಾರ್ಮೆಂಟ್ಸ್ ಪಾತ್ರವೂ ಹೆಚ್ಚು. ಹೀಗಾಗಿ ಇದೂ ನನ್ನ ಮೆಚ್ಚಿನ ಕ್ಷೇತ್ರವೇ.ನೀವು ಇಷ್ಟಪಡುವ ನಗರಗಳು ಯಾವುವು?

ಭಾರತದಲ್ಲಿ ಬೆಂಗಳೂರು ಹಾಗೂ ಮುಂಬೈ ನನ್ನ ಮೆಚ್ಚಿನ ನಗರಗಳು. ಒಂದು ನಾನು ಹುಟ್ಟಿ ಬೆಳೆದಿದ್ದು. ಮತ್ತೊಂದು ನಾನು ವೃತ್ತಿ ಕಂಡುಕೊಂಡ ನಗರ. ವಿದೇಶಗಳಲ್ಲಿ ದುಬೈ, ಲಂಡನ್, ನ್ಯೂಯಾರ್ಕ್ ನನ್ನ ಇಷ್ಟದ ನಗರಗಳು. ನಾನು ಬಹಳಷ್ಟು ಸುತ್ತುತ್ತೇನೆ. ಬೇರೆ ಬೇರೆ ನಗರಗಳ ಸಂಸ್ಕೃತಿ, ಆಹಾರ ಕ್ರಮಗಳನ್ನು ಗಮನಿಸುವುದು ನನಗಿಷ್ಟ. ಬೆಂಗಳೂರಿನಲ್ಲೂ ನಾನು ಸಾಕಷ್ಟು ಸುತ್ತಿದ್ದೇನೆ. ಇಲ್ಲಿಗೆ ಬಂದರೆ, `ನಾಗಾರ್ಜುನ'ದಲ್ಲಿ ಊಟ ಮಾಡದೇ ಹೋಗುವುದಿಲ್ಲ. ಸಾಕಷ್ಟು ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತೇನೆ. ಬೆಂಗಳೂರಿನಲ್ಲಿ ಒಳ್ಳೆಯ ಊಟ ಸಿಗುವ ಬೇರೆ ಹೋಟೆಲ್‌ಗಳಿದ್ದರೂ ಹೇಳಿ?ನೀವು ಇಷ್ಟಪಡುವ ಆಹಾರ?

ಆರೋಗ್ಯಯುಕ್ತ ಆಹಾರ ನನ್ನ ಆಯ್ಕೆ. ಹೀಗಾಗಿ ಸಲಾಡ್ ಅನ್ನು ನಾನು ಹೆಚ್ಚು ಇಷ್ಟಪಡುತ್ತೀನೆ. ಜತೆಗೆ ಹೆಚ್ಚು ಪೌಷ್ಟಿಕಾಂಶಗಳಿರುವ ಕ್ಯೂನೊ ನನ್ನ ಆಹಾರ. ಹೊರಗೆ ತಿಂದ ಮರುದಿನ ಜಿಮ್‌ನಲ್ಲಿ ಒಂದು ಗಂಟೆ ಹೆಚ್ಚು ಕಸರತ್ತು ಮಾಡುತ್ತೇನೆ. ಹೊರಗಿನ ಬಹಳಷ್ಟು ಕಡೆ ಆಹಾರಕ್ಕೆ ಬೇಡದ ವಸ್ತುಗಳನ್ನು ಸೇರಿಸುವುದು ನಮ್ಮ ಆರೋಗ್ಯ ಕೆಡಲು ಕಾರಣ. ಹೀಗಾಗಿ ಆಯ್ದ ಹೋಟೆಲ್‌ಗಳನ್ನೇ ನಾನು ಹೆಚ್ಚು ಆಶ್ರಯಿಸಿದ್ದೇನೆ. ದುಬೈನಲ್ಲಿರುವ ಒಂದು ಹೋಟೆಲ್ ನನಗೆ ಅಚ್ಚುಮೆಚ್ಚು.ಮುಂದಿನ ಯೋಜನೆಗಳು?

ಹೆಚ್ಚು ಆರೋಗ್ಯವಾಗಿಡುವ ಹಾಗೂ ದೇಹದ ಚಟುವಟಿಕೆ ಹೆಚ್ಚಿಸುವ ಆಹಾರ ಪದಾರ್ಥಗಳನ್ನು ಬಳಸಿ ಆಹಾರ ತಯಾರಿಸುವ ಹೋಟೆಲ್ ಒಂದನ್ನು ಸ್ಥಾಪಿಸುವ ಯೋಜನೆ ಇದೆ. ಅದು ಅತಿ ಶೀಘ್ರದಲ್ಲಿ ಕಾರ್ಯರೂಪಕ್ಕೆ ಬರಲಿದೆ. ಅಲ್ಲಿ ದೇಹಕ್ಕೆ ಅತಿ ಅವಶ್ಯಕವಾದ ಕ್ಯೂನೊ, ಬ್ಯಾಕ್ವಿರಿಲ್ ಸೇರಿದಂತೆ ಸಾವಯವ ಪದಾರ್ಥಗಳನ್ನೇ ಬಳಸಿ ಆಹಾರ ನೀಡುವುದು ಉದ್ದೇಶ. ಬೆಂಗಳೂರಿನಲ್ಲೂ ಅಂಥದ್ದೊಂದು ಹೋಟೆಲ್ ಸದ್ಯದಲ್ಲೇ ಕಾರ್ಯಾರಂಭ ಮಾಡಲಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.