ಬಹು ವಿನ್ಯಾಸಿತ ಫಿಗೊ ಆಸ್ಪೈರ್

ಇಂದು ಮಾರುಕಟ್ಟೆಯಲ್ಲಿ ನಾನಾತರಹದ ಕಾರ್ಗಳು ಲಭ್ಯವಿವೆ. ಅಲ್ಲದೆ ದಿನಕ್ಕೊಂದು ಹೊಸ ಕಾರು ರಸ್ತೆಗೆ ಇಳಿಯುತ್ತದೆ. ಕೊಳ್ಳುಗರ ಮುಂದೆ ಬಹುದೊಡ್ಡ ಆಯ್ಕೆಯೇ ಇದೆ. ಹ್ಯಾಚ್ ಬ್ಯಾಕ್ ಇರಲಿ, ಕಾಂಪ್ಯಾಕ್ಟ್ ಸೆಡಾನ್ ಇರಲಿ, ಸೆಡಾನ್ ಇರಲಿ ಒಂದಕ್ಕೊಂದು ಸಡ್ಡು ಹೊಡೆಯುವಷ್ಟು ಆಯ್ಕೆಗಳು ಗ್ರಾಹಕನ ಮುಂದಿದೆ.
ಮಾರುಕಟ್ಟೆಯಲ್ಲಿ ಇಷ್ಟೆಲ್ಲಾ ಪ್ರಬಲ ಪೈಪೋಟಿ ಇರುವಾಗ ಫೋರ್ಡ್ ಒಂದು ಕಾಂಪ್ಯಾಕ್ಟ್ ಸೆಡಾನ್ (ಸಿಎಸ್) ಹೊರಬಿಡಲು ದಿನಗಣನೆ ಮಾಡುತ್ತಿದೆ. ಅದೂ ತನ್ನ ಜನಪ್ರಿಯ ಹ್ಯಾಚ್ ಫಿಗೊ ಹೆಸರಿನಲ್ಲಿ.
ವರ್ಷದಿಂದಲೂ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದ್ದ ಈ ಸಿಎಸ್ನ ಬಿಡುಗಡೆಯನ್ನು ಫೋರ್ಡ್ ಅಧಿಕೃತವಾಗಿ ಘೋಷಿಸಿದೆ. ಜುಲೈ ಎರಡನೇ ವಾರದಲ್ಲಿ ಬಿಡುಗಡೆಯಾಗಲಿರುವ ಈ ಸಿಎಸ್ನತ್ತ ಗ್ರಾಹಕರನ್ನು ಸೆಳೆಯಲು ಪ್ರಿ ಲಾಂಚ್ ಅಭಿಯಾನವನ್ನು ದೇಶದ ಉದ್ದಗಲಕ್ಕೂ ನಡೆಸುತ್ತಿದೆ. ರಾಜ್ಯದಲ್ಲೂ ಈ ಅಭಿಯಾನ ನಡೆಯುತ್ತಿದೆ.
ಜನನಿಬಿಡ ಪ್ರದೇಶಗಳಲ್ಲಿ, ಮಾಲ್ಗಳಲ್ಲಿ ಈ ಸಿಎಸ್ ಅನ್ನು ತಂದಿಟ್ಟು, ಅದನ್ನು ಮುಟ್ಟಿ ನೋಡುವ, ಅದರಲ್ಲಿ ಕುಳಿತುಕೊಂಡು ಒಳಾಂಗಣವನ್ನು ಸವಿಯುವ ಅವಕಾಶವನ್ನು ಗ್ರಾಹಕರಿಗೆ ಕಲ್ಪಿಸುತ್ತಿದೆ. ಬೆಂಗಳೂರಿನ ಒರಾಯನ್ ಮಾಲ್ನಲ್ಲಿ ಕಳೆದ ವಾರಾಂತ್ಯದಲ್ಲಿ ಈ ಅಭಿಯಾನ ನಡೆಯಿತು. ಅಂದಹಾಗೆ ಈ ಸಿಎಸ್ನ ಹೆಸರು ಫಿಗೊ ಆಸ್ಪೈರ್. ಫಿಗೊ ಹ್ಯಾಚ್ ಅನ್ನೇ ತುಸು ಹೆಚ್ಚೇ ಹಿಗ್ಗಿಸಿದಷ್ಟು ಗಾತ್ರದ ಕಾರ್ ಇದು. ಅಂದ ಮಾತ್ರಕ್ಕೆ ಇದು ಫಿಗೋನಂತೇ ಇದೆ ಎಂದು ಭಾವಿಸುವುದು ಬೇಡ. ಸಂಪೂರ್ಣ ಹೊಸ ವಿನ್ಯಾಸ ಆಸ್ಪೈರ್ಗೆ ಇದೆ.
ಸಿಎಸ್ ಆದರೂ ಮಸ್ಕ್ಯುಲರ್ ನೋಟ ಇದಕ್ಕಿದೆ. ಶಾರ್ಪ್ ಎಂಡ್ ಬಾಡಿ ಲೈನ್ ಮತ್ತು ಫೋರ್ಡ್ ಮಸ್ಟಾಂಗ್ನಂತಿರುವ ಗ್ರಿಲ್ ಆಸ್ಪೈರ್ಗೆ ಈ ಒರಟು ನೋಟ ನೀಡಿದೆ. ಮಸ್ಟಾಂಗ್ ಅಮೆರಿಕದಲ್ಲಿ ಅತ್ಯಂತ ಜನಪ್ರಿಯ ಮಸಲ್ ಕಾರ್. ಗಡಸು ನೋಟ ಮತ್ತು ಉತ್ತಮ ಸೆಡಾನ್ನಷ್ಟು ಆರಾಮ ಹಾಗೂ ಎಸ್ಯುವಿಯಂತೆ ಶಕ್ತಿ ಇರುವ ಕಾರ್ಗಳನ್ನು ಮಸಲ್ ಕಾರ್ ಎಂದು ಕರೆಯುವ ಪ್ರತೀತಿ ಇದೆ. ಹಾಗೆ ನೋಡಿದರೆ ಈ ಹಿಂದೆ ಭಾರತದ ಮಾರುಕಟ್ಟೆಯಲ್ಲಿ ಇದ್ದ ಕಾಂಟೆಸ್ಸಾವನ್ನು ಅರೆ ಮಸಲ್ ಕಾರ್ ಎನ್ನಬಹುದು.
ಇಂತಿಪ್ಪ ಮಸ್ಟಾಂಗ್ನ ಗ್ರಿಲ್ನಿಂದ ಪ್ರೇರಣೆ ಪಡೆದು ಆಸ್ಪೈರ್ಗೆ ಮಸಲ್ ರೂಪ ನೀಡುವಲ್ಲಿ ಫೋರ್ಡ್ ಎಂಜಿನಿಯರ್ಗಳು ಯಶಸ್ವಿಯಾಗಿದ್ದಾರೆ. ಇಕ್ಕೆಲಗಳಲ್ಲಿ ಶಾರ್ಪ್ಎಂಡ್ ಬಾಡಿ ಲೈನ್ ಇರುವುದರಿಂದ, ಆಸ್ಪೈರ್ ಬೋಳು ಬೋಳಾಗಿ ಕಾಣುವುದಿಲ್ಲ. ಹಿಂಬದಿಯಿಂದ ನೋಡಿದರೆ ಥಟ್ಟನೆ ಸ್ವಿಫ್ಟ್ ಡಿಸೈರ್ ನೆನಪಾಗುತ್ತದಾದರೂ, ವಿನ್ಯಾಸ ಅದಕ್ಕಿಂತಲೂ ಮನ ಸೆಳೆಯುತ್ತದೆ. ಹೀಗಿದ್ದೂ ಕಾರ್ನಲ್ಲಿ ಒಟ್ಟಾರೆ ಏರೊ ಡೈನಮಿಕ್ ವಿನ್ಯಾಸವನ್ನು ಕಾಪಾಡಿಕೊಳ್ಳಲಾಗಿದೆ. ತೀರಾ ಮುಂಚಾಚಿದ ವಿಂಡ್ಶೀಲ್ಡ್ ಈ ವಿನ್ಯಾಸಕ್ಕೆ ನೆರವಾಗಿದೆ.
ಇನ್ನು ಒಳಾಂಗಣದಲ್ಲೂ ಆಸ್ಪೈರ್ ತನ್ನ ಪ್ರತಿಸ್ಪರ್ಧಿಗಳಿಗಿಂತ ಮುಂದಿದೆ. ಇದರ ಡ್ಯಾಷ್ಬೋರ್ಡ್ ಮತ್ತು ಇನ್ಸ್ಟ್ರುಮೆಂಟಲ್ ಕನ್ಸೋಲ್ ವಿನ್ಯಾಸ ಎಕೊ ಸ್ಪೋರ್ಟ್ಸ್ ಥೀಮ್ ಅನ್ನು ಆಧರಿಸಿದೆ. ಒಳಾಂಗಣ ಡ್ಯುಯೆಲ್ ಟೋನ್ನದ್ದು, ಹೀಗಾಗಿ ಗಮನ ಸೆಳೆಯುತ್ತದೆ. ಮುಂಬದಿಯ ಡೋರ್ ಪ್ಯಾಡ್ಗಳಲ್ಲಿ ಮೂರು ಬಾಟಲ್ಗಳನ್ನು ಇಡುವಷ್ಟು ಅವಕಾಶ, ಕಪ್ ಹೋಲ್ಡರ್, ರಬ್ಬರ್ ಫಿನಿಷಿಂಗ್ ಇರುವ ಮೊಬೈಲ್ ಹೋಲ್ಡರ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್... ಹೀಗೆ ಎಲ್ಲಾ ಫೀಚರ್ಗಳೂ ಇದರಲ್ಲಿದೆ.
6 ಅಡಿಯಷ್ಟು ಉದ್ದವಿರುವವರೂ ಆರಾಮವಾಗಿ ಕುಳಿತು ಡ್ರೈವ್ ಮಾಡುವಂತಹ ವಿನ್ಯಾಸ ಇದರಲ್ಲಿದೆ. ಹಿಂಬದಿಯಲ್ಲೂ ಅಷ್ಟೇ ಉದ್ದದವರು ಆರಾಮಾಗಿ ಕುಳಿತು ದೂರದ ಪಯಣ ಮಾಡಬಹುದು. ಆದರೆ ಐದು ಮಂದಿಯೂ 5.8 ಅಡಿ ಮತ್ತು ಅದಕ್ಕಿಂತಲೂ ಹೆಚ್ಚು ಉದ್ದದವರಾಗಿದ್ದರೆ, ಪಯಣ ಸುಖಕರವಾಗಿರುತ್ತದೆ ಎಂದು ಹೇಳಲಾಗದು.
ಆಸ್ಪೈರ್ನಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಇದರಲ್ಲಿ ಒಟ್ಟು ಆರು ಏರ್ ಬ್ಯಾಗ್ಗಳಿವೆ. ಭಾರತದಲ್ಲಿ ಈಗ ಮಾರಾಟವಾಗುತ್ತಿರುವ ಈ ವರ್ಗದ ಯಾವ ಕಾರ್ನಲ್ಲೂ ಆರು ಏರ್ ಬ್ಯಾಗ್ಗಳಿಲ್ಲ. ಇದು ಆಸ್ಪೈರ್ನ ಹೆಗ್ಗಳಿಕೆ. ಇಂತಿಪ್ಪ ಆಸ್ಪೈರ್ ಪೆಟ್ರೋಲ್ (1.2 ಲೀಟರ್ ಟಿಐ -ವಿಸಿಟಿ) ಮತ್ತು ಡೀಸೆಲ್ (1.5 ಲೀಟರ್ ಟಿಡಿಐಸಿ) ಅವತರಣಿಕೆಯಲ್ಲಿ ಲಭ್ಯವಿದೆ. ಎರಡೂ ಅವತರಣಿಕೆಯ ಎಂಜಿನ್ಗಳ ಟ್ಯೂನ್ನಲ್ಲಿ ಶಕ್ತಿ ಮತ್ತು ಮೈಲೇಜ್ ಅನ್ನು ಹದವಾಗಿ ಬೆರೆಸಲಾಗಿದೆ ಎಂದಷ್ಟೇ ಫೋರ್ಡ್ ಹೇಳುತ್ತಿದೆ. ಇದರ ಹೊರತಾಗಿ ಎಂಜಿನ್ನ ವಿವರಣೆಯ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. ಒಟ್ಟಾರೆ ಆಸ್ಪೈರ್ ಹೋಂಡಾ ಅಮೇಝ್ ಮತ್ತು ಸ್ವಿಫ್ಟ್ ಡಿಸೈರ್ಗೆ ಪ್ರಬಲ ಪೈಪೋಟಿ ನೀಡುತ್ತದೆ ಎಂಬ ಮಾತು ಕೇಳಿ ಬರುತ್ತಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.