ಭಾನುವಾರ, ಜನವರಿ 19, 2020
25 °C

ಬಾಗಲಕೋಟೆಯಿಂದ ಬೆಳಗಾವಿವರೆಗೆ ಬೈಕ್‌ ರ್‍ಯಾಲಿ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ನ್ಯಾಯಮೂರ್ತಿ ಎ.ಜೆ.ಸದಾಶಿವ ವರದಿ ಅಂಗೀಕಾರಕ್ಕೆ ಆಗ್ರಹಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ಮತ್ತು ಮಾದಿಗ ದಂಡೋರಾ ಸಮಿತಿಯು ರಾಯಚೂರಿನಿಂದ ಬೆಳಗಾವಿ ವರೆಗೆ ಹಮ್ಮಿಕೊಂಡಿರುವ ಬೈಕ್‌ ರ್‍ಯಾಲಿಯು ಬುಧವಾರ ಬೆಳಿಗ್ಗೆ ಬಾಗಲಕೋಟೆ ಮಾರ್ಗವಾಗಿ ತೆರಳಿತು.ರಾಯಚೂರಿನ ಶಕ್ತಿನಗರದಿಂದ ಡಿಸೆಂಬರ್‌ 2 ರಂದು ಆರಂಭ­ವಾಗಿರುವ ಎಂಆರ್ಎಚ್ಎಸ್‌ನ 250 ಕಾರ್ಯಕರ್ತರ ಬೈಕ್‌ ರ್‍ಯಾಲಿಯು ಸುಮಾರು ಒಂದು ಸಾವಿರ ಕಿ.ಮೀ. ದೂರ ಕ್ರಮಿಸಿ ಇದೇ 5ರಂದು ಬೆಳಗಾವಿ ತಲುಪಲಿದ್ದು, ಅಂದು ಸುವರ್ಣ ಸೌಧ ಮುತ್ತಿಗೆ ಹಾಕಲಿದೆ ಎಂದು ರ್‍ಯಾಲಿಯ ನೇತೃತ್ವ ವಹಿಸಿರುವ ಅಂಬಣ್ಣ ಅರೋಲಿಕರ್‌ ತಿಳಿಸಿದರು.ಪರಿಶಿಷ್ಟ ಜಾತಿಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸವಲತ್ತುಗಳ ಅಸಮಾನ ಹಂಚಿಕೆಯ ವಿರುದ್ಧ 17 ವರ್ಷಗಳಿಂದ ರಾಜ್ಯದಾದ್ಯಂತ ಪರಿಶಿಷ್ಟರು ನಡೆಸಿದ ಸ್ವಾಭಿಮಾನದ ಹೋರಾಟದ ಫಲವಾಗಿ 2004ರಲ್ಲಿ ನೇಮಕವಾದ ಏಕಸದಸ್ಯ ಆಯೋಗ 2007ರ ವರೆಗೆ ಯಾವುದೇ ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳದೇ ನಿಷ್ಕ್ರಿಯಗೊಂಡಿತ್ತು ಎಂದು ಹೇಳಿದರು.2009ರಲ್ಲಿ ನೇಮಕಗೊಂಡ ನ್ಯಾಯಮೂರ್ತಿ ಎ.ಜೆ.ಸದಾಶಿವ ಅವರು ಮೂರು ವರ್ಷಗಳ ಕಾಲ ರಾಜ್ಯದಾದ್ಯಂತ ಅಧ್ಯಯನ ಪ್ರವಾಸ ಮಾಡಿ, 200 ಪುಟಗಳ ವರದಿಯನ್ನು 2012ರಲ್ಲಿ ಸರ್ಕಾರಕ್ಕೆ ಸಲ್ಲಿಸಿದ್ದರೂ ಕೆಲವು ಹಿತಾಶಕ್ತಿಗಳ ಒತ್ತಡದಿಂದ ಇದುವರೆಗೆ ವರದಿ ಅಂಗೀಕಾರವಾಗಿಲ್ಲ ಎಂದು ಆರೋಪಿಸಿದರು.ಶೋಷಿತ ಸಮುದಾಯದ, ಸಾಮಾಜಿಕ ನ್ಯಾಯದ ಕಾಳಜಿ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗ ನೀಡಿರುವ ವರದಿಯನ್ನು ಅಂಗೀಕರಿಸಬೇಕು ಎಂದು ಆಗ್ರಹಿಸಿದರು.ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲೇ ಪರಿಶಿಷ್ಟ ಜಾತಿಗಳ ಜನಸಂಖ್ಯಾ­ವಾರು ಮೀಸಲಾತಿಯನ್ನು ಜಾರಿಗೊಳಿ­ಸಲು ಸರ್ವಪಕ್ಷಗಳ ಬೆಂಬಲದೊಂದಿಗೆ ಸರ್ವಾನು­ಮತದ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಎ.ಜೆ.ಸದಾಶಿವ ವರದಿಯನ್ನು ಸರ್ಕಾರ ತಿರಸ್ಕರಿಸುತ್ತದೆಯೇ ಅಥವಾ  ಅನುಷ್ಠಾನ ಮಾಡಲಿ­ದೆಯೇ ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು, ಇಲ್ಲವಾದರೆ ಭವಿಷ್ಯದಲ್ಲಿ ರಾಜ್ಯದಾದ್ಯಂತ ಉಗ್ರ ಹೋರಾಟ ಆರಂಭಿಸು­ವುದಾಗಿ ಅವರು ಎಚ್ಚರಿಕೆ ನೀಡಿದರು.ಎಂಆರ್‌ಎಚ್‌ಎಸ್‌ ಮುಖಂಡರಾದ ಮುತ್ತಣ್ಣ ಬೆಣ್ಣೂರ, ಗಣಪತಿ ಮೇತ್ರಿ, ಹನಮಂತ ಬೆಣ್ಣೂರ, ರಾಜು ಮನ್ನಿಕೇರಿ, ಜೆ.ಬಿ.ರಾಜು, ಹೇಮರಾಜ ಆಸ್ಕಿಹಾಳ, ಪಿ.ಅಮರೇಶ, ಸುರೇಶ ಅಂತರಗಂಗಿ ಸೇರಿದಂತೆ ಎಂಆರ್‌ಎಚ್ಎಸ್‌ನ ನೂರಾರು ಪದಾಧಿಕಾರಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)