ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಣಂತಿ ‘ಬ್ಲೂ’ಸ್...

Last Updated 4 ಡಿಸೆಂಬರ್ 2015, 19:35 IST
ಅಕ್ಷರ ಗಾತ್ರ

“ಡಾಕ್ಟ್ರೇ, ಬಯಸಿ ಬಯಸಿ ಪಡೆದ ಮಗು. ಮುದ್ದಾದ ಮಗು, ಕಾಳಜಿ ಮಾಡೋ ಗಂಡ. ಆದ್ರೆ ನನಗೆ ಯಾಕೋ ಇದ್ದಕ್ಕಿದ್ದ ಹಾಗೆ ಅಳು. ಒಂಥರಾ ಹೆದರಿಕೆ; ಮಗುಗೇನಾಗ್ಬಿಡುತ್ತೋ ಅಂಥ ಮತ್ತೆ ಮತ್ತೆ ನೋಡೋದು, ಅಮ್ಮ ಏನಾದ್ರೂ ಸ್ವಲ್ಪ ಗದರಿಸಿದ್ರೂ ಅಳು, ಸಿಡಿಸಿಡಿ ಅನ್ನಿಸೋದು, ಎರಡು ತಿಂಗಳ ಮಗುವನ್ನು ನಾನು ಹೇಗೆ ನಿಭಾಯಿಸುತ್ತೇನೋ ಅಂಥ ಅನುಮಾನ. ನನಗೆ ಏನಾಗಿದೆ ಡಾಕ್ಟ್ರೇ?”.

ತಾಯಿಯಾಗುವುದು, ಮಗು ಪಡೆಯುವುದು ಸಂತೋಷದ ಅನುಭವ ಎಂಬ ನಂಬಿಕೆ ಸಾಮಾನ್ಯ. ಮೇಲ್ನೋಟಕ್ಕೆ ‘ಆಹಾ!’ ಎಂಬ ಅನುಭವವಾಗಿ ತೋರುವ, ಹಾಗೆಯೇ ಜಾಹೀರಾತುಗಳಲ್ಲಿ, ಕಥೆ-ಕಾದಂಬರಿ-ಸಿನಿಮಾಗಳಲ್ಲಿ ತೋರಿಸಲ್ಪಡುವ ಸಂತೋಷದ ಸುಖಮಯ ‘ತಾಯ್ತನ’ ವಾಸ್ತವದಲ್ಲಿ ಒಂದು ಸಂಕೀರ್ಣ ಪ್ರಕ್ರಿಯೆ. ಮಗು ಹುಟ್ಟುವುದರೊಂದಿಗೆ ಗರ್ಭ ಧರಿಸುವಿಕೆ ಮುಗಿಯುತ್ತದೆ; ನಿಜ. ಆದರೆ ಮಗುವನ್ನು ಹೊಟ್ಟೆಯಲ್ಲಿಟ್ಟುಕೊಳ್ಳುವುದಕ್ಕೂ, ಕೈಯ್ಯಲ್ಲಿಟ್ಟುಕೊಂಡು, ಬೆಳೆಸುವುದಕ್ಕೂ ಅಂತರವಿದೆ ತಾನೆ?.

ಅಂತೆಯೇ ಬಾಣಂತಿತನ ಎಂದರೆ ಹೆಣ್ಣುಮಕ್ಕಳ ತಾಯಂದಿರಿಗೂ, ಅತ್ತೆಯಂದಿರಿಗೂ ಹೆಚ್ಚೇ ಅನಿಸುವಷ್ಟು ಕಾಳಜಿ. ದೈಹಿಕ-ಮಾನಸಿಕ ಬದಲಾವಣೆಗಳ ಕಾಲ ಇದು. ತನ್ನ ಆರೋಗ್ಯದ ಜೊತೆಗೆ, ಮಗುವಿನ ಆರೋಗ್ಯದ ಬಗೆಗೂ ತಾಯಿ ಎಚ್ಚರ ವಹಿಸಬೇಕಾದ ಸಮಯ.

ಬಾಣಂತಿ ‘ಬ್ಲೂಸ್’...
ಸಹಜ ಎನಿಸುವಷ್ಟರ ಮಟ್ಟಿಗೆ ಬಹುಪಾಲು ತಾಯಂದಿರು ಮಗು ಹುಟ್ಟಿದ ಒಂದು ವಾರದ ಒಳಗೆ ಈ ‘postpartum blues’ ಎಂಬ ಕಡಿಮೆ ಪ್ರಮಾಣದ ಖಿನ್ನತೆ-ಮನಸ್ಸಿನ ಏರುಪೇರನ್ನು ಅನುಭವಿಸುತ್ತಾರೆ. ಒಂದು ತರಹದ ಹೇಳಲಾಗದ ಕಿರಿಕಿರಿ, ಬೇಸರ, ಚಿಂತೆ, ಭಯ ಇವು ಹೊಸ ತಾಯಿಯನ್ನು ಕಾಡತೊಡಗುತ್ತವೆ. ಆದರೆ ಹೆಚ್ಚಿನ ತಾಯಂದಿರಿಗೆ ಇದು ತಾತ್ಕಾಲಿಕ ಸ್ಥಿತಿ ಮಾತ್ರ. ಹೊಸ ಬದಲಾವಣೆಗಳಿಗೆ ಮನಸ್ಸು-ದೇಹ ಬಹುಬೇಗ ಹೊಂದಿಕೊಂಡು ಜೀವನ ಸುಗಮವಾಗಿ ಮುಂದುವರೆಯುತ್ತದೆ.

‘ಬಾಣಂತಿ ಬ್ಲೂಸ್’ ಮುಂದುವರೆದಾಗ ...
ಕೆಲವು ತಾಯಂದಿರಲ್ಲಿ ಶೇಕಡ 10ರಿಂದ 15% ಮಹಿಳೆಯರಲ್ಲಿ ಈ ‘ಬಾಣಂತಿ ಬ್ಲೂಸ್’ ತೀವ್ರತರವಾಗಿ ಕಾಣಿಸಿಕೊಂಡು, ಬಾಣಂತಿಯರಲ್ಲಿ ವಿಶೇಷವಾಗಿ ಕಾಣಿಸಿ ಕೊಳ್ಳುವ ಖಿನ್ನತೆಗೆ-ಅಂದರೆ Postpartum depression ಗೆ ಕಾರಣವಾಗುತ್ತದೆ. ಈ ಉದಾಹರಣೆ ಗಮನಿಸಿ.

“ಆಸ್ಪತ್ರೆಯಿಂದ ನಾನು ಮನೆಗೆ ಬಂದೆ, ಗಂಟೆಗಟ್ಟಲೆ ಅದೇಕೋ ಅಳು. ಮಗುವನ್ನು ನೋಡಿಕೊಳ್ಳುವುದರ ಬಗೆಗೆ ನನಗೆ ಏನೂ ಗೊತ್ತಿರಲಿಲ್ಲ. ಮಗುವಿನ ಬಾಲ್ಯದಲ್ಲಿ ಏನೊಂದರ ಬಗೆಗೂ ನನಗೆ ಗಮನವಿರಲಿಲ್ಲ. ಮಗುವಿನ ಮೊದಲ ಹೆಜ್ಜೆ, ಮೊದಲ ಮಾತು ಏನೂ ನನಗೆ ಈಗಲೂ ನೆನಪಿಲ್ಲ. ಎಲ್ಲರ ಜೊತೆಗೂ ಜಗಳ, ಅಳು, ಎಲ್ಲರಿಗೂ ಬೇಸರ ಇದು ನನ್ನ ಬಾಣಂತಿತನದ, ಮಗುವಿನ ಮೊದಲ ವರ್ಷದ ನೆನಪು. ಈ ಸ್ಥಿತಿ ಕ್ರಮೇಣ ಸುಧಾರಿಸಲು ಸುಮಾರು ಎರಡು ವರ್ಷಗಳೇ ಹಿಡಿದವು”.

ಈ ಉದಾಹರಣೆಯಲ್ಲಿನ ತಾಯಿ ಹೇಳಿದ ಎಲ್ಲ ಲಕ್ಷಣಗಳೂ, ಅನುಭವಗಳೂ ಬಾಣಂತಿತನದ ಖಿನ್ನತೆಯಲ್ಲಿ ಕಂಡುಬರುತ್ತವೆ. ಹೆಚ್ಚಿನ ಸಮಯ ಇವು ನಿರ್ಲಕ್ಷಿಸಲ್ಪಡುತ್ತವೆ. ತಾಯಿ-ಮಗು, ಕುಟುಂಬ ಹೀಗೆ ಪ್ರತಿಯೊಬ್ಬರ ನರಳುವಿಕೆಗೆ ಕಾರಣವಾಗುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಮಗು-ತಾಯಿ ಇಬ್ಬರ ಹೊಂದಾಣಿಕೆ-ಬಾಂಧವ್ಯಗಳಿಗೆ ಅಡ್ಡಿಯಾಗುತ್ತವೆ. ಎಷ್ಟೋ ಬಾರಿ ದಂಪತಿಗಳ ನಡುವಣ ವಿರಸ-ವಿಚ್ಛೇದನಕ್ಕೂ ಕಾರಣವಾಗಬಹುದು.

ಬಾಣಂತಿತನದ ಖಿನ್ನತೆಯನ್ನು ಊಹಿಸಿ, ವೈದ್ಯರನ್ನು ಕಾಣಲು ಧಾವಿಸಬೇಕಾದ ಸಂದರ್ಭಗಳು ಹೀಗಿವೆ.
* ‘ಬಾಣಂತಿ ಬ್ಲೂಸ್’ ಎರಡು ವಾರಗಳಿಗೂ ಮೀರಿ ಮುನ್ನಡೆದಾಗ.

* ಹಸಿವು-ನಿದ್ರೆ ಈ ಎರಡೂ ಕಡಿಮೆಯಾಗುವುದು.

* ಮನಸ್ಸಿಗೆ ಸದಾ ಆತಂಕ, ಚಿಂತೆಗಳು ಹರಿದಾಡುವುದು, ವಿನಾಕಾರಣ ಭಯ.

* ‘ನಾನು ಕೆಟ್ಟ ತಾಯಿ’, ‘ನನಗೆ ಮಗು ನೋಡಿಕೊಳ್ಳಲು ಸಾಧ್ಯವಿಲ್ಲ’ ಎಂಬ ಭಾವ ಮತ್ತೆ ಮತ್ತೆ ಕಾಡುವುದು.

‘ಮಗುವಿಗೆ ಏನಾದರೂ ಆಗಬಹುದು, ಸಾಯಬಹುದು’, ‘ಮಗುವಿಗೆ ನಾನೇ ಏನಾದರೂ ಮಾಡಿಬಿಡಬಹುದು’, ‘ಮಗುವಿಗೆ ಉಸಿರುಗಟ್ಟಿದರೆ’ ಇತ್ಯಾದಿ ಮಗುವಿಗೆ ಸಂಬಂಧಿಸಿದಂತೆ ಚಿಂತೆಗಳು. ಮತ್ತೆ ಮತ್ತೆ ಮಗುವನ್ನು ಪರೀಕ್ಷಿಸುವುದು, ಮಗುವಿಗೆ ಸಣ್ಣ ಆರೋಗ್ಯದ ಸಮಸ್ಯೆಯಿದ್ದರೂ (ನೆಗಡಿ, ಜ್ವರ, ಇತ್ಯಾದಿ) ಅತೀ ಕಾಳಜಿ, ಬೇರೆಯವರು ಯಾರೂ ಎತ್ತಿಕೊಳ್ಳಲು ಬಿಡದಿರುವುದು.

ಈ ಲಕ್ಷಣಗಳು ಮಗು ಹುಟ್ಟಿದ ಮೂರು ತಿಂಗಳಲ್ಲಿ ಸಾಮಾನ್ಯವಾಗಿ ಆರಂಭವಾಗಿ, ನಾಲ್ಕನೇ ತಿಂಗಳಿನಲ್ಲಿ ತೀವ್ರವಾಗುತ್ತವೆ. ಅರ್ಧಕ್ಕಿಂತ ಹೆಚ್ಚು ಮಹಿಳೆಯರಲ್ಲಿ ಯಾವ ಚಿಕಿತ್ಸೆಯೂ ದೊರಕದೆ, ಎರಡು ವರ್ಷಗಳವರೆಗೂ ಇದು ಮುಂದುವರೆಯಬಹುದು.

ಹೊಸ ತಾಯಿಯ ಈ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವುದು, ಕುಟುಂಬದ ಇತರ ಸದಸ್ಯರಿಗೆ, ಪತಿಗೆ ಕಷ್ಟವೆನಿಸಬಹದು. ಆದರೆ ಕುಟುಂಬದ ಸದಸ್ಯರ, ಪತಿಯ ಸಹಕಾರ-ಬೆಂಬಲ ಈ ಸಂದರ್ಭದಲ್ಲಿ ಅತಿ ಮುಖ್ಯ.

ನಿಮ್ಮ ಸುತ್ತಮುತ್ತಲಲ್ಲಿ ಬಾಣಂತಿಯರಲ್ಲಿ ಮೇಲಿನ ಸಮಸ್ಯೆಗಳು ಕಂಡು ಬಂದರೆ, ಇದೊಂದು ಮನೋದೈಹಿಕ ಸಮಸ್ಯೆ. ಈಸ್ಟ್ರೋಜೆನ್ ಎಂಬ ರಸದೂತದ ಏರುಪೇರು ಈ ಸಮಸ್ಯೆಗೆ ಕಾರಣ. ಮೆದುಳಿನಲ್ಲಿ ಭಾವನೆಗಳನ್ನು ನಿಯಂತ್ರಿಸುವ ಭಾಗಗಳ ಮೇಲೆ ಈಸ್ಟ್ರೋಜನ್ ತನ್ನ ಪ್ರಭಾವ ಬೀರುತ್ತದೆ. ಹಾಗಾಗಿ ಇದು ರಾಸಾಯನಿಕ ಪ್ರಕ್ರಿಯೆಯ ಏರುಪೇರು.

ಕುಟುಂಬದವರ ಬೆಂಬಲ ಮುಖ್ಯ. ಆದರೆ ಬಾಣಂತಿ ಮಗುವನ್ನು ನೋಡಲು ತುಂಬಾ ಜನರ ಭೇಟಿ ಸೂಕ್ತವಲ್ಲ. ಬಾಣಂತಿಗೆ ಹಿತವೆನ್ನಿಸುವ ತಾಯಿ-ಪತಿ ಮೊದಲಾದವರ ಇರುವಿಕೆ ಸಾಕು. ಅತ್ತೆ-ಮಾವ ಇತರರೂ ಸ್ವಲ್ಪ ಸಮಯ, ಕನಿಷ್ಟ ಮೂರು ತಿಂಗಳು ಬಾಣಂತಿಯನ್ನು ಸುಧಾರಿಸಿಕೊಳ್ಳಲು ಬಿಡುವುದು ಅತ್ಯಗತ್ಯ.

ಸ್ವತಃ ಬಾಣಂತಿ ತನ್ನ ಆರೈಕೆ ಮಾಡಿಕೊಳ್ಳುವುದು ಅಗತ್ಯ. ಮಗು ಮಲಗಿದಾಗಲೆಲ್ಲಾ, ತಾನೂ ಮಲಗುವುದು, ನಿಯಮಿತ ಆಹಾರ ಸೇವನೆ, 6-7 ದೊಡ್ಡ ಲೋಟಗಳಷ್ಟು ನೀರು ಕುಡಿಯುವುದು ಅವಶ್ಯಕ.

ಮನೋವೈದ್ಯರನ್ನು ಕಾಣುವುದು, ಅವರ ಸಲಹೆ-ಸೂಚನೆಯ ಮೇರೆಗೆ ಔಷಧಿಗಳ ಸೇವನೆ ಮಾಡಬೇಕು. ಮತ್ತೊಮ್ಮೆ ಗರ್ಭಧಾರಣೆ ಮಾಡುವಾಗ ವಹಿಸಬೇಕಾದ ಎಚ್ಚರ, ಪಾಲಿಸಬೇಕಾದ ಸೂಚನೆಗಳನ್ನು ಅರಿತುಕೊಳ್ಳಬೇಕು. ಬಾಣಂತಿ ತನ್ನ ಮೊದಲಿನ ಹವ್ಯಾಸ-ಆಸಕ್ತಿಗಳನ್ನು ಮುಂದುವರೆಸುವುದು. ವ್ಯಾಯಾಮ ಮಾಡುವುದು ಅಗತ್ಯ.

‘ಬಾಣಂತಿ ಬ್ಲೂಸ್’ ಕ್ಕಿಂತ ಭಿನ್ನ ...
ಖಿನ್ನತೆಗಿಂತ ಭಿನ್ನವಾಗಿ ಬಾಣಂತಿಯರಲ್ಲಿಯೇ ವಿಶೇಷವಾದ ಚಿತ್ರವಿಕಲತೆ ‘ಬಾಣಂತಿ ಸನ್ನಿ’ ಕೆಲವರಲ್ಲಿ ಅಂದರೆ ಸಾವಿರಕ್ಕೆ ಒಬ್ಬರಲ್ಲಿ ಕಾಣಿಸಲು ಸಾಧ್ಯ. ಹೆಚ್ಚಾಗಿ ‘ವಿಚಿತ್ರ ನಡವಳಿಕೆ’ಯಾಗಿ ಹೆರಿಗೆಯಾದ ಕೆಲವು ಗಂಟೆಗಳಲ್ಲಿ ಕಾಣಿಸಿಕೊಳ್ಳುವ ಈ ಸಮಸ್ಯೆ ತಾಯಿ-ಮಗು ಇಬ್ಬರಿಗೂ ತೊಂದರೆಯುಂಟು ಮಾಡಬಹುದು.

ತನ್ನನ್ನು ನೋಡಿಕೊಳ್ಳಲಾಗದ, ಮಗುವನ್ನು ನೋಡಿಕೊಳ್ಳಲು ಸಾಧ್ಯವಾಗದೆ ‘ತಾಯಿ’ ಆತ್ಮಹತ್ಯೆ, ಮಗುವಿನ ಹತ್ಯೆ ಈ ರೀತಿಯ ಅಪಾಯಗಳು ಒದಗಬಹುದು. ದುರಂತವೆಂದರೆ ಪರಿಣಾಮಕಾರಿ ಚಿಕಿತ್ಸೆ ಲಭ್ಯವಿದ್ದರೂ, ಇದರ ಬಗೆಗೆ ಅರಿವಿರದೆ, ಹೆಚ್ಚಿನ ಜನ ಇಂಥ ಸಂದರ್ಭದಲ್ಲಿ ಧಾವಿಸುವುದು ದೇವಸ್ಥಾನಗಳಿಗೆ. ದೇವರು/ದೆವ್ವದ ಕಾಟವೆಂದು ಧಾವಿಸಿ ಸಹಾಯಕ್ಕೆಂದು ಓಡುವ ಜನ, ಮೊದಲೇ ಜರ್ಜರಿತಗೊಂಡ ತಾಯ ದೇಹ-ಮನಸ್ಸುಗಳು ಮತ್ತಷ್ಟು ನೋಯುವಂತೆ ಮಾಡಬಹುದು. ಇಂಥ ಸಮಯದಲ್ಲಿ ತತ್‌ಕ್ಷಣ ತಾಯಿ-ಮಗುವನ್ನು ಚಿಕಿತ್ಸೆಗಾಗಿ ಮನೋವೈದ್ಯರ ಬಳಿ ಕರೆದೊಯ್ಯಬೇಕು. ಅವರ ಸಲಹೆಯಂತೆ ಚಿಕಿತ್ಸೆ ನೀಡಬೇಕು.

‘ಸುಖಮಯ ತಾಯ್ತನ’ ಪ್ರತಿಯೊಂದು ತಾಯಿಯ ಹಕ್ಕು. ಸುಖೀ ತಾಯಿ ಮಗುವಿನ ಆರೋಗ್ಯಕರ ಬೆಳವಣಿಗೆಗೆ ಮೂಲ ಕಾರಣ.
ಹಾಗೆಯೇ ಸುಖಕರ ಬಾಲ್ಯ, ತಾಯಿಯ ಸಂಪೂರ್ಣ ಗಮನ-ಸುರಕ್ಷತೆ ಪ್ರತಿಯೊಂದು ನವಜಾತ ಶಿಶುವಿನ ಹಕ್ಕು. ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯದಿಂದ ಇವುಗಳನ್ನು ಸಾಧ್ಯವಾಗಿಸುವುದು ಅಗತ್ಯ.

ಮಾಹಿತಿಗೆ: 8867738016

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT