ಸೋಮವಾರ, ಮಾರ್ಚ್ 1, 2021
31 °C

ಬಾಲಕಾರ್ಮಿಕ ಪಿಡುಗು ನಿರ್ಮೂಲನೆಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಕಾರ್ಮಿಕ ಪಿಡುಗು ನಿರ್ಮೂಲನೆಗೆ ಮನವಿ

ಗದಗ: `ಬಡತನ ಹಾಗೂ ಅನಕ್ಷರತೆ ಬಾಲಕಾರ್ಮಿಕ ಪದ್ಧತಿ ಎಂಬ ಪಿಡುಗಿಗೆ ಮೂಲ ಕಾರಣ~ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್.ಜೆ. ಸತೀಶಸಿಂಗ್ ಅಭಿಪ್ರಾಯಪಟ್ಟರು.ನಗರದ ತೋಂಟದಾರ್ಯ ಪ್ರೌಢಶಾಲೆಯಲ್ಲಿ ಭಾನುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಕಂದಾಯ ಇಲಾಖೆ, ವಾರ್ತಾ ಇಲಾಖೆ, ಕಾರ್ಮಿಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡುವುದು ಪಾಲಕರ ಕರ್ತವ್ಯ ಎಂದ ಅವರು, ಶಾಲೆಯಲ್ಲಿ ಆಟೋಟ ಗಳೊಡನೆ ತಮ್ಮ ಸುಂದರ ಬಾಲ್ಯ ಕಳೆಯಬೇಕಿದ್ದ ಕೈಗಳು ಧೂಳಿನಲ್ಲಿ ಕಮರುತ್ತಿರುವುದಕ್ಕೆ ನಾವೆಲ್ಲರೂ ತಲೆ ತಗ್ಗಿಸಬೇಕಾದ ಸಂಗತಿ. ಇದರ ನಿರ್ಮೂಲನೆಗಾಗಿ ಸರ್ಕಾರ ಸಾಕಷ್ಟು ಕಾಯ್ದೆ ಜಾರಿಗೆ ತಂದರೂ ಹೋಟೆಲ್, ಗ್ಯಾರೇಜ್‌ನಂತಹ ಉದ್ದಿಮೆಗಳಲ್ಲಿ ಇನ್ನೂ ಬಾಲಕಾರ್ಮಿಕರು ದುಡಿಯುತ್ತಿದ್ದಾರೆ. ಇದನ್ನು ತಡೆಗಟ್ಟುವ ಜವಾಬ್ದಾರಿ ನಮ್ಮದು~ ಎಂದರು.ಜಿಲ್ಲಾಧಿಕಾರಿ ಎಸ್. ಶಂಕರನಾರಾಯಣ ಮಾತನಾಡಿ, `ಬಾಲ ಕಾರ್ಮಿಕ ಪದ್ಧತಿಯ ನಿರ್ಮೂಲನೆಗೆ ಅನೇಕ ಕಾನೂನುಗಳು ಜಾರಿಗೆ ಬಂದರೂ ಈ ಪದ್ಧತಿ ಸಂಪೂರ್ಣವಾಗಿ ನಿರ್ಮೂಲನೆಯಾಗಿಲ್ಲ~ ಎಂದರು.ಮಕ್ಕಳನ್ನು ದುಡಿಸಿಕೊಳ್ಳುವುದು ಸಹ ಅಪರಾಧ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇದಕ್ಕೆ ಎಲ್ಲರೂ ಸಹಕರಿಸಬೇಕು~ ಎಂದು ಮನವಿ ಮಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಶ್ರೀಶೈಲಪ್ಪ ಬಿದರೂರ, ದೇಶದಲ್ಲಿ ಕಡ್ಡಾಯ ಶಿಕ್ಷಣ ನೀತಿ ಜಾರಿಗೆ ಬಂದು ಸಾಕಷ್ಟು ಬದಲಾವಣೆಗಳಾಗುತ್ತಿದ್ದರೂ ಬಾಲ ಕಾರ್ಮಿಕ ಪದ್ಧತಿ ಇನ್ನೂ ಹೋಗಿಲ್ಲ. ಜನಸಾಮಾನ್ಯರಿಗೆ ಶಿಕ್ಷಣದ ಬಗ್ಗೆ ಅರಿವು ಮೂಡಿಸಬೇಕು. ಆಗ ಮಾತ್ರ ಈ ಪದ್ಧತಿಯ ನಿರ್ಮೂಲನೆ ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು~ ಎಂದರು.ವಕೀಲ ಬಿ.ಎಸ್. ಸಂಶಿ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿ ಎಂ.ಬಿ. ಹನ್ಸಾರಿ ಅವರು ಬಾಲಕಾರ್ಮಿಕ ಪದ್ಧತಿ ತಡೆಗೆ ಅನುಸರಿಸಬೇಕಾದ ಕ್ರಮಗಳ ಕುರಿತು ವಿವರ ನೀಡಿದರು. ಬಾಲಕಾರ್ಮಿಕ ಪದ್ಧತಿ ಕುರಿತು ಏರ್ಪಡಿಸಲಾಗಿದ್ದ ಚಿತ್ರಕಲಾ ಸ್ಫರ್ಧೆಯ ವಿಜೇತರಿಗೆ ಈ ಸಂದರ್ಭ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್. ಹುರಕಡ್ಲಿ, ಕಾರ್ಯದರ್ಶಿ ಕೆ.ಪಿ. ಕೋಟಿಗೌಡ್ರ, ತ್ವರಿತ ನ್ಯಾಯಾಲಯದ ಪೀಠಶೀನಾಧಿಕಾರಿ ಎಂ.ಎಸ್. ಪಾಟೀಲ, ಹಿರಿಯ ದಿವಾಣಿ ನ್ಯಾಯಾಧೀಶ ಉಮೇಶ ಮೂಲಿಮನಿ, ತಹಸೀಲ್ದಾರ ಡಿ.ಬಿ. ಕೊಣ್ಣೂರ, ವಕೀಲ ಸುಧೀರಸಿಂಗ್ ಘೋರ್ಪಡೆ, ತೋಂಟದಾರ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಿ.ಬಿ. ತಡಸದ, ಆರ್.ಸಿ. ಹುಣಸಿಮರದ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ತೋಂಟದಾರ್ಯ ಶಾಲೆ ಮಕ್ಕಳು ಪ್ರಾರ್ಥಿಸಿದರು. ಸಿದ್ಧಲಿಂಗ ನಗರ ಶಾಲೆಯ ಮಕ್ಕಳು ನಾಡಗೀತೆ ಹಾಡಿದರು. ದೈಹಿಕ ಶಿಕ್ಷಣಾಧಿಕಾರಿ ಎ.ಎಂ. ಕುಂಟೋಜಿ ಸ್ವಾಗತಿಸಿದರು. ಶಿಕ್ಷಕರಾದ ಮಂಜುನಾಥ ಹುಣಸೀಮರದ ನಿರೂಪಿಸಿದರು. ಎಸ್.ಎಸ್. ಗಾಳಿ ವಂದಿಸಿದರು.ಜಾಗೃತಿ ಜಾಥಾ

ಬಾಲ ಕಾರ್ಮಿಕ ವಿರೋಧಿ ದಿನದ ಅಂಗವಾಗಿ ನಗರದಲ್ಲಿ ಭಾನುವಾರ ಸಾಕ್ಷರತಾ ಜಾಗೃತಿ ನಡೆಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡು, ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುವುದರ ಜೊತೆಗೆ ಸಾರ್ವಜನಿಕರಲ್ಲಿ ಕಾರ್ಮಿಕ ವಿರೋಧಿ ದಿನದ ವಿಶೇಷತೆಯನ್ನು ಸಾರಿ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.