ಮಂಗಳವಾರ, ಏಪ್ರಿಲ್ 20, 2021
25 °C

ಬಾಳ ಠಾಕ್ರೆ ಪಂಚಭೂತಗಳಲ್ಲಿ ಲೀನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಳ ಠಾಕ್ರೆ ಪಂಚಭೂತಗಳಲ್ಲಿ ಲೀನ

ಮುಂಬೈ (ಪಿಟಿಐ): ಮರಾಠಿ ಸ್ವಾಭಿಮಾನದ ಪ್ರತೀಕವಾಗಿ ಹಾಗೂ ಹಿಂದುತ್ವವಾದಿಯಾಗಿ ಐದು ದಶಕಗಳಷ್ಟು ಕಾಲದಿಂದ ರಾಷ್ಟ್ರದಲ್ಲಿ ಚರ್ಚೆಯ ವ್ಯಕ್ತಿಯಾಗಿದ್ದ ಬಾಳ ಠಾಕ್ರೆ ಅವರ ಪಾರ್ಥಿವ ಶರೀರವು ಕುಟುಂಬ ಸದಸ್ಯರು ಹಾಗೂ ಲಕ್ಷಾಂತರ ಜನರ ಸಮ್ಮುಖದಲ್ಲಿ ಸಾರ್ವಜನಿಕವಾಗಿ ಭಾನುವಾರ ಸಂಜೆ ಪಂಚಭೂತಗಳಲ್ಲಿ ವಿಲೀನವಾಯಿತು.ಠಾಕ್ರೆ ಅವರ ಗೌರವಾರ್ಥ ಇಡೀ ಮುಂಬೈ ನಗರ ಅಕ್ಷರಶಃ ಸ್ತಬ್ಧವಾಗಿತ್ತು. ಇತ್ತೀಚಿನ ದಶಕಗಳಲ್ಲೇ ಅತ್ಯಂತ ಭಾರಿ ಎನ್ನುವಂತಹ ಜನಸಾಗರ ಬೀದಿ ಬೀದಿಗಳಲ್ಲಿ ಹರಿಯಿತು. ವಾಣಿಜ್ಯ ನಗರಿ ಬಾಂದ್ರಾದಲ್ಲಿರುವ ಠಾಕ್ರೆ ನಿವಾಸ `ಮಾತೋಶ್ರೀ~ಯಿಂದ ಹಿಡಿದು ಅಂತ್ಯ ಸಂಸ್ಕಾರ ನಡೆದ ಶಿವಾಜಿ ಪಾರ್ಕ್‌ವರೆಗಿನ ಎಲ್ಲಾ ರಸ್ತೆಗಳಲ್ಲಿ ನಾಯಕನ ಅಂತಿಮ ದರ್ಶನಕ್ಕಾಗಿ ತಂಡೋಪತಂಡವಾಗಿ ಜನಸಾಗರ ಹರಿಯಿತು.ಠಾಕ್ರೆ ಬದುಕಿದ್ದಾಗ (ಅವರು ಹೊಂದಿದ್ದ ಹಿಡಿತದಿಂದಾಗಿ) ಅವರ ಕರೆಗೆ ಸ್ಪಂದಿಸಿ ಹಲವು ಸಲ ಸ್ತಬ್ಧಗೊಂಡಿದ್ದ ಮುಂಬೈ ನಗರಿ, ಅವರ ಅಂತ್ಯಸಂಸ್ಕಾರದ ದಿನ ಕೂಡ ಸಂಪೂರ್ಣ ಸ್ತಬ್ಧವಾಗಿತ್ತು. ಐಷಾರಾಮಿ ಮಾಲ್‌ಗಳಿಂದ ಹಿಡಿದು ಸಣ್ಣಪುಟ್ಟ ಗೂಡಂಗಡಿಗಳವರೆಗೆ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಮಾರುಕಟ್ಟೆಗಳು ಬಂದ್ ಆಗಿದ್ದವು. ಒಂದೇ ಒಂದು ಟ್ಯಾಕ್ಸಿಯಾಗಲೀ, ಆಟೋವಾಗಲೀ ಸಂಚರಿಸಲಿಲ್ಲ. ರೆಸ್ಟೋರೆಂಟ್‌ಗಳು, ಸಿನಿಮಾ ಮಂದಿರಗಳು, ಮಲ್ಟಿಪ್ಲೆಕ್ಸ್‌ಗಳು ಬಾಗಿಲು ತೆರೆಯಲಿಲ್ಲ.ಬಾಂದ್ರಾ- ಶಿವಾಜಿ ಪಾರ್ಕ್ ನಡುವಿನ ಮಾರ್ಗಗಳಲ್ಲಿ ಠಾಕ್ರೆ ಅವರ ಸ್ಮರಣ ಘೋಷಣೆಗಳನ್ನು ಬಿಟ್ಟರೆ ಬೇರೆ ಯಾವ ಸದ್ದೂ ಇರಲಿಲ್ಲ.

 

`ಬಾಳ ಸಾಹೇಬ್ ಮತ್ತೊಮ್ಮೆ ಬನ್ನಿ, ಮತ್ತೊಮ್ಮೆ ಬನ್ನಿ~, `ಯಾರು ಬಂದರು, ಯಾರು ಬಂದರು, ಶಿವಸೇನೆಯ ಹುಲಿ ಬಂದರು~, `ಬಾಳ ಸಾಹೇಬ್ ಚಿರಾಯುವಾಗಲಿ~ ಎಂಬರ್ಥದ ಆಕಾಶದೆತ್ತರದ ಮರಾಠಿ ಘೋಷಣೆಗಳ ನಡುವೆ ಕಿರಿಯ ಪುತ್ರ ಉದ್ಧವ್ ಠಾಕ್ರೆ (ಶಿವಸೇನೆಯ ಕಾರ್ಯಾಧ್ಯಕ್ಷ ಕೂಡ) ಅಪ್ಪನ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.ಗಣ್ಯರ ನಮನ: ತಮ್ಮ ಬಿಡುಬೀಸಿನ ನಿಲುವುಗಳಿಂದಾಗಿ ಬೆಂಬಲಿಗರಷ್ಟೇ ಅಪಾರ ಸಂಖ್ಯೆಯಲ್ಲಿ ಟೀಕಾಕಾರರನ್ನು ಹೊಂದಿದ್ದ ಠಾಕ್ರೆ ಅವರ ಅಂತಿಮ ಸಂಸ್ಕಾರದಲ್ಲಿ ಎಲ್ಲಾ ಪಕ್ಷಗಳ ನಾಯಕರು, ಚಿತ್ರ ನಟರು, ಉದ್ಯಮ ದಿಗ್ಗಜರು ಪಾಲ್ಗೊಂಡಿದ್ದರು.ದೀರ್ಘಕಾಲದಿಂದ ರಾಜಕೀಯ ಎದುರಾಳಿಯಾದರೂ ವೈಯಕ್ತಿಕವಾಗಿ ಸ್ನೇಹಿತರಾಗಿದ್ದ ಶರದ್ ಪವಾರ್, ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಎಲ್.ಕೆ.ಅಡ್ವಾಣಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ನರೇಂದ್ರ ಮೋದಿ, ಶಿವರಾಜ್ ಸಿಂಗ್ ಚೌಹಾಣ್, ಪ್ರಫುಲ್ ಪಟೇಲ್, ರಾಜೀವ್ ಶುಕ್ಲ ಅವರು ಅಂತಿಮ ನಮನ ಸಲ್ಲಿಸಿದರು.ಠಾಕ್ರೆ ಅವರೊಂದಿಗೆ ಬಹುಕಾಲದಿಂದ ಬಾಂಧವ್ಯ ಹೊಂದಿದ್ದ ನಟ ಅಮಿತಾಭ್ ಬಚ್ಚನ್, ನಾನಾ ಪಾಟೇಕರ್, ಚಿತ್ರ ನಿರ್ದೇಶಕರಾದ ಮಧುರ್ ಭಂಡಾರ್‌ಕರ್, ಮಹೇಶ್ ಮಾಂಜರೇಕರ್, ಉದ್ಯಮಿಗಳಾದ ಅನಿಲ್ ಅಂಬಾನಿ, ವೇಣುಗೋಪಾಲ್ ಧೂತ್, ಸುಭಾಷ್ ಚಂದ್ರ ಅವರು ಅಂತ್ಯಸಂಸ್ಕಾರಕ್ಕೆ ಹಲವು ಗಂಟೆಗಳ ಮುನ್ನವೇ ಶಿವಾಜಿ ಪಾರ್ಕ್‌ಗೆ ಆಗಮಿಸಿದ್ದರು.ಮೊದಲು ಶಿವಸೇನೆಯಲ್ಲಿದ್ದು, ಎನ್‌ಸಿಪಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾದ ನಂತರ ಠಾಕ್ರೆ ಅವರ ಬಂಧನಕ್ಕೆ ಕಾರಣವಾಗಿದ್ದ ಛಗನ್ ಭುಜಬಲ್, ಸೇನೆಯಿಂದ ಹೊರಹೋಗಿ ಕಾಂಗ್ರೆಸ್ ಸಂಸದರಾಗಿರುವ ಸಂಜಯ್ ನಿರುಪಮ್ ಅವರೂ ಹಾಜರಿದ್ದರು.ಠಾಕ್ರೆ ಅವರ ಬೃಹತ್ ಪೋಸ್ಟರ್, ಶಿವಸೇನೆಯ ಚಿಹ್ನೆ `ಹುಲಿ~ಯ ಚಿತ್ರವಿದ್ದ ವಾಹನದಲ್ಲಿ ಸಾಗಿದ ಠಾಕ್ರೆ ಅವರ ಅಂತಿಮ ಮೆರವಣಿಗೆಯ ಜತೆ ಎಂಎನ್‌ಎಸ್ ಮುಖ್ಯಸ್ಥ ಹಾಗೂ ಸೋದರ ಸಂಬಂಧಿ ರಾಜ್ ಠಾಕ್ರೆ ಸಾಗದೇ ಇದ್ದುದು ಪ್ರಶ್ನೆಗಳನ್ನು ಮೂಡಿಸಿತು. ಮೊದಲಿಗೆ, ಮೆರವಣಿಗೆ ಜತೆ ಇವರು ಕೆಲ ದೂರ ನಡಿಗೆ ಹಾಕಿದರಾದರೂ ನಂತರ ಶಿವಾಜಿ ಪಾರ್ಕ್‌ಗೆ ತೆರಳಿ ಅಂತ್ಯ ವಿಧಿಯ ವ್ಯವಸ್ಥೆ ನೋಡಿಕೊಳ್ಳುವಲ್ಲಿ ನಿರತರಾದರು.ಚಿತೆಗೆ ಅಗ್ನಿಸ್ಪರ್ಶ ಮಾಡುವ ವೇಳೆ ಠಾಕ್ರೆ ಅವರ ಪುತ್ರರಾದ ಉದ್ಧವ್, ಜೈದೇವ್, ಸಹೋದರನ ಪುತ್ರ ರಾಜ್ ಠಾಕ್ರೆ, ಮೊಮ್ಮಕ್ಕಳ ಜತೆ ಠಾಕ್ರೆ ಸೇವಕರಾಗಿದ್ದ ಥಾಪಾ ಸಹ ಇದ್ದರು. ಠಾಕ್ರೆ ಅವರಿಗೆ ಚಿಕಿತ್ಸೆ ನೀಡಿ ಉಳಿಸಿಕೊಳ್ಳಲು ಯತ್ನಿಸಿದ ವೈದ್ಯರಿಗೆ ಮೊದಲಿಗೆ ಪುಷ್ಪಾಂಜಲಿ ಸಲ್ಲಿಸಲು ಅವಕಾಶ ನೀಡಲಾಯಿತು. ಕೊನೆಯ ಸುತ್ತಿನ ಗುಂಡು ಹಾರಿಸಿದ ಬಳಿಕ ಚಿತೆಗೆ ಅಗ್ನಿ ಸ್ಪರ್ಶವಾಗುತ್ತಿದ್ದಂತೆ ರಾಜ್ ಠಾಕ್ರೆ ಕುಸಿದು ಬಿದ್ದರು.ಸಾರ್ವಜನಿಕ ಅಂತ್ಯಸಂಸ್ಕಾರ

ಠಾಕ್ರೆ ಅವರೆಡೆಗೆ ಜನತೆಯ ಅಭಿಮಾನದ ಪರಿಯನ್ನು ಮನಗಂಡ ಸರ್ಕಾರವು ಇದೇ ಮೊದಲ ಬಾರಿಗೆ ಶಿವಾಜಿ ಪಾರ್ಕ್‌ನಲ್ಲಿ ಸಾರ್ವಜನಿಕವಾಗಿ ಅಂತ್ಯ ಸಂಸ್ಕಾರ ನಡೆಸಲು ಅನುಮತಿ ನೀಡಿತು. ಈ ಮುಂಚೆ ಇಲ್ಲಿ ಇಂತಹ ವಿಧಿ ನಡೆಸಲು ಅವಕಾಶ ಇರಲಿಲ್ಲ. 1920ರಲ್ಲಿ ಬಾಲ ಗಂಗಾಧರ ತಿಲಕ್ ಅವರ ಸಾರ್ವಜನಿಕ ಅಂತ್ಯಸಂಸ್ಕಾರ ನಡೆದ ನಂತರ ಇಂತಹ ಅಂತ್ಯವಿಧಿ ನಗರದಲ್ಲಿ ನಡೆದಿರಲಿಲ್ಲ.ಸರ್ಕಾರವು ಅಗಲಿದ ನಾಯಕನಿಗೆ ಸಕಲ ಗೌರವಗಳನ್ನು ಸಲ್ಲಿಸಿತು. ರಾಜ್ಯಪಾಲ ಕೆ.ಶಂಕರನಾರಾಯಣನ್ ಮತ್ತು ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಅವರು ಅಗಲಿದ ಚೇತನಕ್ಕೆ ಪುಷ್ಪಮಾಲೆಗಳನ್ನು ಇಟ್ಟು ಗೌರವ ಅರ್ಪಿಸಿದರು. ಮುಂಬೈ ಪೊಲೀಸರ ತುಕಡಿ ಆಕಾಶದೆಡೆಗೆ ಗುಂಡು ಹಾರಿಸಿ ವಂದನೆ ಸಲ್ಲಿಸಿತು. ಮತ್ತೊಂದು ತಂಡ ಕಹಳೆ ನಾದ ಮೊಳಗಿಸಿತು. ಅಧಿಕಾರ ರಹಿತವಾಗಿ ಬಾಳಿ ಬದುಕಿದ ಒಬ್ಬ ವ್ಯಕ್ತಿಗೆ ಇಂತಹ ಗೌರವ ಸಂದಿದ್ದು ಗಮನಾರ್ಹವಾಗಿತ್ತು.ಠಾಕ್ರೆ ಅವರು ಪ್ರತಿ ವರ್ಷ ದಸರಾ ಮೆರವಣಿಗೆ ಸಂದರ್ಭದಲ್ಲಿ ಯಾವ ಜಾಗದಿಂದ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರೋ ಅದೇ ಜಾಗದಲ್ಲಿ ಅವರ ಅಂತ್ಯ ಸಂಸ್ಕಾರ ನಡೆಯಿತು. 1996ರ ಜೂನ್ 19ರಂದು ಪಕ್ಷದ ಸ್ಥಾಪನೆಯನ್ನು ಘೋಷಿಸಿದ ದಿನದಂದು ಅವರು ಮೊತ್ತಮೊದಲಿಗೆ ಭಾಷಣ ಮಾಡಿದ್ದು ಕೂಡ ಇದೇ ಜಾಗದಲ್ಲಿ ಎಂಬುದು ಮತ್ತೊಂದು ವಿಶೇಷ.ಮಹಾರಾಷ್ಟ್ರ ಬಂದ್‌ಗೆ ಕರೆ

ಮುಂಬೈ (ಪಿಟಿಐ):
ಶನಿವಾರ ನಿಧನರಾದ ಶಿವಸೇನೆ ಮುಖ್ಯಸ್ಥ ಬಾಳ ಠಾಕ್ರೆ ಅವರ ಗೌರವಾರ್ಥ ಸೋಮವಾರ ರಾಜ್ಯ ಬಂದ್‌ಗೆ ಮಹಾರಾಷ್ಟ್ರ ವರ್ತಕರ ಸಂಘಗಳ ಒಕ್ಕೂಟ (ಎಫ್‌ಎಎಂ) ಕರೆ ನೀಡಿದೆ.  ಈ ಸಂಬಂಧ ಪ್ರಕಟಣೆಯೊಂದನ್ನು ಹೊರಡಿಸಿರುವ  ಎಫ್‌ಎಎಂ, ಸೋಮವಾರವನ್ನು `ಶ್ರದ್ಧಾಂಜಲಿ ದಿನ~ವನ್ನಾಗಿ ಆಚರಿಸೋಣ ಎಂದು ತನ್ನ ಅಂಗ ಸಂಸ್ಥೆಗಳಿಗೆ ಮನವಿ ಮಾಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.