ಶನಿವಾರ, ಮಾರ್ಚ್ 6, 2021
18 °C

ಬಿಎಫ್‌ಸಿ ಜಯದ ಓಟಕ್ಕೆ ತಡೆಯೊಡ್ಡಿದ ಮುಂಬೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಎಫ್‌ಸಿ ಜಯದ ಓಟಕ್ಕೆ ತಡೆಯೊಡ್ಡಿದ ಮುಂಬೈ

ಮುಂಬೈ (ಪಿಟಿಐ/ಐಎಎನ್‌ಎಸ್‌): ಹ್ಯಾಟ್ರಿಕ್‌ ಗೆಲುವು ಗಳಿಸಿ ಬೀಗುತ್ತಿದ್ದ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡಕ್ಕೆ ಈ ಋತುವಿನ ಐ ಲೀಗ್‌ ಟೂರ್ನಿಯಲ್ಲಿ ಮೊದಲ ಆಘಾತ ಎದುರಾಗಿದೆ.ಕೂಪರೇಜ್‌ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮುಂಬೈ ಎಫ್‌ಸಿ 2–0 ಗೋಲುಗಳಿಂದ ಬೆಂಗಳೂರಿನ ತಂಡಕ್ಕೆ ಸೋಲಿನ ರುಚಿ ತೋರಿಸಿದೆ. ತವರಿನ ಅಭಿಮಾನಿಗಳ ಪ್ರೋತ್ಸಾಹದೊಂದಿಗೆ ಕಣಕ್ಕಿಳಿದ ಮುಂಬೈ ತಂಡ ಐದನೇ ನಿಮಿಷ ದಲ್ಲಿಯೇ ಗೋಲಿನ ಖಾತೆ ತೆರೆಯಿತು.ಜಯೇಶ್‌ ರಾಣೆ ನೀಡಿದ ಪಾಸ್‌ನಲ್ಲಿ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ ಸುಶೀಲ್‌ ಕುಮಾರ್‌ ಸಿಂಗ್‌ ಅದನ್ನು ಎರಿಕ್‌ ಬ್ರೌನ್‌ಗೆ ವರ್ಗಾಯಿಸಿದರು. ಬಳಿಕ ಚೆಂಡನ್ನು ಸೊಗಸಾಗಿ ಡ್ರಿಬಲ್‌ ಮಾಡುತ್ತಾ ಬಿಎಫ್‌ಸಿ ತಂಡದ ಆವರಣದತ್ತ ನುಗ್ಗಿದ ಬ್ರೌನ್‌ ಚೆಂಡನ್ನು ಅರಾತ ಇಜುಮಿಗೆ ಪಾಸ್‌ ಮಾಡಿದರು.ಸಹ ಆಟಗಾರ ನೀಡಿದ ಚೆಂಡಿನ ಮೇಲೆ ಹಿಡಿತ ಸಾಧಿಸಿದ ಇಜುಮಿ ಅದನ್ನು ಕ್ಷಣಾರ್ಧದಲ್ಲೇ ಗುರಿ ಮುಟ್ಟಿಸಿ ಅಭಿಮಾನಿಗಳಿಂದ ಚಪ್ಪಾಳೆ ಗಿಟ್ಟಿಸಿದರು. ಆರಂಭದಲ್ಲೇ ಎದುರಾಳಿ ತಂಡ ಗೋಲು ಗಳಿಸಿದ್ದರಿಂದ 2014ರ ಚಾಂಪಿಯನ್‌ ಬಿಎಫ್‌ಸಿ ಒತ್ತಡಕ್ಕೆ ಒಳಗಾಯಿತು. ಬೆಂಗಳೂರಿನ ತಂಡದ ಆಟಗಾರರು ಸಮಬಲದ ಗೋಲಿಗಾಗಿ ಇನ್ನಿಲ್ಲದ ಕಸರತ್ತು ನಡೆಸಿದರು. ಆದರೆ ಹೊಂದಾಣಿಕೆಯ ಕೊರತೆ ಪ್ರವಾಸಿ ತಂಡಕ್ಕೆ ಮುಳುವಾಗಿ ಪರಿಣಮಿಸಿತು.ಇದರ ಪೂರ್ಣ ಲಾಭ ಎತ್ತಿಕೊಂಡ ಮುಂಬೈ ಎಫ್‌ಸಿ 11ನೇ ನಿಮಿಷದಲ್ಲಿ ಮತ್ತೊಂದು ಗೋಲು ದಾಖಲಿಸಿ ಚೆಟ್ರಿ ಬಳಗವನ್ನು ಕಂಗೆಡಿಸಿತು. ಕೊರಿಯಾದ ಡಿಫೆಂಡರ್‌ ಮಿನ್‌ಕೊಲ್‌ ಸನ್‌ ತಮಗೆ ಸಿಕ್ಕ ಅವಕಾಶದಲ್ಲಿ ಚೆಂಡನ್ನು ಜತನದಿಂದ ಬಿಎಫ್‌ಸಿ ತಂಡದ ಗೋಲು ಪೆಟ್ಟಿಗೆಯೊಳಗೆ ಒದ್ದರು.ದ್ವಿತೀಯಾರ್ಧದಲ್ಲಿ ಬಿಎಫ್‌ಸಿ ತಂಡ ಎರಡು ಬದಲಾವಣೆಗಳೊಂದಿಗೆ ಆಡಲಿಳಿಯಿತು. ಕೋಚ್‌ ಆ್ಯಷ್ಲೆ ವೆಸ್ಟ್‌ವುಡ್‌ ನಾಯಕ ಚೆಟ್ರಿ ಮತ್ತು ಆಲ್ವಿನ್‌ ಜಾರ್ಜ್‌ ಬದಲು ಥಾಯ್‌ ಸಿಂಗ್‌ ಮತ್ತು ಉದಾಂತ್‌ ಸಿಂಗ್‌ ಅವರನ್ನು ಕಣಕ್ಕಿಳಿಸಿದರು. ಈ ಆಟಗಾರರು ಚುರುಕಿನ ಆಟ ಆಡಿ ಕೆಲ ಗೋಲು ಗಳಿಸುವ ಅವಕಾಶಗಳನ್ನು ಸೃಷ್ಟಿಸಿದ್ದರು. ಆದರೆ ಅವುಗಳನ್ನು ಗೋಲಾಗಿ ಪರಿವರ್ತಿಸಲು ಮಾತ್ರ ಸಾಧ್ಯವಾಗಲಿಲ್ಲ. ಹೀಗಾಗಿ ಪ್ರವಾಸಿ ತಂಡಕ್ಕೆ ನಿರಾಸೆ ಎದು ರಾಯಿತು. ಈ ಜಯದೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು ಆರಕ್ಕೆ ಹೆಚ್ಚಿಸಿ ಕೊಂಡ ಮುಂಬೈ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ  ಎರಡನೇ ಸ್ಥಾನಕ್ಕೇರಿತು.ಬಾಗನ್ ಇತಿಹಾಸ: ಕೋಲ್ಕತ್ತ ವರದಿ: ಮೋಹನ್ ಬಾಗನ್ ತಂಡವು ಬುಧವಾರ ಎಎಫ್‌ಸಿ ಚಾಂಪಿಯನ್ಸ್‌ ಲೀಗ್‌ ಅರ್ಹತಾ ಪಂದ್ಯದಲ್ಲಿ ಸಿಂಗ ಪುರದ ಬಲಿಷ್ಠ ತಂಡ ತಂಪಿನ್ಸ್ ರೋವರ್ಸ್‌ಗೆ ಸೋಲುಣಿಸಿತು. ಆ ಮೂಲಕ ಎಎಫ್‌ಸಿ ಚಾಂಪಿಯನ್ಸ್‌ ಲೀಗ್‌ನಲ್ಲಿ ವಿದೇಶಿ ತಂಡವನ್ನು ಸೋಲಿಸಿದ ಪ್ರಥಮ ಭಾರತೀಯ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲ ಜೆಜೆ ಲಾಲ್‌ಪೆಕುಲಾ (5ನೇ ನಿ), ಕಾರ್ನೆಲ್ ಗ್ಲೆನ್ (41ನೆ ನಿ) ಮತ್ತು ಕಾಟ್ಸುಮಿ ಯುಸಾ (83ನೇ ನಿ)  ಅವರ ನೆರವಿನಿಂದ ಬಾಗನ್ ತಂಡವು 3–1 ಗೋಲುಗಳಿಂದ ರೋವರ್ಸ್ ತಂಡವನ್ನು ಸೋಲಿಸಿತು.ರೋವರ್ಸ್ ತಂಡದ ಯಾಸೀರ್ ಹನಪಿ (43ನೆ ನಿ) ಗೋಲು ಗಳಿಸಿದರು.ಈ ಮೊದಲು ಡೆಂಪೊ ಕ್ಲಬ್ (2009, 2011), ಚರ್ಚಿಲ್ ಬ್ರದರ್ಸ್ (2010), ಪುಣೆ ಫುಟ್‌ಬಾಲ್ ಕ್ಲಬ್ (2014) ಮತ್ತು ಬೆಂಗಳೂರು ಫುಟ್‌ಬಾಲ್ ಕ್ಲಬ್ (2015) ತಂಡಗಳು ಎಎಫ್‌ಸಿ ಅರ್ಹತಾ ಲೀಗ್‌ನಲ್ಲಿ ಆಡಿದ್ದವು. ಆದರೆ ಗೆದ್ದಿರಲಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.