ಭಾನುವಾರ, ಏಪ್ರಿಲ್ 18, 2021
24 °C

ಬಿಎಸ್‌ವೈ ಬಿಜೆಪಿಗೆ ಅನಿವಾರ್ಯ ಅಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಬಿಜೆಪಿ ತೊರೆಯುವುದರಿಂದ ಆಗುವ ನಷ್ಟ ತುಂಬಿಕೊಳ್ಳುವ ಮಾರ್ಗೋಪಾಯಗಳ ಕುರಿತು ಶನಿವಾರ ಇಡೀ ದಿನ ನಡೆದ ಸರಣಿ ಸಭೆಗಳಲ್ಲಿ ಬಿಜೆಪಿ ಮುಖಂಡರು ಚಿಂತನ - ಮಂಥನ ನಡೆಸಿದರು.ಬಿಜೆಪಿ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಸಮ್ಮುಖದಲ್ಲಿ ನಡೆದ ಪದಾಧಿಕಾರಿಗಳು, ಸಚಿವರು, ಸಂಸದರು, ಜಿಲ್ಲಾ ಉಸ್ತುವಾರಿಗಳ ಸಭೆಯಲ್ಲಿ, ಯಡಿಯೂರಪ್ಪ ವಿರುದ್ಧ  ಆಕ್ರೋಶ ವ್ಯಕ್ತವಾಯಿತು. ಅವರನ್ನು ಹೊರತುಪಡಿಸಿ ಪಕ್ಷ ಸಂಘಟಿಸಲು ಮತ್ತು ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ತೀರ್ಮಾನಿಸಲಾಗಿದೆ.ಯಡಿಯೂರಪ್ಪ ಅವರಿಗೆ ಪಕ್ಷ ಎಲ್ಲ ಸ್ಥಾನಮಾನಗಳನ್ನೂ ನೀಡಿದೆ. ಇಷ್ಟಾದರೂ ಪಕ್ಷದ ವಿರುದ್ಧವೇ ಟೀಕೆ ಮಾಡುವ ಮೂಲಕ ದ್ರೋಹ ಬಗೆದಿದ್ದಾರೆ ಎಂದು ಕೆಲವರು ಟೀಕಿಸಿದರು. ತಕ್ಷಣ ಅವರ ವಿರುದ್ಧ ಕ್ರಮ ಕೈಗೊಳ್ಳದೆ ಇನ್ನಷ್ಟು ದಿನ ಕಾದು ನೋಡುವುದು ಲೇಸು ಎಂಬ ತೀರ್ಮಾನಕ್ಕೆ ಬರಲಾಯಿತು ಎನ್ನಲಾಗಿದೆ.ಹಾವೇರಿಯಲ್ಲಿ ಡಿ. 9ರಂದು ನಡೆಯಲಿರುವ ಕರ್ನಾಟಕ ಜನತಾ ಪಕ್ಷದ (ಕೆಜೆಪಿ) ಸಮಾವೇಶದಲ್ಲಿ ಪಕ್ಷದಲ್ಲಿರುವ ಅವರ ಬಣದ ಮುಖಂಡರು ಭಾಗವಹಿಸಿದರೆ ಶಿಸ್ತುಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಸಮಾವೇಶದಲ್ಲಿ ಭಾಗವಹಿಸಬಾರದು ಎಂದು ಶಾಸಕರಿಗೆ, ಮುಖಂಡರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.ಯಡಿಯೂರಪ್ಪ ಒತ್ತಡಗಳಿಗೆ ಯಾವುದೇ ಕಾರಣಕ್ಕೂ ಮಣಿಯಬಾರದು. ಯಡಿಯೂರಪ್ಪ ಇಲ್ಲದೆಯೇ ಚುನಾವಣೆ ಎದುರಿಸುವ ಶಕ್ತಿ ಬಿಜೆಪಿಗೆ ಇದೆ ಎಂಬ ಅಭಿಪ್ರಾಯವನ್ನು ಸಭೆಯಲ್ಲಿ ಮಾತನಾಡಿದ ಹಲವು ಮುಖಂಡರು ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ.ಬೂತ್‌ಮಟ್ಟದಿಂದ ರಾಜ್ಯಮಟ್ಟದವರೆಗೆ ಸಮಾವೇಶ, ರ‌್ಯಾಲಿಗಳನ್ನು ನಡೆಸುವ ಮೂಲಕ ಪಕ್ಷವನ್ನು ಬಲಗೊಳಿಸಲು ತೀರ್ಮಾನಿಸಲಾಗಿದೆ. ಮುಂದಿನ ವಾರದಿಂದಲೇ ಈ ಕಾರ್ಯಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿದೆ.ಬಿಜೆಪಿಯು ತತ್ವ-ಸಿದ್ಧಾಂತದ ಮೇಲೆ ಅಸ್ತಿತ್ವಕ್ಕೆ ಬಂದಿರುವ ಪಕ್ಷ. ಯಡಿಯೂರಪ್ಪ ಅವರನ್ನು ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಇದಕ್ಕೆ ಸ್ಪಂದಿಸಿದರೆ ಒಳ್ಳೆಯದು. ಹಟಕ್ಕೆ ಬಿದ್ದು ಪಕ್ಷ ತೊರೆದರೆ ಆ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಯಡಿಯೂರಪ್ಪ ಸೇರಿದಂತೆ ಯಾರೂ ಅನಿವಾರ್ಯ ಅಲ್ಲ. ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷ ಕ್ಕಿಂತ ದೇಶ ಮುಖ್ಯ. ಕಾರ್ಯಕರ್ತರ ಬಲದ ಮೇಲೆ ಬಿಜೆಪಿ ನಿಂತಿದೆ ಎಂದು ಪ್ರಧಾನ್ ಹೇಳಿದರು ಎನ್ನಲಾಗಿದೆ.ಯಡಿಯೂರಪ್ಪ ಈಗಾಗಲೇ ಪಕ್ಷ ತೊರೆದಿರುವುದಾಗಿ ಘೋಷಿಸಿದ್ದಾರೆ. ಇದರಿಂದ ಪಕ್ಷಕ್ಕೆ ಸ್ವಲ್ಪಮಟ್ಟಿಗೆ ಹೊಡೆತ ಆಗಬಹುದು. ಆದರೆ ಜಿಲ್ಲಾ ಉಸ್ತುವಾರಿಗಳು, ಜಿಲ್ಲಾ ಅಧ್ಯಕ್ಷರು ಪಕ್ಷದೊಂದಿಗೇ ಇದ್ದಾರೆ. ಹೀಗಾಗಿ ಹೆಚ್ಚಿನ ಹಾನಿ ಆಗುವುದಿಲ್ಲ ಎಂದು ಎಂಬ ಮಾತುಗಳೂ ಕೇಳಿಬಂದವು ಎಂದು ಗೊತ್ತಾಗಿದೆ.ಯುಪಿಎ ಸರ್ಕಾರದ ಕಲ್ಲಿದ್ದಲು ಹಗರಣ, ಆದರ್ಶ ಸೊಸೈಟಿ ಹಗರಣ, ಕಾಮನ್‌ವೇಲ್ತ್ ಗೇಮ್ಸ ಹಗರಣ, 2ಜಿ ತರಂಗಾಂತರ ಹಗರಣಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲು ಇದೇ 30ರ ಒಳಗೆ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲೂ ಬೃಹತ್ ಸಮಾವೇಶಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಪಕ್ಷದ ಉಪಾಧ್ಯಕ್ಷ ನಳಿನ್‌ಕುಮಾರ್ ಕಟೀಲು ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಕೇಂದ್ರ ಸರ್ಕಾರದ ವೈಫಲ್ಯಗಳು, ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಲಾಗುವುದು. ಪ್ರತಿಯೊಂದು ಬೂತ್‌ನಿಂದ ಕನಿಷ್ಠ 10ರಿಂದ 15 ಕಾರ್ಯಕರ್ತರನ್ನು ಸೇರಿಸಿ ವಿಧಾನಸಭಾ ಕ್ಷೇತ್ರವಾರು ಬೂತ್‌ಮಟ್ಟದ ಕಾರ್ಯಕರ್ತರ ಸಮಾವೇಶ ಏರ್ಪಡಿಸಲಾಗುವುದು. ಡಿಸೆಂಬರ್ 30ರ ಒಳಗೆ ಸಮಾವೇಶಗಳು ನಡೆಯಲಿವೆ ಎಂದರು.ಬಿಜೆಪಿಯಿಂದ ಪ್ರಕಟವಾಗುತ್ತಿರುವ `ಧ್ಯೇಯ ಕಮಲ~ ಮಾಸಪತ್ರಿಕೆಯನ್ನು ಬೂತ್ ಹಂತದವರೆಗೂ ತಲುಪಿಸಲು ಡಿಸೆಂಬರ್ ಒಂದರಿಂದ 15ರವರೆಗೆ ಪ್ರಸರಣ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಬೂತ್ ಮಟ್ಟದಿಂದ ರಾಜ್ಯಮಟ್ಟದವರೆಗೆ ನಡೆಯುವ ಕಾರ್ಯಕ್ರಮಗಳಲ್ಲಿ ಕಾರ್ಯಕರ್ತರು, ಮುಖಂಡರು ಸಕ್ರಿಯವಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳು, ಹಾವೇರಿಯಲ್ಲಿ ನಡೆಯುವ ಕೆಜೆಪಿ ಸಮಾವೇಶ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಸಮಗ್ರವಾಗಿ  ಚರ್ಚಿಸಲಾಗಿದೆ. ಪಕ್ಷದ ಶಿಸ್ತಿನ ಚೌಕಟ್ಟಿನಲ್ಲಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಪ್ರಧಾನ್ ಸಭೆಗೆ ತಿಳಿಸಿದರು ಎಂದು ಕಟೀಲು ಹೇಳಿದರು.ಪಕ್ಷದಲ್ಲೇ ಉಳಿಯುವ ವಿಶ್ವಾಸ: ಯಡಿಯೂರಪ್ಪ ಅವರ ಬಗ್ಗೆ ಬಿಜೆಪಿಯ ಎಲ್ಲ ನಾಯಕರಿಗೂ ಗೌರವವಿದೆ. ಅವರು ಬಿಜೆಪಿಯಲ್ಲೇ ಉಳಿಯುವ ವಿಶ್ವಾಸವಿದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಾಥ್‌ರಾವ್ ಮಲ್ಕಾಪುರೆ ತಿಳಿಸಿದರು.ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಸೇರಿದಂತೆ ಸಚಿವರು, ಸಂಸದರು ಸಭೆಯಲ್ಲಿ ಭಾಗವಹಿಸಿದ್ದರು.

 ಡಿಸೆಂಬರ್‌ನಲ್ಲಿ ವಿಧಾನಸಭೆ ವಿಸರ್ಜನೆ?

ಕರ್ನಾಟಕ ಜನತಾ ಪಕ್ಷದ ನೇತೃತ್ವ ವಹಿಸಲು ಸಜ್ಜಾಗಿರುವ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಬಿಜೆಪಿಯ ಹತ್ತಕ್ಕೂ ಹೆಚ್ಚು ಶಾಸಕರು ಗುರುತಿಸಿಕೊಂಡರೆ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸುವ ಬಗ್ಗೆ ಪಕ್ಷದ ನಾಯಕರಲ್ಲಿ ಚಿಂತನೆ ನಡೆದಿದೆ.ಯಡಿಯೂರಪ್ಪ ಅವರ ಷರತ್ತುಗಳಿಗೆ ಮಣಿದು ಸರ್ಕಾರ ನಡೆಸುವುದಕ್ಕಿಂತ ವಿಧಾನಸಭೆಯನ್ನು ವಿಸರ್ಜಿಸುವುದು ಒಳ್ಳೆಯದು ಎಂಬ ಅಭಿಪ್ರಾಯವನ್ನು ಶನಿವಾರ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಕೆಲವರು ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, `ಈಗಲೇ ಆ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದು ಬೇಡ. ಗುಜರಾತ್ ಚುನಾವಣೆವರೆಗೂ ಸುಮ್ಮನಿರಿ~ ಎಂದು ಸಲಹೆ ಮಾಡಿದರು ಎನ್ನಲಾಗಿದೆ.`ಈಗಲೇ ವಿಸರ್ಜನೆ ಮಾಡಿದರೆ, ಅದರ ಪರಿಣಾಮ ಗುಜರಾತ್ ಚುನಾವಣೆಯ ಮೇಲೆ ಆಗಲಿದೆ. ಇದರಿಂದ ಕಾಂಗ್ರೆಸ್‌ಗೆ ಅನುಕೂಲವಾಗುತ್ತದೆ. ಆದ್ದರಿಂದ ಡಿಸೆಂಬರ್ 20ರವರೆಗೂ ಕಾಯೋಣ~ ಎಂದು ಪ್ರಧಾನ್ ಹೇಳಿದರು ಎಂದು ಗೊತ್ತಾಗಿದೆ.ಗೊಂದಲಗಳ ನಡುವೆಯೇ ಸರ್ಕಾರ ಮುಂದುವರಿಯಲು ಅವಕಾಶ ನೀಡಿದರೆ, ಯಡಿಯೂರಪ್ಪ ಬೆಂಬಲಿಗ ಸಚಿವರು ವೈಯಕ್ತಿಕವಾಗಿ ಲಾಭ ಪಡೆದುಕೊಳ್ಳುವುದು ಅಷ್ಟೇ ಅಲ್ಲದೆ, ತಮ್ಮ ಸ್ಥಾನ ಬಲದಿಂದ ಕೆಜೆಪಿ ಸಂಘಟನೆಗೂ ಅನುಕೂಲ ಮಾಡಿಕೊಡುತ್ತಾರೆ. ಆದ್ದರಿಂದ ವಿಧಾನಸಭೆ ವಿಸರ್ಜಿಸಬೇಕು ಎಂದು ಸಂಘ ಪರಿವಾರ ಹಿನ್ನೆಲೆಯ ಕೆಲವು ಪದಾಧಿಕಾರಿಗಳು ಸಲಹೆ ಮಾಡಿದರು ಎನ್ನಲಾಗಿದೆ.`ತಾಳ್ಮೆ ದೌರ್ಬಲ್ಯ ಅಲ್ಲ~

ಯಡಿಯೂರಪ್ಪ ಬಿಜೆಪಿಯಿಂದ ಹೊರಹೋಗಬೇಕು ಎಂದು ನಿರ್ಧರಿಸಿದರೆ ಯಾರೂ, ಏನೂ ಮಾಡಲಾಗದು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮಾರ್ಮಿಕವಾಗಿ ಹೇಳಿದರು.ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಎಲ್ಲ ಗೊಂದಲಗಳು ನಿವಾರಣೆ ಆಗಬಹುದು ಎಂದು ತಾಳ್ಮೆಯಿಂದ ಇದ್ದೇವೆ. ಬಿಜೆಪಿ ನಾಯಕರ ತಾಳ್ಮೆ ದೌರ್ಬಲ್ಯ ಅಲ್ಲ. ಎರಡು ತಿಂಗಳಿಂದ ನಡೆಯುತ್ತಿರುವ ಬೆಳವಣಿಗೆಗಳು, ಕೆಲವರು ನೀಡುತ್ತಿರುವ ಪಕ್ಷ ವಿರೋಧಿ ಹೇಳಿಕೆಗಳನ್ನು ಹೈಕಮಾಂಡ್ ಗಮನಿಸುತ್ತಿದೆ~ ಎಂದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.