ಬುಧವಾರ, ಮೇ 25, 2022
23 °C

ಬಿಜೆಪಿ ಕಾರ್ಯಕರ್ತರಿಗೆ ಮುಖ್ಯಮಂತ್ರಿ ಸದಾನಂದಗೌಡ ಅಭಯ.....

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: `ಮುಖ್ಯಮಂತ್ರಿಯಾಗಿ ಎಷ್ಟು ದಿವಸ ಇರುತ್ತೇನೆ ಎನ್ನುವುದು ಮುಖ್ಯವಲ್ಲ. ಆದರೆ, ಅಧಿಕಾರ ಇದ್ದಾಗ ಹೇಗೆ ನಡೆದುಕೊಳ್ಳುತ್ತೇನೆ ಎನ್ನುವುದು ಮುಖ್ಯ. ಪಕ್ಷದ ಕಾರ್ಯಕರ್ತರಿಗೆ ಗೌರವ ತರುವ ರೀತಿಯಲ್ಲಿ ನಾನು ನಡೆದುಕೊಳ್ಳುತ್ತೇನೆ~ಇದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಪಕ್ಷದ ಕಾರ್ಯಕರ್ತರಿಗೆ ನೀಡಿದ ಭರವಸೆ.ನಗರದ ಎನ್‌ಡಿವಿ ಹಾಸ್ಟೆಲ್ ಮೈದಾನದಲ್ಲಿ ಬುಧವಾರ ಬಿಜೆಪಿ ಶಿವಮೊಗ್ಗ ನಗರ ಹಾಗೂ ಗ್ರಾಮಾಂತರ ಕಾರ್ಯಕರ್ತರ ಸಭೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.`ಪಕ್ಷದ ಆದೇಶವನ್ನು ಮೀರುವುದಿಲ್ಲ. ಪಾರದರ್ಶಕ ಆಡಳಿತ ನೀಡುತ್ತೇನೆ. ಪಕ್ಷದ ವರ್ಚಸ್ಸನ್ನು ಹೆಚ್ಚಿಸುತ್ತೇನೆ. ವಿಶ್ವಾಸಕ್ಕೆ ಚ್ಯುತಿ ತರುವ ಕೆಲಸ ಮಾಡುವುದಿಲ್ಲ. ಕಾರ್ಯಕರ್ತರ ಸಲಹೆ-ಸೂಚನೆಗಳನ್ನು ಪಡೆದುಕೊಳ್ಳುತ್ತೇನೆ~ ಎಂದರು.ಜನ ವಿಶ್ವಾಸದಿಂದ ನೋಡುವಂತಹ ರಾಜನೀತಿ ಬರಬೇಕು. ಅನುಮಾನದಿಂದ ನೋಡುವಂತಹ ರಾಜನೀತಿ ಎಂದಿಗೂ ಕೆಟ್ಟದ್ದು ಎಂದು ಅವರು ಅಭಿಪ್ರಾಯಪಟ್ಟರು.ಮಾಧ್ಯಮಗಳು ಪ್ರತಿದಿವಸ ನನ್ನ 32 ಹಲ್ಲುಗಳನ್ನು ತೋರಿಸುತ್ತವೆ. ಆದರೆ, ಮುಂದೊಂದು ದಿವಸ ರಾಜ್ಯದ ಪ್ರತಿಯೊಬ್ಬರು ಇದೇ ರೀತಿ 32 ಹಲ್ಲುಗಳನ್ನು ತೋರಿಸುವಂತೆ ಮಾಡಬೇಕೆಂಬುದು ನನ್ನ ಆಸೆ ಎಂದರು.ಪ್ರತಿಪಕ್ಷಗಳು ಜವಾಬ್ದಾರಿಯಿತ ಕೆಲಸ ಮಾಡುತ್ತಿಲ್ಲ. ಕೇಂದ್ರದಲ್ಲಿ ತನ್ನದೇ ಸರ್ಕಾರ ಇದೆ ಎಂಬುದನ್ನು ರಾಜ್ಯದ ಕಾಂಗ್ರೆಸ್ ಮುಖಂಡರು ಮರೆತಿದ್ದಾರೆ. ವಿದ್ಯುತ್ ಸಮಸ್ಯೆಗೆ ತಾವೇ ಕಾರಣ ಎಂಬುದು ಅವರಿಗೆ ಗೊತ್ತಿಲ್ಲ. ಅವರು ರಾಜ್ಯದ ಹಿತಾಸಕ್ತಿ ಕಾಪಾಡುತ್ತಿಲ್ಲ ಎಂದು ಮೂದಲಿಸಿದರು.ಭ್ರಮೆ ಬೇಡ:  ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಮಾತನಾಡಿ, ಬಿಜೆಪಿ ತಪಸ್ಸು ಮಾಡಿ ಕಟ್ಟಿದ ಪಕ್ಷ. ಅಲ್ಲೊಂದು, ಇಲ್ಲೊಂದು ಗೊಂದಲಗಳಿವೆ. ಗೊಂದಲ ಸೃಷ್ಟಿ ಮಾಡುವವರು ಬಹಳ ಜನರಿದ್ದಾರೆ. ಗೊಂದಲಗಳನ್ನೇ ದೊಡ್ಡದು ಮಾಡಿ ಕೆಲವರು ಪಕ್ಷವನ್ನು ಮುಗಿಸುವ ಭ್ರಮೆಯಲ್ಲಿದ್ದಾರೆ. ಗಾಜಿನ ಮನೆಯಲ್ಲಿದ್ದು ಕಲ್ಲಲ್ಲಿ ಹೊಡೆಯುತ್ತಿದ್ದಾರೆ. ಆದರೆ, ಇದು ಯಾವ ಕಾರಣಕ್ಕೂ ಸಾಧ್ಯವಾಗುವುದಿಲ್ಲ ಎಂದರು.ಪಕ್ಷದ ಮೇಲೆ ಸುಖಾಸುಮ್ಮನೆ ಆಪಾದನೆ ಮಾಡಲಾಗುತ್ತಿದೆ. ಆದರೆ, ಆಪಾದನೆಗೆ ತಕ್ಕ ಉತ್ತರವನ್ನು ಆಯಾ ಸಂದರ್ಭದಲ್ಲಿನ ಚುನಾವಣೆಗಳ ಮೂಲಕ ನೀಡಲಾಗುತ್ತಿದೆ.ಇಷ್ಟಾದರೂ ಆಪಾದನೆಗಳು ನಿಂತಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಈ ಆಪಾದನೆಗಳಿಗೆ ಶಾಶ್ವತವಾದ ಉತ್ತರ ಹೇಳಬೇಕು ಎಂದು ಕಾರ್ಯಕರ್ತರಿಗೆ ಹೇಳಿದರು.ವಿದ್ಯುತ್ ಉತ್ಪಾದನೆಗೆ ಹಿಂದಿನ ಸರ್ಕಾರಗಳೇ ಕಾರಣ ಎಂದು ವಾಗ್ದಾಳಿ ನಡೆಸಿದ ಈಶ್ವರಪ್ಪ, ವಿದ್ಯುತ್ ಉತ್ಪಾದನೆ ರಾಗಿ, ಬತ್ತ ಬೆಳೆದಂತೆ ಅಲ್ಲ. ಅದಕ್ಕೆ ಕನಿಷ್ಠ 7ರಿಂದ 8 ವರ್ಷ ಬೇಕು. ಇಷ್ಟೂ ಸಾಮಾನ್ಯಜ್ಞಾನ ಸಿದ್ದರಾಮಯ್ಯ ಅವರಿಗಿಲ್ಲ ಎಂದು ಟೀಕಿಸಿದರು.ವಿದ್ಯುತ್‌ನಲ್ಲಿ ರಾಜಕೀಯ ಮಾಡಬಾರದು. ಕೇಂದ್ರ ಸರ್ಕಾರ ನಿಗದಿತ ಪ್ರಮಾಣ ವಿದ್ಯುತ್ ಹಾಗೂ ಕಲ್ಲಿದ್ದಲು ನೀಡದಿದ್ದರೆ ಬಿಜೆಪಿ ಕಾರ್ಯಕರ್ತರು ರಾಜ್ಯದಾದ್ಯಂತ ಹೋರಾಟ ಮಾಡಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಸಮಾರಂಭದಲ್ಲಿ ಮುಖ್ಯಮಂತ್ರಿ ಸದಾನಂದಗೌಡ ಅವರನ್ನು ಸನ್ಮಾನಿಸಲಾಯಿತು.ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಕೆ. ಸಿದ್ದರಾಮಣ್ಣ ಪ್ರಾಸ್ತಾವಿಕ ಮಾತನಾಡಿದರು. ಸಮಾರಂಭದಲ್ಲಿ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಭಾನುಪ್ರಕಾಶ್, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ, ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಕೆ.ಜಿ. ಕುಮಾರಸ್ವಾಮಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.