ಗುರುವಾರ , ಸೆಪ್ಟೆಂಬರ್ 19, 2019
29 °C

ಬಿಜೆಪಿ ಮುಖಂಡರ ಪ್ರಶ್ನೆ: ಶಾಸಕ ನಾಯಕ ಯಾವ ಪಕ್ಷ?

Published:
Updated:

ರಾಯಚೂರು: `ಮಾಜಿ ಸಚಿವ ಹಾಗೂ ಹಾಲಿ ಶಾಸಕ ಶಿವನಗೌಡ ನಾಯಕ  ಯಾವ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ ಎಂಬುದನ್ನು ಪ್ರಕಟಿಸಬೇಕು~ ಎಂದು ಬಿಜೆಪಿ ಪಕ್ಷ ಮುಖಂಡರಾದ ಬುಡ್ಡನಗೌಡ ಪಾಟೀಲ್ ಹಾಗೂ  ವಿ.ಎಂ ಮೇಟಿ  ಆಗ್ರಹಿಸಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಇದೇ 17ರಂದು ದೇವದುರ್ಗದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ  ನಾಯಕ ಬಿಜೆಪಿಯ ಯಾವೊಬ್ಬ ನಾಯಕರೊಂದಿಗೂ  ಚರ್ಚೆ ನಡೆಸಿಲ್ಲ. ತಮ್ಮ ಆಪ್ತರು, ಬೆಂಬಲಿಗರನ್ನು ಮಾತ್ರ ಸಭೆಗೆ ಆಹ್ವಾನಿಸಿದ್ದಾರೆ~ ಎಂದು ಆರೋಪಿಸಿದರು.2008ರಲ್ಲಿ ಕಾಂಗ್ರೆಸ್ ಪಕ್ಷದಲ್ಲಿದ್ದ ಶಿವನಗೌಡರು ನಂತರ ಜೆಡಿಎಸ್ ಪಕ್ಷದಿಂದ ಆಯ್ಕೆಗೊಂಡ ಕೆಲವು ದಿನಗಳಲ್ಲಿಯೇ ಜೆಡಿಎಸ್ ಪಕ್ಷದ ಶಾಸಕರಾಗಿದ್ದ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿಗೆ ಸೇರ್ಪಡೆಗೊಂಡರು. ನಂತರ ಬಿಜೆಪಿ ಪಕ್ಷದಿಂದ ಆಯ್ಕೆಯಾದರು ಎಂದು ಹೇಳಿದರು.`ಜಿಲ್ಲೆಯಲ್ಲಿ ಈಚೆಗೆ ನಡೆದ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ನಾಯಕ ಜೆಡಿಎಸ್ ಪಕ್ಷವನ್ನು ಬೆಂಬಲಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ನಿಂದಿಸಿದ್ದರು. ಅಲ್ಲದೇ ಸರ್ಕಾರದ ವಿರುದ್ಧವೂ ಮತ ಚಲಾಯಿಸುವ ಯತ್ನ ನಡೆಸಿದ್ದರು. ಶಾಸಕ ಶಿವನಗೌಡ ನಾಯಕ ಅವರನ್ನು ನಂಬಿ ರಾಜಕೀಯ ಮಾಡಿದರೆ, ಮುಂದಿನ ದಿನಗಳಲ್ಲಿ ಬಿಜೆಪಿಗೆ ಸಂಕಷ್ಟ ಎದುರಾಗಬಹುದು~ ಎಂದು ಅಭಿಪ್ರಾಯಪಟ್ಟರು.`ದೇವದುರ್ಗ ತಾಲ್ಲೂಕಿನಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಶಾಸಕರು  ಬೇನಾಮಿ ಹೆಸರುಗಳ ಮೇಲೆ 300ರಿಂದ 400 ಕೋಟಿ ರೂಪಾಯಿಗಳಷ್ಟು  ಆಸ್ತಿ ಸಂಪಾದಿಸಿದ್ದಾರೆ. ಡಾ.ಶಿವರಾಜ ಪಾಟೀಲ್ ಅವರನ್ನು ಲೋಕಾಯುಕ್ತರನ್ನಾಗಿ ಮಾಡಲು ನಾನೇ ಕಾರಣ ಎಂದು ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ~ ಎಂದು ಮೇಟಿ ಹೇಳಿದರು.`ಹೊಸಪೇಟೆಯಲ್ಲಿ ಈಚೆಗೆ ರಾಜ್ಯ ಘಟಕದ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಶಿವನಗೌಡ ನಾಯಕ ಅವರ ಕುರಿತು ಎಲ್ಲ ವಿಷಯಗಳನ್ನು ಚರ್ಚಿಸಲಾಗಿದೆ. ಆದರೆ, ರಾಜ್ಯದ ಮುಖಂಡರು ಪಕ್ಷದ ಹಿತ ದೃಷ್ಟಿಯಿಂದ ಮೌನವಾಗಿರುವಂತೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಪಕ್ಷದಲ್ಲಿರಬೇಕಾಗಿದೆ~ ಎಂದು ತಿಳಿಸಿದರು.`ಶಾಸಕ ಶಿವನಗೌಡ ನಾಯಕ ಅವರಿಂದ ದೇವದುರ್ಗ ಕ್ಷೇತ್ರಕ್ಕೆ ಹಾಗೂ ಮತದಾರಿಗೆ ಯಾವುದೇ ರೀತಿಯಲ್ಲಿ  ಪ್ರಯೋಜನ ಇಲ್ಲ. ಈ ಬಗ್ಗೆ ರಾಜ್ಯ ಸಮಿತಿಯ ಗಮನಕ್ಕೆ ತರಲಾಗಿದೆ~ ಎಂದು ಬುಡ್ಡನಗೌಡ ಹೇಳಿದರು. ಶರಬನಗೌಡ, ಅಮರೇಶ ಪತ್ರಿಕಾಗೋಷ್ಠಿಯಲ್ಲಿದ್ದರು.

Post Comments (+)