ಸೋಮವಾರ, ಜೂನ್ 14, 2021
27 °C

ಬಿಜೆಪಿ ಸೇರಿದ ಹಿರಿಯ ಪತ್ರಕರ್ತ ಅಕ್ಬರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಲೇಖಕ ಹಾಗೂ ಹಿರಿಯ ಪತ್ರಕರ್ತ ಎಂ.ಜೆ. ಅಕ್ಬರ್‌ ಅವರು ಶನಿವಾರ ಬಿಜೆಪಿ ಸೇರಿದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜ­ನಾಥ್‌ ಸಿಂಗ್‌ ಸಮ್ಮುಖದಲ್ಲಿ  ಬಿಜೆಪಿಗೆ ಸೇರ್ಪಡೆಗೊಂಡರು.1989–1991ರ ಅವಧಿಗೆ ಬಿಹಾರದ  ಕಿಶನ್‌­ಗಂಜ್‌ ಕ್ಷೇತ್ರದ ಕಾಂಗ್ರೆಸ್‌ ಸಂಸತ್‌ ಸದಸ್ಯ­ರಾಗಿದ್ದ ಅಕ್ಬರ್‌ ಅವರು ಲೋಕಸಭಾ ಚುನಾ­ವಣೆಗೆ ಮುಂಚಿತ­ವಾಗಿ ಬಿಜೆಪಿ ತೆಕ್ಕೆಗೆ ಸೇರಿದ್ದಾರೆ. 1989ರ ಲೋಕಸಭಾ ಚುನಾವಣೆಗೂ ಮೊದಲು ಅವರು ಕಾಂಗ್ರೆಸ್‌ ವಕ್ತಾರರಾಗಿದ್ದರು.‘ರಾಜಕೀಯ ನೀತಿಗಳ ಕಾರಣಕ್ಕಾಗಿ ನಾನು ಮತ್ತೆ ರಾಜಕೀಯಕ್ಕೆ ಬಂದಿದ್ದೇನೆ. ದೇಶ ಎದುರಿಸುತ್ತಿರುವ ಬಿಕ್ಕಟ್ಟು ಎಲ್ಲರಿಗೂ ತಿಳಿದಿದೆ. ನಮ್ಮ ದೇಶಕ್ಕೆ ಏನಾದರೂ ಮಾಡಲು ಇದೊಂದು ಅವಕಾಶ’ ಎಂದು ಬಿಜೆಪಿ ಸೇರಿದ ಬಳಿಕ ಅವರು ಹೇಳಿದರು. ‘ದೇಶದ ಧ್ವನಿಯೊಂದಿಗೆ ಕೈ ಜೋಡಿಸಿ, ರಾಷ್ಟ್ರವನ್ನು ಮತ್ತೆ ಸುಸ್ಥಿತಿಗೆ ತರುವುದು ನಮ್ಮ ಕರ್ತವ್ಯ. ಬಿಜೆಪಿ­ಯಲ್ಲಿ ಕೆಲಸ ಮಾಡಲು ನಾನು ಉತ್ಸುಕ­ನಾ­ಗಿದ್ದೇನೆ’ ಎಂದು ಅಕ್ಬರ್‌ ಸುದ್ದಿ­ಗಾರರಿಗೆ ತಿಳಿಸಿದರು.ಹಿರಿಯ ಪತ್ರಕರ್ತ ಪಕ್ಷಕ್ಕೆ ಸೇರಿರುವುದನ್ನು ಸ್ವಾಗತಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್‌ ಸಿಂಗ್‌, ಕ್ರೀಡೆ, ರಾಜಕೀಯ, ಸಿನಿಮಾ, ಸಾಹಿತ್ಯ ಸೇರಿ ವಿವಿಧ ಕ್ಷೇತ್ರಗಳಲ್ಲಿ ತೊಡಗಿ­ಕೊಂಡಿರುವವರು ಪಕ್ಷಕ್ಕೆ ಸೇರಿದ್ದಾರೆ ಎಂದು ಹೇಳಿದರು.‘ಈಗ ಮಾಧ್ಯಮದಲ್ಲಿರುವ ಪ್ರಮುಖ ವ್ಯಕ್ತಿಗಳು ಬಿಜೆಪಿಯ ಸದಸ್ಯತ್ವ­ವನ್ನು ಸ್ವೀಕರಿಸುತ್ತಿದ್ದಾರೆ. ಮಾಧ್ಯಮದ ಪ್ರತಿಭೆಗಳಲ್ಲಿ ಅಕ್ಬರ್‌ ಕೂಡ ಒಬ್ಬರು. ಅವರು ನಮ್ಮ ಸದಸ್ಯತ್ವ ಸ್ವೀಕರಿಸಿದ್ದಾರೆ. ಅವರನ್ನು ನಾನು ಸ್ವಾಗತಿಸುತ್ತೇನೆ’ ಎಂದು ಸಿಂಗ್‌ ನುಡಿದರು.

ಮಾಜಿ ಪ್ರಧಾನಿ ದಿ. ರಾಜೀವ್‌ ಗಾಂಧಿ ಅವ­ರೊಂದಿ­ಗಿನ ಗೆಳೆತನವನ್ನು ಒಪ್ಪಿಕೊಂಡರು. ಆದರೆ, ಈಗ ಆ ಸಮಯ ಸರಿದು 20 ವರ್ಷಗಳಾಗಿವೆ ಎಂದೂ ಹೇಳಿದರು.ನರೇಂದ್ರ ಮೋದಿ ಅವರಿಗೆ ಬೆಂಬಲ ವ್ಯಕ್ತಪಡಿಸಿದ ಅವರು, ಮೋದಿ ಅವರು ಎದುರಿಸಿದಷ್ಟು ಕಾನೂನು ವಿಚಾರಣೆ­ಯನ್ನು ಬೇರೆ ಯಾವ ನಾಯಕನೂ ಎದುರಿಸಿಲ್ಲ ಎಂದು ಅಭಿಪ್ರಾಯ ಪಟ್ಟರು.‘ದೇಶದಲ್ಲಿ ಬಿಕ್ಕಟ್ಟು ಮಾತ್ರ ಇದೆ ಎಂದಲ್ಲ. ಈಗ ನಾನು ಅದಕ್ಕೆ ಪರಿಹಾರವನ್ನೂ ಕಾಣುತ್ತಿದ್ದೇನೆ. ದೇಶಕ್ಕೆ ನರೇಂದ್ರ ಮೋದಿ ಅವರ ನಾಯಕತ್ವ ಅಗತ್ಯವಿದೆ’ ಎಂದು ಅಕ್ಬರ್‌ ಹೇಳಿದರು.ದೇಶದ ಮುಸ್ಲಿಮರು ಕೂಡ ಬಿಜೆಪಿಯೊಂದಿಗೆ ಕೈಜೋಡಿಸಲಿದ್ದಾರೆ ಎಂಬ ವಿಶ್ವಾಸವನ್ನೂ ಎಂ.ಜೆ. ಅಕ್ಬರ್ ಅವರು ಇದೇ ಸಂದರ್ಭದಲ್ಲಿ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.