ಗುರುವಾರ , ಏಪ್ರಿಲ್ 22, 2021
25 °C

ಬಿತ್ತನೆ ಬೀಜಕ್ಕಾಗಿ ರೈತರ ಲಗ್ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹನುಮಸಾಗರ: ಕಳೆದ ಎರಡು ದಿನಗಳಿಂದ ಅಲ್ಲಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ಹಾಗೂ ಮಳೆಯಾಗುವ ಲಕ್ಷಣಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ರೈತರು ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜಕ್ಕಾಗಿ ಮುಗಿಬಿದ್ದಿರುವುದು ಕಂಡು ಬಂದಿತು.ಸೋಮವಾರ ಸಂತೆ ದಿನವಾಗಿದ್ದರಿಂದ ಸುತ್ತಮುತ್ತಲಿನ ಬಹುತೇಕ ರೈತರು ಜಮಾವಣೆಯಾಗಲು ಮತ್ತೊಂದು ಕಾರಣವಾಗಿದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ರಿಯಾಯತಿ ದರದಲ್ಲಿ ವಿತರಿಸುತ್ತಿರುವ ಬಿತ್ತನೆ ಬೀಜಗಳನ್ನು ಖರೀದಿಸುವಲ್ಲಿ ಉಂಟಾದ ಈ ನೂಕುನುಗ್ಗಲವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡಬೇಕಾಯಿತು.ಬಳಿಕ ಪೊಲೀಸ್ ಬಂದೋಬಸ್ತ್‌ನಲ್ಲಿ ರೈತರನ್ನು ಸರದಿಯಲ್ಲಿ ನಿಲ್ಲಿಸಿ ಬಿತ್ತನೆ ಬೀಜ ಸಂಜೆಯವರೆಗೂ ವಿತರಿಸಲಾಗುತ್ತಿದ್ದುದು ಕಂಡು ಬಂದಿತು. ಬೀಜ ಖರೀದಿಸುವ ದಾವಂತದಲ್ಲಿದ್ದ ರೈತರಿಗೆ ಬೀಜಗಳನ್ನು ಹಂಚುವದರಲ್ಲಿ ಹಾಗೂ ಸಮಾಧಾನ ಪಡಿಸುವದರಲ್ಲಿ ಇಲಾಖೆಯವರು ಸುಸ್ತಾಗಿ ಹೋಗಿದ್ದರು.ರೈತರಿಗೆ ಅನುಕೂಲವಾಗಲೆಂದೇ ಸಾಕಷ್ಟು ದಿನಗಳ ಮುಂಚೆಯೇ ಎಲ್ಲ ಬೀಜಗಳ ದಾಸ್ತಾನು ಮಾಡಲಾಗಿತ್ತು. ಆದರೆ ಮಳೆಯಾಗದೇ ಇದ್ದುದರಿಂದ ರೈತರು ಬೀಜ ಖರೀದಿ ಮಾಡಲು ಬಂದಿರಲಿಲ್ಲ. ಆದರೆ ಎರಡು ದಿನಗಳಿಂದ ಮಳೆಯ ವಾತಾವರಣ ಕಂಡು ಬರುತ್ತಿರುವುದರಿಂದಾಗಿ ಎಲ್ಲ ರೈತರೂ ಒಮ್ಮೆಲೇ ಬೀಜಕ್ಕೆ ಬರುತ್ತಿರುವದರಿಂದ ನೂಕು ನುಗ್ಗಲು ಉಂಟಾಗುತ್ತಿದೆ ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ತಿಳಿಸಿದರು.ಬುಧವಾರ ಸುಮಾರು 4 ಲಕ್ಷ ರೂ. ಬೀಜದ ವಹಿವಾಟು ನಡೆದಿದ್ದರೆ ಸೋಮವಾರ ಒಂದೇ ದಿನದಲ್ಲಿ ರೂ.8 ಲಕ್ಷ ಗಳಿಗೂ ಅಧಿಕ ಪ್ರಮಾಣದಲ್ಲಿ ಬಿತ್ತನೆ ಬೀಜ ಮಾರಾಟವಾಗಿದೆ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಎಂ.ಎನ್.ಚಲವಾದಿ ತಿಳಿಸಿದರು.ಧಾನ್ಯ, ಕಾವೇರಿ, ಗಂಗಾ ಕಾವೇರಿ, ಶಕ್ತಿ, ಸೂಪರ್‌ಸೀಡ್, ಮುಂತಾದ ಕಂಪನಿಗಳ ಸಜ್ಜಿ, ಸೂರ್ಯಕಾಂತಿ, ಮೆಕ್ಕೆ ಜೋಳ,  ಬೀಜಗಳನ್ನು ವಿತರಿಸಲಾಗುತ್ತಿದೆ. ಸಾಕಷ್ಟು ಬೀಜ ದಾಸ್ತಾನು ಇದೆ ಯಾವ ರೈತರು ಆತುರ ಮಾಡುವ ಅವಶ್ಯಕತೆ ಇಲ್ಲ ಎಂದು ಅವರು ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.