ಭಾನುವಾರ, ಮೇ 9, 2021
19 °C

ಬಿದರಿ ಪ್ರಕರಣ: ಪತ್ರಿಕೆಗಳ ವಿರುದ್ಧ ನ್ಯಾಯಾಂಗ ನಿಂದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ಶಂಕರ ಬಿದರಿ ಅವರನ್ನು ನೇಮಕ ಮಾಡಿ ಹೊರಡಿಸಿದ್ದ ಆದೇಶವನ್ನು ರದ್ದು ಮಾಡಿದ್ದ ಹೈಕೋರ್ಟ್ ತೀರ್ಪಿನ ಬಗ್ಗೆ ಅವಹೇಳನಕಾರಿ ಟೀಕೆ ಮಾಡಿರುವ ಆರೋಪದ ಮೇಲೆ 3 ಪತ್ರಿಕೆಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿ ಹೈಕೋರ್ಟ್ ಬುಧವಾರ ಆದೇಶಿಸಿದೆ.`ಟೈಮ್ಸ ಆಫ್ ಇಂಡಿಯಾ~ದ ವ್ಯವಸ್ಥಾಪಕ ನಿರ್ದೇಶಕ ವಿನೀತ್ ಜೈನ್, `ಹಿಂದುಸ್ತಾನ್ ಟೈಮ್ಸ~ನ ಅಧ್ಯಕ್ಷೆ ಶೋಭನಾ ಭಾರ್ತಿ, `ಕನ್ನಡಪ್ರಭ~ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಹಾಗೂ ವರದಿಗಾರ ಪ್ರತಾಪ ಸಿಂಹ ಅವರ ವಿರುದ್ಧ ನರೇಂದ್ರ ಡಿ.ವಿ. ಗೌಡ ಹಾಗೂ ಇತರರು ಸಲ್ಲಿಸಿರುವ ನ್ಯಾಯಾಂಗ ನಿಂದನೆಯ ಕ್ರಿಮಿನಲ್ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಹುಲುವಾಡಿ ಜಿ. ರಮೇಶ್ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.`ಕನ್ನಡಪ್ರಭ~ ಪತ್ರಿಕೆಯಲ್ಲಿ ತೀರ್ಪಿನ ವಿರುದ್ಧ ಅವಹೇಳನಕಾರಿ ಟೀಕೆ ಮಾಡಲಾಗಿದೆ. ಉಳಿದ ಎರಡು ಪತ್ರಿಕೆಗಳು ತಮ್ಮ ವೆಬ್‌ಸೈಟ್‌ನಲ್ಲಿ ತೀರ್ಪಿನ ವಿರುದ್ಧ ಹೇಳಿಕೆ ನೀಡಿ, ಸಾರ್ವಜನಿಕರಿಂದ ಪ್ರತಿಕ್ರಿಯೆಗೆ ಆಹ್ವಾನಿಸಿವೆ~ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.`ತೀರ್ಪಿನ ಪ್ರತಿ ಸಿಗುವ ಮುನ್ನವೇ, ಅದರಲ್ಲಿ ಬಿದರಿ ಅವರ ವಿರುದ್ಧ ಹೈಕೋರ್ಟ್ ಮಾಡಿರುವ ಟೀಕೆಗಳು ಏಕೆ ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಉದ್ದೇಶಪೂರ್ವಕವಾಗಿ ನ್ಯಾಯಾಂಗದ ಬಗ್ಗೆ ತಪ್ಪು ಕಲ್ಪನೆ ಮೂಡಿಸುವಂತಹ ಸುದ್ದಿ ಪ್ರಕಟವಾಗಿದೆ. ನ್ಯಾಯಾಂಗಕ್ಕಿಂತ ತಮಗೇ ಎಲ್ಲವೂ ಗೊತ್ತು, ತಾವು ಸಮಾಜ ಸುಧಾಕರು ಎಂಬಂತೆ ಕನ್ನಡಪ್ರಭ ಪತ್ರಿಕೆಯು ಮುಖಪುಟದಲ್ಲಿಯೇ ಸುದ್ದಿ ಪ್ರಕಟಿಸಿದೆ~ ಎನ್ನುವುದು ಅರ್ಜಿದಾರರ ದೂರು.ಶಂಕರ ಬಿದರಿ ಅವರು ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ `ನರಹಂತಕ ವೀರಪ್ಪನ್ ಕಾರ್ಯಾಚರಣೆ ವೇಳೆ ನಾನು ಗಡಾಫಿ ಅಥವಾ ಸದ್ದಾಂ ಹುಸೇನ್‌ನಂತೆ ಸರ್ವಾಧಿಕಾರ ಮೆರೆದಿಲ್ಲ~ ಎಂದಿದ್ದರು. ಈ ಕಾರ್ಯಾಚರಣೆ ವೇಳೆ ಅಮಾಯಕ ಮಹಿಳೆಯರ ಮೇಲೆ ನಡೆದ ಅತ್ಯಾಚಾರ, ಅನಾಹುತಗಳನ್ನು ಮನಗಂಡ ನ್ಯಾಯಮೂರ್ತಿಗಳು, ತಮ್ಮ ತೀರ್ಪಿನಲ್ಲಿ `ಇವೆಲ್ಲ ನಿಜವೇ ಆಗಿದ್ದರೆ ಬಿದರಿ ಅವರು ಗಡಾಫಿ, ಸದ್ದಾಂಗಿಂತ ಕಡೆ~ ಎಂದಿದ್ದರು. ಆದರೆ ಪ್ರಮಾಣ ಪತ್ರದ ವಿಷಯ ಪ್ರಸ್ತಾಪಿಸದೆಯೇ ನ್ಯಾಯಮೂರ್ತಿಗಳೇ ಖುದ್ದಾಗಿ ಈ ರೀತಿ ಹೇಳಿದ್ದಾರೆ ಎಂಬಂತೆ ಅರ್ಥ ಕಲ್ಪಿಸಿ ಪತ್ರಿಕೆಗಳು ಸುದ್ದಿ ಪ್ರಕಟಿಸಿವೆ ಎನ್ನುವುದು ಆರೋಪ. ವಿಚಾರಣೆಯನ್ನು ಮುಂದೂಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.