ಸೋಮವಾರ, ಮೇ 23, 2022
24 °C

ಬಿದಿರಿನಿಂದ ವಿದ್ಯುತ್ ಉತ್ಪಾದನೆ: 30 ಸಾವಿರ ಎಕರೆ ಪ್ರದೇಶದಲ್ಲಿ ಪ್ರಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿದಿರಿನಿಂದ ವಿದ್ಯುತ್ ಉತ್ಪಾದನೆ: 30 ಸಾವಿರ ಎಕರೆ ಪ್ರದೇಶದಲ್ಲಿ ಪ್ರಯೋಗ

ಬೆಂಗಳೂರು: ವಿದ್ಯುತ್ ಉತ್ಪಾದನೆಗೆ ಬಳಸುವ ಉದ್ದೇಶದಿಂದ ಚನ್ನಪಟ್ಟಣ ತಾಲ್ಲೂಕಿನ ಅಂದಾಜು 30 ಸಾವಿರ ಎಕರೆ ಪ್ರದೇಶದಲ್ಲಿ `ಭೀಮಾ~ ತಳಿಯ ಬಿದಿರು ಬೆಳೆಯಲು ಅನುಮತಿ ನೀಡಬೇಕು ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅರಣ್ಯ ಸಚಿವ ಸಿ.ಪಿ. ಯೋಗೇಶ್ವರ್ ತಿಳಿಸಿದರು.

ಭೀಮಾ ತಳಿಯ ಬಿದಿರನ್ನು ಖಾಸಗಿ ಜಮೀನಿನಲ್ಲೂ ಬೆಳೆಸಲು ಪ್ರೋತ್ಸಾಹ ನೀಡಲಾಗುವುದು. ಈ ಕುರಿತಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರ ಜೊತೆಗೂ ಮಾತುಕತೆ ನಡೆಸಲಾಗಿದೆ. ಒಂದು ಸಾವಿರ ಎಕರೆ ಪ್ರದೇಶದಲ್ಲಿ ಬೆಳೆಯುವ ಬಿದಿರು ಬಳಸಿ ಅಂದಾಜು 5 ಮೆಗಾ ವಾಟ್ ವಿದ್ಯುತ್ ಉತ್ಪಾದಿಸಬಹುದು ಎಂದು ಅವರು ವಿಧಾನಸೌಧದಲ್ಲಿ ಮಂಗಳವಾರ ಹೇಳಿದರು.

`ಕಾನು ಅರಣ್ಯ ವಿಶೇಷ ಸಂರಕ್ಷಣಾ ಯೋಜನೆ~ ಹಾಗೂ `ಹಸಿರು ಆರೋಗ್ಯ ಅಭಿಯಾನ~ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, `ಬಿದಿರನ್ನು ಬಳಸಿ ಸಕ್ಕರೆ ಕಾರ್ಖಾನೆಗಳಲ್ಲಿ ವಿದ್ಯುತ್ ಉತ್ಪಾದನೆ ಸಾಧ್ಯವಿದೆ. ಈ ತಳಿಯ ಬಿದಿರನ್ನು ರಾಜ್ಯದಲ್ಲಿ ಎಷ್ಟು ಪ್ರಮಾಣದಲ್ಲಿ ಬೆಳೆಸಬಹುದು, ಒಟ್ಟಾರೆ ಎಷ್ಟು ವಿದ್ಯುತ್ ಉತ್ಪಾದಿಸಬಹುದು ಎಂಬ ಅಂಕಿ-ಅಂಶಗಳನ್ನು ಶೀಘ್ರವೇ ಅಂದಾಜಿಸಲಾಗುವುದು~ ಎಂದರು.

ಅರಣ್ಯೀಕರಣಕ್ಕೆ ಇನ್ನೂ ಒಳಪಡದ ಭೂಮಿಯಲ್ಲಿ ಈ ಬಿದಿರನ್ನು ಬೆಳೆಸುವ ಬಗ್ಗೆ ಚರ್ಚಿಸಲಾಗಿದೆ. ಮುಂಡರಗಿಯ ಮಹೇಶ್ ಗೌಡ ಎಂಬುವವರು ಬಿದಿರು ಬಳಸಿ ಇನ್ನು ಕೆಲವೇ ದಿನಗಳಲ್ಲಿ ವಿದ್ಯುತ್ ಉತ್ಪಾದನೆ ಆರಂಭಿಸಲಿದ್ದಾರೆ. ಒಂದು ಯೂನಿಟ್ ವಿದ್ಯುತ್ ಉತ್ಪಾದನೆಗೆ ಅಂದಾಜು 1.5 ರೂಪಾಯಿ ವೆಚ್ಚವಾಗುತ್ತದೆ ಎಂದು ಮಾಹಿತಿ ನೀಡಿದರು.

ಒಂದು ಎಕರೆ ಪ್ರದೇಶದಲ್ಲಿ ಅಂದಾಜು 30ರಿಂದ 40 ಟನ್ ಬಿದಿರು ಬೆಳೆಯಬಹುದು. ಪ್ರತಿ ಟನ್ ಬಿದಿರಿಗೆ ಮಾರುಕಟ್ಟೆಯಲ್ಲಿ 2 ಸಾವಿರ ರೂಪಾಯಿ ಬೆಲೆ ಇರುವ ಕಾರಣ, ರೈತರಿಗೂ ಇದನ್ನು ಬೆಳೆಯಲು ಪ್ರೋತ್ಸಾಹಿಸಲಾಗುವುದು ಎಂದರು.

`ಜಾರಿಗೆ ಬದ್ಧ~: ಕಾನು ಅರಣ್ಯಗಳ ಸಂರಕ್ಷಣೆಯ ಉದ್ದೇಶದಿಂದ ಪಶ್ಚಿಮ ಘಟ್ಟ ಕಾರ್ಯಪಡೆ ನೀಡಿರುವ ವರದಿಯಲ್ಲಿರುವ ಶಿಫಾರಸುಗಳ ಅನುಷ್ಠಾನಕ್ಕೆ ಸರ್ಕಾರ ಬದ್ಧ ಎಂದು ಹೇಳಿದರು.

ರಾಜ್ಯದಲ್ಲಿ ನೂರು ವರ್ಷಗಳ ಹಿಂದೆ ಇದ್ದ ಕಾನು ಅರಣ್ಯದ ಪೈಕಿ ಈಗ ಶೇಕಡ 10ರಷ್ಟೂ ಉಳಿದಿಲ್ಲ. ಈ ಅರಣ್ಯದ ಸಾಕಷ್ಟು ಭಾಗ ಇನ್ನೂ ಕಂದಾಯ ಇಲಾಖೆಯ ಸುಪರ್ದಿಯಲ್ಲೇ ಇದೆ.

ಸಂರಕ್ಷಣೆಯ ಉದ್ದೇಶದಿಂದ ಇದನ್ನು ಅರಣ್ಯ ಇಲಾಖೆಯ ಸುಪರ್ದಿಗೆ ವಹಿಸಬೇಕು ಎನ್ನುವುದೂ ಸೇರಿದಂತೆ ಕಾರ್ಯಪಡೆ ಒಟ್ಟು 20 ಶಿಫಾರಸುಗಳನ್ನು ಸಲ್ಲಿಸಿದೆ ಎಂದರು. ಕಾರ್ಯಪಡೆಯ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.