ಭಾನುವಾರ, ಜನವರಿ 19, 2020
23 °C

ಬಿಬಿಎಂಪಿ: ಅಂಗಡಿಗಳ ತೆರವು,ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಸವನಗುಡಿಯ ಗಾಂಧಿ ಬಜಾರ್ ಪಾದಚಾರಿ ಮಾರ್ಗದಲ್ಲಿದ್ದ ಅಂಗಡಿಗಳನ್ನು ಬಿಬಿಎಂಪಿ ಸಿಬ್ಬಂದಿ ರಾತ್ರೋರಾತ್ರಿ ತೆರವುಗೊಳಿಸಿದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಮಂಗಳವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದರು.ಅಧಿಕಾರಿಗಳು ಯಾವುದೇ ಮಾಹಿತಿ ನೀಡದೆ ಅಂಗಡಿಗಳನ್ನು ತೆರವು ಮಾಡಿದ್ದಾರೆ. ಅಂಗಡಿಯಲ್ಲಿದ್ದ ಹೂವು, ಹಣ್ಣು, ತರಕಾರಿಗಳನ್ನು ತೆಗೆದು ಕೊಂಡು ಹೋಗಿದ್ದಾರೆ. ಇದಕ್ಕೆ ಪರಿಹಾರ ನೀಡಬೇಕು ಮತ್ತು ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.`ಮೂರು ತಲೆಮಾರಿನಿಂದ ಇಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. ತಾತ, ಅಪ್ಪ ಎಲ್ಲರೂ ವ್ಯಾಪಾರಿಗಳಾಗಿದ್ದರು. ವ್ಯಾಪಾರದ ಹಣದಿಂದಲೇ ಜೀವನ ನಡೆಯುತ್ತಿದೆ. ಬೇರೆ ವೃತ್ತಿಯೂ ಗೊತ್ತಿಲ್ಲ. ಬಿಬಿಎಂಪಿ ಸಿಬ್ಬಂದಿ ದಿಢೀರ್ ಅಂಗಡಿ ತೆರವು ಮಾಡಿರುವುದು ಸರಿಯಲ್ಲ. ವ್ಯಾಪಾರ ಇಲ್ಲದಿದ್ದರೆ ಇಡೀ ಕುಟುಂಬವೇ ಬೀದಿಗೆ ಬರಬೇಕಾಗುತ್ತದೆ. ಆದ್ದರಿಂದ ಅಂಗಡಿ ನಡೆಸಲು ಅವಕಾಶ ನೀಡಬೇಕು~ ಎಂದು ಹೂ ವ್ಯಾಪಾರಿ ನಾಗರತ್ನ `ಪ್ರಜಾವಾಣಿ~ಗೆ ತಿಳಿಸಿದರು.`ವರ್ಷಕ್ಕೆ ಒಂದು ಸಾರಿ ಅಂಗಡಿ ತೆಗೆಸುತ್ತಿದ್ದರು. ಆ ನಂತರ ಮತ್ತೆ ವ್ಯಾಪಾರಕ್ಕೆ ಅವಕಾಶ ನೀಡುತ್ತಿದ್ದರು. ಆದರೆ ಈ ಬಾರಿ ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿ ಪುಟ್ಟ ಅಂಗಡಿಗಳನ್ನು ನೆಲಸಮ ಮಾಡಿದ್ದಾರೆ.ಅಂಗಡಿಯಲ್ಲಿದ್ದ ವಸ್ತುಗಳನ್ನೂ ತೆಗೆದುಕೊಂಡು ಹೋಗಿದ್ದಾರೆ. ಇದ ರಿಂದಾಗಿ ನಷ್ಟವಾಗಿದೆ .  ಸುಮಾರು ಐವತ್ತು ವರ್ಷದಿಂದ ಇಲ್ಲಿ ವ್ಯಾಪಾರ ಮಾಡುತ್ತಿದ್ದೇನೆ. ಈಗ ಏಕಾಏಕಿ ಅಂಗಡಿ ತೆರವು ಮಾಡಿದರೆ ಜೀವನ ನಿರ್ವಹಣೆ ಮಾಡುವುದು ಹೇಗೆ~ ಎಂದು ಹೂ ವ್ಯಾಪಾರಿ ಸರಸ್ವತಿ ಪ್ರಶ್ನಿಸಿದರು.`ಎಲ್ಲ ವ್ಯವಸ್ಥೆ ಇರುವ ಮಾರುಕಟ್ಟೆ ನಿರ್ಮಿಸಲಾಗುತ್ತದೆ ಎಂದು ಹಲವು ವರ್ಷಗಳಿಂದ ಭರವಸೆ ನೀಡುತ್ತಿದ್ದಾರೆ. ಆದರೆ ಮಾರುಕಟ್ಟೆ ನಿರ್ಮಿಸಿಲ್ಲ. ಮಾರುಕಟ್ಟೆ ನಿರ್ಮಾಣಕ್ಕೆಂದು ಸರ್ವೆ ಸಂಖ್ಯೆ 176 ಮತ್ತು 177ರ ಜಾಗದಲ್ಲಿ ಶಂಕು ಸ್ಥಾಪನೆ ಮಾಡಲಾಗಿತ್ತು. ಅದರೆ ನಿರ್ಮಾಣ ಕಾರ್ಯ ಆರಂಭವಾಗಿಲ್ಲ. ವ್ಯಾಪಾರವೇ ನಮ್ಮ ಜೀವನಕ್ಕೆ ಆಧಾರ. ಅದನ್ನೇ ತೆರವುಗೊಳಿಸಿದರೆ ಕಷ್ಟವಾಗುತ್ತದೆ~ ಎಂದು ವ್ಯಾಪಾರಿ ರವಿ ಹೇಳಿದರು.ಪ್ರತಿ ದಿನ ಸಾಲ ಮಾಡಿ ಬಂಡವಾಳ ಹಾಕಿ ವ್ಯಾಪಾರ ಮಾಡುತ್ತಿದ್ದೆವು. ಅಂಗಡಿ ತೆರವು ಮಾಡುವ ಭರದಲ್ಲಿ ಕೈಗಾಡಿ, ಅಂಗಡಿಯಲ್ಲಿದ್ದ ಹೂ, ಹಣ್ಣು, ತರಕಾರಿ ಮತ್ತಿತರ ವಸ್ತುಗಳನ್ನೂ ತೆಗೆದುಕೊಂಡು ಹೋಗಿದ್ದಾರೆ. ನಾವು ಬೀದಿಗೆ ಬಂದಿದ್ದೇವೆ ಎಂದು ವ್ಯಾಪಾರಿಗಳು ತಮ್ಮ ಅಳಲು ತೋಡಿಕೊಂಡರು. ಪ್ರತಿಭಟನೆ ಹಿನ್ನೆಲೆಯಲ್ಲಿ ಗಾಂಧಿ ಬಜಾರ್ ರಸ್ತೆಯಲ್ಲಿ ಸಂಚಾರಕ್ಕೆ ಸ್ವಲ್ಪ ಅಡಚಣೆ ಆಗಿತ್ತು. 

 

ಪ್ರತಿಕ್ರಿಯಿಸಿ (+)