ಬುಧವಾರ, ಏಪ್ರಿಲ್ 14, 2021
31 °C

ಬಿಬಿಎಂಪಿ ಕಚೇರಿ ಮುಂದೆ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲಹಂಕ: ಬಿಬಿಎಂಪಿ ಯಲಹಂಕ ವಲಯ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಯಪಾಲಕ ಎಂಜಿನಿಯರ್ ಎ.ಜಿ.ರಂಗಯ್ಯ ಅವರು ಸಾರ್ವಜನಿಕರ ಸಮಸ್ಯೆಗಳಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ, ಪ್ರಜಾ ವಿಮೋಚನಾ ಚಳವಳಿ (ಸಮತಾವಾದ) ಬೆಂಗಳೂರು ಉತ್ತರ ತಾಲ್ಲೂಕು ಶಾಖೆಯ ಕಾರ್ಯಕರ್ತರು ಇಲ್ಲಿನ ಬಿಬಿಎಂಪಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.ಸಂತೆ ವೃತ್ತದಿಂದ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ಬಿಬಿಎಂಪಿ ಕಚೇರಿ ಮುಂಭಾಗಕ್ಕೆ ಬಂದು ಸಭೆ ನಡೆಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪಿವಿಸಿ ರಾಜ್ಯ ಘಟಕದ ಅಧ್ಯಕ್ಷ ಮುನಿ ಆಂಜಿನಪ್ಪ, ಹಲವಾರು ಸಮಸ್ಯೆಗಳನ್ನು ಹೊತ್ತು ಅರ್ಜಿಯೊಂದಿಗೆ ಕಚೇರಿಗೆ ಬರುವ ಅಸಹಾಯಕ ವರ್ಗದ ಜನರ  ಜೊತೆಗೆ ಕಾರ್ಯಪಾಲಕ ಎಂಜಿನಿಯರ್ ಎ.ಜಿ.ರಂಗಯ್ಯ ಅವರು ಸೌಜನ್ಯದಿಂದ ವರ್ತಿಸಿ, ಸಮಸ್ಯೆಗಳನ್ನು ಬಗೆಹರಿಸದೆ  ವಿನಾಕಾರಣ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.ಪರಿಶಿಷ್ಟ ಜಾತಿಯ ವರ್ಗದ ಜನರನ್ನು ನಿಂದಿಸಿದ ಆರೋಪದ ಮೇಲೆ  ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ ಸಹ  ಮೊದಲಿನಂತೆ ತಮ್ಮ ದೌರ್ಜನ್ಯವನ್ನು ಮುಂದುವರಿಸಿದ್ದಾರೆ. ಆದುದರಿಂದ ಕೂಡಲೆ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದ ಅವರು, ತಪ್ಪಿದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಬಿಬಿಎಂಪಿ ಸದಸ್ಯ ವೈ.ಎನ್.ಅಶ್ವತ್ಥ್ ಸ್ಥಳಕ್ಕೆ ಆಗಮಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಕಂದಾಯ ಅಧಿಕಾರಿ ಕರಿಯಣ್ಣ ಅವರು ಮನವಿ ಸ್ವೀಕರಿಸಿದರು. ಸಂಘಟನೆಯ ಉತ್ತರ ತಾಲ್ಲೂಕು ಅಧ್ಯಕ್ಷ ಮುನಿತಾಯಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಎನ್. ಮುನಿರಾಜು, ಬಿಬಿಎಂಪಿ ಶಾಖೆ ಉಪಾಧ್ಯಕ್ಷ ಕೆ.ಎಸ್.ಸ್ವಾಮಿ ಮೊದಲಾದವರು ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.