ಬಿಬಿಎಂಪಿ ಮುಂದೆ ಗುತ್ತಿಗೆದಾರರ ಪ್ರತಿಭಟನೆ

7
ಕಾಮಗಾರಿಗಳ ಬಾಕಿ ಹಣ ಬಿಡುಗಡೆಗೆ ಒತ್ತಾಯ

ಬಿಬಿಎಂಪಿ ಮುಂದೆ ಗುತ್ತಿಗೆದಾರರ ಪ್ರತಿಭಟನೆ

Published:
Updated:
ಬಿಬಿಎಂಪಿ ಮುಂದೆ ಗುತ್ತಿಗೆದಾರರ ಪ್ರತಿಭಟನೆ

ಬೆಂಗಳೂರು: ಕಾಮಗಾರಿಗಳ ಬಾಕಿ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬಿಬಿಎಂಪಿ ಗುತ್ತಿಗೆದಾರರ ಸಂಘದ ಸದಸ್ಯರು ಪಾಲಿಕೆಯ ಕೇಂದ್ರ ಕಚೇರಿಯ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಆರ್.ಜೆ.ಶ್ರೀನಿವಾಸ್, `ಬಿಬಿಎಂಪಿ 13 ತಿಂಗಳಿಂದ ರಸ್ತೆ, ಉದ್ಯಾನ, ಬೀದಿ ದೀಪಗಳ ನಿರ್ವಹಣೆಯ ಸುಮಾರು ಎರಡೂ ಮುಕ್ಕಾಲು ಸಾವಿರ ಕಾಮಗಾರಿಗಳ ಬಿಲ್ ಪಾವತಿಸಿಲ್ಲ. ಗುತ್ತಿಗೆದಾರರಿಗೆ ಬರಬೇಕಾದ ರೂ1,500 ಕೋಟಿ ಹಣವನ್ನು ಬಿಡುಗಡೆ ಮಾಡಲು ಪಾಲಿಕೆ ವಿಳಂಬ ಮಾಡುತ್ತಿದೆ. ಕಾಮಗಾರಿ ಪೂರ್ಣಗೊಂಡು ಗುಣಮಟ್ಟ ಪರೀಕ್ಷೆಯ ವರದಿ ಬಂದ ನಂತರವೂ ಬಿಬಿಎಂಪಿ ಗುತ್ತಿಗೆ ಹಣ ಬಿಡುಗಡೆ ಮಾಡಲು ವಿಳಂಬ ಧೋರಣೆ ಅನುಸರಿಸುತ್ತಿದೆ. ಇದರಿಂದ ಮುಂದಿನ ಕಾಮಗಾರಿ ನಡೆಸಲು ಗುತ್ತಿಗೆದಾರರಿಗೆ ತೊಂದರೆಯಾಗುತ್ತಿದೆ' ಎಂದು ದೂರಿದರು.`ಬಾಕಿ ಹಣ ಬಿಡುಗಡೆ ಮಾಡುವಂತೆ ಆಯುಕ್ತರಿಗೆ ಅನೇಕ ಬಾರಿ ಮನವಿ ಮಾಡಿದ್ದೇವೆ. ಆದರೆ, ಆಯುಕ್ತರು ನಮ್ಮ ಮನವಿಗೆ ಸ್ಪಂದಿಸುತ್ತಿಲ್ಲ. ಕೋಟ್ಯಂತರ ರೂಪಾಯಿ ಬಾಕಿ ಹಣ ಬಿಡುಗಡೆಯಾಗದೇ ನೌಕರರಿಗೆ ಸಂಬಳ ನೀಡುವುದೂ ಕಷ್ಟವಾಗುತ್ತಿದೆ. ಹೀಗಾಗಿ ಬಾಕಿ ಹಣ ಬಿಡುಗಡೆಯಾಗುವವರೆಗೂ ಕಾಮಗಾರಿಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿಯವರು ಮಧ್ಯ ಪ್ರವೇಶಿಸಿ ಬರಬೇಕಾದ ಬಾಕಿ ಹಣವನ್ನು ಬಿಡುಗಡೆ ಮಾಡಿಸಬೇಕು' ಎಂದು ಅವರು ಒತ್ತಾಯಿಸಿದರು.`ನಗರದಲ್ಲಿ ರಸ್ತೆ ನಿರ್ಮಾಣ, ಉದ್ಯಾನ, ಬೀದಿ ದೀಪಗಳ ನಿರ್ವಹಣೆ ಸೇರಿದಂತೆ ಸಾವಿರಾರು ಕಾಮಗಾರಿಗಳ ಬಿಲ್ ಬಾಕಿ ಉಳಿಸಿಕೊಂಡಿರುವ ಬಿಬಿಎಂಪಿ ಹಳೆಯ ಬಿಲ್‌ಗಳನ್ನು ಪಾವತಿಸದೆ ಹೊಸದಾಗಿ ಟೆಂಡರ್‌ಗಳನ್ನು ಕರೆಯುತ್ತಿದೆ. ಬಿಬಿಎಂಪಿ ಸದಸ್ಯರ ಒತ್ತಡಕ್ಕೆ ಮಣಿದು ಹೊಸದಾಗಿ ಟೆಂಡರ್‌ಗಳನ್ನು ಕರೆಯಲಾಗುತ್ತಿದೆ. ಮೊದಲು ಒಂದು ವರ್ಷದಿಂದ ಬಾಕಿ ಉಳಿಸಿಕೊಂಡಿರುವ ಬಿಲ್‌ಗಳನ್ನು ಪಾವತಿಸಬೇಕು. ನಂತರ ಹೊಸ ಟೆಂಡರ್ ಕರೆಯಲು ಬಿಬಿಎಂಪಿ ಮುಂದಾಗಬೇಕು' ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಅಂಬಿಕಾಪತಿ ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry