ಸೋಮವಾರ, ಜನವರಿ 27, 2020
27 °C

ಬಿವಿವಿ ಸಂಘದ ಅವ್ಯವಹಾರ ಸಾಬೀತು: ಟಿ.ಎಂ. ಹುಂಡೇಕರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ‘ಬಸವೇಶ್ವರ ವಿದ್ಯಾ­ವರ್ಧಕ ಸಂಘದಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆದಿದೆ, ನಡೆಯುತ್ತಿದೆ ಎಂದು ಇಲ್ಲಿಯವರೆಗೆ ನಾನು ಪ್ರತಿಪಾದಿಸುತ್ತ ಬಂದ ಸಂಗತಿಗಳಲ್ಲಿ ನಿಜಾಂಶ ಇದೆ ಎಂಬುದು ಐಟಿ ದಾಳಿಯಿಂದ ಸಾಬೀತಾಗಿದೆ’ ಎಂದು ಜಿಲ್ಲಾ ಪುನರ್ವಿಂಗಡಣೆ ಸಮಿತಿ ಮಾಜಿ ಅಧ್ಯಕ್ಷ ಟಿ.ಎಂ.ಹುಂಡೇಕರ ತಿಳಿಸಿದರು.‘ಬಿವಿವಿ ಸಂಘದ ವ್ಯವಹಾರಗಳು ಪಾರದರ್ಶಕವಾಗಿದ್ದರೆ ಸಂಘದ ಕಚೇರಿ ಮೇಲೆ ದಾಳಿಯ ಪ್ರಸಂಗ ಬರುತ್ತಿರಲಿಲ್ಲ’ ಎಂದು ಅವರು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.‘ಶತಮಾನದ ಇತಿಹಾಸ ಇರುವ ಸಂಘದ ಕಾರ್ಯಾಲಯ ಮತ್ತು ಬೀಳೂರು ಪತ್ತಿನ ಸಹಕಾರ ಸಂಘದ ಕಚೇರಿಗಳ ಮೇಲೆ ಈಚೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವುದರಿಂದ ಸಂಘದ ಘನತೆಗೆ ಕಳಂಕ ಬಂದಂತಾಗಿದೆ’ ಎಂದರು.‘ಸಂಘ ಮತ್ತು ಪತ್ತಿನ ಸಹಕಾರ ಸಂಘದ ಮೇಲಿನ ದಾಳಿ ಪ್ರಕ್ರಿಯೆ ಇಂದಿಗೂ ನಿಂತಿಲ್ಲ, ಐಟಿ ಅಧಿಕಾರಿಗಳು ಅಗತ್ಯ ದಾಖಲೆಗಳನ್ನು, ಲೆಕ್ಕಪತ್ರಗಳನ್ನು ವಶಪಡಿಸಿಕೊಂಡು ತನಿಖೆ ಪ್ರಕ್ರಿಯೆಯನ್ನು ಚುರುಕುಗೊಳಿಸಿದ್ದಾರೆ’ ಎಂದು ಹೇಳಿದರು.‘ಸಂಘ ನಡೆಸುತ್ತಿರುವ ವೈದ್ಯಕೀಯ, ದಂತವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣ ಸಂಸ್ಥೆ ಮತ್ತು ಎಂಜಿನಿಯರಿಂಗ್‌ ಕಾಲೇಜು ಮತ್ತು ವೃತ್ತಿ ತರಗತಿಗಳಿಗೆ ಡೊನೇಷನ್‌ ಕೊಟ್ಟು ಸೀಟು ಗಿಟ್ಟಿಸಿದ ಅಭ್ಯರ್ಥಿಗಳ ಪೋಷಕರಿಗೆ ತೆರಿಗೆ ಇಲಾಖೆ ಅಧಿಕಾರಿಗಳು ನೋಟಿಸ್‌ ಕಳುಹಿಸಿ, ಹಣದ ಮೂಲ ಸಂಪಾದನೆಯ ವಿವರಗಳನ್ನು ಕೇಳಿದೆ’ ಎಂದು ಹೇಳಿದರು.‘ಸಂಘದ ಚುಕ್ಕಾಣಿ ಹಿಡಿದಿರುವ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಕಾನೂನುಬಾಹಿರವಾಗಿ ನಡೆಸಿದ ದುರಾಡಳಿತದಿಂದ ಸಂಘಕ್ಕೆ ಅಪಾರ ನಷ್ಟ ಸಂಭವಿಸಿದೆ. ಸಂಘದ ಹಿತಾಸಕ್ತಿಗೆ ಧಕ್ಕೆ ಬಂದಿದೆ. ಸಂಘಕ್ಕೆ ಆಗುವ ಸಂಭವನೀಯ ನಷ್ಟಕ್ಕೆ ಚರಂತಿಮಠ ಅವರೇ ಹೊಣೆಗಾರರು, ಅದಕ್ಕಾಗಿ ಅವರ ಸಂಘದ ಸದಸ್ಯತ್ವವನ್ನು ರದ್ದುಪಡಿಸಬೇಕು’ ಎಂದು ಆಗ್ರಹಿಸಿದರು.

ಪ್ರತಿಕ್ರಿಯಿಸಿ (+)