ಶುಕ್ರವಾರ, ಮೇ 27, 2022
30 °C

ಬಿಸಿಲ ನಾಡಲ್ಲಿ ಹೋಳಿಯ ರಂಗಿನಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಮೈ-ಸುಡುವ ಬಿಸಿಲ ನಾಡು ಬಳ್ಳಾರಿಯಲ್ಲಿ ಹೋಳಿ.. ಹೋಳಿ.. ಹೋಳಿರೇ ಎಂಬಂತೆ ಬಣ್ಣದ ರಂಗಿನಾಟವು ಭಾನುವಾರ ನಡೆಯಿತು. ನಗರದ ಗಾಂಧಿನಗರ, ಸತ್ಯನಾರಾಯಣ ಪೇಟೆ, ಪಟೇಲ ನಗರ, ಬಸವೇಶ್ವರ ನಗರ ಸೇರಿ ಹಲವು ಕಡೆಗೆ ಚಿಣ್ಣರು, ಗೃಹಿಣಿಯರು, ಯುವಕ, ಯುವತಿಯರು ಪರಸ್ಪರ ಅತ್ಮೀಯತೆಯಿಂದ ಬಣ್ಣದ ರಂಗಿನಾಟದಲ್ಲಿ ತೊಡಗಿದ್ದರು.ಶಾಲಾ-ಕಾಲೇಜುಗಳಿಗೆ ರಜಾ ದಿನವಾದ ಭಾನುವಾರ ಬೆಳಿಗ್ಗೆಯಿಂದಲೇ ಪ್ರಮುಖ ಬೀದಿಗಳಲ್ಲಿ ಬಣ್ಣದ ಸಾಮಗ್ರಿಗಳನ್ನು ಹಿಡಿದು ಬೀದಿಗಿಳಿದವರು ರಣರಣ ಬಿಸಿಲನ್ನೇ ಲೆಕ್ಕಿಸದೆ ಪರಸ್ಪರ ಬಣ್ಣ ಲೇಪಿಸುವ ದೃಶ್ಯಗಳು ಅಲ್ಲಲ್ಲಿ ಕಂಡುಬಂದವು. ಯುವಕ, ಯುವತಿಯರು ಬಣ್ಣದ ಆಟವಾಡುವುದು ಸಾಮಾನ್ಯ. ಆದರೆ, ಚಿಣ್ಣರ ಕೈಯಲ್ಲಿ ಬಣ್ಣದ ಬಾಟಲು ಹಿಡಿದುಕೊಂಡು ತಮ್ಮ ಸ್ನೇಹಿತ, ಸ್ನೇಹಿತೆಯರಿಗೆ ಬಣ್ಣ ಲೇಪನ ಮಾಡಿ, ಪ್ರಮುಖ ಬೀದಿಯಲ್ಲಿ ಬಣ್ಣದ ಕಲರವ ಆರಂಭವಾದಂತೆ ಭಾಸವಾಗಿತ್ತು.ಸಂಭ್ರಮದ ಆಚರಣೆ


ಕೂಡ್ಲಿಗಿ: ಪಟ್ಟಣದಲ್ಲಿ ಭಾನುವಾರ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಲಾಯಿತು.ಯುವಕರು, ಮಕ್ಕಳಾದಿಯಾಗಿ ಎಲರ್ಲೂ ಹೋಳಿ ಆಚರಿಸಿದರು. ಕಳೆದ ಮೂರು ದಿನಗಳಿಂದ ಚಂದ್ರಶೇಖರ್ ಅಜಾದ್ ರಂಗಮಂದಿರದಲ್ಲಿ ಕಾಮದೇವನನ್ನು ಪ್ರತಿಷ್ಠಾಪಿಸಿ, ಶನಿವಾರ ತಡರಾತ್ರಿ ಕಾಮ ದೇವನನ್ನು ದಹನ ಮಾಡಲಾಯಿತು. ಬೆಳಿಗ್ಗೆ ಪಟ್ಟಣದ ಯುವಕರು ರಂಗಮಂದಿರದಿಂದ ಓಕುಳಿ ಆಡಲು ಆರಂಭಿಸಿದರು.ಎತ್ತಿನ ಗಾಡಿಯಲ್ಲಿ ಬಣ್ಣ ತುಂಬಿದ ಬ್ಯಾರಲ್‌ಗಳನ್ನು ಇಟ್ಟುಕೊಂಡು ಹಲಗೆ, ಉರುಮೆ ವಾದ್ಯಗಳೊಂದಿಗೆ ಬೀದಿಗಳಲ್ಲಿ ಸಂಚರಿಸುತ್ತ ಗೆಳೆಯರಿಗೆ, ಬಂಧುಗಳಿಗೆ ಬಣ್ಣ ಎರಚುತ್ತ ಹಬ್ಬವನ್ನು ಸಂಭ್ರಮದಿಂದ ಅಚರಿಸಿದರು.ಪಟ್ಟಣದ ಬೀದಿಗಳು ರಂಗು- ರಂಗುನಿಂದ ಕಂಗೊಳಿಸುತ್ತಿದ್ದವು. ಪೊಲೀಸರು ಸೂಕ್ತ ಬಂದೊಬಸ್ತನ್ನು ಮಾಡಿದ್ದರು. ಭಾರತ ಮತ್ತು ವೆಸ್ಟ್‌ಇಂಡೀಸ್ ಮಧ್ಯೆ ವಿಶ್ವಕಪ್ ಕ್ರಿಕೆಟ್ ಪಂದ್ಯ ಇದ್ದುದರಿಂದ ಓಕುಳಿ ಆಟವನ್ನು ಬೇಗ ಮುಗಿಸಲಾಯಿತು.ಹೋಳಿ ಸಂಭ್ರಮ


ಕೊಟ್ಟೂರು: ಪಟ್ಟಣದಲ್ಲಿ ಹೋಳಿ ಹಬ್ಬವನ್ನು ಯುವಕರು, ಯುವತಿಯರು ಸಂಭ್ರಮ ಸಡಗರದಿಂದ ಆಚರಿಸಿದರು. ಪಟ್ಟಣದ ಬೀದಿ ಬೀದಿಯಲ್ಲಿ ಯುವಕರ ದಂಡು ಗುಂಪು ಗುಂಪಾಗಿ ತಮಟೆ ಬಾರಿಸುತ್ತ ಸ್ನೇಹಿತರಿಗೆ ಬಣ್ಣವನ್ನು ಎರಚಿ ಸಂಭ್ರಮಪಟ್ಟರು. ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಹಾ ತಮ್ಮ ಸಹಪಾಠಿ ಮನೆಗಳಿಗೆ ತೆರಳಿ ಬಣ್ಣವನ್ನು ಎರಚಿ ಹೋಳಿ ಹಬ್ಬವನ್ನು ಆಚರಿಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲದೆ. ಓಣಿಗಳಲ್ಲಿಯೂ ಹೋಳಿ ಹಬ್ಬದ ಸಂಭ್ರಮ ಎದ್ದು ಕಾಣುತ್ತಿತ್ತು. ಅಹಿತಕರ ಘಟನೆ ಸಂಭವಿಸದಂತೆ ಪಟ್ಟಣದ ಪ್ರಮುಖ ವೃತ್ತ ಮತ್ತು ಬೀದಿಗಳಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.