ಶುಕ್ರವಾರ, ಮಾರ್ಚ್ 5, 2021
26 °C

ಬಿಹಾರ ಪಾನನಿಷೇಧ ಮಸೂದೆ ಕರಾಳ ನಿಯಮಗಳು ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಹಾರ ಪಾನನಿಷೇಧ ಮಸೂದೆ ಕರಾಳ ನಿಯಮಗಳು ಬೇಡ

ಕೆಲವು ಸಲ ನಮ್ಮ ರಾಜಕಾರಣಿಗಳಿಗೆ ಏನಾಗುತ್ತದೆಯೋ ಗೊತ್ತಿಲ್ಲ. ಅಧಿಕಾರಕ್ಕೆ ಏರಿದವರನ್ನು ಜನ ಇಂದ್ರ, ಚಂದ್ರ ಎಂದು ಹಾಡಿ ಹೊಗಳುವುದು ಸಹಜ. ಅಷ್ಟಕ್ಕೇ ಉಬ್ಬಿ ತಾವು ಮಾಡುವುದು, ಮಾಡಿದ್ದು, ಮುಂದೆ ಮಾಡುವುದು ಎಲ್ಲವೂ ಸರಿ ಎಂಬ ಭ್ರಮೆಯಲ್ಲಿ ತೇಲಾಡಲು ಶುರು ಮಾಡುತ್ತಾರೆ.



ಚಿತ್ರ ವಿಚಿತ್ರ ಕಾನೂನುಗಳನ್ನು ತರುತ್ತಾರೆ. ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌  ಈಗ ಈ ಸಾಲಿಗೆ ಸೇರುತ್ತಿದ್ದಾರೆಯೇ ಎಂಬ ಅನುಮಾನ ಬರುತ್ತಿದೆ. ಇದಕ್ಕೆ ಮುಖ್ಯ ಕಾರಣ, ಅವರು ಈಚೆಗೆ ವಿಧಾನಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಂಡ ‘ಬಿಹಾರ ಪಾನನಿಷೇಧ ಮತ್ತು ಅಬಕಾರಿ ಮಸೂದೆ’.

ಇದೇನಾದರೂ ಕಾನೂನಾದರೆ ಆ ರಾಜ್ಯದ ಜನಸಾಮಾನ್ಯರ ಗತಿ ಏನಾಗಬಹುದು ಎಂದು ಊಹಿಸಿಕೊಂಡೇ ಭಯವಾಗುತ್ತದೆ. ಏಕೆಂದರೆ ಇದು ಎಷ್ಟು ಕರಾಳವಾಗಿದೆ, ವಿಚಿತ್ರವಾಗಿದೆ ಎಂದರೆ  ತುಘಲಕ್‌ ದರ್ಬಾರನ್ನು ನೆನಪಿಸುತ್ತದೆ. 



ಈ ಮಸೂದೆಯ ಪ್ರಕಾರ,  ಯಾರದಾದರೂ ಮನೆಯಲ್ಲಿ  ಮದ್ಯದ ಒಂದು ಬಾಟಲಿ ಸಿಕ್ಕಿದರೂ ಸಾಕು; ಆ ಮನೆಯಲ್ಲಿನ ಮಹಿಳೆಯರೂ ಸೇರಿದಂತೆ 18 ವರ್ಷಕ್ಕಿಂತ ಹೆಚ್ಚಿನ ವಯೋಮಾನದವರೆಲ್ಲ  ಅಪರಾಧಿಗಳು. ಅವರಿಗೆ ಜಾಮೀನೂ ಇಲ್ಲ. ತಪ್ಪಿತಸ್ಥರು ಎಂದು ಕೋರ್ಟ್‌ನಲ್ಲಿ ತೀರ್ಮಾನವಾದರೆ ಕನಿಷ್ಠ 10 ವರ್ಷದಿಂದ ಹಿಡಿದು ಗರಿಷ್ಠ ಜೀವಾವಧಿವರೆಗೂ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.



ಅಷ್ಟೇ ಅಲ್ಲ. ಆ ಮನೆಯೊಳಗಿನ ಪಾತ್ರೆಪಗಡೆ ಇತ್ಯಾದಿ ಸಾಮಗ್ರಿಗಳನ್ನು ಜಪ್ತಿ ಮಾಡಬಹುದು. ಇಡೀ ಮನೆಯನ್ನೇ ಮುಟ್ಟುಗೋಲು ಹಾಕಿಕೊಳ್ಳಬಹುದು. ಯಾವುದಾದರೂ ಒಂದು ಊರು, ಗ್ರಾಮದಲ್ಲಿ ಪದೇ ಪದೇ ತಪ್ಪು ಮಾಡುವ ಒಬ್ಬಿಬ್ಬರು ಇದ್ದರೂ ಸಾಕು; ಆ ಇಡೀ ಊರಿಗೆ, ಹಳ್ಳಿಗೆ ಪುಂಡುಗಂದಾಯದ ರೀತಿಯಲ್ಲಿ ‘ಸಾಮೂಹಿಕ ದಂಡ’ ವಿಧಿಸಿ ವಸೂಲು ಮಾಡಲು ಜಿಲ್ಲಾಧಿಕಾರಿಗೆ ಅಧಿಕಾರ  ನೀಡಲಾಗಿದೆ.



ತಮಗೆ ಆಗದವರ ಮನೆಯಲ್ಲಿ ಬೇರೆಯವರು ಸುಮ್ಮನೆ ಒಂದು ಮದ್ಯದ ಬಾಟಲಿ ತಂದಿಟ್ಟು ಪೊಲೀಸರಿಗೆ ಸುಳಿವು ಕೊಟ್ಟರೆ ಸಾಕು. ಮನೆ ಮಂದಿಯೆಲ್ಲ ಕಂಬಿ ಎಣಿಸಬೇಕಾಗುತ್ತದೆ. ಸೇಡು ತೀರಿಸಿಕೊಳ್ಳಲು ಇದನ್ನು ಕಿಡಿಗೇಡಿಗಳು ಬಳಸಿಕೊಳ್ಳುವುದಿಲ್ಲ ಎಂಬ ಖಾತರಿಯಿಲ್ಲ.



ಅಲ್ಲದೆ, ಇದೇ ನಿಯಮವನ್ನು ರಾಜಕೀಯಕ್ಕೂ ಏಕೆ ವಿಸ್ತರಿಸಬಾರದು? ಒಬ್ಬ ಮಂತ್ರಿ ತಪ್ಪು ಮಾಡಿದರೆ, ಲಂಚ ಪಡೆದರೆ ಇಡೀ ಸಂಪುಟವನ್ನು ಏಕೆ ಹೊಣೆ ಮಾಡಬಾರದು? ಒಬ್ಬ ಶಾಸಕ ಅಪರಾಧ ಎಸಗಿದರೆ ಎಲ್ಲ ಶಾಸಕರಿಗೆ ಏಕೆ ಶಿಕ್ಷೆ ಕೊಡಬಾರದು?  ಬಿಹಾರದ ಪೊಲೀಸ್‌, ಅಬಕಾರಿ ಇಲಾಖೆಗಳಲ್ಲಿನ  ಭ್ರಷ್ಟಾಚಾರ, ಜನರ ಮೇಲೆ ಅವು ನಡೆಸುವ ದೌರ್ಜನ್ಯಗಳ ಬಗ್ಗೆ ಬೇಕಾದಷ್ಟು ಆರೋಪಗಳಿವೆ. ಇನ್ನು ಇಂಥದೊಂದು ಬ್ರಹ್ಮಾಸ್ತ್ರ ಅವರ ಕೈಯಲ್ಲಿ ಸಿಕ್ಕರೆ ಏನಾಗಬಹುದು?   



ವಿನಾಕಾರಣ ಅಥವಾ ಉದ್ದೇಶಪೂರ್ವಕವಾಗಿ ಅಧಿಕಾರವನ್ನು ದುರುಪಯೋಗ  ಮಾಡಿಕೊಂಡು ಜನರಿಗೆ ಕಿರುಕುಳ ಕೊಡುವ ಸರ್ಕಾರಿ ನೌಕರರಿಗೂ ಈ ಮಸೂದೆಯಲ್ಲಿ ಶಿಕ್ಷೆ ನಿಗದಿಪಡಿಸಲಾಗಿದೆ ಎನ್ನುವುದು ನಿತೀಶ್‌ ಸಮಜಾಯಿಷಿ. ಅಂಥವರಿಗೆ ಗರಿಷ್ಠ 3 ವರ್ಷ ಜೈಲು, 1 ಲಕ್ಷ ರೂಪಾಯಿ ದಂಡ ವಿಧಿಸುವ ಪ್ರಸ್ತಾವ ಮಸೂದೆಯಲ್ಲಿದೆ. ಆದರೆ ಒಂದು ಅತಿರೇಕವನ್ನು ಇನ್ನೊಂದು ಅತಿರೇಕದಿಂದ ಸರಿಪಡಿಸಲು ಸಾಧ್ಯವಿಲ್ಲ ಎಂಬುದನ್ನು ಅವರು ಅರಿಯಬೇಕು.



ಬಿಹಾರದಲ್ಲಿ ಪೂರ್ಣ ಪಾನನಿಷೇಧ ತರುವ ವಾಗ್ದಾನ ನಿತೀಶ್‌ ಅವರಿಗೆ ಕಳೆದ ಚುನಾವಣೆಯಲ್ಲಿ ಭಾರಿ ಜನಪ್ರಿಯತೆ, ರಾಜಕೀಯ ಲಾಭ ತಂದುಕೊಟ್ಟಿತ್ತು. ಅಧಿಕಾರಕ್ಕೆ ಬಂದ ನಂತರ ಅವರು ಪಾನನಿಷೇಧ ಜಾರಿಗೊಳಿಸಿ ಎಲ್ಲರ, ಅದರಲ್ಲೂ ವಿಶೇಷವಾಗಿ ಮಹಿಳೆಯರ ಮೆಚ್ಚುಗೆಗೆ ಪಾತ್ರರಾಗಿದ್ದರು. ಆದರೆ ಅದೇ ಹುಮ್ಮಸ್ಸಿನಲ್ಲಿ ರೂಪಿಸಿದ ಮಸೂದೆ ಜನರಿಗೆ ವರವಾಗುವ ಬದಲು ಶಾಪವಾಗಲಿದೆ.



ಸಾರಾಯಿ ಮತ್ತು ಇತರ ಮದ್ಯ ಮಾರಾಟಕ್ಕೆ ನಿಷೇಧ ಇದ್ದರೂ ಅಲ್ಲಿ ಸೇಂದಿಯನ್ನು ಮಾತ್ರ ಧಾರಾಳವಾಗಿ ಕುಡಿಯಬಹುದು. ಅದಕ್ಕೆ ಮುಖ್ಯ ಕಾರಣ ನಿತೀಶ್‌ ನೇತೃತ್ವದ ಸರ್ಕಾರದ ಪ್ರಮುಖ ಭಾಗಿದಾರ ಪಕ್ಷವಾದ ಲಾಲು ಪ್ರಸಾದ್‌ ಅವರ ಆರ್‌ಜೆಡಿಯ ಒತ್ತಡ ಮತ್ತು ವೋಟ್‌ಬ್ಯಾಂಕ್‌ ರಾಜಕಾರಣ. ಬಿಹಾರದಲ್ಲಿ ಮದ್ಯ ತಯಾರಿಕಾ  ಘಟಕಗಳನ್ನು ಮುಂದುವರಿಸಲು  ಅವಕಾಶ ಕೊಟ್ಟಿರುವುದು ಅವಕಾಶವಾದಿ ರಾಜಕಾರಣ.



ತಮ್ಮ  ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೊಲೆ, ಸುಲಿಗೆ, ಅತ್ಯಾಚಾರಗಳು ಕಡಿಮೆಯಾಗಿವೆ ಎಂದು ಅವರು ಹೇಳಿಕೊಂಡಿದ್ದರು. ಆದರೆ ಏಪ್ರಿಲ್‌, ಮೇ ತಿಂಗಳಲ್ಲಿನ ಅಪರಾಧದ ಅಂಕಿಅಂಶಗಳು ಅವರ ಹೇಳಿಕೆ ಸುಳ್ಳು ಎಂಬುದನ್ನು ಸಾಬೀತು ಮಾಡಿವೆ.

ಮನಸೋಇಚ್ಛೆ ಕರಾಳ ಶಾಸನ ಮಾಡುವ ಬದಲು ಪಾನನಿಷೇಧದ ಸಮರ್ಪಕ ಜಾರಿ, ಕಾನೂನು ಸುವ್ಯವಸ್ಥೆ ಬಗ್ಗೆ ಅವರು ಗಮನ ಕೊಡುವುದು ಒಳಿತು. ಅಮಾಯಕರನ್ನು ಜೈಲಿಗಟ್ಟಲು ನಿರಂಕುಶ ಅಧಿಕಾರ ಕೊಡುವ ಕ್ರೂರ ನಿಯಮಗಳನ್ನು ಮಸೂದೆಯಿಂದ ಕೈ ಬಿಡುವಂತೆ ಅವರ ಮೇಲೆ ಒತ್ತಡ ತರಬೇಕು. ಅದಕ್ಕೆ ಸ್ಪಂದಿಸುವ ದೊಡ್ಡತನವನ್ನು ಅವರು ಪ್ರದರ್ಶಿಸಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.