ಬೀಡಿ ಕಾರ್ಮಿಕರ ಪ್ರತಿಭಟನೆ

7

ಬೀಡಿ ಕಾರ್ಮಿಕರ ಪ್ರತಿಭಟನೆ

Published:
Updated:
ಬೀಡಿ ಕಾರ್ಮಿಕರ ಪ್ರತಿಭಟನೆ

ಬೆಂಗಳೂರು: ಕನಿಷ್ಠ ಕೂಲಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಬೀಡಿ ಕಾರ್ಮಿಕರ ಒಕ್ಕೂಟದ ಸದಸ್ಯರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.ನಗರ ರೈಲು ನಿಲ್ದಾಣದಿಂದ ಜಾಥಾ ಆರಂಭಿಸಿದ ಪ್ರತಿಭಟನಾಕಾರರು ಸ್ವಾಂತಂತ್ರ್ಯ ಉದ್ಯಾನದಲ್ಲಿ ಧರಣಿ ಕುಳಿತರು. ಈ ವೇಳೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಬಿ.ಮಾಧವ, `ಬೀಡಿ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಸರ್ಕಾರ, ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಇದರಿಂದಾಗಿ ರಾಜ್ಯದಲ್ಲಿರುವ 10 ಲಕ್ಷಕ್ಕೂ ಅಧಿಕ ಕಾರ್ಮಿಕರು ಬೀದಿ ಪಾಲಾಗಿದ್ದಾರೆ. ಅವರ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಹೋರಾಟ ನಡೆಸಲಾಗುತ್ತಿದೆ' ಎಂದರು.ಒಂದರಿಂದ ಎಂಟನೇ ತರಗತಿಯವರೆಗಿನ ಕಾರ್ಮಿಕರ ಮಕ್ಕಳಿಗೆ ನೀಡಲಾಗುತ್ತಿದ್ದ ವಿದ್ಯಾರ್ಥಿ ವೇತನವನ್ನು ನಿಲ್ಲಿಸಲು ಸರ್ಕಾರ ಮುಂದಾಗಿದೆ. ಇದರಿಂದ ಕಾರ್ಮಿಕರ ಮಕ್ಕಳು ಶಿಕ್ಷಣ ವಂಚಿತರಾಗುವ ಸಾಧ್ಯತೆ ಇದೆ. ಅಲ್ಲದೇ, ವಿದ್ಯಾರ್ಥಿ ವೇತನ ಪಡೆಯಲು ಸರ್ಕಾರ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ. ಆದರೆ, ದೇಶದ 2/3 ರಷ್ಟು ಜನರಿಗೆ ಇದುವರೆಗೆ ಆಧಾರ್ ಕಾರ್ಡ್ ವಿತರಣೆಯಾಗಿಲ್ಲ.ಇಂತಹ ಸಂದರ್ಭದಲ್ಲಿ ಆಧಾರ್ ಕಾರ್ಡ್ ಕಡ್ಡಾಯ ಮಾಡಿರುವುದು ಅವೈಜ್ಞಾನಿಕ ನೀತಿಯಾಗಿದೆ. ಆದ್ದರಿಂದ ಸರ್ಕಾರ ಈ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದಿದ್ದರೆ, ಸೆಪ್ಟಂಬರ್ ತಿಂಗಳಿನಲ್ಲಿ ರಾಷ್ಟ್ರವ್ಯಾಪಿ ಮುಷ್ಕರ ನಡೆಲಾಗುವುದು ಎಂದು ಎಚ್ಚರಿಕೆ ನೀಡಿದರು.ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವ ಪ್ರಸ್ತುತ ಸಂದರ್ಭದಲ್ಲಿ ಬೀಡಿ ಕಾರ್ಮಿಕರ ಬದುಕು ದುಸ್ತರವಾಗಿದೆ. ಹೀಗಾಗಿ ಕಾರ್ಮಿಕರಿಗೆ  ರೂ 200  ಕನಿಷ್ಠ ಕೂಲಿ ನಿಗದಿಪಡಿಸಬೇಕು. ಜತೆಗೆ, ಮಾಸಿಕ  ರೂ 3,000 ಪಿಂಚಣಿ ನೀಡಬೇಕು. ಮನೆ ಕಟ್ಟಲು ನೀಡುವ ಸಹಾಯ ಧನವನ್ನು ರೂ 1 ಲಕ್ಷಕ್ಕೆ ವಿಸ್ತರಿಸಬೇಕು. ಮಕ್ಕಳ ಮದುವೆಗೆ  ರೂ 50 ಸಾವಿರ ಸಹಾಯಧನ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry