ಗುರುವಾರ , ಮೇ 28, 2020
27 °C

ಬೀದಿನಾಯಿಗಳ ದರ್ಬಾರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ನಗರದಲ್ಲಿ ಬೀದಿ ನಾಯಿಗಳ ಉಳಪಟ ಮೀತಿ ಮೀರಿದೆ. ಬೀದಿಬೀದಿಯಲ್ಲಿ ನಾಯಿಗಳದ್ದೇ ದರ್ಬಾರು. ಹಗಲು-ರಾತ್ರಿ ಎನ್ನದೆ ಮನೆಯ ಮುಂದೆ ಬೊಬ್ಬಿಡುವ ನಾಯಿಗಳು ನಗರದ ನಿವಾಸಿಗಳ ನೆಮ್ಮದಿಯನ್ನೇ ಕೆಡಿಸಿವೆ. ಬೀದಿ ನಾಯಿಗಳ ನಿಯಂತ್ರಣ ನಗರಸಭೆಯಿಂದಲೂ ಸಾಧ್ಯವಾಗುತ್ತಿಲ್ಲ.ಬೀದಿ ನಾಯಿಗಳ ಹಾವಳಿಯಿಂದಾಗಿ ಜನರು ಬೀದಿಯಲ್ಲಿ ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ಬೈಕ್, ಸೈಕಲ್‌ಗಳನ್ನು ನಾಯಿಗಳು ಕೆಲವೊಮ್ಮೆ ಬೆನ್ನಟ್ಟಿಕೊಂಡು ಬರುವುದರಿಂದ ಅಪಘಾತ ಸಂಭವಿಸಿ ಬೈಕ್, ಸೈಕಲ್ ಸವಾರರು ಗಾಯಮಾಡಿಗೊಂಡ ಘಟನೆಗಳು ಸಾಕಷ್ಟಿವೆ. ಆಗೊಮ್ಮೆ, ಈಗೊಮ್ಮೆ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಕೈ ಹಾಕುವ ನಗರಸಭೆ ಪ್ರಾಣಿ ದಯಾ ಸಂಘದ ವಿರೋಧ ಎದುರಿಸಬೇಕಾಗಿದೆ.ಬೀದಿನಾಯಿಗಳ ಹಾವಳಿಯಿಂದಾಗಿ ಕೆಎಚ್‌ಬಿ ಕಾಲೋನಿ, ಹೈ ಚರ್ಚ್, ದೋಬಿಘಾಟ, ಗುರುಮಠ ಸೇರಿದಂತೆ ನಗರದ ಅನೇಕ ರಸ್ತೆಗಳಲ್ಲಿ ರಾತ್ರಿ ಹೊತ್ತು ಸಂಚರಿಸುವುದು ದುಸ್ತರವಾಗಿ ಪರಿಣಮಿಸಿದೆ. ರಾತ್ರಿ 11 ಗಂಟೆಯ ನಂತರವಂತೂ ನಗರದ ಬಹುತೇಕ ರಸ್ತೆಗಳಲ್ಲಿ ನಾಯಿಗಳು ಹಿಂಡುಹಿಂಡಾಗಿ ಸಂಚರಿಸುತ್ತಿರುತ್ತವೆ.ಕೆಎಚ್‌ಬಿ ಕಾಲೋನಿಯಲ್ಲಿ ರಾತ್ರಿ ಹೊತ್ತಿನಲ್ಲಿ ಬೊಬ್ಬಿಡುವ ನಾಯಿಗಳು ಕಾಲೋನಿ ನಿವಾಸಿಗಳ ನಿದ್ದೆಗೆ ಸಂಚಕಾರ ತಂದಿವೆ. ಐದಾರು ನಾಯಿಗಳು ಒಂದೇ ಸವನೆ ಕೂಗುವುದನ್ನು ಕೇಳಿ ಗಾಢ ನಿದ್ದೆಯಲ್ಲಿರುವ ನಿವಾಸಿಗಳು ಕಳ್ಳರೇನಾದರೂ ಬಂದರೇ ಎಂದು ಹೊರಗೆ ಬಂದು ನೋಡಿದರೆ ಅಲ್ಲಿ ನಾಯಿಗಳ ಕಾದಾಟ ನಡೆದಿರುತ್ತದೆ.ಕಸ ಸಂಗ್ರಹಣೆಗಾಗಿ ನಗರದಾದ್ಯಂತ ನಗರಸಭೆ ಕಸದ ತೊಟ್ಟಿಗಳನ್ನು ಇಟ್ಟಿದೆ. ಈ ತೊಟ್ಟಿಗಳಲ್ಲಿ ಸಾರ್ವಜನಿಕರು ಕೋಳಿ, ಕುರಿ ಮಾಂಸ ತಂದು ಹಾಕುವುದರಿಂದ ನಾಯಿಗಳ ಹಿಂಡೇ ಕಸದ ತೊಟ್ಟಿ ಸುತ್ತ ಅಡ್ಡಾಡುತ್ತಿರುತ್ತವೆ. ಮಾಂಸದ ರುಚಿ ಹಚ್ಚಿಸಿಕೊಂಡ ನಾಯಿಗಳು ಪಾದಚಾರಿಗಳ ಬೆನ್ನಟ್ಟಿಕೊಂಡು ಬರುವುದು ಆತಂಕದ ಸಂಗತಿಯಾಗಿದೆ.ಕಸದ ತೊಟ್ಟಿಗೆ ಕಸ ಎಸೆಯಲು ಬಂದಾಗಲೂ ನಾಯಿಗಳು ‘ಗುರ್’ ಎಂದು ಜನರಲ್ಲಿ ಭಯವನ್ನುಂಟು ಮಾಡುತ್ತಿವೆ. ನಗರದ ಪ್ರಮುಖ ರಸ್ತೆಗಳಲ್ಲೂ ನಾಯಿಗಳು ಹಿಂಡುಹಿಂಡಾಗಿ ನಿಲ್ಲುವುದರಿಂದ ವಾಹನ ಸಂಚಾರಕ್ಕೂ ಅಡಚಣೆಯನ್ನುಂಟು ಮಾಡುತ್ತಿವೆ. ಹೀಗೆ ನಾಯಿಗಳು ತಂದೊಡ್ಡುವ ಸಮಸ್ಯೆಗಳಿಂದಾಗಿ ನಗರದ ನಿವಾಸಿಗಳು ಕಿರಿಕಿರಿ ಅನುಭವಿಸುವಂತಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.