ಭಾನುವಾರ, ಮಾರ್ಚ್ 7, 2021
22 °C

ಬುದ್ಧನ ಹಲವು ಅವತಾರಗಳು

ನಿಸರ್ಗ ಎಚ್. ಮಲ್ಲಿಗೆರೆ Updated:

ಅಕ್ಷರ ಗಾತ್ರ : | |

ಬುದ್ಧನ ಹಲವು ಅವತಾರಗಳು

ಅಲ್ಲಿ ಶಾಂತಿ ದೂತ ಬುದ್ಧನ ಪ್ರತಿಮೆಗಳು ಪ್ರೀತಿಯ ಸಂದೇಶ ಸಾರುತ್ತವೆ. ಚಿತ್ರಕಲೆಗಳೂ ಅಷ್ಟೆ, ಮೌನವಾಗಿ ನಗುತ್ತವೆ. ಆ ನಗುವಿನಲ್ಲಿ ಒಂದು ಹಿತಾನೂಭೂತಿ ಇದೆ.ಹಲವು ಭಂಗಿ ಮತ್ತು ಹಲವು ಮುದ್ರೆಗಳಿಂದ ಬುದ್ಧನ ಪ್ರತಿಮೆಗಳು ಕಂಗೊಳಿಸುತ್ತವೆ, ಎದುರು ಕುಳಿತರೆ ನಮ್ಮೊಂದಿಗೆ ಸಂಭಾಷಿಸುತ್ತವೆ, ಮೌನವಾಗಿ.ನಗರದ ಮೈನಿ ಸದನ್‌ ಕಲಾ ಗ್ಯಾಲರಿಯಲ್ಲಿ ಕಲಾವಿದೆ ಸಂಗೀತಾ ಅಭಯ್‌ ಅವರ ಬುದ್ಧನ ಕುರಿತಾದ ಚಿತ್ರಕಲೆ ಮತ್ತು ಪ್ರತಿಮೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.ಎಲ್ಲ ಪ್ರತಿಮೆಗಳೂ ವಿಶಿಷ್ಟವಾಗಿವೆ. ಫೈಬರ್‌ ಮಾಧ್ಯಮದಿಂದ  ಬುದ್ಧನ ಪ್ರತಿಮೆಗಳನ್ನು ರೂಪಿಸಲಾಗಿದೆ. ತಥಾಗತ ಮುದ್ರೆಯಲ್ಲಿ ಕುಳಿತಿರುವ ಬುದ್ಧನ ಪ್ರತಿಮೆಗೆ ಸುದ್ದಿ ಪತ್ರಿಕೆಗಳನ್ನು ಅಂಟಿಸಲಾಗಿದೆ. ಸಕಾರಾತ್ಮಕ ಸುದ್ದಿಗಳೇ ಇದರ ಸಾರ. ಅಭಿವೃದ್ಧಿ ಕುರಿತಾದ ಸುದ್ದಿ, ಒಂದೊಳ್ಳೆ ಮಾತು, ಒಂದಿಷ್ಟು ಪ್ರಯೋಜನವಾಗುವ ಸುದ್ದಿಗಳನ್ನು ಹೆಕ್ಕಿ ಅಂಟಿಸಲಾಗಿದೆ. ಸಕಾರಾತ್ಮಕ ಚಿಂತನೆಗೆ ಒತ್ತು ಕೊಡುವುದು ಇದರ ಉದ್ದೇಶ.

ಭೂಮಿಸ್ಪರ್ಶ ಮುದ್ರೆಯಲ್ಲಿ ಕುಳಿತ ಬುದ್ಧನದು ಮತ್ತೊಂದು ವಿಶೇಷತೆ. ಈ ಬುದ್ಧ ಎಲೆಕ್ಟ್ರಾನಿಕ್‌ ಮಾಧ್ಯಮದ ಮೂಲಕ ಸಂದೇಶ ರವಾನಿಸುತ್ತಾನೆ. ಬಳಸಿ ಹಾಳಾದ ಕಂಪ್ಯೂಟರ್‌ನ ಕೀಲಿಮಣೆಗಳಿಂದ ರೂಪಿಸಲಾಗಿದೆ. 108 ಕೀ–ಬೋರ್ಡ್‌ಗಳನ್ನು ಇದರ ವಿನ್ಯಾಸಕ್ಕೆ ಬಳಸಲಾಗಿದೆ.‘ಕೀ ಬೋರ್ಡ್‌ಗಳು ಹೆಚ್ಚೆಂದರೆ ಮೂರರಿಂದ ನಾಲ್ಕು ವರ್ಷಗಳ ಕಾಲ ಬಾಳಿಕೆ ಬರುತ್ತವೆ. ನಂತರ ಅವುಗಳು ನಿರುಪಯುಕ್ತವಾಗುತ್ತವೆ. ಆದರೆ ಅದೇ ಕೀಬೋರ್ಡ್‌ಗಳನ್ನು ಈ ರೀತಿ ಪ್ರತಿಮೆ ನಿರ್ಮಿಸಲು ಬಳಸಿದರೆ ಬಹಳ ಕಾಲ ಬಳಿಕೆ ಬರುತ್ತವೆ’ ಎಂಬುದು ಸಂಗೀತಾ ಅವರ ಮಾತು.ಈ ಕಲಾಕೃತಿಗಳನ್ನು ಗಮನಿಸುತ್ತಾ ಹೋದಂತೆ ಮನದಲ್ಲಿ ಶಾಂತಿಯ ಭಾವ ಆವರಿಸುತ್ತದೆ. ತೆರೆದ ಹಸ್ತದ ಮೂಲಕ ಪ್ರೀತಿಯಿಂದ ಎಲ್ಲರನ್ನೂ ಸ್ವಾಗತಿಸುವ ಬುದ್ಧ ಲೌಕಿಕದಾಚೆಗಿನ ಬದುಕಿನ ಸತ್ಯವನ್ನು ಹೇಳುತ್ತಿರುವಂತೆಯೂ ಭಾಸವಾಗುತ್ತದೆ. ಆ ತೆರೆದ ಹಸ್ತಗಳು ಶಾಂತಿಯ ಸಂಕೇತವಾದ ಪಾರಿವಾಳವನ್ನು ಪ್ರತಿನಿಧಿಸುತ್ತದೆ. ಒಂದೇ ಕ್ಯಾನ್ವಾಸ್‌ನಲ್ಲಿ 1,000 ಬುದ್ಧನ ಚಿತ್ರಗಳಿವೆ. ಪ್ರೀತಿ ಮತ್ತು ಮಮತೆಯ ಮೂರ್ತಿಯಾದ ಬುದ್ಧ ಎಲ್ಲೆಡೆ, ಎಲ್ಲೆಲ್ಲೂ ಇದ್ದಾನೆ. ಅವನನ್ನು ಕಂಡುಕೊಳ್ಳಬೇಕಾದವರು ನಾವು ಎಂಬ ಸಂಗತಿಯನ್ನು ಇದು ಸೂಚಿಸುತ್ತದೆ.ಮತ್ತೊಂದು ಪ್ರತಿಮೆಯಲ್ಲಿ ಅರಳಿ  ಮರದ ಎಲೆಗಳು ಬುದ್ಧನ ಸುತ್ತಲೂ ಹರಡಿಕೊಂಡಿವೆ. ಅರಳಿ ಎಲೆ ಹೃದಯಾಕಾರವನ್ನೂ ಸೂಚಿಸುತ್ತದೆ. ಅಂದರೆ ಬುದ್ಧನಿದ್ದಲ್ಲಿ ಒಲವಿನ ಸಸಿ ಮರವಾಗುತ್ತದೆ, ಹೆಮ್ಮರವಾಗುತ್ತದೆ. ಬುದ್ಧನ ತಲೆಯ ಕಿರೀಟ ಕಮಲದ ಹೂವಾಗಿ ಅರಳುವ ಕಲಾಕೃತಿ, ಬದ್ಧನ ಪರಿವರ್ತನೆಯನ್ನು ಸೂಚಿಸುತ್ತದೆ. ಕಿರೀಟಧಾರಿ ಬುದ್ಧ ಕರುಣಾಮಯಿ, ಕ್ಷಮಾಮೂರ್ತಿಯಾಗಿ ಬದಲಾಗುತ್ತಾನೆ. ಮತ್ತೊಬ್ಬ ಬುದ್ಧ ಧ್ಯಾನ ನಿರತನಾಗಿದ್ದಾನೆ.ಕಲಾಕೃತಿಗಳ ಪ್ರದರ್ಶನದ ಜೊತೆಗೆ 69ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಬುದ್ಧನ ಬಗೆಗೆ ಚಿತ್ರಕಲಾ ಸ್ಪರ್ಧೆ ಸಹ ಏರ್ಪಡಿಸಲಾಗಿತ್ತು. ರಾಮಕೃಷ್ಣ ಶಾಲೆಯ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.‘ಬುದ್ಧನ ಕುರಿತಾಗಿ ಅವರವರ ಕಲ್ಪನೆಗಳಿಗೆ ರೂಪ ಕೊಟ್ಟಿದ್ದಾರೆ. ಚಿತ್ರದಲ್ಲಿ ಭಾರತ–ಪಾಕಿಸ್ತಾನದ ಬಾವುಟಗಳಿವೆ. ಆದರೆ ನಡುವೆ ಇರುವ ವ್ಯಕ್ತಿ ಆ ಎರಡು ಭಾವುಟಗಳನ್ನು ಬಿಟ್ಟು ಶಾಂತಿ ಎಂಬ ಭಾವುಟ ಏರಲು ಹಂಬಲಿಸುತ್ತಾನೆ. ಅಹಿಂಸೆ– ಶಾಂತಿಯನ್ನು ಆ ಮಗು ಹೇಗೆ ಚಿತ್ರಿಸಿದೆ ನೋಡಿ’ ಎಂದು ಸಂಗೀತಾ ಬಣ್ಣಿಸಿದರು.ಮಹಾರಾಷ್ಟ್ರ ಮೂಲದ ಸಂಗೀತಾ ಅಭಯ್‌ ಬುದ್ಧನ ಸಂದೇಶಗಳಿಂದ ಪ್ರಭಾವಿತರಾಗಿದ್ದಾರೆ. ಸತತ ಹನ್ನೆರಡು ವರ್ಷಗಳಿಂದ ತಮ್ಮನ್ನು ಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ.ಬುದ್ಧನ ಕಲಾಕೃತಿಗಳನ್ನಷ್ಟೇ ರಚಿಸುತ್ತಾರೆ. ಎಲ್ಲೋ ಕೇಳುವ, ಪುಸ್ತಕದಲ್ಲಿ ಓದಿದ, ಸಾಮಾನ್ಯರ ಮನಸ್ಸಿನಲ್ಲಿರುವ  ಬುದ್ಧನೇ ತಮ್ಮ ಕಲಾಕೃತಿಯ ವಸ್ತು ಎನ್ನುತ್ತಾರೆ  ಸಂಗೀತಾ.ಕಲಾಕೃತಿ ಪ್ರದರ್ಶನ ಆಗಸ್ಟ್‌ 31 ರ ವರೆಗೆ ನಡೆಯಲಿದೆ. ಇದುವರೆಗೂ ಹಲವಾರು ಕಡೆ ಚಿತ್ರಕಲಾ ಪ್ರದರ್ಶನ ನೀಡಿದ್ದಾರೆ.  ಔರಂಗಾಬಾದ್‌ ವಿಶ್ವವಿದ್ಯಾನಿಲಯದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದು, ಪ್ರಥಮ ರ್‍ಯಾಂಕ್‌ ಗಳಿಸಿದ್ದಾರೆ.  ಪ್ರದರ್ಶನದ ವಿವರಗಳು

ಪ್ರದರ್ಶನದ ಕೊನೆಯ ದಿನ: ಆಗಸ್ಟ್‌ 31

ಗ್ಯಾಲರಿ ವಿಳಾಸ: ಮೈನಿ ಸದನ್, ಗ್ಯಾಲರಿ ಜಿ.

7ನೇ ಅಡ್ಡರಸ್ತೆ, ಲ್ಯಾವೆಲ್ಲೆ ರಸ್ತೆ.

ಸಂಪರ್ಕ ಸಂಖ್ಯೆ: 080 22219275

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.