ಮಂಗಳವಾರ, ಏಪ್ರಿಲ್ 13, 2021
29 °C

ಬುಧವಾರ ಶೆಟ್ಟರ್ ಪ್ರಮಾಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ/ಬೆಂಗಳೂರು: ನಿರೀಕ್ಷೆಯಂತೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ಭಾನುವಾರ ಪಕ್ಷದ ವರಿಷ್ಠರಿಗೆ ರಾಜೀನಾಮೆ ಸಲ್ಲಿಸುವುದರೊಂದಿಗೆ ರಾಜ್ಯ ಬಿಜೆಪಿಯಲ್ಲಿ ಕೆಲವು ತಿಂಗಳಿಂದ ನಡೆಯುತ್ತಿದ್ದ `ರಾಜಕೀಯ ನಾಟಕ~ಕ್ಕೆ ಪರದೆ ಬಿದ್ದಿದೆ. ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ ಶೆಟ್ಟರ್ ಅವರು ಬುಧವಾರ ಬೆಳಿಗ್ಗೆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಬೆಳಿಗ್ಗೆ 10.30ರಿಂದ ಪಕ್ಷದ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ ಎಂಬ ಸಂದೇಶವನ್ನು ಬಿಜೆಪಿಯ ಎಲ್ಲ ಶಾಸಕರಿಗೂ ರವಾನಿಸಲಾಗಿದೆ. ಶೆಟ್ಟರ್ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ನೇಮಕ ಮಾಡುವ ವಿಷಯ ಸಭೆಯ ಕಾರ್ಯಸೂಚಿಯಲ್ಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ರಾಜೀನಾಮೆ ಮತ್ತು ಶೆಟ್ಟರ್ ಅವರು ಹೊಸ ಸರ್ಕಾರ ರಚನೆಗೆ ಅವಕಾಶ ಕೋರಿ ಹಕ್ಕು ಮಂಡಿಸುವ ಪ್ರಕ್ರಿಯೆಗಳು ಮಂಗಳವಾರ ಏಕಕಾಲಕ್ಕೆ ನಡೆಯಲಿವೆ. ಶಾಸಕಾಂಗದ ಪಕ್ಷದ ನೂತನ ನಾಯಕನ ಆಯ್ಕೆ ಮತ್ತು ಹೊಸ ಸಚಿವ ಸಂಪುಟ ರಚನೆ ಸುಗಮವಾಗಿ ನಡೆಸುವ ಉದ್ದೇಶದಿಂದ ಬೆಂಗಳೂರಿಗೆ ಆಗಮಿಸುವ ಬಿಜೆಪಿ ರಾಷ್ಟ್ರೀಯ ನಾಯಕರಾದ ಅರುಣ್ ಜೇಟ್ಲಿ ಮತ್ತು ರಾಜನಾಥ್ ಸಿಂಗ್ ಉಪಸ್ಥಿತಿಯಲ್ಲೇ ಈ ಪ್ರಕ್ರಿಯೆಗಳು ನಡೆಯಲಿವೆ. ಈ ಮಧ್ಯೆ ಪಕ್ಷದ ರಾಜ್ಯ ಉಸ್ತುವಾರಿ ಧಮೇಂದ್ರ ಪ್ರಧಾನ್ ಭಾನುವಾರ ರಾತ್ರಿಯೇ ನಗರಕ್ಕೆ ಬಂದರು. ಅಧಿಕಾರ ಹಸ್ತಾಂತರ ಪ್ರಕ್ರಿಯೆ, ಸಂಪುಟ ವಿಸ್ತರಣೆ ಇತ್ಯಾದಿ ವಿಷಯಗಳ ಕುರಿತು ಅವರು ಮುಖಂಡರ ಜತೆ ಪೂರ್ವಭಾವಿ ಚರ್ಚೆ ನಡೆಸಲಿದ್ದಾರೆ.ಶಾಸಕಾಂಗ ಪಕ್ಷದ ಸಭೆಯ ಬಳಿಕ ಸದಾನಂದ ಗೌಡ ಅವರು ರಾಜ್ಯಪಾಲರನ್ನು ಭೇಟಿಯಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವರು. ಗೌಡರ ಜತೆ ಶೆಟ್ಟರ್ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಕೂಡ ತೆರಳಲಿದ್ದಾರೆ. ರಾಜೀನಾಮೆ ಪ್ರಕ್ರಿಯೆ ಮುಗಿದ ಬಳಿಕ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿರುವ ನಿರ್ಣಯದ ಪ್ರತಿಯನ್ನು ರಾಜ್ಯಪಾಲರಿಗೆ ಸಲ್ಲಿಸಿ, ಹೊಸ ಸರ್ಕಾರ ರಚನೆಗೆ ಶೆಟ್ಟರ್ ಅವಕಾಶ ಕೋರುವರು ಎಂದು ೂಲಗಳು ಹೇಳಿವೆ.ರಾಜಭವನದಲ್ಲೇ ಪ್ರಮಾಣ: ಜಗದೀಶ ಶೆಟ್ಟರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬುಧವಾರ ಬೆಳಿಗ್ಗೆ ಪ್ರಮಾಣವಚನ ಸ್ವೀಕರಿಸಲು ನಿರ್ಧರಿಸಿದ್ದಾರೆ. ಬಿಜೆಪಿ ಮೂಲಗಳ ಪ್ರಕಾರ, ನೂತನ ಮುಖ್ಯಮಂತ್ರಿ ಮತ್ತು ಸಚಿವರ ಪ್ರಮಾಣ ವಚನ ಸಮಾರಂಭ ರಾಜಭವನದ ಗಾಜಿನ ಮನೆಯಲ್ಲೇ ನಡೆಯಲಿದೆ. ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ಸರಳವಾಗಿ ನೆರವೇರಿಸಲು ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ. ಈ ಕಾರಣದಿಂದ ರಾಜಭವನದಲ್ಲೇ ಸರಳ ಸಮಾರಂಭ ನಡೆಯಲಿದೆ.ಬದಲಾವಣೆ ಪ್ರಕಟಿಸಿದ ಗಡ್ಕರಿ: ಶನಿವಾರವೇ ದೆಹಲಿಗೆ ತೆರಳಿದ್ದ ಸದಾನಂದಗೌಡರು, ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿ ಸಾಂಕೇತಿಕವಾಗಿ ರಾಜೀನಾಮೆ ಸಲ್ಲಿಸಿದರು. ಬೆಳಿಗ್ಗೆ 10ಕ್ಕೆ ಸಚಿವ ಸುರೇಶ್ ಕುಮಾರ್ ಜತೆ ಗಡ್ಕರಿ ನಿವಾಸಕ್ಕೆ ಬಂದ ಮುಖ್ಯಮಂತ್ರಿ ಎರಡು ಗಂಟೆ ಚರ್ಚಿಸಿದರು. ಈ ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಗಡ್ಕರಿ, `ಪಕ್ಷದ ಹಿತದೃಷ್ಟಿಯಿಂದ ವರಿಷ್ಠರು ನಾಯಕತ್ವ ಬದಲಾವಣೆಗೆ ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ರಾಜೀನಾಮೆ ನೀಡಿದ್ದಾರೆ. ಅದನ್ನು ಒಪ್ಪಿದ್ದೇನೆ. ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ ಶೆಟ್ಟರ್ ಹೊಸ ಮುಖ್ಯಮಂತ್ರಿ ಆಗಲಿದ್ದಾರೆ~ ಎಂದರು.`ಬಿಜೆಪಿ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸೋಮವಾರ ಅರುಣ್ ಜೇಟ್ಲಿ ಮತ್ತು ರಾಜನಾಥ್‌ಸಿಂಗ್ ಬೆಂಗಳೂರಿಗೆ ತೆರಳುವರು. ಸದಾನಂದಗೌಡರು ಭ್ರಷ್ಟಾಚಾರರಹಿತ-ಪಾರದರ್ಶಕ ಆಡಳಿತ ನೀಡಿದ್ದಾರೆ. ಅವರ ಸೇವೆಯನ್ನು ಮುಂದೆಯೂ ಪಕ್ಷ ಬಳಸಿಕೊಳ್ಳಲಿದೆ. ನಾಯಕತ್ವ ಬದಲಾವಣೆ ವರಿಷ್ಠರ ಸಾಮೂಹಿಕ ತೀರ್ಮಾನ~ ಎಂದು ಗಡ್ಕರಿ ಸ್ಪಷ್ಟಪಡಿಸಿದರು.`ಮಂಗಳವಾರ ಬಿಜೆಪಿ ಶಾಸಕಾಂಗ ಪಕ್ಷ ಸಭೆ ಸೇರಿ ಶೆಟ್ಟರ್ ಅವರನ್ನು ಹೊಸ ನಾಯಕನನ್ನಾಗಿ ಆಯ್ಕೆ ಮಾಡಲಿದೆ. ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ಶಾಸಕರು ಹಾಗೂ ನಾಯಕರ ಜತೆ ಜೇಟ್ಲಿ ಹಾಗೂ ರಾಜನಾಥ್‌ಸಿಂಗ್ ಚರ್ಚಿಸಿದ ಬಳಿಕ ದೆಹಲಿಗೆ ವರದಿ ಕಳುಹಿಸಲಿದ್ದಾರೆ. ಸದಾನಂದಗೌಡರಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆಯೂ ನಿರ್ಧಾರ ಆಗಿಲ್ಲ~ ಎಂದು ರಾಜ್ಯದ ಉಸ್ತುವಾರಿ ಹೊತ್ತಿರುವ ಧರ್ಮೇಂದ್ರ ಪ್ರಧಾನ್ ತಿಳಿಸಿದರು.`ವರಿಷ್ಠರ ತಿರ್ಮಾನಕ್ಕೆ ತಲೆಬಾಗುವೆ~: ಬೆಂಗಳೂರಿಗೆ ಹಿಂತಿರುಗುವ ಮೊದಲು ದೆಹಲಿಯಲ್ಲಿ   ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸದಾನಂದಗೌಡರು, `ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ವರಿಷ್ಠರು ನಿಶ್ಚಯಿಸಿದ್ದಾರೆ. ಇದು ರಾಜಕೀಯ ತೀರ್ಮಾನ. ನಿಷ್ಠಾವಂತ ಕಾರ್ಯಕಾರ್ತನಾಗಿ ವರಿಷ್ಠರ ತೀರ್ಮಾನಕ್ಕೆ ತಲೆಬಾಗುತ್ತೇನೆ. ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಶಾಸಕ, ಸಂಸತ್ ಸದಸ್ಯ ಸ್ಥಾನ, ಅಧ್ಯಕ್ಷ ಸ್ಥಾನ ಮತ್ತು ಮುಖ್ಯಮಂತ್ರಿ ಹುದ್ದೆ ದಯಪಾಲಿಸಿದೆ~ ಎಂದು ವಿವರಿಸಿದರು.`ನಾಲ್ಕು ವರ್ಷ ಪಕ್ಷದ ಅಧ್ಯಕ್ಷನಾಗಿದ್ದೆ. ಆ ಸಮಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದ ತೃಪ್ತಿ ಇದೆ. 11 ತಿಂಗಳು 5 ದಿವಸ ಮುಖ್ಯಮಂತ್ರಿ ಆಗಿದ್ದೇನೆ. ಪಕ್ಷಕ್ಕೆ ಗೌರವ ತರುವಂಥ ಕೆಲಸ ಮಾಡಿದ್ದೇನೆ. ಪಕ್ಷಕ್ಕೆ ಶಕ್ತಿ ತುಂಬುವ ಪ್ರಯತ್ನ ಮಾಡಿದ್ದೇನೆ. ಆಡಳಿತ ಸುಧಾರಣೆಗೆ ಕ್ರಮ ಕೈಗೊಂಡಿದ್ದೇನೆ. ನಾನು ಮಾಡಿದ ಕೆಲಸದ ಬಗ್ಗೆ ಜನರು ಮೌಲ್ಯಮಾಪನ ಮಾಡುತ್ತಾರೆ~ ಎಂಬ ವಿಶ್ವಾಸವಿದೆ ಎಂದರು.`ಯಾವುದೇ ಸ್ಥಾನಮಾನದ ಆಸೆ ಇಟ್ಟುಕೊಳ್ಳದೆ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಜಗದೀಶ ಶೆಟ್ಟರ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಬಳಿಕ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸುತ್ತೇನೆ. ಹೊಸ ಮುಖ್ಯಮಂತ್ರಿಗೆ ಎಲ್ಲ ರೀತಿ ಸಹಕಾರ ನೀಡುತ್ತೇನೆ. ಪಕ್ಷವನ್ನು ಪುನಃ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ~ ಎಂದು ಭರವಸೆ ನೀಡಿದರು.`ರಾಜ್ಯದಲ್ಲಿ ಒಳ್ಳೆಯ ಆಡಳಿತ ನೀಡಿದ ನಿಮಗೆ ಪಕ್ಷ ವಂಚನೆ ಮಾಡಿತೆ?~ ಎಂಬ ಪ್ರಶ್ನೆಗೆ, `ನನಗೆ ಹಾಗನಿಸುವುದಿಲ್ಲ. ವರಿಷ್ಠರು ಬೇರೆ ರೀತಿಯಲ್ಲೇ ಆಲೋಚನೆ ಮಾಡಿರಬಹುದು. ನನಗೆ ಸಿಕ್ಕಿರುವ 11 ತಿಂಗಳಲ್ಲಿ ಉತ್ತಮ ಆಡಳಿತ ನೀಡಿದ್ದೇನೆ ಎಂಬ ತೃಪ್ತಿಯಿದೆ. ಅಡ್ವಾಣಿ ಮತ್ತು ಗಡ್ಕರಿ ನನ್ನ ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕಿಂತ ಮತ್ತೇನು ಬೇಕು~ ಎಂದು ಮುಖ್ಯಮಂತ್ರಿ ಕೇಳಿದರು.`ಜಾತಿ ಗಾಳಿ~ಗೆ ಸದಾನಂದ ಗೌಡ ವಿಷಾದ

ನವದೆಹಲಿ `ನನ್ನ ಪದಚ್ಯುತಿಗೆ ಜಾತಿಯೊಂದೇ ಕಾರಣವೆಂದು ಭಾವಿಸುವುದಿಲ್ಲ. ವರಿಷ್ಠರು ಚಿಂತನೆ ಮಾಡಿರುವ ಹಲವು ಕಾರಣಗಳಲ್ಲಿ ಇದೂ ಸೇರಿಕೊಂಡಿರಬಹುದು ಅಷ್ಟೇ. ರಾಜಕಾರಣದಲ್ಲಿ ಜಾತಿ ದೊಡ್ಡ ಪಾತ್ರ ವಹಿಸುತ್ತದೆ ಎಂದು ನನಗನಿಸುವುದಿಲ್ಲ. ಆದರೆ, ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಜಾತಿ ಗಾಳಿ ದಕ್ಷಿಣಕ್ಕೆ ಅದರಲ್ಲೂ ಕರ್ನಾಟಕಕ್ಕೂ ಬೀಸುತ್ತಿರುವುದು ದೊಡ್ಡ ದುರಂತ~ ಎಂದು ವಿಷಾದಿಸಿದರು.`ನಿಮ್ಮ ರಾಜಕೀಯ ಗುರುವೇ(ಯಡಿಯೂರಪ್ಪ) ನಿಮಗೆ ತಿರುಗು ಬಾಣವಾದರೆ?~ ಎಂಬ ಮತ್ತೊಂದು ಪ್ರಶ್ನೆಗೆ, `ನನಗೆ ಬೇರೆ ಬೇರೆ ಹಂತದಲ್ಲಿ ಬೇರೆ ಬೇರೆ ಗುರುಗಳಿದ್ದಾರೆ. ನೀವು ಯಾವ ಗುರುವಿನ ಬಗ್ಗೆ ಮಾತನಾಡುತ್ತಿದ್ದೀರಿ. ನನ್ನ ಮೊದಲ ಗುರು ಈಗಲೂ ನನ್ನ ಜತೆಗಿದ್ದಾರೆ~ ಎಂದು ತಮಾಷೆ ಮಾಡಿದರು. ತಮಗೆ ಸಹಕಾರ ನೀಡಿದ ರಾಜ್ಯದ ಜನರಿಗೆ ಕೃತಜ್ಞತೆ ಸಲ್ಲಿಸಿ ಪತ್ರಿಕಾಗೋಷ್ಠಿ ಮುಗಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.