ಮಂಗಳವಾರ, ಮೇ 18, 2021
28 °C

ಬೆಂಗಳೂರಿಗೆ ಎಂ ವಿ ಸರ್ ಕೊಡುಗೆ

ಎನ್. ಜಗನ್ನಾಥ ಪ್ರಕಾಶ್ Updated:

ಅಕ್ಷರ ಗಾತ್ರ : | |

ವ್ಯಕ್ತಿಯೊಬ್ಬರು ಜೀವಂತ ಇರುವಾಗಲೇ ಸ್ಮರಣಿಯ ಅಂಚೆ ಚೀಟಿ ಪ್ರಕಟಿಸುವುದು ಭಾರತದಲ್ಲಂತೂ ಬಹಳ ವಿರಳ. ಇಂತಹ ಅಪೂರ್ವ ಗೌರವವನ್ನು ಪಡೆದ ಕನ್ನಡಿಗ ಸರ್ ಎಂ. ವಿಶ್ವೇಶ್ವರಯ್ಯನವರು.ಅವರಿಗೆ 100 ವರ್ಷ ತುಂಬಿದ ಸಂದರ್ಭದಲ್ಲಿ (15 ಸೆಪ್ಟೆಂಬರ್ 1960) ಅವರ ಗೌರವಾರ್ಥ ಭಾರತ ಸರ್ಕಾರ ಅಂಚೆ ಚೀಟಿ ಹೊರತಂದಿತ್ತು.ಎಂಜಿನಿಯರಿಂಗ್ ಕೌಶಲ್ಯವನ್ನು ಜನಹಿತಕ್ಕಾಗಿ ಬಳಸಿ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡಿದ ವಿಶ್ವೇಶ್ವರಯ್ಯ ಹುಟ್ಟಿದ್ದು ಗಿರಿಧಾಮ ನಂದಿ ಬೆಟ್ಟದ ತಪ್ಪಲಿನ ಮುದ್ದೇನಹಳ್ಳಿ (ಚಿಕ್ಕಬಳ್ಳಾಪುರ ಜಿಲ್ಲೆ). ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕಂದವಾರ ಹಾಗೂ ಚಿಕ್ಕಬಳ್ಳಾಪುರಗಳಲ್ಲಿ ಪೂರೈಸಿ ಪದವಿ ಪಡೆದಿದ್ದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ.ಉನ್ನತ ವ್ಯಾಸಂಗವನ್ನು ಪುಣೆಯಲ್ಲಿ ಮಾಡಿದ ಅವರು ಮುಂದೆ ಎಂಜಿನಿಯರ್ ಆಗಿ ಅನೇಕ ಕಡೆ ವೃತ್ತಿ ನಡೆಸಿದರು. ಕೊನೆಗೆ ಸ್ವಂತ ರಾಜ್ಯದಲ್ಲಿ ದಿವಾನರಾಗಿ ಕಾರ್ಯ ನಿರ್ವಹಿಸಿದರು. ದೇಶವಿದೇಶಗಳ ಹಲವಾರು ಯೋಜನೆಗಳಿಗೆ ಮಾರ್ಗದರ್ಶಕರಾಗಿದ್ದು ಅವುಗಳ ಅನುಷ್ಠಾನದಿಂದ ನಾಡಿನ ಮುನ್ನಡೆಗೆ ಶ್ರಮಿಸಿದರು. ಕರ್ನಾಟಕದಲ್ಲಿ ಹತ್ತಾರು ಅರ್ಥಪೂರ್ಣ ಹಾಗೂ ರಚನಾತ್ಮಕ ಯೋಜನೆಗಳನ್ನು ಜಾರಿಗೆ ತಂದರು.ತಾವು ದಿವಾನರಾಗುವುದಕ್ಕೆ ಮುನ್ನವೇ ಕಾರ್ಯಾರಂಭವಾಗಿದ್ದ ಕೃಷ್ಣರಾಜ ಸಾಗರ ಅಣೆಕಟ್ಟೆಯನ್ನು ಕಾಲಮಿತಿಯೊಳಗೆ ನಿರ್ಮಿಸಿ ಅದರಿಂದ ಸಹಸ್ರಾರು ಎಕರೆಗಳಿಗೆ ನೀರುಣಿಸುವಂತೆ ಮಾಡಿದರಲ್ಲದೆ ಅಲ್ಲಿಯವರೆಗೆ ಬರಗಾಲದಲ್ಲಿಯೇ ಬಸವಳಿದಿದ್ದ ಜನರಿಗೆ ನೆಮ್ಮದಿಯ ಬದುಕು ನೀಡಲು ಸಹಕರಿಸಿದರು.ಬೆಂಗಳೂರು ಇಂದು ತಾಂತ್ರಿಕ ಶಿಕ್ಷಣ ಕೇಂದ್ರವಾಗಿ ಬೆಳೆಯಲು ಎಂ ವಿ ಅವರ ದೂರದರ್ಶಿತ್ವವೇ ಕಾರಣ. ದಿವಾನರಾಗಿದ್ದಾಗ ಬೆಂಗಳೂರು ಮೆಕಾನಿಕಲ್ ಎಂಜಿನಿಯರಿಂಗ್ ಶಾಲೆಯನ್ನು (1914) ಆರಂಭಿಸಿದರು. ಭಾರತೀಯ ವಿಜ್ಞಾನ ಮಂದಿರ ಸ್ಥಾಪನೆಯಾದಾಗ ಅದರ ಆಡಳಿತ ಮಂಡಲಿ ಸದಸ್ಯರಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.ಶತಮಾನದ ಹೊಸ್ತಿಲಲ್ಲಿರುವ ಮೈಸೂರು ಬ್ಯಾಂಕ್, ಕರ್ನಾಟಕ ಕೈಗಾರಿಕಾ ಹಾಗೂ ವಾಣಿಜ್ಯ ಒಕ್ಕೂಟ (ಎಫ್‌ಕೆಸಿಸಿಐ) ಹುಟ್ಟುಹಾಕಿದವರು ಅವರು. ತಮಗೆ ನಾಗರಿಕರು ನೀಡಿದ ಕಾಣಿಕೆಯ ಹಣವನ್ನು ದೇಣಿಗೆಯಾಗಿ ನೀಡಿ 1943ರಲ್ಲಿ ಜಯಚಾಮರಾಜೇಂದ್ರ ತಾಂತ್ರಿಕ ಶಾಲೆ (ಎಸ್‌ಜೆಪಿ) ಅಸ್ತಿತ್ವಕ್ಕೆ ತಂದ ಎಂ ವಿ, ಬೆಂಗಳೂರಿಗೆ ಭೇಟಿ ನೀಡಿ ತಂಗುವವರಿಗೆ ಶುದ್ಧ ಊಟೋಪಚಾರ ಸಿಗುವಂತೆ ಹೋಟೆಲ್ ಆರಂಭಿಸಲು ಪ್ರೋತ್ಸಾಹಿಸಿದ್ದರು (ಆ ಹೋಟೆಲ್ ಈಗಿಲ್ಲ).ಎಂಜಿನಿಯರಿಂಗ್ ಲೋಕದ ಅದ್ಭುತ ಎನ್ನಿಸಿಕೊಂಡ ಸರ್ ಎಂ. ವಿ. ಅವರ ಗೌರವಾರ್ಥ ಭಾರತೀಯ ಎಂಜಿನಿಯರುಗಳ ಸಂಘ ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಎಂಜಿನಿಯರ್ ದಿನವನ್ನಾಗಿ ಆಚರಿಸುತ್ತದೆ. ಎಸ್‌ಜೆಪಿ ಸೇರಿ ಹಲವು ಸಂಘ ಸಂಸ್ಥೆಗಳಲ್ಲಿ ಸರ್ ಎಂ. ವಿ. ಪ್ರತಿಮೆಗಳು ಅವರ ಸೇವೆಯನ್ನು ಸ್ಮರಿಸುವಂತೆ ಮಾಡಿವೆ.ಭಾರತ ಸರ್ಕಾರ ಅವರ ಹೆಸರಿನಲ್ಲಿ ಕಸ್ತೂರಬಾ ರಸ್ತೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಿದೆ (ಸರ್ ಎಂ. ವಿ. ಅವರ 150ನೇ ವರ್ಷಾಚರಣೆ ಪ್ರಯುಕ್ತ ವಸ್ತುಸಂಗ್ರಹಾಲಯದಲ್ಲಿ ಎಂ. ವಿ. ಬದುಕು - ಸಾಧನೆ ಕುರಿತ ಫೋಟೋ ಪ್ರದರ್ಶನ ಈಗ ನಡೆಯುತ್ತಿದೆ).ಪದವಿ ಓದಲು ಬೆಂಗಳೂರಿಗೆ ಬಂದ ಎಂ. ವಿ. ಅನೇಕ ಸಂದರ್ಭಗಳಲ್ಲಿ ಬೆಂಗಳೂರಿನಲ್ಲಿ ವಾಸಿಸಿದರಲ್ಲದೆ ಜೀವನದ ಕೊನೆ ದಿನಗಳನ್ನು ಇಲ್ಲೇ ಕಳೆದರು.

ದಿವಾನರಾಗಿದ್ದಾಗ ಬಾಲಬ್ರೂಯಿ ಕಟ್ಟಡದಲ್ಲಿ ವಾಸವಿದ್ದರು. ನಂತರ ಈಗಿನ ಪ್ರಧಾನ ಅಂಚೆ ಕಚೇರಿ ಮುಂದಿದ್ದ ಬಂಗಲೆಗೆ ಸ್ಥಳಾಂತರಗೊಂಡರು. ಈ ಸ್ಥಳದಲ್ಲಿಯೇ ಈಗ ಅನೇಕ ಸರ್ಕಾರಿ ಕಚೇರಿಗಳಿರುವ ವಿಶ್ವೇಶ್ವರಯ್ಯ ಗೋಪುರ ತಲೆ ಎತ್ತಿವೆ.ನೂರ ಎರಡು ವರ್ಷಗಳ ಸಾರ್ಥಕ ಜೀವನ ನಡೆಸಿದ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮ ಶತಮಾನೋತ್ಸವವನ್ನು ಭಾರತದಾದ್ಯಂತ ಆಚರಿಸಲಾಯಿತು. (15 ಸೆಪ್ಟೆಂಬರ್ 1960) ಬೆಂಗಳೂರಿನಲ್ಲಿ ನಡೆದ ಮುಖ್ಯ ಸಭಾರಂಭಕ್ಕೆ ಆಗಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಆಗಮಿಸಿದ್ದರು. ಆ ಸಂದರ್ಭದಲ್ಲಿ ಭಾರತೀಯ ಅಂಚೆ ಮತ್ತು ತಂತಿ ಇಲಾಖೆ ಹೊರತಂದ ಸರ್ ಎಂ. ವಿ. ಸ್ಮರಣಾರ್ಥ ಅಂಚೆ ಚೀಟಿಗೆ ಈಗ 50 ವರ್ಷ.ನವದೆಹಲಿಯ ಭಾರತೀಯ ಮುದ್ರಣಾಲಯವು ಪ್ರಿಂಟೊ ಲಿತೋವಿಂಗ್ ವಿನ್ಯಾಸಗೊಳಿಸಿದ ಮೈಸೂರು ಪೇಟಾಧಾರಿ ಸರ್ ಎಂ. ವಿ. ಅವರ 15 ಪೈಸೆ ಮುಖ ಬೆಲೆಯ ಅಂಚೆ ಚೀಟಿಯನ್ನು ಮುದ್ರಿಸಿತು. ಆಗ ಬಿಡುಗಡೆಯಾದ ಸ್ಟ್ಯಾಂಪುಗಳ ಸಂಖ್ಯೆ 110 ಲಕ್ಷ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.