ಮಂಗಳವಾರ, ಜೂನ್ 15, 2021
27 °C

ಬೆಂಗಳೂರು ಉತ್ತರದ ಟಿಕೆಟ್‌ ಡಿವಿಎಸ್‌ಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಆರ್‌.ಅಶೋಕ ಹಿಂದೇಟು ಹಾಕುತ್ತಿರುವ ಕಾರಣ ಆ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರನ್ನು ಕಣಕ್ಕೆ ಇಳಿಸಲು ಬಿಜೆಪಿ ಚಿಂತನೆ ನಡೆಸಿದೆ.‘ಅಶೋಕ ಸ್ಪರ್ಧಿಸುವುದಾದರೆ ಸ್ಪರ್ಧಿಸಲಿ. ಒಂದು ವೇಳೆ ಅವರು ಸ್ಪರ್ಧಿಸದಿದ್ದರೆ ಅದನ್ನು ಸದಾನಂದ ಗೌಡರಿಗೆ ನೀಡಲು ಪಕ್ಷದ ಪ್ರಮುಖರು ನಿರ್ಧರಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.ಈ ಸಂಬಂಧ ಚರ್ಚಿಸಲು ಪ್ರಮುಖರು ಸೋಮವಾರ ಸಂಜೆ ಸಭೆ ಸೇರುವ ಸಾಧ್ಯತೆ ಇದೆ. ರಾಜ್ಯಸಭೆ ವಿರೋಧ ಪಕ್ಷದ ನಾಯಕ ಅರುಣ್ ಜೇಟ್ಲಿ ಅವರು ಇದೇ 5ರಂದು ನಗರಕ್ಕೆ ಬರುತ್ತಿದ್ದು, ಆ ವೇಳೆಗೆ ಆಂತರಿಕ ಗೊಂದಲಗಳನ್ನು ಬಗೆ­ಹರಿಸಿ­ಕೊಳ್ಳಲು ಮುಖಂಡರು ತೀರ್ಮಾನಿಸಿದ್ದಾರೆ.ಸೋಮವಾರ (ಮಾ.3) ಎಲ್ಲ ಕ್ಷೇತ್ರಗಳ ಚುನಾವಣಾ ನಿರ್ವಹಣಾ ಸಮಿತಿಯ ಸಭೆ ನಡೆಯಲಿದ್ದು, ಅದರ ಬಳಿಕ ಪ್ರಮುಖರು ಸಭೆ ಸೇರಲಿದ್ದಾರೆ ಎಂದು ಗೊತ್ತಾಗಿದೆ.ಅಶೋಕ ಅವರು ಚುನಾವಣೆಗೆ ಸ್ಪರ್ಧಿಸದೆ ಮಲ್ಲೇಶ್ವರ ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರನ್ನು ಕಣಕ್ಕೆ ಇಳಿ­ಸುವ ಸೂಚನೆ ನೀಡಿದ್ದಾರೆ. ಅದು ಪಕ್ಷದ ಮುಖಂಡರಿಗೆ ಇಷ್ಟವಾಗಿಲ್ಲ ಎನ್ನಲಾಗಿದೆ.ಮೈಸೂರು ಕ್ಷೇತ್ರದಿಂದ ಮಾಜಿ ಸಚಿವ ಸಿ.ಎಚ್‌.­ವಿಜಯ್‌­ಶಂಕರ್‌ ಅವರನ್ನೇ ಕಣಕ್ಕೆ ಇಳಿಸುವ ಸಾಧ್ಯತೆ ಇದೆ.

ಚಿಕ್ಕಮಗಳೂರು– ಉಡುಪಿ ಕ್ಷೇತ್ರದಿಂದ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಕಣಕ್ಕೆ ಇಳಿಸಲು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಶಾಸಕ ಸಿ.ಟಿ.ರವಿ ಅವ­ರನ್ನು ಅಭ್ಯರ್ಥಿ ಮಾಡುವುದು ಬಹುತೇಕ ಖಚಿತ ಎನ್ನಲಾಗಿದೆ.ಚಿತ್ರದುರ್ಗ ಕ್ಷೇತ್ರದಿಂದ ಹಾಲಿ ಸಂಸದ ಜನಾರ್ಧನ ಸ್ವಾಮಿ ಅವರಿಗೆ ಟಿಕೆಟ್‌ ನೀಡಲು ಯಡಿಯೂರಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಕಾರಣಕ್ಕೆ ಗೊಂದಲ ಮುಂದುವರಿದಿದೆ. ಆನೇಕಲ್‌ ನಾರಾಯಣಸ್ವಾಮಿ ಅವರ ಹೆಸರು ಕೂಡ ಈ ಕ್ಷೇತ್ರಕ್ಕೆ ಕೇಳಿಬರುತ್ತಿದೆ.ಉತ್ತರ ಕನ್ನಡ ಕ್ಷೇತ್ರದಿಂದ ಹಾಲಿ ಸದಸ್ಯ ಅನಂತಕುಮಾರ ಹೆಗಡೆ ಅವರಿಗೇ ಟಿಕೆಟ್‌ ನೀಡುವುದು ಬಹುತೇಕ ಖಚಿತ­ವಾಗಿದೆ. ಇದಕ್ಕೆ ಸ್ಥಳೀಯರ ವಿರೋಧ ಇದ್ದರೂ ಅವರನ್ನು ಬದಲಿ­ಸದಿರಲು ಪಕ್ಷ ತೀರ್ಮಾನಿಸಿದೆ ಎನ್ನಲಾಗಿದೆ.ಬಿಎಸ್‌ವೈ ಪಟ್ಟು: ತುಮಕೂರು ಕ್ಷೇತ್ರದ ಟಿಕೆಟ್‌ ಅನ್ನು ತಮ್ಮ ಆಪ್ತರಾದ ಜಿ.ಎಸ್‌.ಬಸವರಾಜು ಅವರಿಗೇ ನೀಡಬೇಕು ಎಂದು ಯಡಿಯೂರಪ್ಪ ಪಟ್ಟುಹಿಡಿದಿದ್ದಾರೆ. ವರಿಷ್ಠರ ವಿರುದ್ಧವೇ ಟೀಕೆ ಮಾಡಿರುವ ಬಸವರಾಜು ಅವರಿಗೆ ಟಿಕೆಟ್‌ ನೀಡುವುದು ಬೇಡ ಎಂದು ಪಕ್ಷ ಹೇಳುತ್ತಿದ್ದರೂ ಅದನ್ನು ಕೇಳುವ ಸ್ಥಿತಿಯಲ್ಲಿ ಯಡಿಯೂರಪ್ಪ ಇಲ್ಲ ಎನ್ನಲಾಗಿದೆ.ಬಿಎಸ್‌ಆರ್‌ ವಿಲೀನಕ್ಕೆ ಬಿಜೆಪಿ ವರಿಷ್ಠರ ಅಸ್ತು

ಶಾಸಕ ಬಿ.ಶ್ರೀರಾಮುಲು ನೇತೃತ್ವದ ಬಿಎಸ್ಆರ್‌ ಕಾಂಗ್ರೆಸ್‌ ಪಕ್ಷ­ವನ್ನು ಬಿಜೆಪಿಯಲ್ಲಿ ವಿಲೀನ ಮಾಡಲು ದೆಹಲಿ ವರಿಷ್ಠರಿಂದ ಹಸಿರುನಿಶಾನೆ ಸಿಕ್ಕಿದೆ.

ಸ್ಥಳೀಯ ಮಟ್ಟದಲ್ಲೇ ಈ ಪ್ರಕ್ರಿಯೆ ಪೂರ್ಣಗೊ­ಳಿಸು­ವಂತೆ ಬಿಜೆಪಿಯ ವರಿಷ್ಠರು ರಾಜ್ಯ ನಾಯಕರಿಗೆ ಸಲಹೆ ಮಾಡಿ­ದ್ದಾರೆ ಎನ್ನಲಾಗಿದೆ.

ಯಡಿಯೂರಪ್ಪ ಅವರು ಕೆಜೆಪಿಯನ್ನು ವಿಲೀನಗೊಳಿಸಿದ ಹಾಗೆ ರಾಜ್ಯ ಮಟ್ಟ­ದಲ್ಲೇ ಬಿಎಸ್‌ಆರ್‌ ಕಾಂಗ್ರೆಸ್‌ನ ವಿಲೀನ ಪ್ರಕ್ರಿಯೆ ನಡೆಸಬೇಕು ಎಂದು ವರಿಷ್ಠರು ಸೂಚಿಸಿ­ದ್ದಾರೆ. ಇನ್ನೊಂದು ವಾರದಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.ಬಿಜೆಪಿ ಸೇರಿದ ಬಳಿಕ ಶ್ರೀರಾಮುಲು ಅವರೇ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. ರಾಯಚೂರು ಕ್ಷೇತ್ರದಿಂದ ಶಿವನಗೌಡ ನಾಯಕ್‌ ಅವರನ್ನು ಕಣಕ್ಕೆ ಇಳಿಸಲು ಬಿಜೆಪಿ ಚಿಂತನೆ ನಡೆಸಿದ್ದು, ಅದಕ್ಕೆ ಶ್ರೀರಾಮುಲು ಒಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.