ಸೋಮವಾರ, ಮಾರ್ಚ್ 8, 2021
29 °C

ಬೆಂಗಳೂರು; ಗರಿಗೆದರಿದ ಮನೆ ಖರೀದಿ

ಈರಪ್ಪ ಹಳಕಟ್ಟಿ Updated:

ಅಕ್ಷರ ಗಾತ್ರ : | |

ಬೆಂಗಳೂರು; ಗರಿಗೆದರಿದ ಮನೆ ಖರೀದಿ

ಹೊಸ ವರ್ಷದಲ್ಲಿ ದೇಶದ ವಿವಿಧ ರಂಗಗಳ ವಹಿವಾಟುಗಳು ಗರಿಗೆದರುವ ಮೂಲಕ ದೇಶದ ಆರ್ಥಿಕ ವ್ಯವಸ್ಥೆಯು ಪುನಶ್ಚೇತನ ಕಾಣಲಿದೆ ಎಂದು ಕೇಳಿ ಬರುತ್ತಿದ್ದ ಮಾರುಕಟ್ಟೆ ಪರಿಣಿತರ ಭವಿಷ್ಯ ಸಾಕಾರಗೊಳ್ಳುತ್ತಿರುವ ಬೆಳವಣಿಗೆಗಳು ಕಂಡುಬರುತ್ತಿವೆ.ಕಳೆದ ಸಾಲಿನಲ್ಲಿ ಹಲವಾರು ಕಾರಣಗಳಿಂದ ಹಳಿತಪ್ಪಿ ಪಾತಾಳಕ್ಕೆ ಕುಸಿದಿದ್ದ ರಿಯಲ್ ಎಸ್ಟೇಟ್ ಉದ್ಯಮ ದಲ್ಲಿ ಹೊಸ ವರ್ಷದಲ್ಲಿ ಚೇತರಿಕೆ ಕಂಡುಬಂದಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ‘2014ರಲ್ಲಿ ಬೆಂಗಳೂರು ಮನೆ ಖರೀದಿಯಲ್ಲಿ ಅತಿ ಹೆಚ್ಚು  ಆದ್ಯತೆಯ ನಗರ’ ಎಂಬ ಸಮೀಕ್ಷೆಯೂ ಹೊರಬಿದ್ದಿದೆ.ನೂತನ ವರ್ಷದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದ ಸ್ಥಿತಿಗತಿಯನ್ನು ಅರಿಯುವ ನಿಟ್ಟಿನಲ್ಲಿ ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ದೇಶದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ನಗರ ಪ್ರದೇಶಗಳ ಶ್ರಮಿಕ ವರ್ಗದ ಬಹುತೇಕರು ಬೆಂಗಳೂರಿನಲ್ಲಿ ಮನೆ ಖರೀದಿಸುವ ತಮ್ಮ ಮನದಾಸೆಯನ್ನು ಹೊರಗೆ ಹಾಕಿದ್ದಾರೆ.ದಿನೇ ದಿನೇ ಅಭಿವೃದ್ಧಿ ಹೊಂದು ತ್ತಿರುವ ಉತ್ತಮ ಸಂಪರ್ಕ ವ್ಯವಸ್ಥೆ, ಮೂಲ ಸೌಕರ್ಯಗಳು ಮತ್ತು ಅತ್ಯಾವಶ್ಯಕ ಸೌಲಭ್ಯಗಳು... ಈ ಕಾರಣಗಳಿಂದ ವಾಣಿಜ್ಯ ಸಂಕೀರ್ಣ ಗಳಿಗಿಂತಲೂ ವಸತಿ ಸಮುಚ್ಛಯಗಳಲ್ಲಿ ಮಾಡಿದ ಹೂಡಿಕೆಯು ಹೆಚ್ಚು ಲಾಭ ದಾಯಕವಾಗಲಿದೆ ಎಂಬ ಲೆಕ್ಕಾಚಾರ ವನ್ನು ನಗರ ಪ್ರದೇಶದ ಶೇ 49ರಷ್ಟು ಉದ್ಯೋಗಿಗಳು ಸಮೀಕ್ಷೆಯಲ್ಲಿ ವ್ಯಕ್ತ ಪಡಿಸಿದ್ದಾರೆ ಎಂದು ಹೇಳುತ್ತಾರೆ ‘ಅಸೋಚಾಂ’ನ ಪ್ರಧಾನ ಕಾರ್ಯದರ್ಶಿ ಡಿ.ಎಸ್.ರಾವತ್.ಸಮೀಕ್ಷೆ ವೇಳೆ ಶೇ 52ರಷ್ಟು ವೃತ್ತಿಪರರು ದೇಶದ ಮೊದಲ ಶ್ರೇಣಿಯ ನಗರಗಳಾದ ಬೆಂಗಳೂರು (1), ಮುಂಬೈ (2), ದೆಹಲಿ (3), ಕೋಲ್ಕತ್ತ (4), ರಾಷ್ಟ್ರೀಯ ರಾಜಧಾನಿ ಪ್ರದೇಶ(ಎನ್‌ಸಿಆರ್‌) ಮತ್ತು ಹೈದರಾಬಾದ್‌ನಲ್ಲಿನ ರಿಯಲ್ ಎಸ್ಟೇಟ್ ಆಸ್ತಿಗಳ ಮೇಲೆ ಹೂಡಿಕೆ ಮಾಡಿ ಗರಿಷ್ಠ ಮಟ್ಟದ ಆದಾಯ ಗಳಿಸಬೇಕೆಂಬ ಬಯಕೆ ಹೊಂದಿರುವುದಾಗಿ ಹೇಳಿದ್ದಾರೆ.ಬೆಂಗಳೂರಿಗೆ ಆದ್ಯತೆ

ಮನೆ ಖರೀದಿಗಾಗಿ ಹುಡುಕಾಟದಲ್ಲಿರುವವರ ಗಮನವನ್ನು ನಿರಂತರವಾಗಿ ಸೆಳೆಯುತ್ತಿರುವ ಮೆಟ್ರೊಪಾಲಿಟನ್ ನಗರಗಳ ಪೈಕಿ ಬೆಂಗಳೂರು, ಮುಂಬೈ, ದೆಹಲಿ, ಅಹಮದಾಬಾದ್ ಮತ್ತು ಪುಣೆ ಈ ಐದು ಪ್ರಮುಖ ನಗರಗಳಲ್ಲಿ ಮನೆ ಖರೀದಿಸುವ ಆಸೆಯನ್ನು ಈ ಸಮೀಕ್ಷೆಗೆ ಪ್ರತಿಕ್ರಿಯಿಸಿರುವವರಲ್ಲಿ ಶೇ 52ರಷ್ಟು ಜನರು ವ್ಯಕ್ತಪಡಿಸಿದ್ದಾರೆ. ಇವರಲ್ಲಿ ಬಹುತೇಕರು ಮನೆ ಖರೀದಿಸಲು ಬೆಂಗಳೂರಿಗೆ ಮೊದಲ ಆದ್ಯತೆ ನೀಡಿದ್ದಾರೆ.ಪ್ರಸಕ್ತ ಸಾಲಿನಲ್ಲಿ ದೇಶದ ಪ್ರಮುಖ ನಗರಗಳ ಪೈಕಿ ಬೆಂಗಳೂರು ರಿಯಲ್ ಎಸ್ಟೇಟ್ ಹೂಡಿಕೆಗೆ ಹೆಚ್ಚಿನ ಜನರಿಗೆ ಇಷ್ಟವಾದ ಪ್ರಮುಖ ನಗರ ಎಂದೇ ಗುರುತಿಸಿಕೊಂಡಿದೆ. ಬೆಂಗಳೂರು ನಂತರದಲ್ಲಿ ತನ್ನೊಡಲಲ್ಲಿ ವೈವಿಧ್ಯ­ಮಯ ಕೆಲಸ ಗಳು, ವಿಪುಲ ಉದ್ಯೋಗಾವಕಾಶ, ಕಾಸ್ಮೊಪಾಲಿಟನ್ ಸಂಸ್ಕೃತಿ ಸೇರಿ­ದಂತೆ ಹಲವು ವೈಶಿಷ್ಟ್ಯವನ್ನು ಬಚ್ಚಿಟ್ಟು ಕೊಂಡಿರುವ ಮಾಯಾ ನಗರಿ ಮುಂಬೈ (ಶೇ 10) ಕೂಡ ಮನೆ ಖರೀದಿಸಲು ಬಯಸುವವರನ್ನು ಮರಳು ಮಾಡಿದೆ.ನೂತನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನಗರದಾಚೆಗೂ ಹರಡಿಕೊಳ್ಳುತ್ತಿರುವ ಮೆಟ್ರೊ ರೈಲು ಸೇವೆ ವಿಸ್ತರಣೆಯೊಂದಿಗೆ ಮೂಲ ಸೌಕರ್ಯ ವಿಭಾಗಗಳಲ್ಲಿ ಆರೋಗ್ಯಕರ ಅಭಿವೃದ್ಧಿ ಹೊಂದುತ್ತಿರುವ ದೆಹಲಿ   (ಸದ್ಯ ಶೇ 11) ಬರುವ ವರ್ಷದಲ್ಲಿ ಮನೆ ಖರೀದಿಗಾರರ ಚಿತ್ತವನ್ನು ತನ್ನತ್ತ ಸೆಳೆದುಕೊಳ್ಳುವ ಸಂಭವವಿದೆ ಎನ್ನುತ್ತದೆ ಸಮೀಕ್ಷೆ.2014ರಲ್ಲಿ ರಿಯಲ್ ಎಸ್ಟೇಟ್ ಹೂಡಿಕೆ ಮಾಡಲು ಬಯಸುವ ಇತರ ಪ್ರಮುಖ ನಗರ ಪೈಕಿ ಅಹಮದಾಬಾದ್ (ಶೇ 9), ಪುಣೆ (ಶೇ 8) ಮತ್ತು ಹೈದರಾಬಾದ್ (ಶೇ 6) ಮನೆ ಖರೀದಿ ದಾರರ ಗಮನವನ್ನು ತಮ್ಮತ್ತ ಸೆಳೆಯು ತ್ತಿದ್ದರೆ, ಈ ನಗರಗಳ ತರುವಾಯ ಡೆಹ್ರಾಡೂನ್ (ಶೇ 4) ಮತ್ತು ಕೋಲ್ಕತ್ತ (ಶೇ 3) ನಗರ ಕೂಡ ಖರೀದಿದಾರರ ಆದ್ಯತೆಯ ಪಟ್ಟಿಯಲ್ಲಿವೆ.ಒಟ್ಟು ಮನೆ ಖರೀದಿದಾರರ ಪೈಕಿ ದೊಡ್ಡ ಪ್ರಮಾಣದಲ್ಲಿ ಅಂದರೆ ಶೇ 65ರಷ್ಟು ಖರೀದಿದಾರರು ತಮ್ಮ ಸ್ವಂತ ಬಳಕೆಗಾಗಿ ಮನೆ ಖರೀದಿಸಲು ಮುಂದಾಗಿದ್ದಾರೆ.ಸಮೀಕ್ಷೆಗೆ ದೆಹಲಿಯಲ್ಲಿ ಪ್ರತಿಕ್ರಿಯಿಸಿದವರ ಪೈಕಿ ಶೇ 68ರಷ್ಟು ಜನರು ತಾವು ಮನೆ ಖರೀದಿಸುತ್ತಿರುವುದು ಸ್ವಂತ ಉಪಯೋಗಕ್ಕಾಗಿ ಎಂದು ಹೇಳಿದ್ದರೆ, ಶೇ 19ರಷ್ಟು ಜನರು ದೀರ್ಘಾವಧಿ ಹೂಡಿಕೆಗಾಗಿ ಮತ್ತು ಶೇ 13ರಷ್ಟು ಖರೀದಿಗಾರರು ಅಲ್ಪಾವಧಿ ಹೂಡಿಕೆಯ ದೃಷ್ಟಿಯಿಂದ ಮನೆ ಖರೀದಿಸಲು ಬಯಸಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.2014ರ ಆರಂಭದೊಂದಿಗೆ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮೂಡುತ್ತಿರುವ ಈ ಸಂಚಲನಕ್ಕೆ ಗೃಹಸಾಲದ ಬಡ್ಡಿದರಗಳನ್ನು ಸ್ಥಿರ ವಾಗಿಡಬೇಕೆಂಬ ‘ಆರ್‌ಬಿಐ’ ಸಲಹೆಯೇ ಕಾರಣವಾಗಿರುವ ಸಾಧ್ಯತೆ ಇದೆ.ದೇಶದಾದ್ಯಂತ ಮನೆ ಖರೀದಿಸಲು ಇಚ್ಛಿಸುತ್ತಿರುವವರಲ್ಲಿ ಶೇ 49ರಷ್ಟು ಜನರು 2014ರಲ್ಲಿ ಗೃಹಸಾಲ ಬಡ್ಡಿ ದರಗಳು ಏರಿಕೆಯಾಗಲಿವೆ ಎಂಬ ನಿರೀಕ್ಷೆಯ ಆತಂಕದಲ್ಲಿದ್ದರೆ, ಶೇ 26 ಆಶಾವಾದಿಗಳು ಬಡ್ಡಿದರಗಳು ಕುಸಿಯ ಲಿವೆ ಎಂಬ ಖುಷಿಯಲ್ಲಿದ್ದಾರೆ. ಉಳಿದವರು ಮುಂಬರುವ ವರ್ಷದಲ್ಲಿ ಗೃಹಸಾಲದ ಬಡ್ಡಿದರಗಳು ಸ್ಥಿರವಾಗಿರ ಲಿವೆ ಎಂದೇ ಕನಸು ಕಾಣುತ್ತಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.