ದುಬೈ (ಪಿಟಿಐ): ಆರು ತಿಂಗಳ ಹಿಂದೆ ಇಲ್ಲಿ ಕ್ಯಾನ್ಸರ್(ಲ್ಯುಕೇಮಿಯಾ) ರೋಗ ಲಕ್ಷಣಕ್ಕಾಗಿ ವೈದ್ಯಕೀಯ ತಪಾಸಣೆ ಮಾಡಿಸಿಕೊಂಡಿದ್ದ ಒಮಾನ್‌ನ ಮೂರು ವರ್ಷದ ಹೆಣ್ಣು ಮಗುವೊಂದಕ್ಕೆ ಬೆಂಗಳೂರಿನ ವೈದ್ಯರು ಯಶಸ್ವಿ ರಕ್ತಮಜ್ಜೆ (ಮೂಳೆ ನೆಣದ ಕಸಿ) ಶಸ್ತ್ರಚಿಕಿತ್ಸೆಯನ್ನು ನಡೆಸುವ ಮೂಲಕ ಆಕೆಗೆ ಹೊಸ ಜೀವನ ನಡೆಸಲು ಅನುವು ಮಾಡಿದ್ದಾರೆ.
ಮರಿಯಾಮ್ ಬಿಂಟ್ ಅಬು ಅಹ್ಮದ್ ಈ ತುರ್ತು ಶಸ್ತ್ರಕ್ರಿಯೆಗೆ ಒಳಗಾದ ಮಗು. ಈ ಮಗುವಿಗೆ ಎಂಟು ವರ್ಷದ ಸಹೋದರ ಅಬ್ದುಲ್ಲಾ ಎಲುಬು ನೆಣದ ದಾನ ಮಾಡಲು ಶಕ್ತನಾಗಿದ್ದರೂ, ಸೂಕ್ತ ಆಸ್ಪತ್ರೆ ಮತ್ತು ವೈದ್ಯರಿಗಾಗಿ ಪೋಷಕರು ಹುಡುಕಾಡುತ್ತಿದ್ದರು. ತೀವ್ರ ಹುಡುಕಾಟ ಮತ್ತು ವಿಶ್ಲೇಷಣೆಯ ಬಳಿಕ ಅವರಿಗೆ ಕಂಡದ್ದು ಬೆಂಗಳೂರಿನ ಅತ್ಯಾಧುನಿಕ ನಾರಾಯಣ ಹೃದಯಾಲಯ ಆಸ್ಪತ್ರೆ ಮತ್ತು ಮಜುಂದಾರ್ ಷಾ ಕ್ಯಾನ್ಸರ್ ಕೇಂದ್ರ ಎಂಬುದಾಗಿ ‘ಗಲ್ಫ್ ನ್ಯೂಸ್’ ವರದಿ ಮಾಡಿದೆ.
‘ನಾವು ದೂರವನ್ನು ಲೆಕ್ಕಿಸದೆ, ಪ್ರಯಾಣ ಮಾಡಲು ಮನಸ್ಸು ಮಾಡಿದ್ದರಿಂದಾಗಿ ನಮ್ಮ ಮಗುವನ್ನು ಉಳಿಸಿಕೊಳ್ಳುವುದು ಸಾಧ್ಯವಾಯಿತು. ಶಸ್ತ್ರಕ್ರಿಯೆಯ ಸಂಪೂರ್ಣ ವೆಚ್ಚವನ್ನು (ಸುಮಾರು 23,270 ಅಮೆರಿಕನ್ ಡಾಲರ್ ಅಥವಾ 9,000 ಒಮಾನಿ ರಿಯಾಲ್ಸ್) ಒಮಾನ್ ಸರ್ಕಾರವೇ ಭರಿಸಿದೆ’ ಎಂದು ಒಮಾನ್‌ನ ಸರ್ಕಾರಿ ನೌಕರರಾದ ಮರಿಯಾಂಳ ತಂದೆ ಅಬು ಅಹ್ಮದ್ ಸಂತಸ ವ್ಯಕ್ತಪಡಿಸಿರುವುದಾಗಿ ಪತ್ರಿಕೆ ತಿಳಿಸಿದೆ.
‘ಯಶಸ್ವಿ ಶಸ್ತ್ರಚಿಕಿತ್ಸೆ ಪಡೆದ ಈ ಮಗು ಇನ್ನು ಮುಂದೆ ಎಲ್ಲರಂತೆಯೇ ಸಂಪೂರ್ಣ ಸಾಮಾನ್ಯ ಜೀವನ ನಡೆಸಬಹುದು’ ಎಂದು ಆಸ್ಪತ್ರೆಯ ರಕ್ತಶಾಸ್ತ್ರಜ್ಞ ಡಾ. ಶರತ್ ದಾಮೋದರ್ ತಿಳಿಸಿರುವುದಾಗಿ ಪತ್ರಿಕೆ ಪ್ರಕಟಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.