ಶನಿವಾರ, ಜನವರಿ 18, 2020
26 °C

ಬೆಳಗಾವಿಯಲ್ಲಿ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ನೀರಿನಲ್ಲಿ ಈಜಬೇಕಿದ್ದ ಮೀನು ನೋಡ ನೋಡುತ್ತಿದ್ದಂತೆ ಬಾನಲ್ಲಿ ತೇಲಾಡಿತು; ಹಿಮ ನದಿಯಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತ ಆಟವಾಡಬೇಕಿದ್ದ ಪೆಂಗ್ವಿನ್ ಮುಗಿಲೆತ್ತರಕ್ಕೆ ಹಾರಿತು..!ಪರಿವರ್ತನ ಪರಿವಾರವು ಬೆಳಗಾವಿಯ ನಾನಾವಾಡಿ ಮೈದಾನದಲ್ಲಿ ಎರಡು ದಿನ ಹಮ್ಮಿಕೊಂಡಿರುವ    2ನೇ ಅಂತರರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಭಾನುವಾರ ಚಾಲನೆ ದೊರೆಯುತ್ತಿದ್ದಂತೆಯೇ ಬಾನಲ್ಲಿ ವೈವಿಧ್ಯ ಮಯ ಗಾಳಿಪಟಗಳ ಚಿತ್ತಾರ ಮೂಡಿತು. ದೇಶ- ವಿದೇಶಗಳಿಂದ ಆಗಮಿಸಿದ್ದ ಪಟುಗಳು ತಾವು ತಂದಿದ್ದ ಬಣ್ಣ-ಬಣ್ಣದ ಬೃಹತ್ ಗಾತ್ರದ ಗಾಳಿಪಟಗಳನ್ನು ಹಾರಿಸುವ ಮೂಲಕ ನೆರೆದಿದ್ದ ಸಾವಿರಾರು ಜನರನ್ನು ರಂಜಿಸಿದರು. ಇಂಗ್ಲೆಂಡ್, ಅಮೆರಿಕ, ಟರ್ಕಿ, ಸಿಂಗಾಪುರ, ಐರ‌್ಲೆಂಡ್, ನೆದರ್‌ಲ್ಯಾಂಡ್ ಸೇರಿದಂತೆ 22 ವಿದೇಶಿ ತಂಡಗಳ 50ಕ್ಕೂ ಹೆಚ್ಚು ಪಟುಗಳು ನಾನಾ ವಾಡಿಯ ಮೈದಾನದಲ್ಲಿ ಪತಂಗಗಳ ಮೆರವಣಿಗೆ ನಡೆಸಿದರು. ಬೃಹತ್ ಗಾತ್ರದ ಮೀನು, ಪೆಂಗ್ವಿನ್, ಆಮೆ, ಬ್ಯಾಟ್‌ಮನ್ ಹೀಗೆ ಹಲವು ಬಗೆಯ ಗಾಳಿಪಟಗಳು ನೈಜ ಹಕ್ಕಿಗಳೊಂದಿಗೆ ಬಾನೆತ್ತರದಲ್ಲಿ ಹಾರಿದವು. ಫ್ರಾನ್ಸ್ ದೇಶದ ತಂಡ ತಂದಿದ್ದ ಮೈಕಲ್ ಜಾಕ್ಸನ್ ರೂಪಕದ ಗಾಳಿಪಟವು ಗಾಳಿಯಲ್ಲಿ ಪಾಪ್ ನೃತ್ಯ ಮಾಡಿತು! ಕೊರಿಯಾ ಕೈಟ್ ಅಸೋಸಿಯೇಶನ್ ತಂಡವು ಸುಮಾರು 150ಕ್ಕೂ ಹೆಚ್ಚಿನ ಗಾಳಿಪಟಗಳಿರುವ ಸರಮಾಲೆಯನ್ನು ಹಾರಿಸುವ ಮೂಲಕ ಗಮನ ಸೆಳೆಯಿತು.ಅಹ್ಮದಾಬಾದ್, ಜೋಧಪುರ, ತಮಿಳುನಾಡು, ಮೈಸೂರು, ಬೆಳಗಾವಿ ಸೇರಿದಂತೆ ದೇಶದ ಸುಮಾರು 25 ತಂಡಗಳ 80 ಪಟುಗಳು ಉತ್ಸವದಲ್ಲಿ ತಮ್ಮ ಪ್ರತಿಭೆಯನ್ನು ಸಾದರಪಡಿಸಿ ದರು. ಸಂಜೆಯಾದ ಬಳಿಕ ವಿವಿಧ ವಿದ್ಯುತ್ ಬಲ್ಬ್‌ಗಳಿಂದ ಅಲಂಕೃತ ಗಾಳಿಪಟಗಳನ್ನು ಹಾರಿಸುವ ಮೂಲಕ ಹೊಸ ನಕ್ಷತ್ರ ಲೋಕವನ್ನೇ ಸೃಷ್ಟಿಸಿದರು.  ಗಾಳಿಪಟ ಉತ್ಸವ ವೀಕ್ಷಿಸಲು ಜಿಲ್ಲೆಯ ಸುತ್ತ ಮುತ್ತ ಲಿನಿಂದ ಜನಸಾಗರವೇ ನಾನಾವಾಡಿ ಮೈದಾನಕ್ಕೆ ಹರಿದು ಬಂದಿತ್ತು.

ಪ್ರತಿಕ್ರಿಯಿಸಿ (+)