ಗುರುವಾರ , ಆಗಸ್ಟ್ 5, 2021
22 °C
ನಗರಾಭಿವೃದ್ಧಿ ಸಚಿವ ವಿನಯಕುಮಾರ ಸೊರಕೆ ಭರವಸೆ

ಬೆಳಗಾವಿ ಅಭಿವೃದ್ಧಿ: ವಿಶೇಷ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: `ನಗರದ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವುದು' ಎಂದು ನಗರಾಭಿವೃದ್ಧಿ ಸಚಿವ ವಿನಯಕುಮಾರ ಸೊರಕೆ ಭರವಸೆ ನೀಡಿದರು.ಇಲ್ಲಿನ ಕ್ಲಬ್ ರಸ್ತೆಯ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬೆಳಗಾವಿ ಮಹಾನಗರ ಪಾಲಿಕೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಕೆಲಸಗಳು ಉಳ್ಳವರಿಗೆ ಅನುಕೂಲವಾಗುವಂತೆ ನಡೆಯುತ್ತಿವೆ. ಎರಡೂ ಇಲಾಖೆಗಳ ಕಾರ್ಯವೈಖರಿ ಸರಿಯಾದ ದಾರಿಗೆ ತರಲಾಗುವುದು ಎಂದರು.ಮಹಾನಗರ ಪಾಲಿಕೆಗೆ ಬಿಜೆಪಿ ಸರ್ಕಾರ ನೀಡಿದ್ದ ಮೊದಲ ಹಂತದ 100 ಕೋಟಿ ರೂಪಾಯಿ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ. 2ನೇ ಹಂತದ 100 ಕೋಟಿ ರೂಪಾಯಿ ಅನುದಾನವನ್ನು ಪೂರ್ತಿಗೊಳಿಸಿಲ್ಲ. ಸದ್ಯ ಮೂರನೇ ಹಂತದಲ್ಲಿ ಪಾಲಿಕೆಗೆ ಪುನಃ 100 ಕೋಟಿ ರೂಪಾಯಿ ಅನುದಾನವನ್ನು ನೀಡಲು ನಿರ್ಧರಿಸಲಾಗಿದ್ದು, ಪಾಲಿಕೆಯು ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.ನಗರದಲ್ಲಿರುವ ಕೊಳಚೆ ಪ್ರದೇಶವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಪಾಲಿಕೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕುರಿತು ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಲಾಗಿದೆ. ಬೆಳಗಾವಿ ಚಾರಿತ್ರಿಕ ಹಿನ್ನೆಲೆಯುಳ್ಳ ಜಿಲ್ಲೆ. ಕಾರ್ಯಕರ್ತರೇ ಪಕ್ಷದ ಆಸ್ತಿ. ಈ ಹಿನ್ನೆಲೆಯಲ್ಲಿ ಪ್ರತಿ ಬಾರಿ ನಗರಕ್ಕೆ ಆಗಮಿಸಿದಾಗ ಮೊದಲು ಪಕ್ಷದ ಕಚೇರಿಗೆ ಆಗಮಿಸಿ, ಅಲ್ಲಿ ಕಾರ್ಯಕರ್ತರ ಸಮಸ್ಯೆ, ಬೇಡಿಕೆಗಳನ್ನು ಆಲಿಸಿ ನಂತರದಲ್ಲಿ ಪಾಲಿಕೆಯ ಸಭೆಗಳಲ್ಲಿ ಭಾಗವಹಿಸಲಾಗುವುದು ಎಂದರು.ಬಿಜೆಪಿ ಸರ್ಕಾರಕ್ಕೆ ಕೆಟ್ಟ ಹೆಸರು ತಂದು ಕೊಟ್ಟ ಇಲಾಖೆಯೇ ನಗರಾಭಿವೃದ್ಧಿ ಇಲಾಖೆ. ಡಿ ನೋಟಿಫಿಕೇಷನ್ ಪ್ರಕರಣಗಳಲ್ಲಿ ಸಿಲುಕಿ ಮುಖ್ಯಮಂತ್ರಿ ಸೇರಿದಂತೆ ಅನೇಕ ಸಚಿವರು ಜೈಲು ಪಾಲಾಗಿದ್ದನ್ನು ಸ್ಮರಿಸಬಹುದು. ಈ ನಿಟ್ಟಿನಲ್ಲಿ ಅತಿ ಜಾಗರೂಕತೆಯಿಂದ ಕಾರ್ಯನಿರ್ವಹಿಸುವ ಮೂಲಕ ಇಲಾಖೆಗೆ ಹೊಸ ರೂಪ ನೀಡಲು ಪ್ರಯತ್ನಿಸುವುದಾಗಿ ತಿಳಿಸಿದರು.ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಜನರ, ಕಡು ಬಡವರ, ಅಂಗವಿಕಲರ ಅಭಿವೃದ್ಧಿಗಾಗಿ ಶ್ರಮಿಸಲಾಗುವುದು. ನಗರದಲ್ಲಿನ ಕುಡಿಯುವ ನೀರು, ಒಳಚರಂಡಿಗೆ ಸಂಬಂಧಿಸಿದಂತೆ ಎಲ್ಲ ಸಮಸ್ಯೆಗಳನ್ನು ಬಗಹರಿಸಲಾಗುವುದು. ನಗರವನ್ನು ಅಭಿವೃದ್ಧಿಪಡಿಸುವತ್ತ ಹೆಚ್ಚಿನ ಗಮನ ಹರಿಸಲಾಗುವುದು ಎಂದರು.ಕಾಂಗ್ರೆಸ್ ಪಕ್ಷದ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ನಗರವು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದೆ. ನಗರಕ್ಕೆ ರಿಂಗ್ ರಸ್ತೆಯ ಅವಶ್ಯಕತೆಯಿದ್ದು, ಇದಕ್ಕೆ ಚಾಲನೆ ನೀಡಬೇಕು. ನಿರಂತರ ಕುಡಿಯುವ ನೀರು ಪೂರೈಕೆ ಯೋಜನೆ ಸದ್ಯ ನಗರದ 10 ವಾರ್ಡುಗಳಲ್ಲಿ ಮಾತ್ರ ಚಾಲ್ತಿಯಲ್ಲಿದೆ.ಇದನ್ನು ಉಳಿದ 48 ವಾರ್ಡುಗಳಿಗೂ ವಿಸ್ತರಣೆ ಮಾಡಬೇಕು.ಒಳಚರಂಡಿ ಅಭಿವೃದ್ಧಿ ಯೋಜನೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು. ಶಾಸಕ ಫಿರೋಜ್ ಸೇಠ್, ರಾಜು ಸೇಠ್, ಶಿವನಗೌಡ ಪಾಟೀಲ, ವಿನಯ ನಾವಲಗಟ್ಟಿ ಮತ್ತಿತರರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.