ಬೆಳಗಾವಿ ಪಾಲಿಕೆ ಸೂಪರ್ಸೀಡ್ ನಿರ್ಣಯ ರದ್ದು
ಧಾರವಾಡ: ರಾಜ್ಯದ ಹಿತಾಸಕ್ತಿಯ ವಿರುದ್ಧ ಮೇಯರ್ ಹಾಗೂ ಉಪ ಮೇಯರ್ ಅವರು ವರ್ತಿಸಿದ್ದಾರೆ ಎಂಬುದು ಸೇರಿದಂತೆ ಹಲವು ಕಾರಣಗಳ ಮೇರೆಗೆ ಡಿಸೆಂಬರ್ 15ರಂದು ಬೆಳಗಾವಿ ಮಹಾನಗರ ಪಾಲಿಕೆಯ ಸೂಪರ್ಸೀಡ್ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಇಲ್ಲಿಯ ಹೈಕೋರ್ಟ್ ಸಂಚಾರಿ ಪೀಠವು ಮಂಗಳವಾರ ರದ್ದುಗೊಳಿಸಿ ಮಹತ್ವದ ಆದೇಶ ನೀಡಿದೆ.
ಸೂಪರ್ಸೀಡ್ ಪ್ರಕರಣದ ಅಂತಿಮ ವಿಚಾರಣೆ ವೇಳೆ ವಾದ-ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಮೋಹನ ಶಾಂತನಗೌಡರ ಸರ್ಕಾರದ ಈ ನಿರ್ಣಯವನ್ನು ಅನೂರ್ಜಿತಗೊಳಿಸಿದರಲ್ಲದೇ, ಇದೇ 25ರಂದು ಬೆಳಗಾವಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪಾಲಿಕೆಯ ಎಲ್ಲ ಸದಸ್ಯರ ಅಹವಾಲುಗಳನ್ನು ಆಲಿಸಬೇಕು ಎಂದು ಪೌರಾಡಳಿತ ಇಲಾಖೆಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು.
ಸರ್ಕಾರವು ಈ ಪ್ರಕರಣದಲ್ಲಿ ಸಂವಿಧಾನದ 243 (ಯು)ನೇ ಕಲಂ ಅನ್ನು ಉಲ್ಲಂಘಿಸಿದೆ ಎಂದೂ ನ್ಯಾಯಪೀಠ ತಿಳಿಸಿತು. ಪಾಲಿಕೆಯನ್ನು ಸೂಪರ್ಸೀಡ್ ಮಾಡಿದ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಂಜೀವ ಪ್ರಭು, ದೀಪಕ್ ವಘೇಲಾ, ಲತೀಫ್ಖಾನ್ ಪಠಾಣ ಸೇರಿದಂತೆ ಹಲವು ಸದಸ್ಯರು ಹೈಕೋರ್ಟ್ ಮೊರೆ ಹೋಗಿದ್ದರು. ಸದಸ್ಯರ ಪರ ವಕೀಲ ಸಂಗ್ರಾಮ ಕುಲಕರ್ಣಿ ವಾದ ಮಂಡಿಸಿದರು.
25ರಂದು ಅಭಿಪ್ರಾಯ ಸಂಗ್ರಹ
ಹುಬ್ಬಳ್ಳಿ: ಬೆಳಗಾವಿ ಮಹಾನಗರ ಪಾಲಿಕೆ ಸೂಪರ್ಸೀಡ್ ಕ್ರಮ ರದ್ದುಗೊಳಿಸಿ ಹೈಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಇದೇ 25ರಂದು ಅಲ್ಲಿನ ಪಾಲಿಕೆ ಸದಸ್ಯರ ಸಭೆ ಕರೆದು ವ್ಯಕ್ತಿಗತ ಅಭಿಪ್ರಾಯ ದಾಖಲಿಸುವುದಾಗಿ ಕಾನೂನು ಸಚಿವ ಎಸ್.ಸುರೇಶ ಕುಮಾರ್ ಮಂಗಳವಾರ ಇಲ್ಲಿ ಹೇಳಿದರು.
ಪಾಲಿಕೆ ಸದಸ್ಯರಿಂದ ವೈಯುಕ್ತಿಕವಾಗಿ ಅಭಿಪ್ರಾಯ ಪಡೆದಿಲ್ಲ ಎಂಬ ಕಾರಣ ನೀಡಿ ಸಂವಿಧಾನದ 243(ಯು) ಪರಿಚ್ಛೇದದ ಅನ್ವಯ ಸೂಪರ್ಸೀಡ್ ರದ್ದುಗೊಳಿಸಿ ನ್ಯಾಯಾಲಯ ಆದೇಶ ನೀಡಿದೆ. ಹೈಕೋರ್ಟ್ ಆದೇಶವನ್ನು ನಾವು ಗೌರವಿಸುತ್ತೇವೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.ಬೆಳಗಾವಿ ಪಾಲಿಕೆಯ ಸೂಪರ್ಸೀಡ್ ವಿಚಾರದಲ್ಲಿ ಸರ್ಕಾರ ಅವಸರದಲ್ಲಿ ತಪ್ಪು ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದರು.
`ಸತ್ಯ ಮೇವ ಜಯತೆ~
ರಾಜ್ಯ ಸರ್ಕಾರ ಪಾಲಿಕೆ `ಸೂಪರ್ ಸೀಡ್~ ಮಾಡುವ ಮೂಲಕ ಸದಸ್ಯರಿಗೆ ಅನ್ಯಾಯ ಮಾಡಿತ್ತು. ಹೈಕೋರ್ಟ್ ನೀಡಿದ ಆದೇಶ `ಸತ್ಯ ಮೇವ ಜಯತೆ~ ಎಂಬುದನ್ನು ತೋರಿಸಿಕೊಟ್ಟಿದೆ. ಸದಸ್ಯರಿಗೆ ಜಯ ಲಭಿಸಿದ್ದು, ಒಂದೆರಡು ದಿನಗಳಲ್ಲಿ ಸಭೆ ಸೇರಿ ಮುಂದಿನ ಹೆಜ್ಜೆ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. 25ರಂದು ನಡೆಯುವ ಸಭೆಯಲ್ಲಿ ನಮ್ಮ ವಾದ ಮಂಡಿಸುತ್ತೇವೆ.
-ಮಂದಾ ಬಾಳೆಕುಂದ್ರಿ, ಮಾಜಿ ಮೇಯರ್
`ಸದಸ್ಯರಿಗೆ ನ್ಯಾಯ ಸಿಕ್ಕಿದೆ~
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಸಂವಿಧಾನಬದ್ಧವಾಗಿ ಜನರಿಂದ ಆಯ್ಕೆಯಾಗಿ ಬಂದಿದ್ದೇವೆ. ಪಾಲಿಕೆಯನ್ನು`ಸೂಪರ್ಸೀಡ್~ ಮಾಡುವ ಮೂಲಕ ರಾಜ್ಯ ಸರ್ಕಾರ ದ್ರೋಹ ಬಗೆದಿತ್ತು.
ಇದೀಗ ಹೈಕೋರ್ಟ್ ತೀರ್ಪಿನಿಂದ ನಮಗೆ ನ್ಯಾಯ ಸಿಕ್ಕಿದೆ. ಪಾಲಿಕೆಯ ಎಲ್ಲ ಸದಸ್ಯರನ್ನು ಈ ಸಂದರ್ಭದಲ್ಲಿ ನಾನು ಅಭಿನಂದಿಸಲು ಬಯಸುತ್ತೇನೆ
-ರೇಣು ಕಿಲ್ಲೇಕರ, ಮಾಜಿ ಉಪ ಮೇಯರ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.