ಬುಧವಾರ, ಮೇ 12, 2021
20 °C

ಬೆಳಗಾವಿ ಮರಳು ಹೊರ ರಾಜ್ಯಗಳಿಗೆ ಸಾಗಾಟ

ಶ್ರೀಪಾದ ಯರೇಕುಪ್ಪಿ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಜಿಲ್ಲೆಯ ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳ ಒಡಲಿನಲ್ಲಿ ಅಕ್ರಮವಾಗಿ ಮರಳು ಹೊರತೆಗೆಯುವ ಕೆಲಸ ಅವ್ಯಾಹತವಾಗಿ ಸಾಗಿದೆ. ಒಂದು ಕಡೆ ರಾಜಕೀಯ ಬೆಂಬಲ, ಇನ್ನೊಂದು ಕಡೆ ಕಾಟಾಚಾರಕ್ಕೆ ಅಧಿಕಾರಿಗಳು ದಾಳಿ ನಡೆಸಿ, ದಂಡ ವಿಧಿಸಿ ಕೈ ತೊಳೆದುಕೊಳ್ಳುತ್ತಿರುವುದರಿಂದ ಮರಳು ಮಾಫಿಯಾ ಬಲಾಢ್ಯವಾಗಿ ಬೆಳೆದಿದೆ.ಅಥಣಿ, ಚಿಕ್ಕೋಡಿ, ರಾಯಬಾಗ, ಗೋಕಾಕ, ಖಾನಾಪುರ, ಬೈಲಹೊಂಗಲ, ಸವದತ್ತಿ, ರಾಮದುರ್ಗ ತಾಲ್ಲೂಕು ವ್ಯಾಪ್ತಿಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಮಿತಿ ಮೀರಿದೆ. ಅಥಣಿ, ಚಿಕ್ಕೋಡಿ, ರಾಯಬಾಗ ತಾಲ್ಲೂಕು ವ್ಯಾಪ್ತಿಯಲ್ಲಿ ಕೃಷ್ಣಾ ನದಿ, ಗೋಕಾಕ ತಾಲ್ಲೂಕು ವ್ಯಾಪ್ತಿಯಲ್ಲಿ ಘಟಪ್ರಭಾ ಹಾಗೂ ಖಾನಾಪುರ, ಬೈಲಹೊಂಗಲ, ಸವದತ್ತಿ, ರಾಮದುರ್ಗ ವ್ಯಾಪ್ತಿಯಲ್ಲಿ ಮಲಪ್ರಭಾ ನದಿ ಹರಿಯುತ್ತದೆ. ಈ ಮೂರೂ ನದಿಗಳ ಪಾತ್ರದಲ್ಲಿ ಅಕ್ರಮ ಮರಳು ವಹಿವಾಟು ಯಾವುದೇ ಅಡೆತಡೆ ಇಲ್ಲದಂತೆ ಸಾಗಿದೆ.ಹುಕ್ಕೇರಿ ತಾಲ್ಲೂಕಿನಲ್ಲಿ ಹರಿಯುವ ಹಿರಣ್ಯಕೇಶಿ ನದಿ ಪಾತ್ರದ ಮರಳು ಕಪ್ಪು ಬಣ್ಣದ್ದಾಗಿದ್ದು, ನಿರ್ಮಾಣ ಕಾಮಗಾರಿ ಬಳಕೆಗೆ ಯೋಗ್ಯವಲ್ಲ ಎಂಬ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ವರದಿ ಮೇರೆಗೆ ಮರಳು ಗಣಿಗಾರಿಕೆ ನಡೆಯುತ್ತಿಲ್ಲ.`ಚೆಕ್ ಪೋಸ್ಟ್‌ಗಳಲ್ಲಿ ಸಿಬ್ಬಂದಿ ಇಲ್ಲದೇ ಇರುವುದರಿಂದ ಅಕ್ರಮ ಮರಳು ಸಾಗಾಟಕ್ಕೆ ಯಾವುದೇ ತೊಂದರೆ ಆಗುತ್ತಿಲ್ಲ. ಹೊಸ ಮರಳು ನೀತಿಯಿಂದ ಅಕ್ರಮ ಮರಳು ಮಾಫಿಯಾಕ್ಕೆ ಅನುಕೂಲವಾಗಿದೆ. ಈ ದಂಧೆ ನಡೆಸುವವರಿಗೆ ರಾಜಕೀಯ ವ್ಯಕ್ತಿಗಳ ಬೆಂಬಲವೂ ಇದೆ' ಎಂದು ಅಥಣಿ ತಾಲ್ಲೂಕಿನ ಗ್ರಾಮಸ್ಥರು ದೂರುತ್ತಾರೆ.ಅಥಣಿ ತಾಲ್ಲೂಕಿನ ಮೊಳವಾಡದಿಂದ ಜುಂಜರವಾಡದವರೆಗೆ 105 ಕಿ.ಮೀ ಉದ್ದ ಕೃಷ್ಣಾ ನದಿ ಹರಿಯುತ್ತದೆ. ಇದರ ಪಾತ್ರದಲ್ಲಿ ಬರುವ ಮೊಳವಾಡ, ಮಂಗಾವತಿ, ಕುಸನಾಳ, ಸಪ್ತಸಾಗರ, ತೀರ್ಥ, ನದಿ ಇಂಗಳಗಾಂವ್, ಹಲ್ಯಾಳ, ಕವಟಗೊಪ್ಪ ಸೇರಿದಂತೆ ನದಿ ತೀರದಲ್ಲಿರುವ 28 ಗ್ರಾಮಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಸಾಗಿದೆ.`ಕೃಷ್ಣಾ ನದಿಯಲ್ಲಿ ನೀರು ಬಂದಿದ್ದರಿಂದ ಒಂದು ವಾರದಿಂದ ಮರಳು ತೆಗೆಯುವುದು ಬಂದ್ ಆಗಿದೆ. ಅಕ್ರಮವಾಗಿ ತೆಗೆದ ಮರಳನ್ನು ಸಮೀಪದ ಡಿಪೊಗಳಲ್ಲಿ ಶೇಖರಿಸಲಾಗಿದೆ. ಈಗ ಅಕ್ರಮವಾಗಿ ಮರಳು ಸಾಗಾಟ ಜೋರಾಗಿ ನಡೆದಿದೆ. ಕೃಷ್ಣಾ ನದಿಯ ಮರಳು ಕಟ್ಟಡ ನಿರ್ಮಾಣಕ್ಕೆ ಉತ್ತಮವಾಗಿದೆ. ಆದ್ದರಿಂದ ಇಲ್ಲಿ ತೆಗೆಯುವ ಮರಳು ಮಹಾರಾಷ್ಟ್ರಕ್ಕೆ ಸಾಗಾಟವಾಗುತ್ತಿದೆ' ಎಂದು ಗ್ರಾಮಸ್ಥರು ಹೇಳುತ್ತಾರೆ.`ಮಹಾರಾಷ್ಟ್ರದಲ್ಲಿ ಅಕ್ರಮವಾಗಿ ಮರಳು ತೆಗೆಯಲು ಅವಕಾಶವಿಲ್ಲ. ಆದ್ದರಿಂದ ಇಲ್ಲಿಂದ ಮರಳು ಸಾಗಾಟ ಮಾಡಲಾಗುತ್ತಿದೆ. 100 ಘನ ಅಡಿ ಅಂದರೆ, ಒಂದು ಬರಾಸ್ ಮರಳಿಗೆ ಇಲ್ಲಿರೂ  2700 ಸಿಕ್ಕರೆ, ಮಹಾರಾಷ್ಟ್ರದಲ್ಲಿರೂ  5000ಗಿಂತಲೂ ಹೆಚ್ಚಿನ ದರ ಸಿಗುತ್ತದೆ. ಪ್ರತಿ ಟಿಪ್ಪರ್‌ನಲ್ಲಿ 3 ರಿಂದ 4 ಬರಾಸ್ ಮರಳು ಸಾಗಾಟ ಮಾಡಲಾಗುತ್ತಿದೆ. ಅಧಿಕಾರಿಗಳು ಈ ವಾಹನಗಳ ತಪಾಸಣೆ ನಡೆಸಿದಾಗ ಪ್ರತಿ ಬರಾಸ್‌ಗೆ ಬರೀರೂ  1200 ದಂಡ ತೆಗೆದುಕೊಳ್ಳುತ್ತಾರೆ. ಅಧಿಕಾರಿಗಳು ಸಹ ಈ ದಂಧೆಯಲ್ಲಿ ಶಾಮೀಲಾಗಿದ್ದಾರೆ' ಎಂದು ಗ್ರಾಮಸ್ಥರು ದೂರುತ್ತಾರೆ.`ಅಥಣಿ ತಾಲ್ಲೂಕಿನ ಕೊಕಟನೂರ ಗ್ರಾಮದ ಹತ್ತಿರದ ಡಿಪೊದಿಂದ 15 ದಿನಗಳಲ್ಲಿರೂ  1ಕೋಟಿ ಮೌಲ್ಯದ  ಮರಳನ್ನು ಅಕ್ರಮವಾಗಿ  ಸಾಗಿಸಲಾಗಿದೆ. ಡಿಪೊ ಮೇಲೆ ಅಧಿಕಾರಿಗಳು ದಾಳಿ ನಡೆಸುವ ಬಗ್ಗೆ ಗುತ್ತಿಗೆದಾರರೊಬ್ಬರು ಮೊದಲೇ ಮಾಹಿತಿ ಪಡೆದು ಈ ಮರಳು ಸಾಗಾಟ ಮಾಡಿದ್ದಾರೆ' ಎಂಬುದು ಅವರ ಆರೋಪ.ಚಿಕ್ಕೋಡಿ ತಾಲ್ಲೂಕಿನ ಮಾಂಜರಿ, ಕಲ್ಲೋಳ, ಇಂಗಳಿ, ಯಡೂರ, ಚಂದೂರ ಗ್ರಾಮದ ಸಮೀಪ ದೋಣಿ ಮೂಲಕ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ತಾಲ್ಲೂಕಿನ ಸದಲಗಾ  ದೂಧಗಂಗಾ ನದಿ ಪಾತ್ರದಲ್ಲೂ ಅಕ್ರಮ ಮರಳು ಗಣಿಗಾರಿಕೆ ನಡೆದಿದೆ. ಖಾನಾಪುರ ತಾಲ್ಲೂಕಿನ ಮಲಪ್ರಭಾ ನದಿ ತೀರದ ಲಕ್ಕೇಬೈಲ, ಕಾಮಸಿನಕೊಪ್ಪ, ಯಡೋಗಾ ಪ್ರದೇಶಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿ ಸಾಗಿದ್ದು, ಅಕ್ರಮ ಸಾಗಾಟ ಹಾಡಹಗಲೇ ಬಹಿರಂಗವಾಗಿ ನಡೆಯುತ್ತಿದೆ. ನದಿ ತೀರದ ಸಮೀಪವಿರುವ ನೂರಾರು ಎಕರೆ ಕೃಷಿ ಭೂಮಿಯನ್ನೇ ಮರಳು ಶೇಖರಣೆಯ ತಾಣವಾಗಿಸಿಕೊಳ್ಳಲಾಗಿದೆ.ನದಿಯಿಂದ ತೆಗೆದ ಮರಳು ಟ್ರ್ಯಾಕ್ಟರ್, ಟಿಪ್ಪರ್ ಹಾಗೂ ಲಾರಿಗಳ ಮೂಲಕ ಪಾರಿಶ್ವಾಡ ಮಾರ್ಗವಾಗಿ ಬೆಳಗಾವಿ, ಬೈಲಹೊಂಗಲ, ಎಂ.ಕೆ. ಹುಬ್ಬಳ್ಳಿ, ಹಿರೇಬಾಗೇವಾಡಿಗೆ ಸಾಗಾಟ ಮಾಡಲಾಗುತ್ತಿದೆ. ಗೋವಾ ಟಿಪ್ಪರ್‌ಗಳು ಈ ಭಾಗದಿಂದ ಮರಳು ತುಂಬಿಕೊಂಡು ಖಾನಾಪುರ, ಜಾಂಬೋಟಿ, ಕಣಕುಂಬಿ ಚೋರ್ಲಾ ಮಾರ್ಗವಾಗಿ ಗೋವಾ ಕಡೆಗೆ ಸಾಗುತ್ತವೆ. ರಾಜ್ಯದ ವಾಹನಗಳು ಹಾಡಹಗಲೇ ಮರಳು ಸಾಗಿಸಿದರೆ, ಗೋವಾ  ವಾಹನಗಳು ರಾತ್ರಿ ಕಾರ್ಯಾಚರಣೆ ನಡೆಸುತ್ತಿವೆ.

ರೂ 53 ಲಕ್ಷ ದಂಡ ವಸೂಲಿ

ಚಿಕ್ಕೋಡಿ ಉಪ ವಿಭಾಗದಲ್ಲಿ ಮರಳು ಗಣಿಗಾರಿಕೆಗೆ 191 ಬ್ಲಾಕ್‌ಗಳಿಗೆ ಟೆಂಡರ್ ಕರೆಯುವ ಪ್ರಕ್ರಿಯೆ ನಡೆದಿದೆ. ಮರಳು ತೆಗೆಯಲು ದೋಣಿ ಬಳಕೆಗೆ ಅನುಮತಿ ಇಲ್ಲ. ಈವರೆಗೆರೂ 53 ಲಕ್ಷ ದಂಡ ವಸೂಲಿ ಮಾಡಲಾಗಿದೆ.ರೂ 3.75 ಕೋಟಿ  ರಾಜಧನ ಸಂಗ್ರಹವಾಗಿದೆ

-ಜಿ.ಎಸ್. ಟೆಂಗಿನಕಾಯಿ . (ಲೋಕೋಪಯೋಗಿ  ಇಲಾಖೆಯ ಚಿಕ್ಕೋಡಿ ಉಪ  ವಿಭಾಗದ ಕಾರ್ಯನಿರ್ವಾಹಕ  ಎಂಜಿನಿಯರ್)

ಹೊಸ ಟೆಂಡರ್ಹೊ

ಸ ಮರಳು ನೀತಿ ಅನ್ವಯ ಸರ್ಕಾರಿ ಜಮೀನಿನಲ್ಲಿ ಮರಳು ತೆಗೆಯಬೇಕು. ಕಳೆದ ಬಾರಿ ನೀಡಿದ್ದ ಗುತ್ತಿಗೆ ಅವಧಿ ಮುಗಿದಿದ್ದು, ಹೊಸದಾಗಿ ಟೆಂಡರ್ ಕರೆಯಲಾಗಿದೆ. 24 ಬ್ಲಾಕ್‌ಗಳಿಗೆ ಟೆಂಡರ್ ಕರೆಯಲಾಗಿದ್ದು, ಟೆಂಡರ್ ಸಲ್ಲಿಕೆಗೆ ಇದೇ ತಿಂಗಳ 17 ಕೊನೆಯ ದಿನವಾಗಿದೆ. ಅಕ್ರಮ ಮರಳು ಗಣಿಗಾರಿಕೆ ತಡೆಯಲು ಅಗತ್ಯ ಕ್ರಮ ತೆಗೆದುಕೊಳ್ಳ ಲಾಗುತ್ತಿದೆ. ಈವರೆಗೆರೂ 65 ಲಕ್ಷ  ದಂಡ ವಸೂಲಿ ಮಾಡಲಾಗಿದ್ದು,ರೂ5 ಕೋಟಿ ರಾಜಧನ ಸಂಗ್ರಹವಾಗಿದೆ .

 -ಎನ್.ಪಿ. ನಾಯಕ .(ಲೋಕೋಪಯೋಗಿ  ಇಲಾಖೆ ಕಾರ್ಯನಿರ್ವಾಹಕ  ಎಂಜಿನಿಯರ್)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.