ಬುಧವಾರ, ಮಾರ್ಚ್ 3, 2021
24 °C
ಮಾಯದ ಲಾಠಿ ಏಟಿನ ನೋವು: ಕಾರಾಗೃಹದಲ್ಲಿ ಸಂತ್ರಸ್ತರ ಸಂಕಟ

ಬೆಳತನ, ರಾತ್ರಿತನ ಪೊಲೀಸ್ರು ಹೊಡದಾರ್ರೀ..

ಕೆ.ನರಸಿಂಹಮೂರ್ತಿ Updated:

ಅಕ್ಷರ ಗಾತ್ರ : | |

ಬೆಳತನ, ರಾತ್ರಿತನ ಪೊಲೀಸ್ರು ಹೊಡದಾರ್ರೀ..

ಬಳ್ಳಾರಿ: ‘15 ನಿಮಿಷದ್‌ ವಿಡಿಯೋ ನೋಡ್ಯಾರೆ ಎಲ್ಲಾರೂ, ಮೂರ್‌ ದಿವ್ಸದ್‌ ವಿಡಿಯೋ ಯಾರೂ ನೋಡಿಲ್ಲ’

–ನವಲಗುಂದ ತಾಲ್ಲೂಕಿನ ಅಳಗವಾಡಿ ಗ್ರಾಮದ ಯುವಕ ಅಜ್ಜಪ್ಪ, ನಗರದ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ವಿಮ್ಸ್‌) ಆಸ್ಪತ್ರೆಯ ಎಕ್ಸ್‌ರೇ ವಿಭಾಗದ ಮುಂದಿನ ಬೆಂಚಿನಲ್ಲಿ ಕುಳಿತು ಗುರುವಾರ ಪೊಲೀಸರ ಲಾಠಿ ಪ್ರಹಾರದ ನೆನಪು ಮಾಡಿಕೊಂಡರು.ಜುಲೈ 30ರಿಂದ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ಅವರು, ಲಾಠಿ ಏಟಿನ ನೋವು ತಾಳದೆ ಚಿಕಿತ್ಸೆಗೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸರ ಕಾವಲಿನಲ್ಲಿ ಬಂದಿದ್ದರು.ಅವರ ಪ್ರಕಾರ, ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ಪೊಲೀಸರ ಲಾಠಿ ಪ್ರಹಾರದ ದೃಶ್ಯಗಳು, ಹಲ್ಲೆಯ ಹತ್ತರಲ್ಲಿ ಒಂದು ಭಾಗವಷ್ಟೇ. ಕರ್ನಾಟಕ ಬಂದ್‌ ನಡೆದ ಮಾರನೇ ಬೆಳಗಿನ ಜಾವದಿಂದ ಜಿಲ್ಲಾ ಕಾರಾಗೃಹಕ್ಕೆ ಕರೆತರುವವರೆಗೂ ಪೊಲೀಸರು ಹೊಡೆದಿದ್ದಾರೆ ಎಂಬುದು ಅವರ ಆರೋಪ.ಮೂರು ದಿವಸದ ವಿಡಿಯೋ ಎಂದರೆ ಏನು? ಎಂಬ ‘ಪ್ರಜಾವಾಣಿ’ಯ ಪ್ರಶ್ನೆಗೆ ಅವರು ‘ಮೂರು ದಿನ ಸ್ಟೇಷನ್‌ದೊಳಗೆ ಬಡಿದಿದ್‌ರೀ’ ಎಂದು ಉತ್ತರಿಸಿದರು.‘ಟೀವಿಲಿ ಅದರ ಆಪೋಸಿಟ್‌ ಅಷ್ಟೇ ನೋಡೀರಿ ನೀವು. ಅದರ ಹಿಂದಗಡೆ 200–300 ಮೀಟರು ಐತಿ. ಅಲ್ಲಿಂದ ಹೊಡ್ಕೊಂಡ್‌ ಬಂದರ್ರೀ. ನೋವಿಂದ ಒದ್ದಾಡೋದ್‌ ಅಲ್ಲ, ಜೀವನಾನೇ ಬ್ಯಾಸರ ಆಗ್ಬಿಟ್ಟೈತಿ. ಆ ನಮೂನಿ ಮಾಡ್ಯಾರ ಅವ್ರು. ನಮ್ಮಲ್ಲೇ ಬ್ರಿಟಿಷ್ರು ಜಾಸ್ತಿ ಆಗ್ಯಾರ ಈಗ’ ಎಂದು ಆಕ್ರೋಶ ವ್ಯಕ್ತಪಡಿಸಿದರು.‘15 ನಿಮಿಷದ ವಿಡಿಯೋ ನೋಡಿ ಈ ನಮೂನಿ ಪಬ್ಲಿಸಿಟಿ, ಮೂರು ದಿವ್ಸದ ವಿಡಿಯೋ ನೋಡಿದ್ರೆ ಏನ್ ಸರ್‌? ಬೆಳತನ (ಬೆಳಗಿನವರೆಗೂ), ರಾತ್ರಿತನ (ರಾತ್ರಿವರೆಗೂ) ಬಡಿದಿದ್ದು, ಅವರ್ಗೇನು ಸ್ವಲ್ಪ ದಪ್ಪ ಕಂಡ್ರೆ ಸಾಕು. ಏನೇನ್ ಅನಕತ್ತ ಬಡಿದಾರ. ಅದನ್ನ ಯಾರೂ ನೋಡಿಲ್ಲ ನೋಡ್ರೀ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.ಪೊಲೀಸರು ತಮ್ಮ ಮೇಲೆ ನಿರಂ ತರವಾಗಿ ಹಲ್ಲೆ ನಡೆಸಿದ್ದು, ಸಂಪೂರ್ಣ ವಾಗಿ ದಾಖಲಾಗಿಲ್ಲ ಎಂಬುದು ಅವರ ಅಸಮಾಧಾನವಾಗಿತ್ತು.

‘ಪೊಲೀಸ್‌ ಸ್ಟೇಷನ್‌ನಲ್ಲಿ ನಡೆದ ಒಂದೇನೂ ನೀವು ನೋಡಿಲ್ಲ.

ಅವರು ಪೊಲಿಸರು ಎಂಬ ಪರಿಸ್ಥಿತಿಯೊಳಗೆ ಇಲ್ಲೇ ಇಲ್ಲಾರೀ, ಕುಡುಕರು ಡ್ರಿಂಕ್ಸ್‌ ಮಾಡಿ ಮತ್ತಿನಲ್ಲೇ ಏನೇನ್ ಮಾಡ್ತಾರ. ಆ ನಮೂನಿ ಮಾಡ್ಯಾರಾ. ಟೇಬಲ್‌ ಮ್ಯಾಗ ಮಲಗ್ಸಿ ಅಂಗಾಲಿಗೆ ಬಡಿದಾರ್ರಿ. ಎರಡು ದಿನ ಅಡ್ಡಾಡಿಲ್ಲ ನಾವು. ಅಂತಾ ಟ್ರೀಟ್‌ಮೆಂಟ್‌ ಎದಕ ಮಾಡದ್ರು ನಮಗ? ಯಾರನ ಕೊಲೆ ಮಾಡೇವಾ? ಸುಲಗೆ ಮಾಡೇವಾ? ಎಂದರು.’28ರ ರಾತ್ರಿ ಎರಡು ಗಂಟೆಗೆ ನಮ್‌ ಮನೆಗೆ ಅಟ್ಯಾಕ್‌ ಮಾಡಿ ಕರ್ಕೊಂಬಂದ್ರೀ. ನಾವು ಏನ್‌ ಮಾಡಿದ್ದೀವ್ರೀ? ಏನೇನೂಕ್‌ ಸಂಬಂಧ ಇಲ್ಲ ನಮ್ದು. ಯಾವ ಗಲಾಟೆ ಗೊತ್ತಿಲ್ಲ’ ಎಂದರು. ಐಟಿಐ ಹಾಗೂ ಪಿಯುಸಿ ಓದುತ್ತಿರುವ ಅವರ ತಮ್ಮಂದಿರನ್ನೂ ಪೊಲೀಸರು ಬಂಧಿಸಿದ್ದಾರೆ. ‘ಇವೆಲ್ಲ ನಮ್ಮವಲ್ರೀ ಇವು. ಬರೀ ಚಡ್ಡಿ ಮ್ಯಾಲ ಜೈಲಿಗೆ ಬಂದವರು ನಾವು. ದಾನಿಗಳು ಕೊಟ್ಟ ಬಟ್ಟಿ ಇವು’ ಎಂದು ಅವರು ಮತ್ತು ಅವರೊಂದಿಗೆ ಇದ್ದ ನವಲಗುಂದ ಗ್ರಾಮದ ಗಾರೆ ಕೆಲಸದ ವೆಂಕಟೇಶ, ಶಂಕರ್‌ ತಾವು ತೊಟ್ಟಿದ್ದ ಬಟ್ಟೆಗಳನ್ನು ತೋರಿಸಿದರು.ಊಟ ಇಲ್ಲ: ‘ರಾತ್ರಿ  2.30ಕ್ಕ ಸ್ಟೇಷನ್‌ಗ ತಂದು ಮಾರನೇ ದಿನ ಸಂಜೆ 7 ಗಂಟೆಗೆ ಕೋರ್ಟಿಗೆ ಪ್ರೊಡ್ಯೂಸ್‌ ಮಾಡ್ಯಾರ.  ಅಲ್ಲಿ ಮಟ ಏನೂ ಇಲ್ಲ. ರಾತ್ರಿ 10ಕ್ಕ ಬಳ್ಳಾರಿಗೆ ಬಸ್ಸಿಗೆ ಬರೋ ಮುಂದ ಊಟ ಕೊಟ್ಟಾರ್ರಿ’ ಎಂದು ಸ್ಮರಿಸಿದರು.ಗೊತ್ತಿದ್ದರೂ ಹೊಡೆದರು: ‘ಹೋರಾಟ ಗಾರ ಮುಖಂಡ್ರು ಹತ್ತು ಹದನೈದು ಮಂದಿ ಇದಾರ. ಅವರ್ಯಾರೋ ಮಾಡೋರು ಮಾಡಿ ಹೋಗ್ಯಾರ. ಅಮಾಯಕ್ರು ನಾವು ಬಹಳ ಮಂದಿ. ನಾವ್‌ ಹೋರಾಟಕ್ಕಿದ್ದಿಲ್ಲ ಎಂದು ನೋಡ್ಯಾರ.

ಆದ್ರೂ ಲೋಕಲ್‌ ಪೊಲೀಸ್‌ ಸ್ಟೇಷನ್‌ ಪಿಎಸ್‌ಐ, ಸ್ಟೇಷನ್‌ನ ಇಬ್ಬರು ಪಿಸಿಗಳು ಟಾರ್ಚರ್‌ ಮಾಡ್ಯಾರಾ’ ಎಂದು ದೂರಿದರು. ಸೊಂಟದ ಮೇಲೆ ಚರ್ಮ ಸುಲಿದು ಬರುವಂತೆ ಪೊಲೀಸರು ಲಾಠಿ ಪ್ರಹಾರ ಮಾಡಿರುವುದನ್ನು ಶಂಕರ್‌ ತೋರಿಸಿದರು.

ವಿಮ್ಸ್‌ ಆಸ್ಪತ್ರೆಯಲ್ಲಿ ಸಂತ್ರಸ್ತರಿಗೆ ಚಿಕಿತ್ಸೆ

ಬಳ್ಳಾರಿ:
ನವಲಗುಂದ ಗಲಭೆ ಸಂದರ್ಭದಲ್ಲಿ ಬಂಧನಕ್ಕೆ ಒಳಗಾಗಿ ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿರು ವವರ ಪೈಕಿ ಐವರ ಆರೋಗ್ಯದಲ್ಲಿ ಏರುಪೇರಾದ ಪರಿಣಾಮ ಅವರನ್ನು ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಗೆ  ಪೊಲೀಸರು ಗುರುವಾರ ಕರೆದೊಯ್ದು ಚಿಕಿತ್ಸೆ ಕೊಡಿಸಿದರು.

ಐವರ ಪೈಕಿ ನವಲಗುಂದ ತಾಲ್ಲೂಕಿನ ಅಳಗವಾಡಿಯ ಅಜ್ಜಪ್ಪ ಎಂಬುವವರ ಭುಜ ಮತ್ತು ಮೊಣಕಾಲಿನ ಚಲನೆಗೆ ತೊಂದರೆ ಯಾದ ಪರಿಣಾಮ ಎಕ್ಸ್‌ರೇ ತೆಗೆಸುವಂತೆ ವೈದ್ಯರು ಸಲಹೆ ನೀಡಿದ್ದರು.

ಅವರೊಂದಿಗೆ, ಶಿವಾನಂದ, ಭರಮಗೌಡ್ರ, ವೆಂಕಟೇಶ್‌, ಶಂಕರ ಅವರೂ ಚಿಕಿತ್ಸೆ ಪಡೆದರು. ಶಂಕರ ಅವರ ಸೊಂಟದ ಮೇಲೆ ಲಾಠಿಯ ಏಟಿನಿಂದ ಚರ್ಮ ಸುಲಿದಿದ್ದು, ಅವರು ನಡೆದಾಡಲು, ಕುಳಿತುಕೊಳ್ಳಲು ಕಷ್ಟಪಡುತ್ತಿದ್ದು ಕಂಡುಬಂತು.‘ಪೊಲೀಸರ ಲಾಠಿ ಪ್ರಹಾರ ದಿಂದ ತಮಗೆ ಈ ಪರಿಸ್ಥಿತಿ ಬಂದಿದೆ’ ಎಂದು ಶಂಕರ್‌, ಅಜ್ಜಪ್ಪ, ವೆಂಕ ಟೇಶ್‌ ‘ಪ್ರಜಾವಾಣಿ’ಯೊಂದಿಗೆ ಸಂಕಟ ತೋಡಿಕೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.