ಬುಧವಾರ, ಏಪ್ರಿಲ್ 14, 2021
25 °C

ಬೆಳೆಸಾಲ ಮನ್ನಾ: ಇನ್ನೂ ಬಾರದ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಹಕಾರಿ ಸಂಘಗಳಿಂದ ರೈತರು ಪಡೆದಿರುವ 25 ಸಾವಿರ ರೂಪಾಯಿವರೆಗಿನ ಬೆಳೆ ಸಾಲ ಮನ್ನಾ ಮಾಡುವುದಾಗಿ ವಿಧಾನಸಭೆಯಲ್ಲಿ ಘೋಷಿಸಿದ ಸರ್ಕಾರ, ಇದಕ್ಕೆ ಸಂಬಂಧಿಸಿದ ಆದೇಶವನ್ನು ಇನ್ನೂ ಹೊರಡಿಸದಿರುವುದು ಸಹಕಾರಿ ಸಂಘಗಳನ್ನು ಗೊಂದಲಕ್ಕೆ ದೂಡಿದೆ.`25 ಸಾವಿರ ರೂಪಾಯಿವರೆಗಿನ ಬೆಳೆ ಸಾಲ ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಘೋಷಿಸಿದ್ದಾರೆ. ಆದರೆ ಈ ಕುರಿತು ಆದೇಶ ಹೊರಡಿಸಿಲ್ಲ. 25 ಸಾವಿರ ರೂಪಾಯಿಗಿಂತ ಹೆಚ್ಚಿನ ಮೊತ್ತ ಮನ್ನಾ ಆಗುವುದಿಲ್ಲ. ಆದರೆ ಅದಕ್ಕೆ ಯಾವ ಪ್ರಮಾಣದ ಬಡ್ಡಿ ವಿಧಿಸಬೇಕು ಎಂಬ ಕುರಿತು ಸ್ಪಷ್ಟನೆ ಇಲ್ಲ~ ಎಂದು ರಾಜ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಬ್ಯಾಂಕ್‌ಗಳ ಕ್ಷೇಮಾಭಿವೃದ್ಧಿ ಮಹಾಮಂಡಳದ ಅಧ್ಯಕ್ಷ ಕೆ. ಮಹಾಂತಪ್ಪ ವಿವರಿಸಿದರು.ಕೃಷಿ ಸಹಕಾರ ಸಂಘಗಳು ರೈತರಿಗೆ ಸಾಲ ನೀಡಲು ವಿವಿಧ ಬ್ಯಾಂಕ್‌ಗಳಿಂದ ಸಾಲ ಪಡೆದಿರುತ್ತವೆ. ರೈತರು ಸಾಲ ಮರುಪಾವತಿ ಮಾಡದಿದ್ದರೂ, ಸಂಘಗಳು ತಮಗೆ ಸಾಲ ನೀಡಿದ ಬ್ಯಾಂಕ್‌ಗಳಿಗೆ ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡಬೇಕಾಗುತ್ತದೆ. ಸಾಲ ಮನ್ನಾ ಆದೇಶ ಮತ್ತು ಹಣವನ್ನು ಸಹಕಾರ ಸಂಘಗಳಿಗೆ ಸರ್ಕಾರ ತಕ್ಷಣ ಒದಗಿಸದಿದ್ದಲ್ಲಿ, ಸಿಬ್ಬಂದಿಗೆ ವೇತನ ನೀಡಲೂ ಸಾಧ್ಯವಾಗದ ಸ್ಥಿತಿ ಎದುರಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.`ಸಹಕಾರಿ ಸಂಘಗಳು ನಡೆಯುವುದೇ ಸಾಲ ಪಡೆದುಕೊಂಡವರು ನೀಡುವ ಬಡ್ಡಿಯ ಹಣದಲ್ಲಿ. ಬೇರೆ ಹಣಕಾಸಿನ ಮೂಲ ಸಂಘಗಳಿಗೆ ಇಲ್ಲ. ನಾವು ಬ್ಯಾಂಕ್‌ಗಳಿಂದ ಪಡೆದುಕೊಂಡಿರುವ ಸಾಲವನ್ನು ನಿಗದಿತ ಅವಧಿಯಲ್ಲಿ ಬಡ್ಡಿಸಮೇತ ಹಿಂದಿರುಗಿಸಲೇಬೇಕು. ಆದರೆ ಸರ್ಕಾರದಿಂದ ಸೂಕ್ತ ಆದೇಶ ಬಂದಿರದ ಕಾರಣ, ಸಂಘಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಅಪಾಯ ಎದುರಾಗಿದೆ~ ಎಂದು ಮಹಾಮಂಡಳದ ಪದಾಧಿಕಾರಿ ಎನ್.ಎಚ್. ದೇವಕುಮಾರ್ ತಿಳಿಸಿದರು.ಈ ಎಲ್ಲ ವಿಚಾರಗಳ ಕುರಿತು ಚರ್ಚೆ ನಡೆಸಲು ಸಹಕಾರ ಸಚಿವ ಬಿ.ಜೆ. ಪುಟ್ಟಸ್ವಾಮಿ ಅವರು ಮಂಗಳವಾರ ಸಭೆ ಆಯೋಜಿಸಿದ್ದರು. ಆದರೆ ಸಚಿವರು ಬರ ಅಧ್ಯಯನ ಪ್ರವಾಸಕ್ಕೆ ತುರ್ತಾಗಿ ತೆರಳಿದ ಕಾರಣ ಹಠಾತ್ತನೆ ಸಭೆ ರದ್ದು ಮಾಡಿದ್ದು ಸರಿಯಲ್ಲ ಎಂದು ಮಹಾಂತಪ್ಪ ದೂರಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.