ಸೋಮವಾರ, ಜನವರಿ 27, 2020
17 °C

ಬೆಳ್ಳಿಹುಣ್ಣಿಮೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣ್ಣಿಮೆ ಚಂದ್ರ ಕೂಡ ಒಮ್ಮೆ ಇಣುಕಿ ನೋಡಬೇಕು; ಅಷ್ಟು ದೀಪಸಾಲು ಅಲ್ಲಿ ಜೀವಗೊಳ್ಳುತ್ತದೆ. ಕತ್ತಲಿಗೂ ಅಲ್ಲೊಂದು ಸೌಂದರ್ಯ. ಎಣ್ಣೆದೀಪಗಳ ಸಾಲಿನ ನಡುವಿನ ಬೆಳಕಿನ ಮಾಧುರ‌್ಯ ನೋಡುವವರ ಕಿವಿಮೇಲೆ ಇಪ್ಪತ್ತೈದು ಹುಣ್ಣಿಮೆಗಳಿಂದ ಸಂಗೀತ ಬೀಳುತ್ತಲೇ ಇದೆ. ಮಲ್ಲೇಶ್ವರದ ಕಾಡು ಮಲ್ಲೇಶ್ವರ ಗೆಳೆಯರ ಬಳಗ ರಸಿಕರನ್ನು ತಣಿಸುತ್ತಿರುವ ಪರಿ ಇದು.ಪ್ರಕೃತಿ ಪ್ರೇಮ, ಸ್ಥಳವನ್ನು `ಇಕೋ ಫ್ರೆಂಡ್ಲಿ~ ಮಾಡುವ ಉಮೇದು, ಗಿಡಗಳನ್ನು ನೆಡುವ ಸದುದ್ದೇಶ ಎಲ್ಲವನ್ನೂ ಹಂಚುತ್ತಾ ಬಂದಿರುವ ಗೆಳೆಯರ ಬಳಗ ಮಲ್ಲೇಶ್ವರದ ಸುತ್ತಮುತ್ತಲಿನವರಿಗೆ ಸಂಗೀತದ ರುಚಿ ಹತ್ತಿಸತೊಡಗಿ 25 ತಿಂಗಳಾಯಿತು.

 

ಕಾಡು ಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ಬಹುತೇಕ ಕೃತಕ ಬೆಳಕನ್ನು ಬಳಸದೆ ಹಣತೆ ದೀಪಗಳನ್ನು ಹಚ್ಚಿ ಗಂಧರ್ವಲೋಕ ಸೃಷ್ಟಿಸುತ್ತಾ ಬಂದಿದ್ದಾರೆ ಗೆಳೆಯರು. ದೀಪ ಹಚ್ಚುವ ಕೈಗಳು ಹಲವು. ಸಂಗೀತ ಕೇಳುವ ಕಿವಿಗಳು ಅಸಂಖ್ಯ. ಕಾರ್ಯಕ್ರಮ ಪ್ರಾಯೋಜಿಸಲು ನಾಮುಂದೆ ತಾಮುಂದೆ ಎನ್ನುವವರೂ ದಿನೇದಿನೇ ಹೆಚ್ಚುತ್ತಲೇ ಇದ್ದಾರೆ. ಹಣತೆ ಹಚ್ಚಬೇಕಾದದ್ದು ಹೀಗಲ್ಲವೇ?ರವೀಂದ್ರ ಸೊರಗಾವಿಯವರ ವಚನ, ವೇಮಗಲ್ ನಾರಾಯಣಸ್ವಾಮಿ, ಅಪ್ಪಗೆರೆ ತಿಮ್ಮರಾಜು ಅವರ ಜನಪದ, ಎಂ.ಎಸ್.ಶೀಲಾ ಅವರ ಶಾಸ್ತ್ರೀಯ ಸಂಗೀತ, ವಿದ್ಯಾಭೂಷಣರ ದಾಸರಗೀತೆಗಳು, ಅರ್ಚನಾ ಉಡುಪ, ಚಂದ್ರಿಕಾ ಗುರುರಾಜ್ ಕಂಠದ ಭಾವಗೀತೆಗಳು, ಶ್ರೀಧರ್ ಸಾಗರ್ ಸ್ಯಾಕ್ಸಫೋನ್ ವಾದನ ಎಲ್ಲವನ್ನೂ ದಾಟಿಸುತ್ತಾ ಬಂದ ಕಾಡು ಮಲ್ಲೇಶ್ವರ ಗೆಳೆಯರ ಬಳಗ ಈ ಸಲ ಭಾನುವಾರ ಹಾಗೂ ಸೋಮವಾರ ಎರಡೂ ದಿನ ಹುಣ್ಣಿಮೆ ಹಾಡು ಸರಣಿಯನ್ನು ಕಳೆಗಟ್ಟಿಸಲು ಹೊರಟಿದೆ.

 

ಭಾನುವಾರ ಅನಸೂಯ ಕುಲಕರ್ಣಿ ಅವರಿಂದ ಅಂಕ್ರಂಗ್ ವಾದ್ಯದ ವೈಭವ. ಸಹ ಅಂಕ್ರಂಗ್‌ನಲ್ಲಿ ತಪಸ್ಯ , ಜಾಹ್ನವಿ ಸಾಥ್ ನೀಡಲಿದ್ದಾರೆ. ಪಾವನಿ ಕಾಶೀನಾಥ್, ಸಾಯಿ ತೇಜಸ್ ಹಾಡುಗಾರಿಕೆಗೆ ಎಸ್.ಯಶಸ್ವಿ ಪಿಟೀಲು ನುಡಿಸುವರು. ನೀಲಕಂಠ ರಮೇಶ್ ಮೃದಂಗದ ಸಾಥ್ ನೀಡಲಿದ್ದಾರೆ.ಎನ್.ನಾಗಭೂಷಣ್ ಉಡುಪ ಕೀಬೋರ್ಡ್ ಅಲ್ಲದೆ ಆಫ್ರಿಕಾದ ಮತ್ತಿತರ ವಾದ್ಯ ನುಡಿಸಲು ದೀಪಿಕಾ ಶ್ರೀನಿವಾಸನ್ ಇರಲಿದ್ದಾರೆ. ಮರುದಿನ ರೇಮೋನಿ ಅವರಿಂದ ಹಾಡುಗಾರಿಕೆ ಹುಣ್ಣಿಮೆಯ ಸಂಭ್ರಮ ದುಪ್ಪಟ್ಟಾಗಲಿದೆ.

 

ಪ್ರತಿಕ್ರಿಯಿಸಿ (+)