ಗುರುವಾರ , ಮೇ 19, 2022
21 °C

ಬೇಜವಾಬ್ದಾರಿ ಹೇಳಿಕೆ- ಸೋಮಣ್ಣ, ಕತ್ತಿ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೇರೆ ಬೇರೆ ಪಕ್ಷಗಳಿಂದ ವಲಸೆ ಬಂದಿರುವ ಮುಖಂಡರ ಬಗ್ಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ನೀಡಿರುವ ಹೇಳಿಕೆ ಕುರಿತು ಪಕ್ಷದ ಕೆಲವು ನಾಯಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

`ಸರ್ಕಾರ ಉಳಿಸಿಕೊಳ್ಳಲಿಕ್ಕಾಗಿ, ಹಾದಿ- ಬೀದಿಯಲ್ಲಿ ಹೋಗುತ್ತಿದ್ದವರನ್ನು ಪಕ್ಷಕ್ಕೆ ಕರೆತರಬೇಕಾಯಿತು~ ಎಂದು ಈಶ್ವರಪ್ಪ ಇತ್ತೀಚೆಗೆ ಶಿವಮೊಗ್ಗದಲ್ಲಿ ಹೇಳಿಕೆ ನೀಡಿದ್ದರು. ಇದು ಬಿಜೆಪಿಗೆ ಸೇರಿದ ವಲಸಿಗರಲ್ಲಿ ಸಿಟ್ಟು ಮೂಡಿಸಿದೆ.

ಕೃಷಿ ಸಚಿವ ಉಮೇಶ ವಿ.ಕತ್ತಿ ಮತ್ತು ವಸತಿ ಸಚಿವ ವಿ.ಸೋಮಣ್ಣ ಅವರು ಈ ವಿಷಯದಲ್ಲಿ ಈಶ್ವರಪ್ಪ ವಿರುದ್ಧ ಟೀಕಾಸ್ತ್ರ ಬಿಟ್ಟಿದ್ದಾರೆ. `ಜವಾಬ್ದಾರಿ ಸ್ಥಾನದಲ್ಲಿರುವ ಈಶ್ವರಪ್ಪ ಅವರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ~ ಎಂದು ಕತ್ತಿ ನೇರವಾಗಿಯೇ ಆಕ್ಷೇಪಿಸಿದರು. `ನಾನು ಕೂಡ ಜೆಡಿಎಸ್ ತೊರೆದು ಬಿಜೆಪಿ ಸೇರಿದವನಾದ್ದರಿಂದ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಿದ್ದೇನೆ~ ಎಂದು ಕತ್ತಿ ಬುಧವಾರ ಹೇಳಿದರು.

`ಹಣ ನೀಡಿರುವ ವಿಚಾರದ ಬಗ್ಗೆಯೂ ಈಶ್ವರಪ್ಪ ಮಾತನಾಡಿದ್ದಾರೆ. ನನಗಂತೂ ಯಾರೂ ಹಣ ಕೊಟ್ಟಿಲ್ಲ. ಒಂದು ವೇಳೆ ಅವರು ಕೊಟ್ಟಿದ್ದರೆ ಅದನ್ನು ಸಾಬೀತುಪಡಿಸಲಿ. ಯಡಿಯೂರಪ್ಪ ಅವರು ನನ್ನನ್ನು ಪಕ್ಷಕ್ಕೆ ಕರೆತಂದರು. ಸುಭದ್ರ ಸರ್ಕಾರ ಇರಲಿ ಎಂಬ ಉದ್ದೇಶದಿಂದ ನಾನು ಬಿಜೆಪಿ ಸೇರಿದೆ. ಈಶ್ವರಪ್ಪ ಅವರ ಹೇಳಿಕೆಯಿಂದ ನೋವಾಗಿದೆ~ ಎಂದರು.

ಪಕ್ಷದಿಂದ ಹೊರ ಹಾಕಬೇಕು ಎನ್ನುವ ಉದ್ದೇಶದಿಂದ ಈ ರೀತಿಯ ಹೇಳಿಕೆ ನೀಡಿದ್ದಾರೆಯೇ ಎಂದು ಕೇಳಿದ ಪ್ರಶ್ನೆಗೆ `ಯಾರು ಯಾರನ್ನೂ ಪಕ್ಷದಿಂದ ಹೊರಗೆ ಹಾಕಲು ಸಾಧ್ಯ ಇಲ್ಲ~ ಎಂದರು.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ವಿ.ಸೋಮಣ್ಣ ಕೂಡ ಪ್ರತಿಕ್ರಿಯೆ ನೀಡಿದರು. `ಈಶ್ವರಪ್ಪ ಕೂಡ ಹಾದಿ ಬೀದಿಯಲ್ಲೇ ಓಡಾಡಬೇಕು. ಅವರು ಯಾವ ಉದ್ದೇಶದಿಂದ ಹಾಗೆ ಹೇಳಿದ್ದಾರೆ ಎಂಬುದನ್ನು ಅವರ ಜತೆ ಚರ್ಚೆ ನಡೆಸಿದ ನಂತರ ಪ್ರತಿಕ್ರಿಯೆ ನೀಡುತ್ತೇನೆ~ ಎಂದರು. `ಯಡಿಯೂರಪ್ಪ ನಾಯಕತ್ವ, ಜನ ಬೆಂಬಲದಿಂದಾಗಿ ಬಿಜೆಪಿ ಅಧಿಕಾರಕ್ಕೆ ಬಂದಿದೆಯೇ ಹೊರತು, ಹಣ, ಜಾತಿ ಬಲದಿಂದಾಗಿ ಅಲ್ಲ~ ಎಂದು ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಗುರುವಾರ ತಿಳಿಸಿದರು. `ಯಡಿಯೂರಪ್ಪನವರ ನಾಯಕತ್ವ ಒಪ್ಪಿ ಹಲವರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಆ ರೀತಿ ಸೇರ್ಪಡೆಯಾದವರು ಹಾದಿ- ಬೀದಿಯಲ್ಲಿ ಹೋಗುವಂತಹ ವ್ಯಕ್ತಿಗಳಲ್ಲ. ಅವರಿಗೆ ಅವರದೇ ಆದ ಹಿನ್ನೆಲೆ ಇದೆ. ಈಶ್ವರಪ್ಪ ಯಾಕೆ ಈ ರೀತಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಇಂತಹ ಹೇಳಿಕೆಗಳಿಂದ ನೋವಾಗಿದೆ~ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.