ಮಂಗಳವಾರ, ಏಪ್ರಿಲ್ 20, 2021
31 °C

ಬೇಟೆಗಾರರಿಗೆ ಕೊಂಡುಕುರಿ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಗಳೂರು: ವಿನಾಶದ ಅಂಚಿನಲ್ಲಿರುವ ಅಪರೂಪ ಪ್ರಭೇದದ, ಗರ್ಭ ಧರಿಸಿದ್ದ `ಕೊಂಡುಕುರಿ~ಯೊಂದನ್ನು ತಾಲ್ಲೂಕಿನ ರಂಗಯ್ಯನದುರ್ಗ ಅರಣ್ಯ ಪ್ರದೇಶದ ಘೋಷಿತ `ಕೊಂಡುಕುರಿ ವನ್ಯಧಾಮ~ದಲ್ಲಿ ಮಂಗಳವಾರ ಬೇಟೆಯಾಡಿ ಕೊಲ್ಲಲಾಗಿದೆ.ಅರಣ್ಯ ಪ್ರದೇಶದ ರಕ್ಕಸಘಟ್ಟ ವಲಯದಲ್ಲಿ ಕೊಂಡುಕುರಿಯ ಚಲನವಲನವನ್ನು ಗಮನಿಸಿರುವ ಬೇಟೆಗಾರರು ಬಲೆ ಹಾಕಿ ಕೊಂಡುಕುರಿಯನ್ನು ಹಿಡಿದಿದ್ದಾರೆ. ಬಲೆಗೆ ಬಿದ್ದ ನಂತರ ಗಿಡಗಳ ಮರೆಯಲ್ಲಿ ಅವಿತಿದ್ದ ದುಷ್ಕರ್ಮಿಗಳು ಬಡಿಗೆಯಿಂದ ಕೊಂಡುಕುರಿಯ ತಲೆಗೆ ಹೊಡೆದು ಕೊಂದು ಹಾಕಿದ್ದಾರೆ.ಕೊಂದ ನಂತರ ಹೊತ್ತೊಯ್ಯುತ್ತಿದ್ದಾಗ ಅರಣ್ಯದಲ್ಲಿ ಗಸ್ತು ತಿರುಗುತ್ತಿದ್ದ ಉಪ ವಲಯ ಅರಣ್ಯಾಧಿಕಾರಿ ಭೂತಪ್ಪ ಹಾಗೂ ಸಿಬ್ಬಂದಿ ಹುಸೇನ್ ಹೊಸಕೇರಿ ಎದುರಿಗೆ ಬಂದಿದ್ದಾರೆ. ಸಿಬ್ಬಂದಿಯನ್ನು ಕಂಡ ಬೇಟೆಗಾರರು ಕೊಂಡುಕುರಿ ದೇಹವನ್ನು ಎಸೆದು ಪರಾರಿಯಾಗಿದ್ದಾರೆ.ಮಾಹಿತಿ ತಿಳಿಯುತ್ತಿದ್ದಂತೆಯೇ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಡಿ. ಕೆಂಚಪ್ಪನವರ್ ಹಾಗೂ ವಲಯ ಅರಣ್ಯಾಧಿಕಾರಿ ರಾಜಾಸಾಬ್ ಸ್ಥಳಕ್ಕೆ ಭೇಟಿ ನೀಡಿದರು. ಕೊಂಡುಕುರಿ ದೇಹ ಹಾಗೂ ಬೇಟೆಗೆ ಬಳಸಲಾಗಿದ್ದ ಬಲೆಯೊಂದಿಗೆ ಪಟ್ಟಣದ ಅರಣ್ಯಾಧಿಕಾರಿ ಕಚೇರಿಗೆ ತಂದು ಕೊಂಡುಕುರಿಯ ಶವಪರೀಕ್ಷೆ ನಡೆಸಲಾಯಿತು.ಈ ಸಂದರ್ಭದಲ್ಲಿ ಕೊಂಡುಕುರಿ ಗರ್ಭಧರಿಸಿದ್ದು, ಹೊಟ್ಟೆಯಲ್ಲಿ ಎರಡು ಮರಿಗಳು ಇದ್ದವು. ತಲೆಗೆ ಬಲವಾದ ಏಟು ಬಿದ್ದಿದೆ ಎಂದು ಶವ ಪರೀಕ್ಷೆ ನಡೆಸಿದ ಪಶು ವೈದ್ಯಾಧಿಕಾರಿ ಡಾ.ಬುಡೇನ್ ಮಾಹಿತಿ ನೀಡಿದರು.

 ಆರೋಪಿಗಳ ಬಗ್ಗೆ ಮಾಹಿತಿ ಸಿಕ್ಕಿದ್ದು, ಶಿಘ್ರವೇ ಬಂಧಿಸಲಾಗುವುದು ಎಂದು ಎಸಿಎಫ್ ಸುದ್ದಿಗಾರರಿಗೆ ತಿಳಿಸಿದರು.ಅಳಿವಿನ ಅಂಚಿನಲ್ಲಿರುವ ಪ್ರಾಣಿ:
1972 ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಒಂದನೇ ಷೆಡ್ಯೂಲ್‌ನಲ್ಲಿ ಕೊಂಡುಕುರಿಗೆ ವಿಶೇಷ ಮಹತ್ವ ನೀಡಲಾಗಿದೆ. ಜಗತ್ತಿನಲ್ಲಿ ವಿನಾಶದ ಪ್ರಭೇದವಾಗಿರುವ ಕೊಂಡುಕುರಿ ತಾಲ್ಲೂಕಿನ ರಂಗಯ್ಯನದುರ್ಗ ಅರಣ್ಯ ಪ್ರದೇಶದಲ್ಲಿರುವ ಕಾರಣ ಕಳೆದ ವರ್ಷ ಸರ್ಕಾರ ಈ ಅರಣ್ಯವನ್ನು `ಕೊಂಡುಕುರಿ ವನ್ಯಜೀವಿಧಾಮ~ವನ್ನಾಗಿ ಘೋಷಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.