ಶುಕ್ರವಾರ, ಮೇ 7, 2021
27 °C

ಬೇವಿನಹಳ್ಳಿ: ಬಿಜೆಪಿ ಪ್ರಚಾರ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುನಿರಾಬಾದ್: ಇದೇ 26ರಂದು ನಡೆಯಲಿರುವ ಕೊಪ್ಪಳ ವಿಧಾನಸಭೆ ಉಪಚುನಾವಣೆಯ ಅಂಗವಾಗಿ ಬಿಜೆಪಿ ಪಕ್ಷದ ಪ್ರಚಾರ ಹಿಟ್ನಾಳ ಹೋಬಳಿಯ ಬೇವಿನಹಳ್ಳಿಯಿಂದ ಭಾನುವಾರ ಪೂಜೆಯೊಂದಿಗೆ ಪ್ರಾರಂಭವಾಯಿತು.ಕಳೆದ ಬಾರಿ ಜೆಡಿಎಸ್ ಪಕ್ಷದಿಂದ ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಆಯ್ಕೆಯಾಗಿದ್ದ ಸಂಗಣ್ಣ ಕರಡಿ ಆರು ತಿಂಗಳ ಹಿಂದೆ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಭಾರತೀಯ ಜನತಾ ಪಕ್ಷ ಸೇರಿದ್ದರು. ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆಯುತ್ತಿದ್ದು ಬಹಿರಂಗ ಪ್ರಚಾರ ಆರಂಭವಾಗಿದೆ.ಹಿಟ್ನಾಳ ಹೋಬಳಿಯ ಬೇವಿನಹಳ್ಳಿ ಗ್ರಾಮದ ಮಾರುತೇಶ್ವರ ದೇವಸ್ಥಾನದಲ್ಲಿ ಭಾನುವಾರ ಪೂಜೆ ನೆರವೇರಿಸಿ ನಂತರ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ನಿಯೋಜಿತ ಅಭ್ಯರ್ಥಿ ಸಂಗಣ್ಣ ಕರಡಿ, ಈ ಹಿಂದೆ ಮೂರು ಬಾರಿ ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗಿದ್ದರೂ ಕ್ಷೇತ್ರದ ನಿರೀಕ್ಷಿತ ಅಭಿವೃದ್ಧಿಯಾಗಲಿಲ್ಲ ಎಂಬ ಕೊರಗು ಇದ್ದೇ ಇತ್ತು.ಅದೇ ವೇಳೆಗೆ ಹೋರಾಟದ ಹಿನ್ನೆಲೆಯನ್ನು ಗುರುತಿಸಿದ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಆಡಳಿತಪಕ್ಷವಾದ ಬಿಜೆಪಿ ಸೇರಲು ಆಹ್ವಾನ ನೀಡಿದರು.ಏತನೀರಾವರಿ ಯೋಜನೆ, 4 ಪಿಯು ಕಾಲೇಜು ಮತ್ತು 4 ಹಾಸ್ಟೆಲ್, ಸಂಚಾರಿಠಾಣೆ, ವೈದ್ಯಕೀಯ ಮತ್ತು ತಾಂತ್ರಿಕ ಕಾಲೇಜು ಸೇರಿದಂತೆ ಕ್ಷೇತ್ರದ ಅಭಿವೃದ್ಧಿಯ ದೊಡ್ಡ ಯಾದಿಯನ್ನು ತಯಾರಿಸಿ ಮುಖ್ಯಮಂತ್ರಿಗಳ ಮುಂದೆ ಇಟ್ಟಾಗ ವೈದ್ಯಕೀಯ ಕಾಲೇಜು ಹೊರತುಪಡಿಸಿ ಎಲ್ಲ ಸೌಲಭ್ಯ ಮಂಜೂರಿಗೆ ತಕ್ಷಣ ಒಪ್ಪಿಗೆ ಸೂಚಿಸಿದರು. ಕ್ಷೇತ್ರದ ಹಿತದೃಷ್ಟಿಯಿಂದ ತಾವು ಬಿಜೆಪಿ ಸೇರಿದ್ದು ಐದು ತಿಂಗಳ ಅವಧಿಯಲ್ಲಿ ಜಿಲ್ಲೆಗೆ ಸುಮಾರು 250ಕೋಟಿಗಳ ಅನುದಾನ ಹರಿದುಬಂದಿದೆ.ರಸ್ತೆಗಾಗಿ 100ಕೋಟಿ, ನಿರಾಶ್ರಿತರಿಗೆ 6000ಮನೆ, ಕೊಪ್ಪಳ ಮತ್ತು ಮುನಿರಾಬಾದ್‌ನಲ್ಲಿ ಶಾದಿಮಹಲ್, ವಾಲ್ಮೀಕಿ ಸಮಾಜದ ಅಭಿವೃದ್ಧಿಗೆ ಸಮಾಜ ಕಲ್ಯಾಣ ಇಲಾಖೆಯಡಿ ಒಂದುಕೋಟಿ, 54ಕೋಟಿ ವೆಚ್ಚದಲ್ಲಿ ಕೊಪ್ಪಳಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಗೆ ಯೋಜಿಸಲಾಗಿದೆ.ಸದ್ಯ 12 ಗ್ರಾಮಗಳು, ನಂತರದಲ್ಲಿ ಇನ್ನೂ 20ಗ್ರಾಮಗಳನ್ನು ಸುವರ್ಣಗ್ರಾಮ ಯೋಜನೆಯಡಿ ಸೇರಿಸಲು ನಿರ್ಧರಿಸಲಾಗಿದೆ. ಕ್ಷೇತ್ರದ ಅಭಿವೃದ್ಧಿಯೇ ತಮ್ಮ ಪರಮಗುರಿ. ಮತದಾರರು ಬೆಂಬಲಿಸಿ ಮತನೀಡುವಂತೆ ಮನವಿ ಮಾಡಿದರು.ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು, ಬಿಜೆಪಿ ಜಿಲ್ಲಾಧ್ಯಕ್ಷ ಗಿರೇಗೌಡ, ಮುಖಂಡ ಹನುಮಂತಪ್ಪ ಅಂಗಡಿ ಸಂಗಣ್ಣ ಪರ ಮತ ಯಾಚಿಸಿದರು. ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಗುರುನಗೌಡ ಪಾಟೀಲ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಕನಕಗಿರಿ, ಸಿದ್ದು ತೋಟರ್, ಬಸವರಾಜ, ಮಾರ್ಕಂಡಪ್ಪ, ಅಮರೇಗೌಡ ಪಾಟೀಲ್ ಇದ್ದರು ಮರ್ದಾನಪ್ಪ ಬಿಸನಳ್ಳಿ ಸ್ವಾಗತಿಸಿ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.