ಸೋಮವಾರ, ಜನವರಿ 20, 2020
18 °C

ಬೇಸಿಗೆ ಭತ್ತ ನಾಟಿಗಾಗಿ ಭೂ ಒಡಲಿಗೆ ಬೆಂಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ನಾಟಿಯ ಕಟಾವು ಮುಗಿದ ಜಮೀನುಗಳಲ್ಲಿ ಮತ್ತೆ  ಬೇಸಿಗೆ ಹಂಗಾಮಿನ ಭತ್ತ ನಾಟಿಗಾಗಿ ಗದ್ದೆಗೆ ಬೆಂಕಿ ಹಚ್ಚಿ ಜಮೀನುಗಳನ್ನು ಸ್ವಚ್ಛಗೊಳಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ರೈತರ ಅತಿಯಾದ ಆಸೆಯಿಂದ ಭೂ ಒಡಲಿಗೆ ಹೆಚ್ಚಿಗೆ ಒತ್ತಡ ಹಾಕುತ್ತಿರುವುದರ ಜೊತೆಗೆ ಬೆಂಕಿ ಹಚ್ಚುತ್ತಿರುವುದು ಆತಂಕವನ್ನು ಉಂಟು ಮಾಡಿದೆ.ಭತ್ತವನ್ನು ಯಂತ್ರದ ಮೂಲಕ ಕಟಾವು ಮಾಡಿದ್ದಾರೆ. ಗದ್ದೆಯಲ್ಲಿ ಉಳಿದ ಹುಲ್ಲು ಸ್ವಚ್ಛಗೊಳಿಸಲು ಬೆಂಕಿ ಹಚ್ಚಿನಾಶ ಮಾಡುತ್ತಿದ್ದಾರೆ. ಬೆಂಕಿ ಹಚ್ಚುವುದರಿಂದ ಭೂಮಿಯಲ್ಲಿನ ಫಲವತ್ತಾದ ಕಣಗಳು ನಾಶವಾಗು­ತ್ತವೆ. ಈಗಾಗಲೇ ಸಾಕಷ್ಟು ನೀರು ನಿಲ್ಲಿಸುವುದರ ಜೊತೆಗೆ ಅಧಿಕ ರಸಗೊಬ್ಬರ ಹಾಕುವುದರಿಂದ ಜಮೀನು ಜೌಗು ಹಾಗೂ ಸವಳು ಆಗಿವೆ. ಜಮೀನುಗಳಿಗೆ  ಬೆಂಕಿ ಹಚ್ಚುವುದರಿಂದ ಮತ್ತಷ್ಟು ತೊಂದರೆ­ಯಾಗುತ್ತದೆ ಎಂದು ಭೀಮರಾಯನ­ಗುಡಿ ಕೃಷಿ ಮಹಾ ವಿದ್ಯಾಲಯದ ಮಣ್ಣು ಪರೀಕ್ಷೆಯ ವಿಜ್ಞಾನಿ­ಯೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.ಬೇಸಿಗೆ  ಹಂಗಾಮಿನ ಭತ್ತ ನಾಟಿಯ ಧಾವಂತಕ್ಕಾಗಿ ಅವಸರ­ದಲ್ಲಿ ಬೆಂಕಿ ಹಚ್ಚುತ್ತಿದ್ದಾರೆ. ಹುಲ್ಲು ಸುಟ್ಟಮೇಲೆ ನೀರು ಹರಿಸಿ ಮತ್ತೆ ಪಟ್ಲರ್ ಹೊಡೆದು ಗದ್ದೆಯನ್ನು ಹದಗೊಳಿಸುತ್ತಾರೆ. ನಿರಂತರವಾಗಿ ಬೆಳೆಯನ್ನು ಬೆಳೆಯುವುದು ಹಾಗೂ ನೀರು ನಿಲ್ಲಿಸುವುದರಿಂದ ಭೂಮಿಗೆ ಹೆಚ್ಚಿನ ಒತ್ತಡ ಆಗುತ್ತದೆ ಬರುವ ದಿನಗಳಲ್ಲಿ ನಾವು ಬರಡು ಭೂಮಿ­ಯನ್ನು ನೋಡುವಂತಾಗುತ್ತದೆ ಎಂಬ ಎಚ್ಚರಿಕೆಯನ್ನು ರೈತ ಶಿವಣ್ಣ ತಿಳಿಸಿದ್ದಾರೆ. ಯಂತ್ರದ ಮೂಲಕ ಭತ್ತ ಕಟಾವು ಮಾಡುವುದರಿಂದ ಜಾನುವಾರು-­ಗಳಿಗೆ ಮೇವಿನ ಕೊರತೆ ಆಗಲಿದೆ. ರೈತರು ಭೂಮಿಗೆ ಬೆಂಕಿ ಹಚ್ಚುವ ಕೆಲಸ ಕೈ ಬಿಡಬೇಕೆಂದು ಅವರು ಮನವಿ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)