ಶನಿವಾರ, ಮೇ 15, 2021
22 °C
ಉಗ್ರ ಡೇವಿಡ್ ಹೆಡ್ಲಿ ಪತ್ತೆಗೆ ಬ್ರಿಟನ್ ಗುಪ್ತಚರ ದಳ ಸುಳಿವು

`ಬೇಹುಗಾರಿಕೆ ಸಂಸ್ಥೆಯ ಪಾತ್ರವಿಲ್ಲ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಮುಂಬೈ ಮೇಲಿನ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ಡೇವಿಡ್ ಹೆಡ್ಲಿ ಪತ್ತೆ ಹಚ್ಚುವಲ್ಲಿ ಅಮೆರಿಕದ ಬೇಹುಗಾರಿಕಾ ಸಂಸ್ಥೆಗಳ ಪಾತ್ರ ಏನೂ ಇಲ್ಲ. ಬ್ರಿಟನ್ ಗುಪ್ತಚರ ದಳದಿಂದ ದೊರಕಿದ ಸುಳಿವಿನಿಂದಲೇ ಆತನನ್ನು ಬಂಧಿಸಲು ಸಾಧ್ಯವಾಯಿತು ಎಂದು ತನಿಖಾ ವರದಿಗಳನ್ನು ಪ್ರಕಟಿಸುವ ಪ್ರಮುಖ ಪತ್ರಿಕೆಯೊಂದು ಹೇಳಿದೆ.ಅಮೆರಿಕದ ಬೇಹುಗಾರಿಕಾ ಸಂಸ್ಥೆಗಳು ವಿವಿಧ ರಾಷ್ಟ್ರಗಳ ಅಂತರ್ಜಾಲ ತಾಣ ಮತ್ತು ದೂರವಾಣಿ ಜಾಲಗಳಿಗೆ ಲಗ್ಗೆ ಇಟ್ಟು, ರಹಸ್ಯ ಮಾಹಿತಿ ಕದಿಯಲು ನಡೆಸಿದ ಸೈಬರ್ ದಾಳಿಯ ಕಾರ್ಯ ದಕ್ಷತೆಯನ್ನು ಈ `ಪ್ರೊ ಪಬ್ಲಿಕಾ' ನಿಯತಕಾಲಿಕೆ ಪ್ರಶ್ನಿಸಿದೆ.ಬೇಹುಗಾರಿಕಾ ಸಂಸ್ಥೆಗಳ ಕಲೆ ಹಾಕಿದ ರಹಸ್ಯ ಮಾಹಿತಿಗಳು ಸೋರಿಕೆಯಾದ ಹಿನ್ನೆಲೆಯಲ್ಲಿ ವಿವಾದಾತ್ಮಕ ಸೈಬರ್ ದಾಳಿಯನ್ನು ಸಮರ್ಥಿಸಿಕೊಂಡ ಒಬಾಮ ಆಡಳಿತ, ಇಂತಹ ಕಾರ್ಯದಿಂದಲೇ ಡೇವಿಡ್ ಹೆಡ್ಲಿಯನ್ನು ಪತ್ತೆ ಹಚ್ಚಲು ಸಾಧ್ಯವಾಯಿತು ಮತ್ತು ಅನೇಕ ಭಯೋತ್ಪಾದನಾ ಕೃತ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು ಎಂದು ಹೇಳಿತ್ತು.ಆದರೆ, ಈ ಸಮರ್ಥನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ನಿಯತಕಾಲಿಕೆಯು, `ಬ್ರಿಟನ್ ಗುಪ್ತಚರ ದಳದಿಂದ ದೊರಕಿದ ಸುಳಿವನ್ನು ಆಧರಿಸಿಯೇ ಹೆಡ್ಲಿಯನ್ನು ಅಮೆರಿಕ ಬಂಧಿಸಿದ್ದು. ಆತನನ್ನು ಪತ್ತೆ ಹಚ್ಚುವಲ್ಲಿ ಬೇಹುಗಾರಿಕಾ ಸಂಸ್ಥೆಗಳ ಹೆಚ್ಚುಗಾರಿಕೆ ಏನೇನೂ ಇಲ್ಲ' ಎಂದು ವರದಿ ಮಾಡಿದೆ.`ವಿಧ್ವಂಸಕ ಕೃತ್ಯ ಸಂಚು ವಿಫಲ': ಸೈಬರ್ ದಾಳಿಯ ಮೂಲಕ ಸಂಗ್ರಹಿಸಿದ ರಹಸ್ಯ ಮಾಹಿತಿಗಳಿಂದಾಗಿಯೇ ಉಗ್ರರು ನಡೆಸಿದ್ದ ಅನೇಕ ವಿಧ್ವಂಸಕ ಕೃತ್ಯಗಳ ಸಂಚು ವಿಫಲಗೊಂಡವು. ಸಾವಿರಾರು ಜನರ ಪ್ರಾಣ ಉಳಿಯಿತು ಎಂದು ಅಮೆರಿಕದ ರಾಷ್ಟ್ರೀಯ ಬೇಹುಗಾರಿಕಾ ಸಂಸ್ಥೆಯ ನಿರ್ದೇಶಕ ಮತ್ತು ಸೈಬರ್ ಕಮಾಂಡರ್ ಆದ ಜನರಲ್ ಕೀತ್ ಅಲೆಕ್ಸಾಂಡರ್ ಸೆನೆಟ್‌ಗೆ ತಿಳಿಸಿದ್ದಾರೆ.ದ್ವಂದ್ವ ನಿಲುವು- ಚೀನಾ ಟೀಕೆ

ಬೀಜಿಂಗ್ ವರದಿ
: ಅಮೆರಿಕ ಬೇಹುಗಾರಿಕಾ ಸಂಸ್ಥೆಗಳು ಸೈಬರ್ ದಾಳಿಯ ಮೂಲಕ ಕಲೆ ಹಾಕಿದ್ದ ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡಿರುವ ಆರೋಪಕ್ಕೆ ಗುರಿಯಾದ ಎಡ್ವರ್ಡ್ ಸ್ನೋಡೆನ್ ಹಾಂಕಾಂಗ್‌ನಲ್ಲಿ ಅಡಗಿದ್ದಾರೆಂಬ ಅಮೆರಿಕದ ಶಂಕೆಯ ಬಗ್ಗೆ ಚೀನಾ ಮೌನ ವಹಿಸಿದೆ.ಆದರೆ, ಅಮೆರಿಕವು ಚೀನಾದ ಅಂತರ್ಜಾಲದ ಮೇಲೆ ಒಂದು ವರ್ಷದಿಂದಲೂ ಸೈಬರ್ ದಾಳಿ ನಡೆಸುತ್ತಿದೆ. ಅನೈತಿಕ ಮಾರ್ಗ ಹಿಡಿದಿರುವ ಅಮೆರಿಕ ದ್ವಂದ್ವ ನಿಲುವು ಹೊಂದಿದೆ ಎಂದು ಚೀನಾ ತೀಕ್ಷ್ಣವಾಗಿ ಟೀಕಿಸಿದೆ.`ಸ್ನೋಡೆನ್ ಅವರ ಬಗ್ಗೆ ನಮಗೆ ಯಾವುದೇ ಮಾಹಿತಿಯಿಲ್ಲ. ಆದ್ದರಿಂದ ಅವರ ವಿಚಾರದಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎಂಬುದು ನಿರ್ಧಾರವಾಗಿಲ್ಲ' ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನ್‌ಯಿಂಗ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.ಸೈಬರ್ ದಾಳಿ ತಡೆ ಮಾರ್ಗೋಪಾಯಕ್ಕೆ ಸಲಹೆ

ಸ್ಟ್ರಾಸ್‌ಬರ್ಗ್ (ಫ್ರಾನ್ಸ್) (ಎಎಫ್‌ಪಿ
): ಖಾಸಗಿತನಕ್ಕೆ ಧಕ್ಕೆ ಉಂಟು ಮಾಡುವುದನ್ನು ತಡೆಯಲು ಮತ್ತು ವೈಯಕ್ತಿಕ ಮಾಹಿತಿಗಳು ದುರುಪಯೋಗವಾಗದಂತೆ ರಕ್ಷಿಸುವ ಸಲುವಾಗಿ ಸೈಬರ್ ದಾಳಿ ಮೂಲಕ ರಹಸ್ಯ ಮಾಹಿತಿ ಹೆಕ್ಕಿ ತೆಗೆಯುವ ತಂತ್ರಜ್ಞಾನಕ್ಕೆ ತಡೆಯೊಡ್ಡುವ ಮಾರ್ಗೋಪಾಯವನ್ನು ಕಂಡುಕೊಳ್ಳಬೇಕು ಎಂದು ಐರೋಪ್ಯ ಮಂಡಳಿ ಸಲಹೆ ಮಾಡಿದೆ.ಅಮೆರಿಕದ ಬೇಹುಗಾರಿಕಾ ಸಂಸ್ಥೆಗಳ ಸೈಬರ್ ದಾಳಿಯ ಮೂಲಕ ಸಂಗ್ರಹಿಸಿದ ರಹಸ್ಯ ಮಾಹಿತಿಗಳು ಸೋರಿಕೆಯಿಂದ ಜಾಗತಿಕ ಮಟ್ಟದಲ್ಲಿ ಖಾಸಗಿತನದ ಕುರಿತು ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಐರೋಪ್ಯ ಮಂಡಳಿಯು ಈ ಸಲಹೆ ಮುಂದಿಟ್ಟಿದೆ.ಅತ್ಯಾಧುನಿಕವಾದ ಸೈಬರ್ ದಾಳಿಯ ತಂತ್ರಜ್ಞಾನದ ದುರ್ಬಳಕೆಯಿಂದಾಗಿ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಜನರು ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಲು ಹಿಂದೇಟು ಹಾಕುವ ಸಾಧ್ಯತೆ ಇದೆ. ಇದು ಪ್ರಜಾಪ್ರಭುತ್ವಕ್ಕೂ ಮಾರಕವಾಗಬಹುದು ಎಂದು ಐರೋಪ್ಯ ಮಂಡಳಿ ಹೇಳಿದೆ.`ತಂತ್ರಜ್ಞಾನದ ದುರ್ಬಳಕೆ ತಡೆಯುಲು ಸೂಕ್ತ ಮತ್ತು ಪರಿಣಾಮಕಾರಿಯಾದ ಮಾರ್ಗೋಪಾಯವನ್ನು ಕಂಡುಕೊಳ್ಳುವ ಬಗ್ಗೆ ಚರ್ಚೆ ನಡೆಯಬೇಕು' ಎಂದು ಮಂಡಳಿಯ ಸದಸ್ಯ ರಾಷ್ಟ್ರಗಳು ಅಭಿಪ್ರಾಯಪಟ್ಟಿವೆ. ಐರೋಪ್ಯ ರಾಷ್ಟ್ರಗಳ ಒಕ್ಕೂಟದಿಂದ ಪ್ರತ್ಯೇಕವಾಗಿಯೇ ಗುರುತಿಸಿಕೊಂಡಿರುವ ಈ ಮಂಡಳಿಯಲ್ಲಿ 47 ರಾಷ್ಟ್ರಗಳಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.