ಭಾನುವಾರ, ಮೇ 16, 2021
24 °C

ಬೊಂಬಾಟ್ ಬಾಲಿವುಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೊಂಬಾಟ್ ಬಾಲಿವುಡ್

ಬಿಪಾಶಾ ಖುಷಿ

 

`ದರ್ಟಿ ಪಿಕ್ಚರ್~ ಮತ್ತು `ಹೀರೋಯಿನ್~ ಸಿನಿಮಾಗಳ ಸಾಲಿಗೆ ಸೇರುವ ಸಿನಿಮಾ ಮಾಡಲಿದ್ದಾರೆ ಶ್ಯಾಮ್ ಬೆನಗಲ್. ಹಲವು ಸತ್ಯಘಟನೆಗಳನ್ನು ಆಧರಿಸಿ ಅವರು ಈಗಾಗಲೇ ಚಿತ್ರದ ಸ್ಕ್ರಿಪ್ಟ್ ಸಿದ್ಧಪಡಿಸಿದ್ದಾರೆ. ತಮ್ಮ ಚಿತ್ರದ ನಾಯಕಿಯನ್ನೂ ಆರಿಸಿದ್ದಾರೆ. ತಮ್ಮ ಚಿತ್ರದ ನಾಯಕಿ ಪಾತ್ರಕ್ಕೆ ಗ್ಲಾಮರಸ್ ಮುಖದ ಅವಶ್ಯಕತೆ ಇದೆ. ಜೊತೆಗೆ ಅಷ್ಟೇ ಶಕ್ತಿಶಾಲಿ ಅಭಿನಯವನ್ನು ಮಾಡಬೇಕಿರುವುದರಿಂದ ಬಿಪಾಶಾ ತಮಗೆ ಸೂಕ್ತ ಎನಿಸಿದರು ಎಂದು ಶ್ಯಾಮ್ ಹೇಳಿದ್ದಾರೆ.



ತನ್ನೆಲ್ಲಾ ಪ್ರಾಜೆಕ್ಟ್‌ಗಳನ್ನು ಬದಿಗೊತ್ತಿ ಬಿಪಾಶಾ ಶ್ಯಾಮ್ ನೀಡಿದ ಆಹ್ವಾನವನ್ನು ಒಪ್ಪಿಕೊಂಡಿದ್ದಾಳೆ. `ನನಗೆ ಈ ಚಿತ್ರದಿಂದ ಹೊಸ ಇಮೇಜ್ ಬರಲಿದೆ. ಅದಕ್ಕಾಗಿ ಶ್ಯಾಮ್ ಅವರ ಸಲಹೆ ಪಡೆದು ಸಿದ್ಧತೆ ನಡೆಸುತ್ತಿದ್ದೇನೆ~ ಎಂದು ಹೇಳಿಕೊಂಡು ಬಸು ಸಂತಸಗೊಂಡಿದ್ದಾಳೆ.



ಉಳಿದ ಪಾತ್ರಗಳ ಆಯ್ಕೆ ಮಾಡುತ್ತಿರುವುದಾಗಿ ಹೇಳಿರುವ ಶ್ಯಾಮ್ ಅಕ್ಟೋಬರ್‌ನಲ್ಲಿ ಚಿತ್ರೀಕರಣ ಆರಂಭಿಸಲಿದ್ದಾರಂತೆ.



 ಶಾಹೀದ್‌ಗೆ ಕರೀನಾ ಬರೆ

`ಒನ್ಸ್ ಅಪಾನ್ ಎ ಟೈಮ್ ಇನ್ ಮುಂಬೈ- 2~ ಚಿತ್ರದ ಚೋಟಾ ರಾಜನ್ ಪಾತ್ರಕ್ಕಾಗಿ ಶಾಹೀದ್ ಕಪೂರ್‌ನನ್ನು ಕೇಳಲಾಗಿತ್ತು. ಆದರೆ ಚಿತ್ರದಲ್ಲಿ ಮತ್ತೊಬ್ಬ ತಾರೆ ಅಕ್ಷಯ್‌ಕುಮಾರ್ ಇರುವುದರಿಂದ ನಟಿಸಲು ಆತ ಹಿಂದುಮುಂದು ನೋಡುತ್ತಿದ್ದಾನೆ. ಅವನು ನಿರ್ಧಾರ ತೆಗೆದುಕೊಳ್ಳಲು ಇನ್ನೂ ತಡ ಮಾಡಿದರೆ ಪಾತ್ರ ಕೈತಪ್ಪುವ ಸಾಧ್ಯತೆ ಇದೆ.



ಚಿತ್ರದ ನಾಯಕಿ ಕರೀನಾ ಕಪೂರ್ ಈಗಾಗಲೇ ಚೋಟಾ ರಾಜನ್ ಪಾತ್ರವನ್ನು ಇಮ್ರಾನ್ ಖಾನ್ ಮಾಡಿದರೆ ಚೆನ್ನ ಎಂಬ ಸಲಹೆಯನ್ನೂ ನೀಡಿದ್ದಾಳೆ. `ಇದುವರೆಗೂ ಇಮ್ರಾನ್ ರೊಮ್ಯಾಂಟಿಕ್ ಪಾತ್ರಗಳನ್ನು ಮಾಡಿದ್ದಾರೆ. ಇದೀಗ ಅವರ ಇಮೇಜ್ ಬದಲಾಯಿಸುವ ಇಂಥ ಪಾತ್ರದಲ್ಲಿ ನಟಿಸಿದರೆ ಅವರ ವೃತ್ತಿಗೂ ಒಳ್ಳೆಯದಾಗುತ್ತದೆ. ಅವರಿಗೆ ಆ ಪಾತ್ರ ಮಾಡುವ ಸಾಮರ್ಥ್ಯವೂ ಇದೆ~ ಎಂದು ಕರೀನಾ ಚಿತ್ರತಂಡದ ಎದುರು ಹೇಳಿದ್ದಾಳೆ.

ಅವಳ ಸಲಹೆಯನ್ನು ಕೇಳಿಸಿಕೊಂಡು ಬಾಲಿವುಡ್‌ನ ಅನೇಕರು ತನ್ನ ಮಾಜಿ ಗೆಳೆಯ ಶಾಹೀದ್ ಜೊತೆ ತೆರೆ ಹಂಚಿಕೊಳ್ಳಲು ಇಷ್ಟಪಡದ ಕರೀನಾ ಇಂಥ ಸಲಹೆ ನೀಡುತ್ತಿದ್ದಾಳೆ ಎನ್ನುತ್ತಿದೆ. ಇದಕ್ಕೆಲ್ಲಾ ಜಗ್ಗದ ಕರೀನಾ ತನಗೆ ಯಾರ ಮೇಲೂ ದ್ವೇಷವಿಲ್ಲ. ಆದರೆ ಸೂಕ್ತ ವ್ಯಕ್ತಿಗೆ ಪಾತ್ರ ಸಿಗಲಿ ಎಂಬುದಷ್ಟೇ ತನ್ನ ಕಾಳಜಿ ಎಂದು ಮುಗುಮ್ಮಾಗಿ ಪ್ರತಿಕ್ರಿಯಿಸಿದ್ದಾಳೆ. ಚಿತ್ರತಂಡ ಕರೀನಾ ಸಲಹೆಯನ್ನು ಸ್ವೀಕರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

 

ಮತ್ತೆ ಅಮಿತಾಬ್- ರಿಷಿ

ಇಪ್ಪತ್ತೆಂಟು ವರ್ಷಗಳ ನಂತರ ಅಮಿತಾಬ್ ಬಚ್ಚನ್ ಮತ್ತು ರಿಷಿ ಕಪೂರ್ ಒಟ್ಟಾಗಿ ನಟಿಸುತ್ತಿದ್ದಾರೆ. ನಿಖಿಲ್ ಅಡ್ವಾಣಿ ನಿರ್ಮಾಣದ ಸಧೀರ್ ಮಿಶ್ರಾ ಅವರ `ಮೆಹರುನ್ನೀಸಾ~ ಚಿತ್ರಕ್ಕೆ ಅವರಿಬ್ಬರೂ ಬಣ್ಣಹಚ್ಚಲಿದ್ದಾರೆ. `ಮುದುಕರಿಬ್ಬರ ನಡುವೆ ನಡೆಯುವ ಕತೆ ಚಿತ್ರದ್ದು. ಅದಕ್ಕೆ ಅಮಿತಾಬ್ ಮತ್ತು ರಿಷಿ ಸೂಕ್ತ ಎನಿಸಿತು~ ಎಂದು ನಿರ್ದೇಶಕರು ಆತ್ಮವಿಶ್ವಾಸದಿಂದ ಹೇಳಿಕೊಂಡಿದ್ದಾರೆ. ಈ ಚಿತ್ರದ ಸ್ಕ್ರಿಪ್ಟನ್ನು ಮಿಶ್ರಾ 1996ರಿಂದ ತಿದ್ದುತ್ತಲೇ ಇದ್ದಾರಂತೆ.



`ಅಮರ್ ಅಕ್ಬರ್ ಆಂಟನಿ~ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದ ಅಮಿತಾಬ್, ರಿಷಿ ಯಶಸ್ಸಿನಲ್ಲಿ ಮಿಂದಿದ್ದರು. ನಂತರ 1983ರಲ್ಲಿ ತೆರೆಕಂಡ `ಕೂಲಿ~ ಚಿತ್ರದಲ್ಲೂ ಒಟ್ಟಾಗಿ  ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಅಂದಹಾಗೆ, ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಮತ್ತು ರಿಷಿ ಕಪೂರ್ ಅವರ ಯೌವನದ ಪಾತ್ರಗಳಲ್ಲಿ ಅವರ ಮಕ್ಕಳಾದ ಅಭಿಷೇಕ್ ಬಚ್ಚನ್ ಮತ್ತು ರಣಬೀರ್ ಕಪೂರ್ ನಟಿಸಲು ಒಪ್ಪಿಕೊಂಡಿದ್ದಾರೆ.

ಥಟ್ಟಂತ ಬೈಕ್ ಕಲಿತ ಫಕ್ರಿ

ಅಮೆರಿಕದ ಟಾಪ್ ಮಾಡೆಲ್ ನರ್ಗೀಸ್ ಫಕ್ರಿ `ರಾಕ್‌ಸ್ಟಾರ್~ ಚಿತ್ರದಲ್ಲಿ ರಣಬೀರ್ ಕಪೂರ್ ಜೊತೆ ನಟಿಸುತ್ತಿರುವುದು ಗೊತ್ತಿರುವ ವಿಚಾರ. ಮೊನ್ನೆ ಚಿತ್ರೀಕರಣ ನಡೆಯುತ್ತಿದ್ದ ಸಮಯದಲ್ಲಿ ಅವರು ರಣಬೀರ್‌ನನ್ನು ಹಿಂದೆ ಕೂರಿಸಿಕೊಂಡು ಬೈಕ್ ಓಡಿಸಬೇಕಿತ್ತು. ತನಗೆ ಬೈಕ್ ಓಡಿಸಲು ಬರುವುದಿಲ್ಲ ಎಂದದ್ದೇ, ನಿರ್ದೇಶಕ ಇಮ್ತಿಯಾಜ್ ಅಲಿ ಬೈಕ್ ಕಲಿಸುವ ವ್ಯವಸ್ಥೆ ಮಾಡಿದರು. ತರಬೇತುದಾರ ಬಂದು ಫಕ್ರಿಗೆ ಬೈಕ್ ಕಲಿಸಿಕೊಟ್ಟ. ಅರ್ಧಗಂಟೆಯಲ್ಲೇ ಬೈಕ್ ಓಡಿಸುವುದನ್ನು ಕಲಿತ ಫಕ್ರಿ ಒಂದೇ ಶಾಟ್‌ಗೆ ದೃಶ್ಯವನ್ನು ಕೂಡ ಯಶಸ್ವಿಯಾಗಿ ನಿಭಾಯಿಸಿದರು. ಇದನ್ನು ಕಂಡು ಇಡೀ ಚಿತ್ರತಂಡ ಅಚ್ಚರಿಪಟ್ಟಿತು. ಕೇವಲ ಅರ್ಧಗಂಟೆ ಯಲ್ಲಿ ಬೈಕ್ ಕಲಿತ ಫಕ್ರಿ ಬಗ್ಗೆ ರಣಬೀರ್, `ನರ್ಗೀಸ್ ಅರ್ಧಗಂಟೆಯಲ್ಲಿ ಬೈಕ್ ಕಲಿತ ಬಗ್ಗೆ ನನಗೆ ಅನುಮಾನ ಇತ್ತು. ಆದರೆ ಆಕೆ ದೃಶ್ಯವನ್ನು ನಿಭಾಯಿಸಿಬಿಟ್ಟಳು. ಅವಳ ಶೀಘ್ರ ಗ್ರಹಿಕೆ ಬಗ್ಗೆ ಖುಷಿಯಾಗುತ್ತಿದೆ~ ಎಂದರು. ರ‌್ಯಾಂಪ್ ಮೇಲೆ ತನ್ನ ಒನಪು ವಯ್ಯಾರ ತೋರಿದ್ದ ಹುಡುಗಿ ಬೈಕ್ ಮೇಲೂ ತನ್ನ ಹಿಡಿದ ಸಾಧಿಸಿ ಎಲ್ಲರಿಂದಲೂ ಮೆಚ್ಚುಗೆ ಪಡೆದ್ದ್ದಿದು ಅಚ್ಚರಿ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.