ಶುಕ್ರವಾರ, ಸೆಪ್ಟೆಂಬರ್ 18, 2020
28 °C

ಬೋಡೊ, ಬಂಗಾಳಿ ಕಲಹ- ಅಗ್ನಿಕುಂಡವಾದ ಅಸ್ಸಾಂ

ಮಾಲತಿ ಭಟ್ Updated:

ಅಕ್ಷರ ಗಾತ್ರ : | |

ಬೋಡೊ, ಬಂಗಾಳಿ ಕಲಹ- ಅಗ್ನಿಕುಂಡವಾದ ಅಸ್ಸಾಂ

ಅಸ್ಸಾಂ ಹೊತ್ತಿ ಉರಿಯುತ್ತಿದೆ. ಬೋಡೊ ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಇಲ್ಲಿನ ನಾಲ್ಕು ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಹಿಂಸೆ ಭುಗಿಲೆದ್ದಿದೆ.ಬೋಡೊಗಳು ಹಾಗೂ ಬಾಂಗ್ಲಾದೇಶದಿಂದ ವಲಸೆ ಬಂದ ಬಂಗಾಳಿ ಭಾಷಿಕ ಮುಸ್ಲಿಮರ ನಡುವಿನ ಜನಾಂಗೀಯ ಕದನ ಈಗ ತಾರಕಕ್ಕೆ ಏರಿದೆ. 45ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ.2 ಲಕ್ಷಕ್ಕೂ ಹೆಚ್ಚು ಜನ ಮನೆ, ಜಾನುವಾರುಗಳನ್ನು ತೊರೆದು ಓಡಿಹೋಗಿದ್ದಾರೆ. ಪುನರ್ವಸತಿ ಕೇಂದ್ರಗಳು ನಾರತೊಡಗಿವೆ.ಇಷ್ಟಕ್ಕೂ ಈ ಹಿಂಸಾಚಾರಕ್ಕೆ ಕಾರಣ ಏನು? ಜುಲೈ ಆರಂಭದಿಂದಲೇ ಬೋಡೊಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್ (ಬಿಟಿಸಿ) ಆಡಳಿತವಿರುವ ಕೊಕ್ರಜಾರ್‌ನಲ್ಲಿ ಕುದಿಮೌನದ ವಾತಾವರಣವಿತ್ತು.ಬೋಡೊ ಬುಡಕಟ್ಟು ಜನ ಹಾಗೂ ಬಾಂಗ್ಲಾದೇಶದಿಂದ ವಲಸೆ ಬಂದ ಮುಸ್ಲಿಮರ ನಡುವೆ ದಶಕಗಳಿಂದ ನಡೆಯುತ್ತಿರುವ ತಿಕ್ಕಾಟಕ್ಕೆ ಮೂರ್ತರೂಪ ನೀಡಿದಂತೆ ಇಬ್ಬರು ಬಂಗಾಳಿ ಮುಸ್ಲಿಂ ವಿದ್ಯಾರ್ಥಿ ನಾಯಕರನ್ನು ಜುಲೈ 6ರಂದು ಗುಂಡಿಟ್ಟು ಕೊಲ್ಲಲಾಯಿತು.

ಅದಕ್ಕೆ ಪ್ರತೀಕಾರವಾಗಿ ಜುಲೈ 20ರಂದು ನಾಲ್ಕು ಜನ ಮಾಜಿ ಬೋಡೊ ಪ್ರತ್ಯೇಕತಾವಾದಿ ಉಗ್ರರ ಹತ್ಯೆ ನಡೆಯಿತು. ಬೋಡೊಗಳು ಬಂಗಾಳಿ ಭಾಷಿಕ ಮುಸ್ಲಿಮರ ಮೇಲೆ ಸೇಡು ತೀರಿಸಿಕೊಳ್ಳುವಂತೆ ಹಿಂಸಾಚಾರಕ್ಕೆ ಇಳಿದರು.ಅದಕ್ಕೆ ಪ್ರತಿಯಾಗಿ ಅವರು ಸಹ ದುಂಡಾವರ್ತಿಯಲ್ಲಿ ತೊಡಗಿಕೊಂಡರು. ಪರಸ್ಪರರ ಶಾಲೆ, ಮನೆಗಳ ಮೇಲೆ ದಾಳಿ ನಡೆಯಿತು. ಕೊಕ್ರಜಾರ್ ಜಿಲ್ಲೆಯ ಒಂದು ಭಾಗದಲ್ಲಿ ಆರಂಭವಾದ ಹಿಂಸಾಚಾರ ಇಡೀ ಜಿಲ್ಲೆಗೆ, ಕ್ರಮೇಣ ಬೋಡೊ ಪ್ರಾಬಲ್ಯದ ಚಿರಾಂಗ್, ಧುಬ್ರಿಗಳಿಗೂ ವ್ಯಾಪಿಸಿತು.ಈ ದಳ್ಳುರಿಯ ಮೂಲ ಕೆದಕಿದಲ್ಲಿ ಈಶಾನ್ಯ ರಾಜ್ಯಗಳ ಕುರಿತು ಕೇಂದ್ರ ಲಾಗಾಯ್ತಿನಿಂದ ಅನುಸರಿಸಿಕೊಂಡು ಬಂದಿರುವ ನಿರ್ಲಕ್ಷ್ಯ ಧೋರಣೆ, ಸ್ಥಳೀಯ ಸರ್ಕಾರದ ಉದಾಸೀನ, ಮತಬ್ಯಾಂಕ್ ರಾಜಕಾರಣ ಕಣ್ಣಿಗೆ ರಾಚುತ್ತವೆ. ಭಾರತದ ಇತರ ಭಾಗಗಳಿಂದ ಸಾಂಸ್ಕೃತಿಕವಾಗಿ, ಭಾಷಿಕವಾಗಿ ವಿಭಿನ್ನವಾಗಿರುವ ಈಶಾನ್ಯ ಭಾರತವನ್ನು ಅರ್ಥ ಮಾಡಿಕೊಳ್ಳಲು ದೆಹಲಿಯ ಆಡಳಿತ 65 ವರ್ಷಗಳಿಂದಲೂ ಸೋತಿದೆ. ಸ್ವಾತಂತ್ರ್ಯ ಪಡೆದಾಗ ಈಶಾನ್ಯದಲ್ಲಿ ಇದ್ದುದು ಮೂರೇ ರಾಜ್ಯಗಳು.

 

ಬ್ರಿಟಿಷರ ಆಳ್ವಿಕೆಯಲ್ಲಿದ್ದ ಬೃಹತ್ ಅಸ್ಸಾಂ, ಸಂಸ್ಥಾನಿಕರ ಆಳ್ವಿಕೆಯಲ್ಲಿದ್ದ ಮಣಿಪುರ ಹಾಗೂ ತ್ರಿಪುರಾ. ಶಿಲ್ಲಾಂಗ್ ಆಗ ಅಸ್ಸಾಂ ರಾಜಧಾನಿಯಾಗಿತ್ತು. ಭಾಷಾವಾರು ಪ್ರಾಂತ್ಯ ರಚನೆಯ ನೀತಿಯಂತೆ 1963ರಲ್ಲಿ ಅಸ್ಸಾಂನಿಂದ ನಾಗಾಲ್ಯಾಂಡ್ ಪ್ರತ್ಯೇಕವಾಯಿತು.

 

1972ರಲ್ಲಿ ಮೇಘಾಲಯ ಬೇರೆಯಾಯಿತು. ಅದೇ ವರ್ಷ ಮಿಜೊರಾಂಗೆ ಕೇಂದ್ರಾಡಳಿತ ಪ್ರದೇಶದ ಮಾನ್ಯತೆ. 1987ರಲ್ಲಿ ಅರುಣಾಚಲ ಪ್ರದೇಶದ ಜತೆ ಅದು ಪ್ರತ್ಯೇಕ ರಾಜ್ಯವಾಯಿತು.ಸ್ವಾತಂತ್ರ್ಯದ 65 ವರ್ಷಗಳ ನಂತರವೂ ಈಶಾನ್ಯ ರಾಜ್ಯಗಳ ಜನ, ಅಲ್ಲಿನ ಸಂಸ್ಕೃತಿ, ಭಾಷೆಗಳ ಕುರಿತು ದೇಶದ ಇತರ ಜನರಿಗೆ ಮಾಹಿತಿ ಕಡಿಮೆ. ಅಲ್ಲಿನ ಜನ ಇಲ್ಲಿಗೆ ಬಂದದ್ದು ಕಡಿಮೆ. ಪಕ್ಕದ ಬರ್ಮಾದ, ಬಾಂಗ್ಲಾದ, ಟಿಬೇಟಿನ ಸಂಸ್ಕೃತಿಯೇ ಅವರಿಗೆ ಆಪ್ತ, ಪರಿಚಿತ. ಯುವಜನ ಮೇಳ, ಸಾಂಸ್ಕೃತಿಕ ಉತ್ಸವಗಳಲ್ಲಷ್ಟೇ ಅವರ ತಂಡಗಳು ಕಾಣಿಸುತ್ತವೆ.ಇದೇ ಕಾರಣಕ್ಕೆ  90ರ ದಶಕದಲ್ಲಿ ಅಸ್ಸಾಂ ಅನ್ನು ಭಾರತ ಒಕ್ಕೂಟದಿಂದ ಬೇರ್ಪಡಿಸಬೇಕು ಎಂದು ಉಲ್ಫಾ  ಉಗ್ರರು ಹಿಂಸಾಕೃತ್ಯದಲ್ಲಿ ತೊಡಗಿಕೊಂಡಿದ್ದರು. ನಾಗಾ ಉಗ್ರರು ಸಹ ನಾಗಾಲ್ಯಾಂಡ್ ಅನ್ನು ಪ್ರತ್ಯೇಕ ದೇಶವಾಗಿ ಘೋಷಿಸಬೇಕು ಎಂದು ಪಟ್ಟುಹಿಡಿದಿದ್ದರು. ಈಗ ಈ ಉಗ್ರರ ಹಾವಳಿ ಬಹುತೇಕ ತಗ್ಗಿದೆ. ಉಲ್ಫಾ ಉಗ್ರರು ಕೇಂದ್ರದ ಜತೆ ಶಾಂತಿ ಮಾತುಕತೆಗೆ ಮುಂದಾಗಿದ್ದಾರೆ.ಬೋಡೊ ಹೋರಾಟ

ಈಶಾನ್ಯದ ಇತರ ರಾಜ್ಯಗಳನ್ನು ಬದಿಗಿಡಿ. ಅಸ್ಸಾಂ ಒಂದರಲ್ಲೇ ಹತ್ತು, ಹಲವು ಬುಡಕಟ್ಟು ಜನಾಂಗಗಳು, ಭಾಷೆಗಳು ಇವೆ. ಕೆಳ ಅಸ್ಸಾಂನ ನಾಲ್ಕು ಜಿಲ್ಲೆಗಳಲ್ಲಿರುವ ಬೋಡೊ ಬಡಕಟ್ಟು ಜನರಿಗೆ ಬಹುಸಂಖ್ಯಾತರು, ಅಧಿಕಾರದ ಕೇಂದ್ರ ಸ್ಥಾನದಲ್ಲಿ ಇರುವ  ಅಸ್ಸಾಮಿಗಳು ತಮ್ಮ ಮೇಲೆ ಸವಾರಿ ಮಾಡುತ್ತಿದ್ದಾರೆ ಎಂಬ ಭಾವನೆ ದಶಕಗಳಿಂದ ಇತ್ತು.ಅವರಿಗೆ ಪರಿಶಿಷ್ಟ ಜನಾಂಗದ ಮಾನ್ಯತೆ ದೊರಕಿದ್ದರೂ ಶಿಕ್ಷಣ, ಉದ್ಯೋಗಳಲ್ಲಿ ಇತರ ಬುಡಕಟ್ಟು ಜನರೇ ಹೆಚ್ಚು ಅವಕಾಶ ಪಡೆಯುತ್ತಿದ್ದಾರೆ ಎಂಬ ಅಸಹನೆ ಇತ್ತು. ಹಾಗೇ 80ರ ದಶಕದ ಅಂತ್ಯದಲ್ಲಿ ಬೋಡೊಲ್ಯಾಂಡ್ ಚಳವಳಿ ಹುಟ್ಟಿತು.ಅಸ್ಸಾಂನಿಂದ ನಾಗಾಲ್ಯಾಂಡ್, ಮೇಘಾಲಯ, ಮಿಜೊರಾಂಗಳನ್ನು ಬೇರ್ಪಡಿಸಿದಂತೆ ಪ್ರತ್ಯೇಕ ಬೋಡೊ ರಾಜ್ಯ ಸ್ಥಾಪಿಸಬೇಕು ಎಂದು ಆ ಬುಡಕಟ್ಟು ಜನಾಂಗದವರು ಶಸ್ತ್ರ ಕೈಗೆತ್ತಿಕೊಂಡು ಹೋರಾಟ ಆರಂಭಿಸಿದರು. ಈ ಹೋರಾಟದ ನೇತೃತ್ವ ವಹಿಸಿದ್ದು ಬೋಡೊ ವಿದ್ಯಾರ್ಥಿ ಸಂಘಟನೆ.ಅಂತಿಮವಾಗಿ 2003ರಲ್ಲಿ ಬೋಡೊಗಳ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ, ಪ್ರತ್ಯೇಕ ಬೋಡೊಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್ (ಬಿಟಿಸಿ) ರಚನೆಗೆ ಒಪ್ಪಿಗೆ ನೀಡಿತು. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಬೋಡೊ ಉಗ್ರರ ನಡುವೆ ನಡೆದ ತ್ರಿಪಕ್ಷೀಯ ಒಪ್ಪಂದದಂತೆ ಬೋಡೊ ಜನಾಂಗದವರು ಹೆಚ್ಚಿರುವ ಅಸ್ಸಾಂನ ಆರು ಜಿಲ್ಲೆಗಳ ಕೆಲ ಪ್ರಾಂತ್ಯಗಳನ್ನು ಸ್ವಾಯತ್ತ ಪ್ರದೇಶ ಎಂದು ಘೋಷಿಸಿ `ಬಿಟಿಸಿ~ಗೆ ಆಡಳಿತದ ಉಸ್ತುವಾರಿ ನೀಡಲಾಯಿತು.ಅದಕ್ಕೆ ಪ್ರತಿಯಾಗಿ ಬೋಡೊ ಉಗ್ರರು ಶಸ್ತ್ರಾಸ್ತ್ರ ಕೆಳಗಿಟ್ಟರು. ಉಗ್ರರ ಸಂಘಟನೆಯನ್ನು ರಾಜಕೀಯ ಸಂಘಟನೆಯಾಗಿ ಪರಿವರ್ತಿಸಿ ಚುನಾವಣೆಗೆ ನಿಂತು ಗೆದ್ದು ಬಂದರು.ಮೇಲ್ನೋಟಕ್ಕೆ ಎಲ್ಲವೂ ಸರಿಯಾಗಿದೆ ಎಂದು ಕಂಡುಬಂದರೂ ಬೋಡೊಗಳು ಅಧಿಕಾರ ಹಿಡಿಯುವುದನ್ನು ಈ ಭಾಗದಲ್ಲಿರುವ ಇತರ ಚಿಕ್ಕ,ಪುಟ್ಟ ಬುಡಕಟ್ಟು ಜನಾಂಗದವರು, ಬಾಂಗ್ಲಾ ಮೂಲದ ಬಂಗಾಳಿ ಭಾಷಿಕ ಮುಸ್ಲಿಮರು ವಿರೋಧಿಸಿದ್ದರು.ಈಶಾನ್ಯದ ರಾಜ್ಯಗಳಿಗೆ ಬಂಗಾಳಿಗಳು ವಲಸೆ ಬಂದಿದ್ದು ಇತ್ತೀಚೆಗಲ್ಲ. 1800-1900ರ ಅವಧಿಯಲ್ಲಿ ಬ್ರಿಟಿಷರು, ಅಸ್ಸಾಂನ ಚಹಾ ತೋಟಗಳಲ್ಲಿ ದುಡಿಸಲು ಪೂರ್ವ ಬಂಗಾಳದಿಂದ ಸಾವಿರಾರು ಸಂಖ್ಯೆಯಲ್ಲಿ ಕೂಲಿಗಳನ್ನು ಕರೆತಂದರು. ಬಿಹಾರ, ಪಶ್ಚಿಮ ಬಂಗಾಳದಿಂದಲೂ ದುಡಿಯುವ ಕೈಗಳು ಬಂದವು.

 

ಹಾಗೆ ಬಂದವರು ಇಲ್ಲಿಯೇ ತಳವೂರಿದರು. ಸ್ವಾತಂತ್ರ್ಯದ ನಂತರ ಪೂರ್ವ ಬಂಗಾಳ, ಪೂರ್ವ ಪಾಕಿಸ್ತಾನವಾದಾಗಲೂ ಬಂಗಾಳಿಗಳು ಈಶಾನ್ಯದ ರಾಜ್ಯಗಳಿಗೆ ವಲಸೆ ಬಂದರು. 1971ರ ಬಾಂಗ್ಲಾ ಯದ್ಧದ ಸಮಯದಲ್ಲಿ ಲಕ್ಷಾಂತರ ಜನ ಈಶಾನ್ಯದ ರಾಜ್ಯಗಳಿಗೆ, ಪಶ್ಚಿಮ ಬಂಗಾಳಕ್ಕೆ ನುಗ್ಗಿದರು.ಪಾಸ್‌ಪೋರ್ಟ್, ವೀಸಾ ಇಲ್ಲದೇ ಅಕ್ರಮವಾಗಿ ಭಾರತದ ನೆಲದಲ್ಲಿ ವಾಸಿಸುತ್ತಿದ್ದ ಬಂಗಾಳಿಗಳ ವಿಚಾರದಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಕುರುಡರಂತೆ ವರ್ತಿಸಿದ್ದರು. ಅವರಿಗೆ ಕಾಣುತ್ತಿದ್ದದು ಲಕ್ಷಾಂತರ ಸಂಖ್ಯೆಯ ಮತಗಳು ಮಾತ್ರ.ಕೇಂದ್ರ, ಅಸ್ಸಾಂನಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳೆಲ್ಲ ಈ ಮತಬ್ಯಾಂಕ್ ರಾಜಕಾರಣದ ಮುಂದೆ ದೇಶೀಯರ ಹಿತಾಸಕ್ತಿಯನ್ನು ಮರೆತುಬಿಟ್ಟವು.ಬಂಗಾಳಿಗಳ ಪ್ರಾಬಲ್ಯ

ಬೋಡೊ ಬುಡಕಟ್ಟು ಜನಾಂಗದವರು ಮೂಲತಃ ನೇಕಾರರು. ಶಾಂತಿಪ್ರಿಯರು. ಬಣ್ಣ, ಬಣ್ಣದ ಮನಮೋಹಕ ಶಾಲುಗಳನ್ನು ನೇಯುವ ಕಲೆ ಅವರಿಗೆ ಕರಗತ. ದಶಕಗಳು ಉರುಳಿದಂತೆ ಬೋಡೊ ಪ್ರಾಬಲ್ಯದ ಜಿಲ್ಲೆಗಳಲ್ಲಿ ಬಂಗಾಳಿ ಭಾಷಿಕ ಮುಸ್ಲಿಮರು ನಿಧಾನವಾಗಿ ಭೂಮಿ ಖರೀದಿಸತೊಡಗಿದರು.

 

90ರ ದಶಕದ ಹೊತ್ತಿಗೆ ಅಪ್ಪಟ ಬೋಡೊಗಳಿದ್ದ ಹಳ್ಳಿಗಳಲ್ಲಿ ಬಂಗಾಳಿ ಭಾಷಿಕರ ಸಂಖ್ಯೆ ಹೆಚ್ಚಾಗತೊಡಗಿತು. ಭೂಮಿಯ ಒಡೆತನ ಅವರ ಕೈಸೇರಿತು. ಬೋಡೊಗಳಲ್ಲಿ ಕ್ರಮೇಣ ಅಭದ್ರತಾ ಭಾವನೆ, ಬಂಗಾಳಿಗಳತ್ತ ಒಳಗಿಂದೊಳಗೆ ಅಹಸನೆ ಬೆಳೆಯತೊಡಗಿತು. ಬೋಡೊ ವಿದ್ಯಾರ್ಥಿ ಸಂಘಟನೆಗಳಿಗೆ ಪ್ರತಿಯಾಗಿ ಬಂಗಾಳಿ ವಿದ್ಯಾರ್ಥಿ ಸಂಘಟನೆಗಳು ಹುಟ್ಟಿಕೊಂಡವು. ಅವುಗಳ ಬಲ ಹೆಚ್ಚಿತು.ಜುಲೈನಲ್ಲಿ ನಡೆದ ಹಿಂಸಾಚಾರಗಳಿಗೆ ಇದೇ ಮೂಲ ಕಾರಣ. ಜುಲೈ 6ರಂದು ಬೋಡೊಗಳು ಗುಂಡಿಕ್ಕಿ ಕೊಂದಿದ್ದು ಇದೇ ಮುಸ್ಲಿಂ ವಿದ್ಯಾರ್ಥಿ ನಾಯಕರನ್ನು.ಹಿಂಸಾಚಾರ ಇಷ್ಟು ವ್ಯಾಪಕವಾಗಲು ಕೇಂದ್ರ, ರಾಜ್ಯ ಸರ್ಕಾರಗಳ ಧೋರಣೆ, ಆಡಳಿತಶಾಹಿಯ ವೈಫಲ್ಯವೂ ಕಾರಣ ಎನ್ನಲಾಗುತ್ತಿದೆ. ಜುಲೈ 6ರಂದು ಮೊದಲ ಘಟನೆ ವರದಿಯಾದ ತಕ್ಷಣ ರಾಜ್ಯ ಸರ್ಕಾರ ಎಚ್ಚೆತ್ತುಕೊಳ್ಳಲಿಲ್ಲ.ಬೋಡೊ ಹಾಗೂ ಬಂಗಾಳಿ ನಾಯಕರನ್ನು ಕರೆಯಿಸಿ `ಬಿಟಿಸಿ~ ಆಡಳಿತದ ಜಿಲ್ಲೆಗಳಲ್ಲಿ ಹೋಬಳಿ ಮಟ್ಟದಲ್ಲಿ ಶಾಂತಿಸಭೆ ನಡೆಸಿದ್ದರೂ ಈ ಘಟನೆ ಪೆಡಂಭೂತವಾಗುತ್ತಿರಲಿಲ್ಲ. ಜುಲೈ 20ರಂದು ಬೋಡೊ ನಾಯಕರ ಹತ್ಯೆಯಾದ ಮೇಲಷ್ಟೇ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೊಯ್‌ಗೆ ಅಲ್ಲಿನ ಜಿಲ್ಲಾಧಿಕಾರಿಗಳನ್ನು ಕರೆಯಿಸಿ ಮಾತನಾಡಬೇಕು ಎಂಬುದು ನೆನಪಾಯಿತು.

 

`ಇದಕ್ಕೆಲ್ಲ ಕೇಂದ್ರ ಸರ್ಕಾರ ಕಾರಣ. ತಾವು ಸೇನೆ ಕಳುಹಿಸಲು ಮನವಿ ಮಾಡಿದ್ದರೂ ಅವರು ವಿಳಂಬ ಧೋರಣೆ ಅನುಸರಿಸಿದ್ದಾರೆ~ ಎಂದು ಗೊಗೊಯ್ ಕೆಂಡಕಾರಿದ್ದಾರೆ.ಅಸ್ಸಾಂನಲ್ಲಿ ಈ ರೀತಿಯ ಗಲಭೆಗಳು ಹಿಂದೆ ನಡೆದಿರಲಿಲ್ಲ ಎಂದಲ್ಲ. 70ರ ದಶಕದಲ್ಲಿ, 80ರ ದಶಕದಲ್ಲಿ ಇಂತಹದ್ದೇ ಹಿಂಸಾಚಾರಗಳು ನಡೆದಿದ್ದವು. ಬುಡಕಟ್ಟು ಜನಾಂಗದವರು ಬಿಲ್ಲು, ಬಾಣ ಹಿಡಿದು ಎದುರಾಳಿಗಳನ್ನು ಮಣಿಸಿದ್ದರು.

 

2008ರಲ್ಲೂ ಬೋಡೊ ಮತ್ತು ಬಂಗಾಳಿಗಳ ನಡುವೆ ಹಿಂಸಾಚಾರ ನಡೆದಿತ್ತು. ಪರಿಸ್ಥಿತಿಯನ್ನು ಅಳೆಯುವಲ್ಲಿ ಸರ್ಕಾರ ಸೋತಿತು. ಅಸ್ಸಾಂ ಗಡಿ ರಾಜ್ಯವಾದ್ದರಿಂದ ಅಲ್ಲಿ ಬೇಹುಗಾರಿಕೆ ಪಡೆಗಳು ಕೆಲಸ ನಿರ್ವಹಿಸುತ್ತಿವೆ. ಅವುಗಳಿಗೂ ಗಲಭೆ ಈ ರೂಪ ತಾಳುವ ಅಂದಾಜು ಸಿಗಲಿಲ್ಲ ಅನಿಸುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.