ಬೋಧನಾ ಶುಲ್ಕ: ಹೆಣ್ಣು ಮಕ್ಕಳಿಗೆ ವಿನಾಯಿತಿ

ಗುಲ್ಬರ್ಗ: ಆಳಂದ ತಾಲ್ಲೂಕಿನ ಕಡಗಂಚಿ ಗ್ರಾಮದಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಉನ್ನತ ಶಿಕ್ಷಣ ಪಡೆಯಲು ಹೆಣ್ಣು ಮಕ್ಕಳಿಗೆ ನೆರವಾಗುವ ಉದ್ದೇಶದಿಂದ ಎಲ್ಲ ಕೋರ್ಸುಗಳ ಬೋಧನಾ ಶುಲ್ಕ ಮತ್ತು ವಸತಿನಿಲಯ ಶುಲ್ಕದಲ್ಲಿ ವಿನಾಯಿತಿ ಘೋಷಿಸಿದೆ.
ವಾರ್ಷಿಕ ₨ 6 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಪೋಷಕರ ಹೆಣ್ಣು ಮಕ್ಕಳಿಗೆ ಬೋಧನಾ ಶುಲ್ಕ ಹಾಗೂ ಹಾಸ್ಟೆಲ್ ಶುಲ್ಕದಲ್ಲಿ ವಿನಾಯಿತಿ ನೀಡಲಾಗುತ್ತಿದೆ. ಪ್ರವೇಶ ಶುಲ್ಕ, ಪರೀಕ್ಷಾ ಶುಲ್ಕ, ಮೆಸ್ ಬಿಲ್ ಸೇರಿದಂತೆ ಇತರ ಸಣ್ಣಪುಟ್ಟ ಖರ್ಚು–ವೆಚ್ಚಗಳನ್ನು ಮಾತ್ರ ವಿದ್ಯಾರ್ಥಿನಿಯರು ಭರಿಸಬೇಕಾಗುತ್ತದೆ. ಉದಾಹರಣೆಗೆ ಎಂಜಿನಿಯರಿಂಗ್ ಕೋರ್ಸುಗಳಿಗೆ ₨ 25 ಸಾವಿರ, ಎಂಬಿಎ ಕೋರ್ಸ್ಗೆ ₨ 15 ಸಾವಿರ ಬೋಧನಾ ಶುಲ್ಕ ನಿಗದಿಪಡಿಸಲಾಗಿದ್ದು, ಇದರಿಂದ ಹೆಣ್ಣು ಮಕ್ಕಳಿಗೆ ವಿನಾಯಿತಿ ದೊರಕಲಿದೆ.
2014–15ನೇ ಸಾಲಿನ ಪ್ರವೇಶ ಪ್ರಕ್ರಿಯೆ ಏಪ್ರಿಲ್ 29 ರಿಂದ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಮೇ 30 ಅಂತಿಮ ದಿನವಾಗಿದೆ. ಜೂನ್ 7 ಹಾಗೂ 8ರಂದು ರಾಜ್ಯದ 15 ಹಾಗೂ ಹೊರ ರಾಜ್ಯಗಳ 21 ಸೇರಿದಂತೆ ದೇಶದ 36 ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ.
ಯಾವ ಕೋರ್ಸುಗಳು ಲಭ್ಯ: ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ದ್ವಿಪದವಿ (ಡ್ಯುವಲ್ ಡಿಗ್ರಿ) ಓದಿಗೆ ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ ಪದವಿ ಮತ್ತು ಸ್ನಾತಕೋತ್ತರ ಪದವಿ ಅಧ್ಯಯನ ಮಾಡಿರುವ ವಿದ್ಯಾರ್ಥಿಗಳು ಎರಡು ವರ್ಷದ ಸ್ನಾತಕೋತ್ತರ ಕೋರ್ಸ್ ಮತ್ತು ಪಿಎಚ್.ಡಿಗೆ ಅರ್ಜಿ ಸಲ್ಲಿಸಬಹುದು.
ಪಿಯುಸಿ ಮತ್ತು ಪದವಿಯಲ್ಲಿ ಶೇ 50 ಅಂಕ (ಎಸ್.ಸಿ/ಎಸ್.ಟಿ ಶೇ 45 ಅಂಕ) ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಶೇ 55 (ಎಸ್.ಸಿ/ಎಸ್.ಟಿ 50 ಅಂಕ) ಪಡೆದಿರಬೇಕು. ಪ್ರವೇಶ ಪರೀಕ್ಷೆಯಲ್ಲಿ ಕನಿಷ್ಠ ಶೇ 40 ಅಂಕ (ಎಸ್.ಸಿ/ಎಸ್.ಟಿ 35 ಅಂಕ) ಪಡೆದವರು ಪ್ರವೇಶಕ್ಕೆ ಅರ್ಹತೆ ಪಡೆಯುತ್ತಾರೆ. ರೋಸ್ಟರ್ ಪದ್ಧತಿಗೆ ಅನುಗುಣವಾಗಿ ಪ್ರವೇಶ ನೀಡಲಾಗುತ್ತದೆ.
ಹೆಣ್ಣು ಮಕ್ಕಳಿಗೆ ವಿನಾಯಿತಿ ನೀಡಿದಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೂ ಬೋಧನಾ ಶುಲ್ಕ, ಹಾಸ್ಟೆಲ್ ಶುಲ್ಕ ಮತ್ತು ಮೆಸ್ ಬಿಲ್ ಪಾವತಿಗೆ ವಿನಾಯಿತಿ ನೀಡಲಾಗಿದೆ. ಅಲ್ಲದೇ, ಪಿಎಚ್.ಡಿ ಸಂಶೋಧನಾರ್ಥಿಗಳಿಗೆ ಪ್ರತಿ ತಿಂಗಳು ₨ 8 ಸಾವಿರ ವಿದ್ಯಾರ್ಥಿ ವೇತನ ಮತ್ತು ಸಾದಿಲ್ವಾರು ಖರ್ಚಿಗೆ ವರ್ಷಕ್ಕೆ ₨ 10 ಸಾವಿರ ಸಹಾಯಧನ ನೀಡಲಾಗುತ್ತದೆ.
ದ್ವಿಪದವಿ ಕೋರ್ಸ್: ಇಂಗ್ಲಿಷ್, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ಭೂಗರ್ಭಶಾಸ್ತ್ರ, ಮನಃಶಾಸ್ತ್ರ, ಬಿಬಿಎ, ವಿಜ್ಞಾನ (ಬಿಎಸ್, ಎಂಎಸ್), ಎಂಜಿನಿಯರಿಂಗ್ (ಬಿ.ಟೆಕ್, ಎಂ.ಟೆಕ್).
ಸ್ನಾತಕೋತ್ತರ ಪದವಿ: ಇಂಗ್ಲಿಷ್, ಹಿಂದಿ, ಕನ್ನಡ, ಅರ್ಥಶಾಸ್ತ್ರ, ಸಮಾಜ ಕಾರ್ಯ, ಎಂಬಿಎ, ಎಂ.ಕಾಂ, ಅನ್ವಯಿಕ ಭೂಗರ್ಭಶಾಸ್ತ್ರ ಮತ್ತು ಭೂಮಾಹಿತಿ, ಅನ್ವಯಿಕ ಭೂಗೋಳಶಾಸ್ತ್ರ ಮತ್ತು ಭೂಮಾಹಿತಿ, ಎಂ.ಎಸ್ಸಿ ಮನಃಶಾಸ್ತ್ರ, ಗಣಿತಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಎಂಸಿಎ.
ಪಿಎಚ್.ಡಿ ಪದವಿ: ಇಂಗ್ಲಿಷ್, ಹಿಂದಿ, ಕನ್ನಡ, ಶಾಸ್ತ್ರೀಯ ಕನ್ನಡ, ಭೂಗೋಳಶಾಸ್ತ್ರ, ಭೂಗರ್ಭಶಾಸ್ತ್ರ, ಅರ್ಥಶಾಸ್ತ್ರ, ವ್ಯವಸ್ಥಾಪನ (ಮ್ಯಾನೇಜ್ಮೆಂಟ್), ವಾಣಿಜ್ಯಶಾಸ್ತ್ರ, ಸಮಾಜ ಕಾರ್ಯ, ಭಾಷಾಶಾಸ್ತ್ರ, ಮನಃಶಾಸ್ತ್ರ, ರಸಾಯನಶಾಸ್ತ್ರ, ಭೌತಶಾಸ್ತ್ರ, ಗಣಿತಶಾಸ್ತ್ರ, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.