ಶನಿವಾರ, ಜನವರಿ 18, 2020
25 °C

ಬ್ಯಾಂಕ್‌ ಖಾತೆಗೆ ಎಲ್‌ಪಿಜಿ ಸಬ್ಸಿಡಿ: ಜ. 1ರಿಂದ ಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್‌ಗೆ ಕೇಂದ್ರ ಸರ್ಕಾರ ನೀಡುತ್ತಿರುವ ಸಬ್ಸಿಡಿ ಹಣವನ್ನು ಗ್ರಾಹಕರ ಬ್ಯಾಂಕ್‌ ಖಾತೆಗೆ ತಲುಪಿಸುವ ನೇರ ನಗದು ವರ್ಗಾವಣೆ ಯೋಜನೆಯು ಕೊಡಗು ಜಿಲ್ಲೆಯಲ್ಲಿ ಜನವರಿ 1ರಿಂದ ಜಾರಿಗೊಳ್ಳಲಿದೆ.ಯೋಜನೆ ಜಾರಿಗೊಳಿಸುವ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸಭೆ ನಡೆಯಿತು.ನೇರ ಸೌಲಭ್ಯ ವರ್ಗಾವಣೆಯಡಿ ಎಲ್‌ಪಿಜಿ ಬಳಕೆದಾರರ ಆಧಾರ ಸಂಖ್ಯೆಯನ್ನು ಬ್ಯಾಂಕ್ ಖಾತೆಗೆ ಜೋಡಣೆ ಮಾಡಿ ಅಂಥವರಿಗೆ ಮಾರುಕಟ್ಟೆ ದರದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳನ್ನು ಸರಬರಾಜು ಮಾಡಬೇಕಾಗಿದೆ. ನಂತರ ದೊರೆಯಬಹುದಾದ ಸಬ್ಸಿಡಿಯನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದ್ದು, ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಣೆ ಮಾಡುವಂತೆ ಅನುರಾಗ್ ತಿವಾರಿ ಅವರು ಅಧಿಕಾರಿಗಳಿಗೆ, ಗ್ಯಾಸ್‌ ಏಜೆನ್ಸಿಗಳಿಗೆ ಸಲಹೆ ಮಾಡಿದರು.ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅರುಣಾಚಲ ಶರ್ಮಾ ಮಾತನಾಡಿ, ಜಿಲ್ಲೆಯಲ್ಲಿ ಆಧಾರ್ ಕಾರ್ಡ್‌ ಪಡೆಯದೇ ಇರುವವರು ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಲ್ಲಿ ತಮ್ಮ ಹೆಸರು ನೋಂದಾಯಿಸಿ ಈ ನಂಬರನ್ನು ಗ್ಯಾಸ್‌ ಏಜೆನ್ಸಿಗೆ ಮತ್ತು ಬ್ಯಾಂಕ್ ಖಾತೆಗೆ ಜೋಡಣೆ ಮಾಡಬಹುದು ಎಂದು ಅವರು ತಿಳಿಸಿದರು.ಉಳಿತಾಯ ಖಾತೆಯನ್ನು ತೆರೆದು ಆಧಾರ್ ಕಾರ್ಡ್‌ನೊಂದಿಗೆ ಜೋಡಿಸಿದರೆ ಎಲ್‌ಪಿಜಿ ಸಬ್ಸಿಡಿ, ಪಿಂಚಣಿ ಸೌಲಭ್ಯ, ವೃದ್ಧಾಪ್ಯ, ವಿಧವಾ, ಉದ್ಯೋಗ ಖಾತರಿ, ವಿಮಾ ಯೋಜನೆ, ವಿದ್ಯಾರ್ಥಿ ವೇತನ ಮತ್ತಿತರ ಸರ್ಕಾರಿ ಸವಲತ್ತುಗಳನ್ನು ಪಡೆಯಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.ಜಿಲ್ಲೆಯಲ್ಲಿ 1.15 ಲಕ್ಷ ಜನರು ಆಧಾರ್ ಕಾರ್ಡ್‌ ನೋಂದಣಿ ಮಾಡಿಸಿದ್ದು, 44 ಸಾವಿರ ಮಂದಿ ಆಧಾರ್ ಕಾರ್ಡ್‌ ಪಡೆದಿದ್ದಾರೆ. 7 ಸಾವಿರ ಮಂದಿ ಅನಿಲ ಕಂಪನಿಗೆ ಆಧಾರ್ ಸಂಖ್ಯೆಯನ್ನು ನೀಡಿದ್ದು, ಬ್ಯಾಂಕ್ ಖಾತೆಗೆ 200 ಮಂದಿ ಮಾತ್ರ ಜೋಡಣೆ ಮಾಡಿಸಿದ್ದಾರೆ ಎಂದು ಅವರು ಹೇಳಿದರು.ದೇವಿ ಎಲ್‌ಪಿಜಿ ಸಂಸ್ಥೆಯ ರಮೇಶ್ ಮಾತನಾಡಿ, ಎಲ್‌ಪಿಜಿ ಹೊಂದಿದವರೆಲ್ಲರೂ ಆಧಾರ ಕಾರ್ಡ್‌ ಪಡೆದಿರುವುದಿಲ್ಲ. ಈ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಬೇಕಿದೆ ಎಂದು ಅವರು ತಿಳಿಸಿದರು.ಗೋಣಿಕೊಪ್ಪದಲ್ಲಿನ ಗ್ಯಾಸ್‌ ಏಜೆನ್ಸಿ ಮಾಲೀಕರಾದ ಎಚ್.ಎಂ. ನಂದಕುಮಾರ್ ಮಾತನಾಡಿ, ನ್ಯಾಯಾಲಯ ನಿರ್ದೇಶನದಂತೆ ಸಬ್ಸಿಡಿ ದರದಲ್ಲಿ ಎಲ್‌ಪಿಜಿ ಸಿಲಿಂಡರ್ ವಿತರಿಸಬೇಕಿದೆ ಎಂದರು.ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ತಿವಾರಿ ಅವರು ಸರ್ಕಾರದ ನಿರ್ದೇಶನವನ್ನು ಪ್ರತಿಯೊಬ್ಬರೂ ಪಾಲಿಸಬೇಕಿದೆ.

ಬ್ಯಾಂಕರ್ಸ್‌ಗಳು ಮತ್ತು ಎಲ್‌ಪಿಜಿ ಏಜೆನ್ಸಿಯವರು ಒಂದು ಗೂಡಿ ಆಧಾರ ಕಾರ್ಡ್‌ ಸಂಖ್ಯೆ ಮತ್ತು ಬ್ಯಾಂಕ್ ಖಾತೆ ಜೋಡಣೆ ಮಾಡಿಸಿ ಸರ್ಕಾರದ ಸೌಲಭ್ಯಗಳನ್ನು ಪಡೆಯುವ ಬಗ್ಗೆ ಮಾಹಿತಿ ನೀಡಬೇಕಿದೆ ಎಂದು ಅವರು ಸಲಹೆ ಮಾಡಿದರು.ಉಪ ವಿಭಾಗಾಧಿಕಾರಿ ಅಭಿರಾಮ್ ಜಿ. ಶಂಕರ್, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪ ನಿರ್ದೇಶಕರಾದ ನವೀದ್ ಅಹಮದ್, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಸದಾಶಿವ, ಗ್ಯಾಸ್‌ ಏಜೆನ್ಸಿ ವಿತರಕರು ಇದ್ದರು.

ಪ್ರತಿಕ್ರಿಯಿಸಿ (+)