ಶನಿವಾರ, ಜನವರಿ 18, 2020
26 °C

ಬ್ಯಾಂಕ್ ಅಕ್ರಮ: ಅಧಿಕಾರಿಗಳ ವರ್ಗಾವಣೆಗೆ ಆಯೋಗ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಸೂಕ್ಷ್ಮ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳನ್ನು2-3 ವರ್ಷಗಳಿಗೊಮ್ಮೆ ವರ್ಗಾವಣೆ ಮಾಡಬೇಕು. ಯಾವುದೇ ಪಟ್ಟಭಧ್ರ ಹಿತಾಸಕ್ತಿಗೆ ಅವಕಾಶ ಕೊಡಬಾರದು ಹಾಗೂ ಭ್ರಷ್ಟಾಚಾರ ನುಸುಳದಂತೆ ನೋಡಿಕೊಳ್ಳಬೇಕು ಎಂದು ಕೇಂದ್ರ  ಜಾಗೃತ ಆಯೋಗ ಸೂಚನೆ ನೀಡಿದೆ.ಸರ್ಕಾರಿ ಸ್ವಾಮ್ಯದ ಹಲವು ಬ್ಯಾಂಕುಗಳಲ್ಲಿ ಅಕ್ರಮ ನಡೆದಿರುವ ಪ್ರಕರಣಗಳು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ ಆಯೋಗ ಈ ಸೂಚನೆ ನೀಡಿದೆ. ಬ್ಯಾಂಕುಗಳ ಹಿರಿಯ ಜಾಗೃತ ಅಧಿಕಾರಿಗಳು (ಸಿವಿಒ)  ಈ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಬೇಕು.  ಇದಕ್ಕೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಕುರಿತು ಪ್ರತಿ ತಿಂಗಳು ವರದಿ ಸಿದ್ಧಪಡಿಸಬೇಕು ಎಂದು ಆಯೋಗ ಹೇಳಿದೆ.

 

ಸೂಕ್ಷ್ಮ ಹುದ್ದೆಗಳಿಗೆ ನಿಯೋಜಿತಗೊಳ್ಳುವ ಅಧಿಕಾರಿಗಳ ಮೇಲೆ `ಸಿವಿಒ~ ಗಮನ ಇಡಬೇಕು. ಪ್ರತಿ ಎರಡು ಮೂರು ವರ್ಷಗಳಿಗೊಮ್ಮೆ ಅವರನ್ನು ಕಡ್ಡಾಯವಾಗಿ ವರ್ಗಾಯಿಸಬೇಕು. ಯಾವುದೇ ಕಾರಣಕ್ಕೂ ಅವರನ್ನು ಅದೇ ಹುದ್ದೆಯಲ್ಲಿ ಮುಂದುವರೆಯಲು ಬಿಡಬಾರದು. ಯಾವುದೇ ಸ್ಥಾಪಿತ ಹಿತಾಸಕ್ತಿಗಳಿಗೆ ಅವಕಾಶ ನೀಡಬಾರದು ಎಂದಿದೆ.ಇತ್ತೀಚೆಗೆ ಬೆಳಕಿಗೆ ಬಂದಿರುವ ಹಲವು ಭ್ರಷ್ಟಾಚಾರ ಪ್ರಕರಣಗಳಲ್ಲಿ ಪ್ರಮುಖ ರಾಷ್ಟ್ರೀಕೃತ ಬ್ಯಾಂಕುಗಳ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ಶಾಮೀಲಾಗಿರುವುದನ್ನು ಕೇಂದ್ರ ಜಾಗೃತ ಆಯೋಗ ಪತ್ತೆ ಹಚ್ಚಿದೆ. ಈ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಿದೆ.

ಪ್ರತಿಕ್ರಿಯಿಸಿ (+)