ಸೋಮವಾರ, ಜನವರಿ 20, 2020
29 °C

ಬ್ಯಾಡ್ಮಿಂಟನ್: ಫೈನಲ್‌ಗೆ ಸೌರಭ್, ಸಿಂಧು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಗ್ರ ಕ್ರಮಾಂಕದ ಆಟಗಾರ ಸೌರಭ್ ವರ್ಮ, ಸಾಯಿ ಪ್ರಣೀತ್ ಹಾಗೂ ಪಿ.ವಿ.ಸಿಂಧು, ನೇಹಾ ಪಂಡಿತ್ ಇಲ್ಲಿ ನಡೆಯುತ್ತಿರುವ 76ನೇ ರಾಷ್ಟ್ರೀಯ ಸೀನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಫೈನಲ್ ತಲುಪಿದ್ದಾರೆ.ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ (ಕೆಬಿಎ) ಕೋರ್ಟ್‌ನಲ್ಲಿ ಮಂಗಳವಾರ ನಡೆದ ಸೆಮಿಫೈನಲ್‌ನಲ್ಲಿ ಸೌರಭ್ 21-23, 22-20, 21-16ರಲ್ಲಿ ಎಚ್.ಎಸ್.ಪ್ರಣೋಯ್ ಅವರನ್ನು ಪರಾಭವಗೊಳಿಸಿದರು.ಇವರಿಬ್ಬರ ಮುಖಾಮುಖಿ ಸಾಕಷ್ಟು ಕುತೂಹಲ ಹಾಗೂ ಪೈಪೋಟಿಗೆ ಕಾರಣವಾಗಿತ್ತು. ಹಾಗಾಗಿ ಅಗ್ರ ಶ್ರೇಯಾಂಕದ ಸೌರಭ್‌ಗೆ ಗೆಲುವನ್ನು ಸುಲಭವಾಗಿ ಒಲಿಸಿಕೊಳ್ಳಲು ಸಾಧ್ಯವಾಗಲಿಲ್ಲ. 65 ನಿಮಿಷ ನಡೆದ ಪೈಪೋಟಿಯಲ್ಲಿ ನಾಲ್ಕನೇ ಶ್ರೇಯಾಂಕದ ಪ್ರಣೋಯ್ ಮೊದಲ ಗೇಮ್ ಗೆದ್ದು ಎದುರಾಳಿಗೆ ಆಘಾತ ಮೂಡಿಸಿದ್ದರು. ಆದರೆ ನಂತರದ ಎರಡು ಗೇಮ್‌ಗಳಲ್ಲಿ ಎಚ್ಚರಿಕೆಯ ಆಟಕ್ಕೆ ಮುಂದಾದ ಸೌರಭ್ ಗೆಲುವು ಸಾಧಿಸಿದರು.ಇನ್ನೊಂದು ಸೆಮಿಫೈನಲ್‌ನಲ್ಲಿ ಪ್ರಣೀತ್ 21-17, 21-15ರಲ್ಲಿ ಆನಂದ್ ಪವಾರ್ ಎದುರು ಗೆದ್ದರು.

ಆದರೆ ಮಹಿಳೆಯರ ವಿಭಾಗದಲ್ಲಿ ಪಿಎಸ್‌ಪಿಬಿಯ ಸಿಂಧುಗೆ ಅಷ್ಟೇನು ಪೈಪೋಟಿ ಎದುರಾಗಲಿಲ್ಲ. ಅವರು 21-20, 21-12ರಲ್ಲಿ ಅದಿತಿ ಮುತಾಟ್ಕರ್ ಅವರನ್ನು ಮಣಿಸಿ ಅಂತಿಮ ಘಟ್ಟ ಪ್ರವೇಶಿಸಿದರು.

 

ಈ ಪಂದ್ಯ ಕೇವಲ 28 ನಿಮಿಷಗಳಲ್ಲಿ ಕೊನೆಗೊಂಡಿತು. ನಾಲ್ಕನೇ ಶ್ರೇಯಾಂಕದ ಮುತಾಟ್ಕರ್ ಈ ಮೂಲಕ ಆಘಾತಕ್ಕೆ ಒಳಗಾಗಬೇಕಾಯಿತು. ಇನ್ನೊಂದು ನಾಲ್ಕರ ಘಟ್ಟದ ಪಂದ್ಯದಲ್ಲಿ ನೇಹಾ 21-17, 21-13ರಲ್ಲಿ ಸಯ್ಯಾಲಿ ಗೋಖಲೆ ಅವರನ್ನು ಮಣಿಸಿದರು.ಮಿಶ್ರ ಡಬಲ್ಸ್ ವಿಭಾಗದಲ್ಲಿ ಪ್ರಣವ್ ಚೋಪ್ರಾ ಹಾಗೂ ಪಜಕ್ತಾ ಸಾವಂತ್ 21-9, 21-14ರಲ್ಲಿ ಡಿ.ಗುರು ಪ್ರಸಾದ್ ಹಾಗೂ ಜಿ.ಎಂ.ನಿಶ್ಚಿತಾ ಅವರನ್ನು ಸೋಲಿಸಿ ಫೈನಲ್ ಪ್ರವೇಶಿಸಿದರು. ಅರುಣ್ ವಿಷ್ಣು-ಅಪರ್ಣಾ ಬಾಲನ್ 19-21, 21-18, 23-21ರಲ್ಲಿ ಅಕ್ಷಯ್ ದೇವಲ್ಕರ್-ಪ್ರದಾನ್ಯ ಎದುರು ಗೆದ್ದರು.ಮಹಿಳೆಯರ ಡಬಲ್ಸ್‌ನಲ್ಲಿ ಅಪರ್ಣಾ ಬಾಲನ್ ಹಾಗೂ ಎನ್.ಸಿಕ್ಕಿ ರೆಡ್ಡಿ 21-19, 21-11ರಲ್ಲಿ ಕೆ.ಮನೀಷಾ ಹಾಗೂ ಪಿ.ಜ್ಯೋತ್ಸಾ ಎದುರು ಗೆಲುವು ಸಾಧಿಸಿ ಫೈನಲ್ ತಲುಪಿದರು. ಪ್ರದಾನ್ಯ-ಪ್ರಜಕ್ತಾ ಸಾವಂತ್ 21-18, 21-7ರಲ್ಲಿ ದಯಾ ಎಲ್ಸಾ ಜೇಕಬ್- ಸ್ನೇಹಾ ಅವರನ್ನು ಪರಾಭವಗೊಳಿಸಿದರು.

ಪ್ರತಿಕ್ರಿಯಿಸಿ (+)